ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಕೈತಪ್ಪಿದ ‘ವಿದ್ಯಾವಿಕಾಸ’!

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಿದ್ಯಾವಿಕಾಸ ಎಂಬುದು ಕರ್ನಾಟಕ ಸರ್ಕಾ­ರದ ಒಂದು ಯೋಜನೆಯ ಹೆಸರು. ಸರ್ಕಾರಿ ಶಾಲೆಗಳಲ್ಲಿ ಕೈಮಗ್ಗದ ಸಮವಸ್ತ್ರ ಹಂಚುವುದು ಹಾಗೂ ಆ ಮೂಲಕ ರಾಜ್ಯದ ಸಾವಿರಾರು ನೇಕಾ­ರರಿಗೆ ಜೀವನೋಪಾಯ ಒದ­ಗಿಸುವುದು, ಹೀಗೆ ವಿದ್ಯೆ ಹಾಗೂ ನೇಯ್ಗೆ ಎಂಬ ಎರಡು ಘನ ಉದ್ದೇ­ಶ­ಗಳನ್ನು ಬೆಸೆಯು­ವುದು ಯೋಜನೆಯ ಗುರಿ. ಯೋ­ಜ­­ನೆಯ ಅನ್ವಯ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ನೇಕಾ­ರ­ರಿಂದ ಬಟ್ಟೆ ನೇಯಿಸಿ, ಶಿಕ್ಷಣ ಇಲಾಖೆಗೆ ಮಾರ­ಬೇಕು. ಶಿಕ್ಷಣ ಇಲಾಖೆ­ಯು ಸಮವಸ್ತ್ರ ಹೊಲಿಸಿ ಉಚಿತವಾಗಿ ಮಕ್ಕಳಿಗೆ ಹಂಚ­ಬೇಕು. ಕೆಲವರ್ಷ ಹೀಗೇ ನಡೆಯುತ್ತಿತ್ತು.

ಈಗ ಸಿದ್ದರಾಮಯ್ಯನವರ ಸರ್ಕಾರವು ನೇಕಾ­ರನ ಕೈಗಳಿಂದ ಬಟ್ಟೆ ಖರೀದಿಯನ್ನು ಕಿತ್ತು­ಕೊಂಡು ಕಾರ್ಖಾನೆ ಮಾಲೀಕರ ಕೈಗಳಿಗೆ ಒಪ್ಪಿ­ಸಲು ಹೊರ­ಟಿದೆ. ಯೋಜನೆಯ ಮೂಲ ಆಶ­ಯವನ್ನು ಮಣ್ಣು­­ಪಾಲು ಮಾಡಲು ಹೊರಟಿದೆ. ಹಿಂದೊಮ್ಮೆ ಯಡಿಯೂರಪ್ಪನವರ ಸರ್ಕಾರವು ಹೆಂಗಸರಿಗೆ ಹಂಚಲೆಂದು, ಸೀರೆಗಳನ್ನು ಹೊರ­ರಾಜ್ಯ­ಗಳ ಮಿಲ್ಲುಗಳಿಂದ ಖರೀದಿಸಿ ಟೀಕೆಗೆ ಗುರಿ­ಯಾಗಿತ್ತು. ಯಡಿಯೂರಪ್ಪನವರು, ಕನಿಷ್ಠಪಕ್ಷ ಹಳೆಯ ಆಶಯವನ್ನು ತಿರುಚಲು ಹೋಗಿರಲಿಲ್ಲ. ಹೊಸ ಖರೀದಿ ಮಾಡಿದ್ದರು. ಸಿದ್ದರಾಮಯ್ಯ­ನವರು ಆಶಯ ತಿರುಚುವಲ್ಲಿ ನಿರತರಾಗಿದ್ದಾರೆ.

ವಿದ್ಯಾವಿಕಾಸ ಒಂದು ಸಣ್ಣ ಯೋಜನೆ. ಸರ್ಕಾರದ ಖರ್ಚಿನ ದೃಷ್ಟಿಯಿಂದ ಅಥವಾ ಕಿಕ್‌­ಬ್ಯಾಕ್ ದೃಷ್ಟಿಯಿಂದ, ಪುಡಿಗಾಸಿನ ಯೋಜನೆ­ಯೆಂದರೂ ಸರಿಯೆ. ಆದರೆ, ಯೋಜನೆಯ ಸಾಮಾಜಿಕ ಹಾಗೂ ಸಾಂಕೇತಿಕ ಮಹತ್ವ ಗಮ­ನಿ­ಸಿದಾಗ, ಉಪ್ಪಿನ ಸತ್ಯಾಗ್ರಹಕ್ಕೆ ಎಡೆಗೊಟ್ಟ ಬ್ರಿಟಿ­ಷರ ಉಪ್ಪಿನ ನೀತಿಗಿಂತ ಕಡಿಮೆ ಕ್ರೂರ­ವಾದ­ದ್ದೇನಲ್ಲ ಈ ಸರ್ಕಾರದ ನಡವಳಿಕೆ.

ವಿದ್ಯಾವಿಕಾಸ ಯೋಜನೆಯು ನಡೆದು ಬಂದ ದಾರಿಯನ್ನು ಗುರುತಿಸುವುದು ಒಳ್ಳೆಯದು. ಆಗ, ಸರ್ಕಾರಿ ಯೋಜನೆಗಳು ಹೇಗೆ ಭ್ರಷ್ಟವಾಗು­ತ್ತವೆ, ಏಕೆ ಭ್ರಷ್ಟವಾಗುತ್ತವೆ ಎಂಬುದು ತಿಳಿ­ದೀತು. ಹಾಗೆ ನೋಡಿದರೆ, ಸರ್ಕಾರಿ ಯೋಜನೆ­ಗ­ಳನ್ನು ಮುಕ­್ಕಾಗಿ­ಸುತ್ತಿರುವವರೆಲ್ಲರೂ ಭ್ರಷ್ಟರೇ­ನಲ್ಲ. ಆದರೆ ಸೋಮಾರಿಗಳು. ಹಾಗೂ ಸೋಮಾ­­ರಿತನದ ಕಾರಣದಿಂದಾಗಿ ಅವಸರ ಪ್ರಿಯರು.
ಕೈಮಗ್ಗವೆಂಬುದು ಶ್ರಮದ ಉತ್ಪಾದನೆ. ಹಾಗಾಗಿ ನಿಧಾನಗತಿಯ ಉತ್ಪಾದನೆ. ಅರ್ಥಾತ್
ಸಮಯಬೇಡುವ ಉದ್ದಿಮೆ. ಅಧಿಕಾರಿಗಳು ಆಜ್ಞೆ ನೀಡುವಲ್ಲಿ ತಡಮಾಡುತ್ತಾರೆ. ಮಾರ್ಚ್‌ ತಿಂಗಳ ತನಕ ಕಾಯುವುದು ಒಳ್ಳೆಯ ನೀತಿ ಎಂದು ತಿಳಿಯುತ್ತಾರೆ. ಆರ್ಡರ್ ತಡವಾದಾಗ ಸಿದ್ಧ­ವಸ್ತು ತಯಾರಿಕೆ ತಡವಾಗುತ್ತದೆ. ಕಡೇ ಗಳಿಗೆಯ ಅವಸರ ಮಿಗಿಲಾಗುತ್ತದೆ. ಯೋಜನೆಯ ಮೂಲ ಆಶಯ ಹಿಮ್ಮೆಟ್ಟುತ್ತದೆ. ಕಾರ್ಖಾನೆ ಮಾಲೀಕರು ಸಂತೆಗೆಂದು ಎಂಟು ಮೊಳ ನೇಯಲು ಸಿದ್ಧ­ವಿರು­ತ್ತಾರೆ. ಮಾತ್ರವಲ್ಲ, ಮಾಮೂಲಿನ ಗಂಟಿ­ನೊ­ಡನೆ ಬರುತ್ತಾರೆ.

ಇಂತಹ ಅವಕಾಶಗಳಿಗೇ ಕಾಯುತ್ತಿ­ರುವ ಒಳಗಿನ ಭ್ರಷ್ಟರು ಅವಸರದ ಖರೀದಿಯಲ್ಲಿ ನಿಷ್ಣಾತರು. ಕೈಮಗ್ಗ ಅದಕ್ಷ ಕ್ಷೇತ್ರ­ವೆಂದೂ, ಅಗತ್ಯ­ವಿ­ರುವಷ್ಟು ಬಟ್ಟೆ ನೇಯಲಾರ­ರೆಂದೂ, ಗುಣ­ಮಟ್ಟ ಕಾಪಾ­ಡಿಕೊಳ್ಳಲಾರ­ರೆಂದೂ, ಕೈಮಗ್ಗ ಬಟ್ಟೆಯ ಖರೀದಿ­ಯಿಂದ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ನಷ್ಟವಾ­ಗು­ವುದೆಂದು, ಷರಾ ಬರೆದು ಕಡತ ಮುಚ್ಚುತ್ತಾರೆ.

ಎರಡೆರಡು ಇಲಾಖೆಗಳು ಜಂಟಿಯಾಗಿ ಜಾರಿ­ಗೊಳಿಸಬೇಕಿರುವ ಯೋಜನೆ ವಿದ್ಯಾವಿಕಾಸ. ಹಾಗಾಗಿ, ಕೈಮಗ್ಗಕ್ಕೆ ಎರಡೆರಡು ವಿಘ್ನಗಳು. ಲಕ್ಷಾಂತರ ಮೀಟರು ಬಟ್ಟೆಯನ್ನು ಪ್ರತಿವರ್ಷ ಕೊಳ್ಳಬೇಕಿರುವ ಇಲಾಖೆಯು ಪ್ರತಿವರ್ಷ ತಡ­ವಾಗಿ ಆಜ್ಞೆ ಹೊರಡಿಸುತ್ತದೆ, ಪ್ರತಿವರ್ಷ ತಡ­ವಾಗಿ ಹಣ ಬಿಡುಗಡೆ ಮಾಡುತ್ತದೆ. ಹಣ ಬಿಡು­ಗಡೆಯಾಗದೆ ನೂಲು ಖರೀದಿಸಲಾಗದು, ನೂಲು ಖರೀದಿಸದೆ ಬಣ್ಣ ಹಾಕಲಾಗದು, ಬಣ್ಣ ಹಾಕಲಾ­ಗದೆ ನೇಯ್ಗೆ ಶುರುವಾಗದು. ಇತ್ತ ಕರ್ನಾಟಕ ಕೈಮಗ್ಗ ನಿಗಮವೂ  ಅಧಿಕಾರಿ­ಗ­ಳಿಂದಲೇ ನಡೆದಿದೆ ತಾನೆ? ಅಲ್ಲೂ ಆಡಳಿತಾತ್ಮಕ ತಡ ಹಾಗೂ ತಡೆಗಳು ಇದ್ದಾವೆ ತಾನೆ! ನೇಕಾರರು ಬೀದಿಗೆ ಬೀಳು­ತ್ತಿರುವ ಪರಿಯಿದು.

ಎಲ್ಲಕ್ಕಿಂತ ಮಿಗಿಲಾಗಿ ಕೈಮಗ್ಗ ನೇಕಾರ ಮಾಮೂಲಿ ಕೊಡಲಾರ. ಮಾಮೂಲಿ ಕೊಡ­ಲೆಂದು ನೇಕಾರರಿಂದ ಹಣ ಸಂಗ್ರಹಣೆ ಮಾಡಿ­ದರೆ, ಕಹಳೆಯ ಬಾಯಿಗೆ ಮುತ್ತಿಟ್ಟಂತೆ. ಮಿಲ್‌ ಮಾಲೀಕರಾದರೆ, ಅದರಲ್ಲೂ ಹೊರರಾಜ್ಯಗಳ ಮಿಲ್‌ ಮಾಲೀಕರಾದರೆ, ವಸೂಲಿ ಸುಲಭ. ದಲ್ಲಾಳಿಗಳಿರುತ್ತಾರೆ, ನಗುನಗುತ್ತ ವ್ಯವಹರಿಸು­ತ್ತಾರೆ, ಕಪ್ಪುವ್ಯವಹಾರವೂ ಬಿಳಿಯ ಹಾಳೆ­ಯಷ್ಟು ಶುಭ್ರವಾಗಿ ನಡೆದು ಹೋಗುತ್ತದೆ. ನೇಕಾರ ಮಾಮೂಲಿ ಕೊಡಲಾರನೆಂಬುದು ನೇಕಾರರ ದುರಂತವಾಗಿದೆ. ಬಟ್ಟೆ ಮಾರುವ ಜವಳಿ ಸಚಿವಾ­ಲಯ, ಕೊಳ್ಳುವ ಶಿಕ್ಷಣ ಸಚಿವಾಲಯ ಎರಡ­ರಲ್ಲೂ ಕೈಮಗ್ಗದ ಬಗ್ಗೆ ಆಸಕ್ತಿಯಿಲ್ಲ. ಗಾಂಧಿ ಹೆಸರು ಹೇಳುವ ರಾಜಕಾರಣಿಗಳಿಗೂ ಕೈಮಗ್ಗ­ದಲ್ಲಿ ಆಸಕ್ತಿಯಿಲ್ಲ. ಒಂದು ಕಾಲದಲ್ಲಿ, ಕರ್ನಾ­ಟಕದ ನಾಲ್ಕೂ ಆಡಳಿತ ವಿಭಾಗಗಳ ವ್ಯಾಪ್ತಿಯಲ್ಲಿ ಕೈಮಗ್ಗದ ಬಟ್ಟೆಯನ್ನು ಖರೀದಿಸುತ್ತಿದ್ದ ಶಿಕ್ಷಣ  ಇಲಾಖೆಯು ಈಗ ಮೂರು ವಿಭಾಗಗಳಲ್ಲಿ ಪವರ್‌ಲೂಮಿನ ಬಟ್ಟೆ ಖರೀದಿಸುತ್ತಿದೆ. ಒಂದು ವಿಭಾಗ ಮಾತ್ರ ಉಳಿದಿದೆ. ಅದೂ, ಮುದುಕರ ಹಲ್ಲಿನಂತೆ, ಅಲುಗಾಡುತ್ತ, ಜೀವಕ್ಕಂಟಿ­ಕೊಂಡಿದೆ.

ಸಿದ್ದರಾಮಯ್ಯನವರಿಗೆ ವಿಷಯ ತಿಳಿಯದಿರ­ಬಹುದು. ತಿಳಿದರೆ, ಸಮಾಜವಾದಿಯಾದ ಅವರು ಮಧ್ಯ ಪ್ರವೇಶಿಸಿ ನಾಲ್ಕೂ ಆಡಳಿತ ವಿಭಾಗಗಳಲ್ಲಿ ಕೈಮಗ್ಗ ವಸ್ತ್ರವನ್ನೇ ಕೊಳ್ಳುವಂತೆ ಅಂತರ್‌ ಇಲಾಖಾ ನಿರ್ಧಾರವನ್ನು ಜಾರಿಗೊಳಿ­ಸುತ್ತಾರೆ ಎಂಬ ಆಶಯ ನನ್ನದು. ಶಿಕ್ಷಣ ಮಂತ್ರಿ­ಗಳು ಹಾಗೂ ಜವಳಿ ಮಂತ್ರಿಗಳು ನೇಕಾರನ ಕಡೆ ದೃಷ್ಟಿ ಹರಿಸುತ್ತಾರೆ ಎಂದೂ ಆಶಿಸುತ್ತೇನೆ ನಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT