ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿ ಕಸಿಯುವ ಸ್ಮಾರ್ಟ್‌ಫೋನ್‌!

ಗುಲ್ ಮೊಹರ್
Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಒತ್ತಡದ ಬದುಕಿನಿಂದ ಹೊರಬರಬೇಕೆ? ಹಾಗಿದ್ದರೆ ಸ್ಮಾರ್ಟ್‌ಫೋನ್‌ ದೂರವಿಡಿ. ಇಂತಹ ಒಂದು ಸರಳ ಸೂತ್ರದ ಸಲಹೆಯನ್ನು ಸಂಶೋಧಕರು ನೀಡಿದ್ದಾರೆ. ಅಧ್ಯಯನವೊಂದರ ಪ್ರಕಾರ ಹೆಚ್ಚು, ಹೆಚ್ಚು ಜನರು ಸ್ಮಾರ್ಟ್‌ಫೋನ್‌ ವ್ಯಸನಿಗಳಾಗಿ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಹೀಗಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಈಗ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳು ದೊರೆಯುತ್ತಿರುವುದರಿಂದ ಎಲ್ಲರೂ ಈ ಉಪಕರಣಕ್ಕೆ ಮಾರುಹೋಗುತ್ತಿದ್ದಾರೆ. ಜತೆಗೆ ಇದು ಅನಿವಾರ್ಯ ಎನ್ನುವ ಪರಿಸ್ಥಿತಿಯೂ ಉಂಟಾಗುತ್ತಿದೆ. ‘ನಿರಂತರವಾಗಿ ಯಾವುದಾದರೂ ಒಂದು ಕಾರ್ಯದಲ್ಲಿ ತೊಡಗುವುದರಿಂದ  ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳಾಗುವುದು ಸಹಜ. ಹೀಗಾಗಿ ಒತ್ತಡದಿಂದ ಬಳಲಿದ ದೇಹಕ್ಕೆ ವಿಶ್ರಾಂತಿ ನೀಡಲು ಸಮಯಾವಕಾಶವೇ ದೊರೆಯುವುದಿಲ್ಲ’ ಎಂದು ಲಂಡನ್‌ನ ಕೊವಿಂಟ್ರಿ ವಿಶ್ವವಿದ್ಯಾಲಯದ ಮಾನಸಿಕ ಆರೋಗ್ಯ ಸಂಶೋಧನಾ ಕೇಂದ್ರದ ಮನೋವೈದ್ಯ ಕ್ರಿಸ್ಟಿನ್‌ ಗ್ರ್ಯಾಂಟ್‌ ಹೇಳುತ್ತಾರೆ.

‘ಹೆಚ್ಚು ದಣಿವಾಗಿದ್ದರೆ ಅಥವಾ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರೆ ನಿತ್ಯದ ಕಾರ್ಯದಲ್ಲಿ ಹೆಚ್ಚು ತಪ್ಪುಗಳನ್ನು ಮಾಡುತ್ತೇವೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಎಲ್ಲಿಯೇ ಇರಲಿ, ಎಲ್ಲಿಯೇ ಪಯಣಿಸಲಿ ತಂತ್ರಜ್ಞಾನದ ನಮ್ಮ ಬೆನ್ನಿಗೆ ಇರುತ್ತದೆ. ಇದು ಒತ್ತಡವನ್ನು ಹೆಚ್ಚಿಸಿ ದಣಿವಾಗಲು ಕಾರಣವಾಗುತ್ತದೆ’ ಎಂದು ಅವರು ತಮ್ಮ ಸಂಶೋಧನೆಯ ಪ್ರಬಂಧದಲ್ಲಿ ತಿಳಿಸಿದ್ದಾರೆ. ಅದರಲ್ಲೂ ವಿವಿಧ ರೀತಿಯ ಒತ್ತಡದಿಂದ ಮಹಿಳೆಯರು ಅತಿ ಹೆಚ್ಚು ಅಪಾಯಕ್ಕೆ ಸಿಲುಕುತ್ತಾರೆ.

ಮೂರು ಪಾಳಿಗಳ ವ್ಯವಸ್ಥೆಯ ಕಚೇರಿಯಲ್ಲಿ ಕೆಲಸ ಮಾಡುವವರು ಹಾಗೂ ಮನೆಗೆಲಸದಲ್ಲಿ ತೊಡಗಿರುವವರು ಮತ್ತು ತಡರಾತ್ರಿವರೆಗೂ ಸ್ಮಾರ್ಟ್‌ಫೋನ್‌ ಬಳಸುವವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ. ಇನ್ನೊಂದು ಸಂಶೋಧನೆಯಲ್ಲಿ ‘ಸೆಲ್ಫಿ’ ವ್ಯಾಮೋಹವೂ ಸ್ಮಾರ್ಟ್‌ಫೋನ್‌ಗಳ ವಿಪರೀತ ಬಳಕೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಸ್ಮಾರ್ಟ್‌ಫೋನ್‌ ಮೂಲಕ ನಿತ್ಯದ ಚಟುವಟಿಕೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬಹುದು. ಅದರಲ್ಲೂ ಯುವಜನಾಂಗ ‘ಸೆಲ್ಫಿ’ ವ್ಯಾಮೋಹಕ್ಕೆ ಹೆಚ್ಚು ಒಳಗಾಗಿದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಬಳಸುವ ಹವ್ಯಾಸ ಹೆಚ್ಚಾಗುತ್ತಿದೆ ಎನ್ನುತ್ತಾರೆ ಡರ್ಬಿಯ ಮಾನಸಿಕ ಆರೋಗ್ಯ ವಿಶ್ವವಿದ್ಯಾಲಯದ ಅಧ್ಯಾಪಕ ಜಹೀರ್‌ ಹುಸೇನ್‌.

‘ಆತ್ಮರತಿ ಅಥವಾ ಸ್ವಪ್ರತಿಷ್ಠೆಗೆ ಒಳಗಾಗಿರುವವರು ಅತಿ ಹೆಚ್ಚು ಸ್ಮಾರ್ಟ್‌ಫೋನ್‌ ವ್ಯಸನಿಗಳಾಗುತ್ತಿದ್ದಾರೆ’ ಎಂದು ವಿವರಿಸಿದ್ದಾರೆ. ಶೇ 13ರಷ್ಟು ಮಂದಿ ಸ್ಮಾರ್ಟ್‌ಫೋನ್‌ ಬಳಕೆದಾರರು ದಿನಕ್ಕೆ ಕನಿಷ್ಠ 3ರಿಂದ 4 ಗಂಟೆ ಬಳಸುತ್ತಾರೆ. ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದ್ದ ಜನರಲ್ಲಿ ಶೇಕಡ 46.80ರಷ್ಟು ಮಂದಿ ಸ್ಮಾರ್ಟ್‌ಫೋನ್‌ ಬಳಕೆಯಿಂದ ಸಾಮಾಜಿಕ ಸಂಬಂಧ ಸುಧಾರಿಸಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್‌ಫೋನ್‌ ಬಳಕೆ ಮೇಲೆ ನಿಗಾ ವಹಿಸಲು ಪಿಟ್ಸಬರ್ಗ್ ಮೂಲದ ಕೆವಿನ್‌ ಹೆಲಿಷ್‌ ಎನ್ನುವವರು ಸ್ಮಾರ್ಟ್‌ಫೋನ್‌ ಎಷ್ಟು ಅವಧಿಗೆ ಬಳಸಲಾಗಿದೆ ಎನ್ನುವ  ವಿವರ ನೀಡುವ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT