ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪ ಬಿಡಿ: ನೀರು ಕೊಡಿ

Last Updated 9 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಜ್ಯದ ಎಲ್ಲೆಡೆ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊಳವೆ ಬಾವಿಗಳು, ಜಲ ಮೂಲಗಳು ಬತ್ತುತ್ತಿವೆ. ಅನೇಕ ಕಡೆ ಕುಡಿವ ನೀರಿಗೂ ತತ್ವಾರ ಕಂಡು ಬರುತ್ತಿದೆ. ಪರಿಸ್ಥಿತಿ ಇಷ್ಟೆಲ್ಲ ಗಂಭೀರವಾಗಿದ್ದರೂ ಅಧಿಕಾರ­ಶಾಹಿ ವ್ಯವಸ್ಥೆ ಮಾತ್ರ ತನಗೇನೂ ಸಂಬಂಧವೇ ಇಲ್ಲವೆಂಬಂತೆ ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಎಲ್ಲೆಲ್ಲಿ, ಯಾವ  ಗ್ರಾಮ­ಗ­ಳಲ್ಲಿ ನೀರಿನ ಸಮಸ್ಯೆ ಇದೆ ಎಂಬುದರ ಮಾಹಿತಿ ಸರ್ಕಾರದ ಬಳಿ ಇಲ್ಲ ಎನ್ನು­ವುದು ಆಘಾತಕಾರಿ. ನೌಕರರೆಲ್ಲ ಚುನಾವಣಾ ಕಾರ್ಯದಲ್ಲಿ ತೊಡಗಿಸಿ­ಕೊಂಡಿ­ರುವ ಕಾರಣ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂಬುದು ಬರೀ ಕುಂಟು ನೆಪ.

ಚುನಾವಣೆ ಸಂದರ್ಭದಲ್ಲಿ ನೀರಿನ ಬವಣೆಯತ್ತ ಗಮನ ಹರಿ­ಸ­ಬಾರದು ಎಂಬ ನಿಯಮ ಏನೂ ಇಲ್ಲವಲ್ಲ. ಮಂತ್ರಿ ಮಹೋದಯರು, ಜನಪ್ರತಿನಿಧಿಗಳಿಗಾದರೆ ನೀತಿ ಸಂಹಿತೆ ಅಡ್ಡಿ ಬರುತ್ತದೆ ಎನ್ನಬಹುದು. ಆದರೆ ಅಧಿಕಾರಿಗಳಿಗೆ ಏನು ತೊಂದರೆ ಇದೆ? ವಾರಕ್ಕೊಮ್ಮೆ ಸಭೆ ಕರೆದು ನೀರಿನ ಸಮಸ್ಯೆ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿ­ಬಿಟ್ಟರೆ ಮೇಲಧಿಕಾರಿಗಳ ಕೆಲಸ ಮುಗಿಯುವುದಿಲ್ಲ. ಆದೇಶ ಕಾರ್ಯ­ರೂಪಕ್ಕೆ ಬಂದಿದೆಯೇ ಎಂಬುದರ ಉಸ್ತುವಾರಿ ವಹಿಸಬೇಕು. ಕುಡಿವ ನೀರಿನ ಸಮಸ್ಯೆ ದಿಢೀರನೇ ಉದ್ಭವವಾಗುವಂಥದ್ದಲ್ಲ.

ಪ್ರತಿ ವರ್ಷ ಬೇಸಿಗೆಯಲ್ಲಿ ಇದ್ದೇ ಇರುತ್ತದೆ. ಹಿಂದಿನ ಅನುಭವಗಳ ಆಧಾರದ ಮೇಲೆ ಸಮಸ್ಯೆ ತಲೆ­ದೋರುವ ಶೇ 95ರಷ್ಟು ಗ್ರಾಮ, ಪಟ್ಟಣಗಳನ್ನು ಸಾಕಷ್ಟು ಮೊದಲೇ ಊಹಿ­ಸ­ಬಹುದು. ಎಲ್ಲೋ ಶೇ 5ರಷ್ಟು ಕಡೆ ಮಾತ್ರ ಅನಿರೀಕ್ಷಿತವಾಗಿ ಸಮಸ್ಯೆ ತಲೆದೋರಬಹುದು. ಅಧಿಕಾರಿಗಳು ಸ್ವಲ್ಪ ಮುಂದಾಲೋಚನೆ ವಹಿ­ಸಿ­ದರೆ ಇದನ್ನೆಲ್ಲ ಸಮರ್ಥವಾಗಿ ನಿಭಾಯಿಸಬಹುದು. ಆದರೆ ಬಹುತೇಕರಲ್ಲಿ ಅಂಥ ಕಳಕಳಿ  ಕಂಡುಬರುತ್ತಿಲ್ಲ.    ಇದು ಹೊಣೆಗೇಡಿತನದ ಪರಮಾವಧಿ.

ಲಭ್ಯ ಮಾಹಿತಿಗಳ ಪ್ರಕಾರ 13 ಜಿಲ್ಲೆಗಳ 325 ಗ್ರಾಮಗಳಿಗೆ ಈಗ ಟ್ಯಾಂಕ­ರ್‌ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ಪೈಕಿ 175 ಗ್ರಾಮಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿಯೇ ಇವೆ. ಆದರೆ ನೀರಿನ ಸಮಸ್ಯೆ ಇಲ್ಲಿಗೆ ಮಾತ್ರ ಸೀಮಿತವಾಗಿದೆ ಎಂದು ಭಾವಿ­ಸು­ವುದು ತಪ್ಪಾಗುತ್ತದೆ. 850– 900 ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಸಚಿವ ಜಯಚಂದ್ರ ಕಳೆದ ಜನವರಿ­ಯ­ಲ್ಲಿಯೇ ಹೇಳಿದ್ದರು. ಸರ್ಕಾರವೇ ರಾಜ್ಯದ 125 ತಾಲ್ಲೂಕುಗಳನ್ನು ಬರ­ಪೀಡಿತ ಎಂದು ಘೋಷಿಸಿದೆ.

ಇಲ್ಲೆಲ್ಲ ಮಳೆಯಿಲ್ಲದೆ ಅಂತರ್ಜಲ ಸ್ವಾಭಾವಿ­ಕ­ವಾಗಿಯೇ ಕುಸಿದಿದೆ. ಆದರೂ ಕೊಳವೆ ಬಾವಿಗಳನ್ನು ತೆಗೆಸುವುದೇ ನೀರಿನ ಸಮಸ್ಯೆಗೆ ಪರಿಹಾರದ ಮಂತ್ರದಂಡ ಎಂದು ಅಧಿಕಾರಿಗಳು ಭಾವಿಸಿದಂತಿದೆ. ಅನೇಕ ಕಡೆ ಸಾವಿರ ಅಡಿಗಳಷ್ಟು ಕೊರೆದರೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿ­ಯೆಲ್ಲ  ತಾತ್ಕಾಲಿಕ.

ಅದು ಯಾರ್‍ಯಾರದೋ ಜೇಬು ತುಂಬಿಸುವ ಸಾಧನ­ವಾಗಿದೆ. ಹೀಗಾಗಿಯೇ ಸಹಸ್ರಾರು ಕೊಳವೆ ಬಾವಿಗಳನ್ನು ಕೊರೆ­ದರೂ ಕೊಡ ನೀರಿಗೆ ಪರದಾಟ ಇನ್ನೂ ಇದ್ದೇ ಇದೆ. ಜನಕ್ಕೆ ಬೇಕಿರುವುದು ಕಾಯಂ ಪರಿಹಾರ. ಅದು ಸರ್ಕಾರದ ಆದ್ಯತೆಯಾಗಬೇಕು. ಚುನಾವಣೆ ನೆಪ ಹೇಳಿ ನೀರಿನ ಸಮಸ್ಯೆ ಕಡೆಗಣಿಸುವುದನ್ನು ನಿಲ್ಲಿಸಬೇಕು. ದಾಹದಿಂದ ಬಾಯಾರಿದವರ ತಾಳ್ಮೆ ಪರೀಕ್ಷೆ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT