ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಮೌನ ಕ್ರಾಂತಿ

ನಾನು ಕಂಡ ಗಾಂಧಿ
Last Updated 15 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಮ್ಮ ನೆಲದಲ್ಲಿ ಬೇರುಬಿಟ್ಟಿದ್ದ ಪರಕೀಯರನ್ನು ಅಹಿಂಸಾ ಮಾರ್ಗದಿಂದಲೇ ದೇಶದಿಂದ ಹೊರಹಾಕಿದ್ದು ಸಾಮಾನ್ಯ ಸಂಗತಿಯಲ್ಲ. ಈ ಅಹಿಂಸಾ ಸತ್ಯಾಗ್ರಹದಲ್ಲಿದ್ದ ಬದ್ಧತೆ, ಖಚಿತ ನಿರ್ಧಾರಗಳು, ಉಪ್ಪಿನ ಸತ್ಯಾಗ್ರಹ, ಖಾದಿ ನೇಯ್ಗೆ, ಗ್ರಾಮೋದ್ಯೋಗಗಳ ಬಗೆಗಿದ್ದ ಗಾಂಧೀಜಿ ಒಲವುಗಳು ಇಂದಿಗೂ ಪ್ರಸ್ತುತ.

ದೇಶದ ಬಡತನವನ್ನು ಚಿಂತಿಸಿ–ಮಂಥಿಸಿ ತಾನೂ ಆಜೀವಪರ್ಯಂತ ಅರೆಬೆತ್ತಲೆಯಾಗಿಯೇ ಜೀವಿಸಿದ್ದನ್ನು ಹೇಗೆ ಮರೆಯಲು ಸಾಧ್ಯ? ಹಲವು ಅಗ್ರಗಣ್ಯರು ನುಡಿಗಳಿಂದಲೇ ಚಪ್ಪಾಳೆ ಗಿಟ್ಟಿಸುವುದರಲ್ಲಿ ನಿಸ್ಸೀಮರು, ಇಬ್ಬಂದಿತನ ಮೈಗೂಡಿಸಿಕೊಂಡವರು. ಆದರೆ ಇದಕ್ಕೆ ಹೊರತಾಗಿ ನಡೆಯಲ್ಲೇ ಎಲ್ಲರಿಗೂ ಮಾರ್ಗದರ್ಶನ ನೀಡಿದ ಮಾರ್ಗದರ್ಶಕ ನಮ್ಮ ಗಾಂಧಿ. ತಮ್ಮ ಶೌಚಾಲಯವನ್ನಲ್ಲದೆ, ಆಶ್ರಮದ ಅತಿಥಿಗಳ ಶೌಚವನ್ನೂ ತೊಳೆದು ಮೂಕನಾಗಿ ಕಾಯಕದ ಮಹತ್ತಿಕೆಯನ್ನು ಬೋಧಿಸಿದಾತ...

ಇವರ ಆಲೋಚನೆಗಳನ್ನು ಮೈಗೂಡಿಸಿಕೊಂಡು ನಿಸರ್ಗದತ್ತ ಸಂಪತ್ತುಗಳನ್ನು ರಕ್ಷಿಸಿಕೊಂಡು ಆಡಂಬರದ ಕೃತಕ ಜೀವನಕ್ಕೊತ್ತುಕೊಡದೆ ಸಹಜವಾದ ಸರಳ ಜೀವನ ಅಳವಡಿಸಿಕೊಂಡಿದ್ದರೆ ಇಂದಿನ ಉಸಿರುಗಟ್ಟುವ ಯಾಂತ್ರಿಕತೆ ಇರುತ್ತಿರಲಿಲ್ಲ. ದುರಾಸೆ ಹೆಚ್ಚಾಗಿ, ನೆಲ, ಜಲ ಕಳೆದುಕೊಂಡು, ಶಿಕ್ಷಣವನ್ನು ವ್ಯಾಪಾರೀಕರಣವಾಗಿಸಿ ಭ್ರಷ್ಟಾಚಾರವೆಂಬ ಭೂತ ಆಪೋಶನ ತೆಗೆದುಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ.

ಗಾಂಧೀಜಿಯವರ ನಿಸರ್ಗದತ್ತ ಕಾಮಗಾರಿಗಳನ್ನು ಜಾರಿಗೊಳಿಸಿದ್ದರೆ ಇಂದು ನಮ್ಮ ನೆಲ ಬರಡಾಗುತ್ತಿರಲಿಲ್ಲ.  ಕಾಯಕವೇ ಕೈಲಾಸವೆಂಬ ನುಡಿಯನ್ನು ನಡೆಯಲ್ಲಿ ಹಮ್ಮಿಕೊಂಡು ಸ್ವಾವಲಂಬಿಯಾಗಿ ಬದುಕುವುದನ್ನು ಕಲಿತಿದ್ದರೆ ನಿರುದ್ಯೋಗದ ಸಮಸ್ಯೆ ಕಾಡುತ್ತಿರಲಿಲ್ಲ. ಗಾಂಧಿಯನ್ನು ಪ್ರತಿಮೆಯಲ್ಲಿ ಸಂಸ್ಥಾಪಿಸಿ, ಅವರಿತ್ತ ಮೌಲ್ಯಗಳನ್ನು ಗಾಳಿಗೆ ತೂರಿದ್ದು ಈಗಿನ ದುರಂತ. ಅವರೇನೂ ಪವಾಡ ಪುರುಷರಲ್ಲ, ದೇವತಾ ಮನುಷ್ಯನೂ ಅಲ್ಲ. ಆದರೆ ಪರಿಪೂರ್ಣ ಮಾನವರಾದರು. ಮಾನವೀಯತೆಯನ್ನು ಪೂರ್ಣವಾಗಿ ಅರ್ಥೈಸಿಕೊಂಡವರು. ‘ಮಹಾತ್ಮ’ ಪಟ್ಟ ಅವರಿಗೆ ಒಪ್ಪುವಂತೆ ಮತ್ತಾರಿಗೂ ಒಪ್ಪದೆಂಬುದು ಸಾರ್ವತ್ರಿಕ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT