ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಅರಸುತ್ತಾ...

Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಬಡ ಹಾಗೂ ಅನಾಥ ಮಕ್ಕಳ ಮೊಗದಲ್ಲಿ ಖುಷಿ ಅರಳುವಂತೆ ಮಾಡಿ, ಆ ಸಾರ್ಥಕತೆಯಲ್ಲಿಯೇ ಅಕಾಲಿಕವಾಗಿ ತಮ್ಮನ್ನಗಲಿದ ಮಗನ ನೆನಪನ್ನು ಸದಾ ಹಸಿರಾಗಿಡುವ ಉಷಾ ಹಾಗೂ ಮಧುಕರ್‌ ದಂಪತಿಯ ಈ ವಿನೂತನ ಪ್ರಯತ್ನ ಇತರರಿಗೆ ಮಾದರಿ.

ಹೆತ್ತು ಹೊತ್ತು ಸಾಕಿ ಸಲಹಿದ ಜೀವಗಳಿಗೆ ಕರುಳ ಬಳ್ಳಿಯನ್ನು ಕಳೆದುಕೊಳ್ಳುವ ನೋವು ಅಸಹನೀಯ. ಕಣ್ಣ ಮುಂದೆ ಆಡಿ, ಬೆಳೆದು, ಬದುಕು ಕಟ್ಟಿಕೊಂಡ ಕುಡಿಯನ್ನು ಅಕಾಲ ಮೃತ್ಯು ಎಳೆದುಕೊಂಡು ಹೋದರೆ ಹೇಗಾಗಬಾರದು? ಇಂಥ ಸ್ಥಿತಿಯಲ್ಲಿ ಅಳುತ್ತ, ಕೊರಗುತ್ತಾ, ತಮ್ಮ ಬದುಕನ್ನು ಇನ್ನೂ ದುಸ್ತರ ಮಾಡಿಕೊಳ್ಳುವ ಅನೇಕರು ನಮ್ಮ ಮಧ್ಯೆ ಇದ್ದಾರೆ.

ಆದರೆ ಕಳೆದುಕೊಂಡ ಮಗನ ನೆನಪಲ್ಲಿ ಸಾಮಾಜಿಕ ಕಾರ್ಯವೊಂದನ್ನು ಮಾಡಿ ಆ ಮೂಲಕ ಬಡ ಹಾಗೂ ಅನಾಥ ಮಕ್ಕಳ ನಗುವಿಗೆ ಕಾರಣವಾಗಲು ಹೊರಟಿದ್ದಾರೆ ಉಷಾ ಹಾಗೂ ಮಧುಕರ್‌ ದಂಪತಿ.

ಈ ದಂಪತಿಗೆ ಇದ್ದುದು ಪವನ್‌ ಎಂಬ ಒಬ್ಬನೇ ಮಗ. ಗಂಡ, ಹೆಂಡತಿ ಹಾಗೂ ಮಗನ ಈ ಮುದ್ದಾದ ಸಂಸಾರಕ್ಕೆ ಮಗನ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿತ್ತು. ಈ ವರ್ಷದ ಜನವರಿಯಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡರು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಉಷಾ ಹಾಗೂ ಮಧುಕರ್‌ ದಂಪತಿ ಮೂರ್ನಾಲ್ಕು ತಿಂಗಳು ಕೊರಗಿದರು. ಎಷ್ಟೇ ಅತ್ತರೂ ನೋವು ಕಡಿಮೆಯಾಗುವುದಿಲ್ಲ. ಹೀಗಾಗಿ ಮಗನ ಇಷ್ಟಾರ್ಥಗಳನ್ನು ನೆರವೇರಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದ ಇವರು, ಇದೀಗ ಬಡ ಹಾಗೂ ಅನಾಥ ಮಕ್ಕಳಿಗೆ ಪುಸ್ತಕ, ಬಣ್ಣಬಣ್ಣದ ಗೊಂಬೆಗಳನ್ನು ವಿತರಿಸಲು ಮುಂದಾಗಿದ್ದಾರೆ.

‘ಜೂನ್‌ 14ರಂದು ಪವನ್‌ ಹುಟ್ಟುಹಬ್ಬ. ತುಂಬಾ ಧನಾತ್ಮಕ ಚಿಂತನೆ ಹೊಂದಿದ್ದ ಆತ ಪ್ರತಿವರ್ಷ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಿಹಿ ಹಂಚಿ ಖುಷಿ ಪಡುತ್ತಿದ್ದ. ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ ಎನ್ನುತ್ತಿದ್ದ. ಹೀಗಾಗಿ ಅವನ ಆಸೆಯಂತೆ ಅನಾಥ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಅವನ ಹುಟ್ಟು ಹಬ್ಬದ ದಿನ ಆಟದ ಸಾಮಾನು ಹಾಗೂ ಪುಸ್ತಕಗಳನ್ನು ಹಂಚಿ ಖುಷಿ ಪಡಿಸುವ ನಿರ್ಧಾರ ಮಾಡಿದ್ದೇವೆ’ ಎನ್ನುತ್ತಾರೆ ಎ.ಎನ್‌.ಮಧುಕರ್‌.

ಸದಾ  ಧನಾತ್ಮಕ ಯೋಚನೆ ಹೊಂದಿದ್ದ ಪವನ್‌ (29) ಕ್ರೈಸ್ಟ್‌ ಯುನಿವರ್ಸಿಟಿಯಿಂದ ಕಂಪ್ಯೂಟರ್‌ ಸೈನ್ಸ್‌ ಪದವಿ ಪಡೆದಿದ್ದರು. ಮೈಂಡ್‌ಟ್ರೀಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಅವರು, ಎರಡು ವರ್ಷದ ನಂತರ ಕೆಲಸ ಬಿಟ್ಟಿದ್ದರು. ಒಂದು ವರ್ಷ ಮನೆಯಲ್ಲಿಯೇ ಇದ್ದುಕೊಂಡು ಮುಂದಿನ ಯೋಜನೆ ರೂಪಿಸಿಕೊಂಡು ತನ್ನದೇ ಆದ ‘ಸ್ಪೈರೊಲ್ಯೂಶನ್‌ ಇಂಕ್‌’ ಎಂಬ ಸಾಫ್ಟ್‌ವೇರ್‌ ಕಂಪೆನಿಯನ್ನು ಪ್ರಾರಂಭಿಸಿದ್ದರು. ಅದೂ ಅಲ್ಲದೆ ಪ್ಲಾಶ್‌ ಡಿಜಿಟಲ್‌ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ಸಹಸಂಸ್ಥಾಪಕ ಹಾಗೂ ಚೀಫ್‌ ಪ್ರಾಡೆಕ್ಟ್‌ ಅಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದರು.

‘ಉಷಾ, ನಾನು ಹಾಗೂ ಪವನ್‌ ಮೂವರದ್ದು ಪುಟ್ಟ ಸಂಸಾರವಾಗಿತ್ತು. ಊಟ ಮಾಡಲಿ, ಪ್ರಯಾಣ ಬೆಳೆಸಲಿ, ನಗಲಿ ಎಲ್ಲದಕ್ಕೂ ನಮ್ಮ ಮೂವರ ಸಾಥ್‌ ಇರುತ್ತಿತ್ತು. ಈಗ ಪವನ್‌ ಇಲ್ಲದ್ದರಿಂದ ಏನು ಮಾಡಲೂ ಮನಸ್ಸಾಗದು. ಹೀಗಾಗಿ ಅವನ ಹೆಸರಲ್ಲಿ ಬಡ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮುಂದಾಗಿದ್ದೇವೆ. ಅನೇಕ ಅನಾಥಾಶ್ರಮಗಳಲ್ಲಿ ಮಕ್ಕಳು ಸುಮ್ಮನೆ ಕುಳಿತಿರುತ್ತಾರೆ. ಅವರಿಗೆ ಆಟವಾಡಲು ಏನೂ ಇರುವುದಿಲ್ಲ. ಹೀಗಾಗಿ ಆಟದ ಗೊಂಬೆ, ಇನ್ನಿತರ ವಸ್ತುಗಳನ್ನು ನೀಡಬೇಕು ಎಂದು ಮನಸ್ಸು ಮಾಡಿದೆವು. ಅಲ್ಲದೆ ಲಘು ಬರಹಗಳನ್ನು ಹೊಂದಿದ, ಮಕ್ಕಳು ಓದುವಂಥ ಸಾಹಿತ್ಯ ಇರುವ ಪುಸ್ತಕಗಳನ್ನು ಅವರಿಗೆ ನೀಡಿ ಓದುವ ಹವ್ಯಾಸ ಬೆಳೆಸಬೇಕು ಎಂಬುದು ನಮ್ಮ ಆಶಯ’ ಎಂದು ತಮ್ಮ ಯೋಜನೆ ಬಗ್ಗೆ ಹೇಳುತ್ತಾರೆ ಮಧುಕರ್‌.

ಇದು ನಿರಂತರ ಪ್ರಕ್ರಿಯೆ ಎನ್ನುವ ಅವರು ಈ ಬಾರಿಯ ಪ್ರತಿಕ್ರಿಯೆ ನೋಡಿ ಮುಂದಿನ ಯೋಜನೆಗಳನ್ನು ನಿರ್ಧರಿಸುತ್ತಾರಂತೆ. ಇವರ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಅನೇಕರು ಆಟದ ಸಾಮಾನುಗಳ ಜೊತೆ ಪುಸ್ತಕಗಳನ್ನೂ ನೀಡುತ್ತಿದ್ದಾರೆ. ಆದರೆ ಅವುಗಳಲ್ಲಿ ಹಲವು ಕಾದಂಬರಿ, ಸಾಹಿತ್ಯ ಪುಸ್ತಕಗಳೂ ಸೇರಿವೆ.

ಚಿಕ್ಕ ಪುಟ್ಟ ಮಕ್ಕಳಿಗೆ ನೀಡುವುದರಿಂದ ಲಘು ಸಾಹಿತ್ಯ, ಮಕ್ಕಳು ಓದಬಲ್ಲ ಕಥೆ, ಗೀತೆ, ಕಾಮಿಕ್‌ ಪುಸ್ತಕಗಳನ್ನು ನೀಡುವಂತೆ ಅವರು ಮನವಿ ಮಾಡಿಕೊಳ್ಳುತ್ತಾರೆ. ಅದೂ ಅಲ್ಲದೆ ಈಗಾಗಲೇ ಅನೇಕರು ಹಣ ಸಹಾಯ ಮಾಡುವ ಪ್ರಸ್ತಾಪವನ್ನೂ ಮಾಡಿದ್ದಾರೆ. ಆದರೆ ಅವುಗಳನ್ನು ಸ್ವೀಕರಿಸುವ ಮನಸ್ಸು ಮಧುಕರ್‌ ಅವರಿಗಿಲ್ಲ. ‘ನಮಗೆ ಹಣದ ಕೊರತೆ ಇಲ್ಲ. ಹಣ ಪಡೆದು ನಾವೇನೂ ಸೇವಾ ಸಂಸ್ಥೆಯನ್ನು ನಡೆಸಬೇಕಾಗಿಲ್ಲ. ನಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದೇವೆ. ನೀವೂ ನಿಮ್ಮ ಕೈಲಾದ ಸಹಕಾರ ನೀಡಿ, ಮಕ್ಕಳ ಖುಷಿಗೆ ನೆರವಾಗುವ ಆಟಿಕೆ, ಪುಸ್ತಕ ಅಥವಾ ಇನ್ಯಾವುದಾದರೂ ವಸ್ತುಗಳನ್ನೇ ನೀಡಿ’ ಎನ್ನುತ್ತಾರೆ ಅವರು.

ಮಗನ ಅಗಲಿಕೆಯ ನೋವಿನಿಂದ ಹೊರಬಂದು ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಅರಸುವ ದಾರಿ ಇದು. ಅವನ ನೆನಪು ಹಚ್ಚ ಹಸಿರಾಗಿರಲಿ ಎಂದು ಆಶಿಸುವ ಇವರು, ‘ಪ್ರತಿ ವ್ಯಕ್ತಿಯೂ ಭಿನ್ನ. ನಮ್ಮಂಥದ್ದೇ ಸನ್ನಿವೇಶವನ್ನು ಅನೇಕ ತಂದೆ ತಾಯಿಗಳು ಅನುಭವಿಸುತ್ತಿದ್ದಾರೆ. ಅಳುತ್ತಾ ಕೂರುವ ಬದಲು ಸಾಮಾಜಿಕ ಹಾಗೂ ಸಾಮುದಾಯಿಕ ಕೆಲಸಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಅನಿಸಿಕೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ. ಆಗ ಮನಸ್ಸಿಗೆ ಎಷ್ಟೋ ನೆಮ್ಮದಿ ಸಿಗುತ್ತದೆ. ಅಗಲಿದವರ ನೆನಪಲ್ಲಿ ಏನು ಮಾಡಬೇಕು ಎನಿಸುತ್ತದೆಯೋ ಅದನ್ನು ಮಾಡಿ. ಮನಸ್ಸನ್ನು ಬೇರೆಡೆಗೆ ಹರಿಬಿಡಿ. ಆಗ ಮನಸ್ಸಿಗೆ ತುಸು ಸಮಾಧಾನ ಸಿಗುತ್ತದೆ’ ಎಂದು ಸಲಹೆ ನೀಡುತ್ತಾರೆ ಮಧುಕರ್‌.

ಅನಾಥ ಹಾಗೂ ಬಡ ಮಕ್ಕಳ ಮೊಗದಲ್ಲಿ ಸಂತೋಷದ ಬೆಳಕು ಹಚ್ಚುವ ಉಷಾ ಹಾಗೂ ಮಧುಕರ್‌ ಅವರ ಈ ಪ್ರಯತ್ನಕ್ಕೆ ಸಾಥ್‌ ನೀಡಬೇಕೆನ್ನುವವರ ಮಾಹಿತಿಗೆ–
* ಬನ್ನೇರುಘಟ್ಟ ರಸ್ತೆ: ಉಷಾ ಮಧುಕರ್‌– 99804 59500, ushamadhukar103@gmail.com.
* ಎ.ಎನ್‌.ಮಧುಕರ್‌– 98452 70296. anmadhukar@yahoo.com.
* ವಿಕ್ರಂ ದ್ವಾರಕಾನಾಥ್‌–98451 32386,  vikramd375@hotmail.com,
*ಸುಧಾ ರಾಮಚಂದ್ರನ್‌– 99452 10090, sudha.ramachandran@live.in.
* ಇಂದಿರಾನಗರ: ಮಾಲಾ ರಾಮಚಂದ್ರನ್‌–  99169 02021, mala150@hotmail.com.
* ಕೋರಮಂಗಲ: ಅನನ್ಯ ರಾಹುಲ್‌– 080 25524840.
* ಆರ್‌.ಟಿ.ನಗರ: ಜಯಲಕ್ಷ್ಮಿ– 99029 99773. menon_jayalakshmi@yahoo.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT