ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ, ಬೋಸ್‌ ಆಪ್ತ ಸೋವಿಯತ್‌ ಗೂಢಚಾರ

ಬ್ರಿಟನ್‌ ರಾಷ್ಟ್ರೀಯ ಪತ್ರಾಗಾರದಿಂದ ಮಾಹಿತಿ ಬಹಿರಂಗ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಸಹಾಯಕ, ಜವಾಹರಲಾಲ್‌ ನೆಹರೂ ಅವರ ‘ಹಳೆಯ ಗೆಳೆಯ’ ಮತ್ತು ಭಾರತದ ಮಾಜಿ ರಾಯಭಾರಿ ಎ.ಸಿ.ಎನ್‌. ನಂಬಿಯಾರ್‌ ಸೋವಿಯತ್‌ ಒಕ್ಕೂಟದ ಗೂಢಚಾರರಾಗಿದ್ದರು ಎಂದು ಬ್ರಿಟನ್‌ನ ರಾಷ್ಟ್ರೀಯ ಪತ್ರಾಗಾರ ಹೇಳಿದೆ.

ಬ್ರಿಟನ್‌ ರಾಷ್ಟ್ರೀಯ ಪತ್ರಾಗಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಈ ವಿಚಾರವನ್ನು ವಿವರಿಸಲಾಗಿದೆ. 1924ರಲ್ಲಿ ಪತ್ರಕರ್ತರಾಗಿ ಬರ್ಲಿನ್‌ಗೆ ಹೋದ ಅವರು 1929ರಲ್ಲಿ ಸೋವಿಯತ್‌ ಒಕ್ಕೂಟದ ಅತಿಥಿಯಾಗಿ ಮಾಸ್ಕೊಗೆ ಭೇಟಿ ನೀಡಿದ್ದರು. ಎರಡನೇ ಜಾಗತಿಕ ಯುದ್ಧ ಆರಂಭವಾದಾಗ ನಂಬಿಯಾರ್‌ ಅವರನ್ನು ಜರ್ಮನಿಯಿಂದ ಉಚ್ಛಾಟಿಸಲಾಗಿತ್ತು. ಆದರೆ ನಂತರ ಅವರು ಸುಭಾಶ್ಚಂದ್ರ ಬೋಸ್‌ ಅವರ ಸಹಾಯಕನಾಗಿ ಜರ್ಮನಿಗೆ ಹೋದರು ಎಂದು ಪತ್ರಾಗಾರದ ಹೇಳಿಕೆ ತಿಳಿಸಿದೆ.

1945ರಲ್ಲಿ ಅವರನ್ನು ಆಸ್ಟ್ರಿಯಾದಲ್ಲಿ ನಾಜಿ ಬೆಂಬಲಿಗ ಎಂದು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಯುದ್ಧಾನಂತರ ಅವರು ಬರ್ನೆಯಲ್ಲಿ ಭಾರತದ ನಿಯೋಗದ ಸಮಾಲೋಚಕರಾಗಿ, ಸ್ಕ್ಯಾಂಡಿನೇವಿಯಾ­ದಲ್ಲಿ ಭಾರತದ ರಾಯಭಾರಿ­ಯಾಗಿ ಮತ್ತು ನಂತರ ಯುರೋಪ್‌ಗೆ ‘ಹಿಂದೂಸ್ತಾನ್‌ ಟೈಮ್ಸ್‌’ ಪತ್ರಿಕೆಯ ವರದಿಗಾರರಾಗಿ ಕೆಲಸ ಮಾಡಿದ್ದರು. ಪತ್ರಕರ್ತನ ಹೆಸರಿನಲ್ಲಿ ಅವರು ಸೋವಿಯತ್‌ ಪರವಾಗಿ ಕೈಗಾರಿಕಾ ಗುಪ್ತಚರ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಿದ್ದರು ಎಂದು ಬ್ರಿಟನ್‌ ಪತ್ರಾಗಾರದ ಹೇಳಿಕೆ ತಿಳಿಸಿದೆ.

ನೆಹರೂ ಅವರಿಗೂ ನಂಬಿಯಾರ್‌ ಅತ್ಯಂತ ನಿಕಟವಾಗಿದ್ದರು ಎಂದು ಕಡತಗಳಲ್ಲಿ ವಿ.ಡಬ್ಲ್ಯು. ಸ್ಮಿತ್‌ ಷರಾ ಬರೆದಿದ್ದಾರೆ.
ನೆಹರೂ ಅವರು ನಂಬಿಯಾರ್‌ ಅವರನ್ನು ಭಾರತದ ರಾಜತಾಂತ್ರಿಕರಾಗಿ ನೇಮಕ ಮಾಡಿದ್ದರು ಎಂಬ ಮಾಹಿತಿಯೂ ಬ್ರಿಟನ್‌ನ ಕಡತಗಳಲ್ಲಿ ಇದೆ. ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಜರ್ಮನಿಯ ಜಲಾಂತರ್ಗಾಮಿ ‘ಯುಬೋಟ್‌ 234’ ಶರಣಾದಾಗ ಅದರಿಂದ ನಂಬಿಯಾರ್‌ ಅವರು ಬೋಸ್‌ ಅವರಿಗೆ ಬರೆದಿದ್ದ ಪತ್ರಗಳೂ ಬ್ರಿಟನ್‌ನ ಕಡತಗಳಲ್ಲಿ ಸೇರಿವೆ ಎಂದು ಪತ್ರಾಗಾರದ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT