ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ನಾದೋತ್ಪಾದಕ ಪಿ.ವಿ. ಪರಮೇಶ್ವರನ್‌

ವ್ಯಕ್ತಿ ಸ್ಮರಣೆ
Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೃದಂಗ ಪಕ್ಕವಾದ್ಯ ಇಲ್ಲದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಊಹಿಸುವುದೂ ಕಷ್ಟ. ಅಷ್ಟೊಂದು ಮಹತ್ವ ಈ ಅವನದ್ದ ವಾದ್ಯಕ್ಕೆ. ವೇದಿಕೆಯಲ್ಲಿ ಗಾಯಕ ಬಿಟ್ಟರೆ ಮೃದಂಗ, ಪಿಟೀಲು ವಾದ್ಯಗಳಿಗೇ ಆದ್ಯತೆ. ಚರ್ಮವಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಇದರ ನಾದವೂ ಅಷ್ಟೇ ಮಾಧುರ್ಯಪೂರ್ಣವಾದದ್ದು.

ಸಂಗೀತ ಕಛೇರಿಗಳು ನಡೆಯುವಾಗಲೆಲ್ಲಾ ಮೃದಂಗ ವಾದಕರ ಹೆಸರು ಚಾಲ್ತಿಗೆ ಬಂದೇ ಬರುತ್ತದೆ. ಆದರೆ ಈ ವಾದ್ಯ ತಯಾರಕರ ಹೆಸರು ಮಾತ್ರ ಎಂದಿಗೂ ತೆರೆಮರೆಯಲ್ಲೇ ಇರುತ್ತದೆ. ಕಲಾವಿದರಷ್ಟೇ ಕೈಚಳಕ, ಚಾಕಚಕ್ಯತೆ ಈ ವಾದ್ಯ ತಯಾರಕರಿಗೂ ಬೇಕು. ಆದರೂ ಇವರು ಒಂದು ರೀತಿಯಲ್ಲಿ ‘ನೇಪಥ್ಯ’ ಕಲಾವಿದರೇ.

ಮೃದಂಗ ತಯಾರಿಕೆಯಲ್ಲಿ ಅಪಾರ ಪರಿಶ್ರಮ, ಪರಿಣತಿಯಿದ್ದ ವಾದ್ಯ ತಯಾರಕ ಪ್ರವೀಣರಾಗಿದ್ದವರು ಪಿ.ವಿ. ಪರಮೇಶ್ವರನ್‌. ಕೇರಳದ ಪಾಲಕ್ಕಾಡ್‌ ಸಮೀಪದ ಪಲ್ಲಾವೂರ್‌ ಎಂಬಲ್ಲಿ 1937ರಲ್ಲಿ ಜನಿಸಿದ ಪರಮೇಶ್ವರನ್‌ ಅವರು ಜೀವಿತದ ಬಹುಕಾಲವನ್ನು ಮೃದಂಗ ತಯಾರಿಕೆಯಲ್ಲೇ ಕಳೆದವರು. ಅದೂ ಬೆಂಗಳೂರಿನಲ್ಲೇ.  

ಮೃದಂಗ ತಯಾರಿಕೆ ಪರಮೇಶ್ವರನ್‌ ಅವರಿಗೆ ಪರಂಪರೆಯಿಂದ ಬಂದ ಕಲೆ. ಇವರ ಮನೆತನದ ಸುಮಾರು ಐದು ಪೀಳಿಗೆಯವರು ಇದೇ ವೃತ್ತಿ ಮಾಡುತ್ತಿದ್ದವರು. ತಾತ, ಮುತ್ತಾತ ಅವರೂ ಪಾಲಕ್ಕಾಡ್‌ನ ಪಲ್ಲಾವೂರ್‌ನಲ್ಲಿ ಮೃದಂಗ ತಯಾರಿಸುತ್ತಿದ್ದರು.
ಪರಮೇಶ್ವರನ್‌ ಅವರು ಬಡತನದಲ್ಲೇ ಬೆಳೆದವರು. ಹೊತ್ತಿನ ಊಟಕ್ಕೂ ತತ್ವಾರವಿತ್ತು. ಮೃದಂಗ ತಯಾರಿಸಿ ಮಾರಾಟ ಮಾಡುತ್ತಿದ್ದರೂ ಒಂದು ಮೃದಂಗದಿಂದ ಸಿಗುತ್ತಿದ್ದದ್ದು ಕೇವಲ ನಾಲ್ಕಾಣೆ. ಸುಮಾರು 65 ವರ್ಷಗಳಿಂದ ಇದೇ ವೃತ್ತಿ ನಡೆಸುತ್ತಾ ಬಂದವರು. ಪರಮೇಶ್ವರನ್‌ ಅವರ ತಂದೆ ಪಿ.ಕೆ. ವೆಳೈ, ತಾತ ಕರ್ಪಸ್ವಾಮಿ ಅವರೂ ಮೃದಂಗ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದರು.

ಪರಮೇಶ್ವರನ್‌ ಓದಿದ್ದು ಬರೀ ನಾಲ್ಕನೇ ತರಗತಿವರೆಗೆ. ಅದೂ ಪಾಲಕ್ಕಾಡ್‌ನ ಪಲ್ಲಾವೂರ್‌ನಲ್ಲಿ. ಪೊನ್ನೆಪುಳೈ ಎಂಬ ಮೃದಂಗ ಕಲಾವಿದರು ಇವರನ್ನು ಬೆಂಗಳೂರಿಗೆ ಕರೆತಂದರು. ಬೆಂಗಳೂರಿಗೆ ಬಂದದ್ದೇನೋ ಆಯಿತು. ಹೊಟ್ಟೆಪಾಡಿಗೆ ಏನು ಮಾಡುವುದು ಎಂಬ ಪ್ರಶ್ನೆ ಕಾಡಲಾರಂಭಿಸಿತು. ಮಲ್ಲೇಶ್ವರಂನಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸ. ಮೃದಂಗ ತಯಾರಿಸಿ ಅದನ್ನು ಮಾರಿ ಬರುವ ಹಣ ಜೀವನ ನಿರ್ವಹಣೆಗೆ ಸಾಲದು. ಆಗ ಪರಮೇಶ್ವರನ್‌ ಮಿತ್ರರಾಗಿದ್ದ ಕಲಾವಿದ ಬೆಂಗಳೂರು ಕೆ.ವೆಂಕಟ್ರಾಮ್‌ ಅವರ ಬಳಿ ಹೋಗಿ, ‘ನಾನು ಈ ವೃತ್ತಿಯಿಂದ ಜೀವನ ಸಾಗಿಸಲು ಅಸಮರ್ಥನಾಗಿದ್ದೇನೆ. ಊರು ಬಿಟ್ಟು ಹೋಗಬೇಕು ಎಂದು ನಿರ್ಧರಿಸಿದ್ದೇನೆ’ ಎಂದರಂತೆ.

ಆಗ ಸಂಗೀತ ಕಲಾವಿದರು ಯಾರೂ ಇವರನ್ನು ಊರಿಗೆ ಕಳಿಸಲು ಸುತಾರಾಂ ಒಪ್ಪಲಿಲ್ಲ. ವೆಂಕಟ್ರಾಮ್‌ ಅವರೇ ಪರಮೇಶ್ವರನ್‌ ಅವರಿಗೆ ದೂರಸಂಪರ್ಕ ಇಲಾಖೆ (ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರಿ)ಯಲ್ಲಿ ಸಣ್ಣ ಹುದ್ದೆ ಕೊಡಿಸಿದರು. ಸುಮಾರು 30 ವರ್ಷ ಕಾಲ (1990ರವರೆಗೂ) ಇದೇ ಇಲಾಖೆಯಲ್ಲಿ ಕೆಲಸ ಮಾಡಿದರು. ಬಳಿಕ ಸ್ವಯಂ ನಿವೃತ್ತಿ ಪಡೆದು ಮತ್ತೆ ಮೃದಂಗ ತಯಾರಿಸುವ ಕಾಯಕದಲ್ಲಿ ತೊಡಗಿಕೊಂಡಿರುತ್ತಿದ್ದರು. ಗಳಿಸಿದ ಹಣದಲ್ಲಿ ಸ್ವಲ್ಪ ಸ್ವಲ್ಪವೇ ಉಳಿಸಿ ಬೆಂಗಳೂರಿನ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಡಿಫೆನ್ಸ್‌ ಕಾಲೊನಿಯಲ್ಲಿ ಸ್ವಂತ ಮನೆಯನ್ನೂ ಕಟ್ಟಿಸಿದರು.

ತಮ್ಮ 22ನೇ ವಯಸ್ಸಿನಲ್ಲಿ ಪಾಲಕ್ಕಾಡ್‌ನ ಪಿ. ಜಾನಕಿ ಎಂಬುವರನ್ನು ಮದುವೆಯಾದರು. ಪಿ. ಕೃಷ್ಣ ಕುಮಾರ್‌ ಪುತ್ರ ಮತ್ತು ಪಿ. ಜಯಲಕ್ಷ್ಮಿ ಪುತ್ರಿ. ಇವರ ಪುತ್ರಿ ಅನಾರೋಗ್ಯದಿಂದ ಮೂರು ವರ್ಷಗಳ ಹಿಂದೆಯೇ ಅಸು ನೀಗಿದ್ದರು. ಮಗಳ ಸಾವು ಪರಮೇಶ್ವರನ್‌ ಅವರಿಗೆ ಬಹಳ ನೋವು ಉಂಟು ಮಾಡಿತ್ತು. ಆಗಲೇ ಇವರು ಮಾನಸಿಕವಾಗಿಯೂ ಕುಗ್ಗಿದ್ದರು. ಆದರೂ ಪಾರಂಪರಿಕ ಕೆಲಸ ಬಿಡಬಾರದು ಎಂದು ಮೃದಂಗ ತಯಾರಿಸುವ ಕಲೆಯನ್ನು ತಮ್ಮ ಪುತ್ರನಿಗೂ ಹೇಳಿಕೊಟ್ಟಿದ್ದರು.

ವಿದ್ವಾಂಸರಾದ ಪಾಲಕ್ಕಾಡ್‌ ಮಣಿ ಅಯ್ಯರ್‌, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ಎಂ.ಎಲ್‌. ವೀರಭದ್ರಯ್ಯ, ಕೆ. ವೆಂಕಟ್ರಾಮ್‌, ಟಿ.ಎ.ಎಸ್‌. ಮಣಿ, ಎ.ವಿ.ಆನಂದ್‌, ಮುಂತಾದವರಿಗೆ ಮೃದಂಗ ತಯಾರಿಸಿಕೊಟ್ಟಿದ್ದರು. ಬೆಂಗಳೂರಿನಲ್ಲಿರುವ ಎಲ್ಲ ಪ್ರಮುಖ ಮೃದಂಗ ವಾದಕರಿಗೂ ಮೃದಂಗಗಳನ್ನು ತಯಾರಿಸಿ ಕೊಟ್ಟಿದ್ದು ಪರಮೇಶ್ವರನ್‌ ಅವರೇ.

ಲಯಜ್ಞಾನ ಮುಖ್ಯ
ಮೃದಂಗ ತಯಾರಿಸಲು ಸ್ವಲ್ಪ ಸಂಗೀತ, ತಾಳ, ಲಯದ ಜ್ಞಾನವೂ ಬೇಕಾಗುತ್ತದೆ. ಕಲಾವಿದರು ಬಯಸಿದ ಶ್ರುತಿ (ಸ್ಕೇಲ್‌)ಗೆ ಮೃದಂಗ ಲಯವನ್ನು ಬರಿಸಬೇಕಾಗುತ್ತದೆ. ಮುಚ್ಚಿಗೆ ಚರ್ಮದಿಂದ ಮಾಡುವಾಗ ಲಯಕಾರಿ ಅಂಶವೂ ತಿಳಿದಿರಬೇಕಾಗುತ್ತದೆ. ಹೀಗಾಗಿ ಪರಮೇಶ್ವರನ್‌ ಅವರು ಸ್ವಲ್ಪ ಸಮಯ ಮೃದಂಗವನ್ನು ವಿದ್ವಾನ್‌ ಕೃಷ್ಣ ಮಣಿ ಅಯ್ಯರ್‌ ಅವರ ಬಳಿ ಕಲಿತರು.

‘ಪರಮೇಶ್ವರನ್‌ ತಯಾರಿಸುವ ವಾದ್ಯದಲ್ಲಿ ನಿಖರವಾದ ನಾದ ಬರುತ್ತಿತ್ತು. ವಾದ್ಯದ ಮೀಟು ಮತ್ತು ಛಾಪಿನಲ್ಲೂ ಸ್ಪಷ್ಟತೆ ಇತ್ತು. ಹೀಗಾಗಿ ಬಹುತೇಕ ಎಲ್ಲ ಮೃದಂಗ ವಾದಕರೂ ಇವರ ಕೈಯ್ಯಲ್ಲೇ ವಾದ್ಯ ತಯಾರಿಸಿಕೊಳ್ಳುತ್ತಿದ್ದರು. ಇವರು ತಯಾರಿಸುವ ಮೃದಂಗದಲ್ಲಿ ಬರುವ ನಾದ ಸರಿಯಾಗಿ ಇದೆ ಎಂದು ಖಚಿತವಾದ ಮೇಲೆಯೇ ಅವರು ಅದನ್ನು ಕೊಂಡೊಯ್ಯಲು ಬಿಡುತ್ತಿದ್ದದ್ದು.

ಅವರಿಗೆ ಸಂತೃಪ್ತಿ ಆಗುವವರೆಗೂ ಅವರು ಮೃದಂಗವನ್ನು ಬೇರೆಯವರಿಗೆ ಮುಟ್ಟಲೂ ಬಿಡುತ್ತಿರಲಿಲ್ಲ. ಹೀಗಾಗಿ ನಾವೆಲ್ಲ ಅವರ ಬಳಿಯೇ ಮೃದಂಗ ಖರೀದಿಸುತ್ತಿದ್ದೆವು’ ಎಂದು ನೆನಪಿಸಿಕೊಳ್ಳುತ್ತಾರೆ ನಾಡಿನ ಖ್ಯಾತ ಮೃದಂಗ ವಾದಕರಾದ ವಿದ್ವಾನ್‌ ಎಚ್‌.ಎಸ್‌. ಸುಧೀಂದ್ರ.
‘ಉತ್ತಮ ಗುಣಮಟ್ಟದ, ದೀರ್ಘಕಾಲ ಬಾಳಿಕೆ ಬರುವಂತಹ ಮತ್ತು ಹೆಚ್ಚು ರಿಪೇರಿಗೆ ಒಳಗಾಗದೆ ಇರುವಂತಹ ಮೃದಂಗವನ್ನು ಇವರು ತಯಾರಿಸಿಕೊಡುತ್ತಿದ್ದ ಕಾರಣ ದಕ್ಷಿಣ ಭಾರತದ ಬಹುತೇಕ ಎಲ್ಲ ಮೃದಂಗ ವಾದಕರೂ ಇವರೇ ತಯಾರಿಸಿದ ಮೃದಂಗವನ್ನು ಇಷ್ಟಪಡುತ್ತಿದ್ದೆವು’ ಎಂದೂ ಹೇಳುತ್ತಾರೆ ವಿದ್ವಾನ್‌ ಸುಧೀಂದ್ರ.

ಬೆಂಗಳೂರಿನ ತಾಳವಾದ್ಯ ಕೇಂದ್ರ ಪರಮೇಶ್ವರನ್‌ ಅವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಿತ್ತು. ಮೃದಂಗ ನಾದಲೋಕದಲ್ಲೇ ಜೀವನವನ್ನೇ ಸವೆಸಿದ ಈ ‘ನಾದೋತ್ಪಾದಕ’ ಇನ್ನು ಬರೀ ನೆನಪು. ಆದರೆ ಅವರು ತಯಾರಿಸಿದ ಮೃದಂಗದ ನಾದ ಮಾತ್ರ ಎಂದೆಂದೂ ಅನಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT