ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಪುಣ್ಯದಿಂದ ವಾದ್ಯಕ್ಕೆ ಸೊಗಸು

Last Updated 24 ಜೂನ್ 2016, 20:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಗೀತದ ನೈಪುಣ್ಯ ಇಲ್ಲದೆ ವಾದ್ಯದ ಸೊಗಸು ಹೆಚ್ಚುವುದಿಲ್ಲ. ಆದ್ದರಿಂದ ಕಲಾವಿದರು ನೈಪುಣ್ಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ವೀಣಾ ವಿದ್ವಾಂಸ ರಾ. ವಿಶ್ವೇಶ್ವರನ್‌ ಹೇಳಿದರು.

ಎಸ್‌.ವಿ.ಎನ್‌. ಸಂಗೀತ ಅಕಾಡೆಮಿಯು ಭಾರತೀಯ ವಿದ್ಯಾ ಭವನದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವೀಣೆ– ವಾದ್ಯಗಳ ರಾಣಿ’  ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವೀಣೆ ಸೂಕ್ಷ್ಮವಾದ ವಾದ್ಯ. ವೀಣೆ ನುಡಿಸುವುದನ್ನು ಕಲಿತರೆ ಸಾಲದು, ಹಾಡುಗಾರಿಕೆಯನ್ನೂ ಕಲಿತಿರಬೇಕು. ವೀಣಾ ವಾದಕರಿಗೆ ಮೈಸೂರು ಸಂಗೀತ ಪರಂಪರೆಯ ವೀಣಾ ವಾದನದ ಬಗ್ಗೆ ಅರಿವಿರಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ವೀಣೆಗೆ ಮಹತ್ವ ಕಡಿಮೆಯಾಗುತ್ತಿದೆ. ವೀಣಾ ವಾದನ ಕಲಾವಿದರು ಮರೆಯಾಗುತ್ತಿದ್ದಾರೆ. ಕಲಾವಿದರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿವೆ. ಸರ್ಕಾರ, ಸಂಘ–ಸಂಸ್ಥೆಗಳು ವೀಣಾ ವಾದನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಇಸ್ರೊ ಮಾಜಿ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ಮಾತನಾಡಿ, ‘ಭಾರತದಲ್ಲಿ ವೀಣಾ ವಾದನವನ್ನು ಮತ್ತಷ್ಟು ಜನಪ್ರಿಯಗೊಳಿಸಬೇಕಾದ ಅಗತ್ಯವಿದೆ. ವೀಣಾ ವಾದಕರನ್ನು ತಯಾರು ಮಾಡಬೇಕು. ಜತೆಗೆ ಈ ಕಲೆಯನ್ನು ವಿದೇಶಗಳಲ್ಲೂ ಜನಪ್ರಿಯಗೊಳಿಸಲು ಎಲ್ಲರೂ ಶ್ರಮಿಸಬೇಕು’ ಎಂದರು.
ಭಾರತೀಯ ವಿದ್ಯಾ ಭವನದ ಅಧ್ಯಕ್ಷ ಎಚ್‌.ಎನ್‌. ಸುರೇಶ್‌ ಮಾತನಾಡಿ, ‘ಭಾರತದ ವೈಶಿಷ್ಟ್ಯ ಇರುವುದೇ ವಿವಿಧತೆಯಲ್ಲಿ. ಅಂತಹ ವೈವಿಧ್ಯಮಯ ಸಂಸ್ಕೃತಿ ಹಾಗೂ ಕಲೆಗಳನ್ನು ಉಳಿಸಿ, ಬೆಳೆಸುವ ಅನಿವಾರ್ಯವಿದೆ. ವೀಣಾ ವಾದನ, ಗಮಕ, ಯಕ್ಷಗಾನ ಸೇರಿದಂತೆ ಹಲವು ಕಲೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

ಎರಡು ಕೃತಿಗಳ ಬಿಡುಗಡೆ: ವಿಕಾಸ ಪ್ರಕಾಶನ ಹೊರತಂದಿರುವ ಎಲ್‌. ರಾಜಾರಾವ್‌ ಅವರ ‘ಸಂಗೀತ ಶಾಸ್ತ್ರ ಚಂದ್ರಿಕೆ’ (ಮರು ಮುದ್ರಣ) ಹಾಗೂ ಬಿ.ವಿ.ಕೆ.ಶಾಸ್ತ್ರಿ ಅವರ ‘ಮುರಳಿ ವಾಣಿ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತೆ ಆರ್‌. ಪೂರ್ಣಿಮಾ, ಎಸ್‌.ವಿ.ಎನ್‌. ಸಂಗೀತ ಅಕಾಡೆಮಿಯ ರಾಮಪ್ರಸಾದ್‌, ತೇಜಶ್ವರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT