ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರ್ಮಲ್ಯದ ಸಾಹಸ

Last Updated 18 ಫೆಬ್ರುವರಿ 2014, 4:51 IST
ಅಕ್ಷರ ಗಾತ್ರ

ನಗರದಲ್ಲಿ ತ್ಯಾಜ್ಯ ಸಮಸ್ಯೆ ಇವತ್ತಿನದಲ್ಲ. ಅದು ಮುಗಿಯುವ ವಿಷಯವೂ ಅಲ್ಲ. ಅದಕ್ಕಿರುವ ಒಂದೇ ಪರಿಹಾರವೆಂದರೆ ತ್ಯಾಜ್ಯವನ್ನು ಪ್ರತ್ಯೇಕಿಸಿ ಪುನರ್‌ಬಳಕೆ ಮಾಡುವುದು. ಈ ನಿಟ್ಟಿನಲ್ಲಿ ಕಸವನ್ನು ರಸವಾಗಿಸಿದ ‘ಸಾಹಸ್’ ಸಂಸ್ಥೆಯ ಸಾಹಸದ ಕತೆ ಇದು.

೨೦೦೧ರಲ್ಲಿ ಆರಂಭವಾದ ‘ಸಾಹಸ್’ ಸ್ವಯಂ ಸೇವಾ ಸಂಸ್ಥೆಯು ನಿರಂತರವಾಗಿ ಶಿಕ್ಷಣ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳು, ಕಂಪೆನಿಗಳು, ಸಮುದಾಯ ಮತ್ತು ಉದ್ಯಮಗಳಿಗೆ ವೃತ್ತಿಪರ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿದೆ. ಹೀಗೆ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಅನೌಪಚಾರಿಕ ವಲಯಗಳೊಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯವನ್ನು ಯಾಕೆ ಬೇರ್ಪಡಿಸಬೇಕು ಎಂಬುದರ ಬಗ್ಗೆ ವಸತಿ ಸಮುಚ್ಚಯಗಳು, ಶಾಲೆಗಳು, ಕಂಪೆನಿಗಳು ಮೊದಲಾದವುಗಳಿಗೆ ಜಾಗೃತಿ ಮತ್ತು ತರಬೇತಿಯನ್ನು ನೀಡುತ್ತಿದೆ. ಇದರ ಪರಿಣಾಮವಾಗಿ ವಸತಿ ಸಮುಚ್ಚಯಗಳಲ್ಲಿ ಕಸವನ್ನು ಬೇರ್ಪಡಿಸಿಯೇ ನೀಡುತ್ತಿದ್ದಾರೆ. ಹೀಗೆ ಬೇರ್ಪಡಿಸಿದ ಕಸವನ್ನು ಕಸ-ರಸ ಕೇಂದ್ರಕ್ಕೆ ತರಲಾಗುತ್ತದೆ.

ಬೆಂಗಳೂರಿನಲ್ಲಿ ಪ್ರತಿನಿತ್ಯ ಅಂದಾಜು ೪೦೦೦ ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆ ಯಾಗುತ್ತಿದೆ. ಇವನ್ನೆಲ್ಲ ಹೆಚ್ಚಾಗಿ ನಗರದ ಹೊರವಲಯಗಳಲ್ಲಿ ಸುರಿಯಲಾಗುತ್ತಿದೆ. ಹೀಗೆ ಸುರಿಯುತ್ತಿರುವ ಕಸದಿಂದ ಸುತ್ತಲಿನ ಪರಿಸರ ಮಾತ್ರವಲ್ಲದೆ ಜನರ ಆರೋಗ್ಯ ಮತ್ತು ಅಂತರ್ಜಲವೂ ಮಲಿನಗೊಳ್ಳುತ್ತಿದೆ. ಪ್ರತಿದಿನ ಉತ್ಪಾದನೆಯಾಗುತ್ತಿರುವ ಶೇ ೭೫ರಷ್ಟು ಹಸಿ ತ್ಯಾಜ್ಯವನ್ನು ಪುನರ್ ಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ‘ಸಾಹಸ್’ ಸಂಸ್ಥೆಯು ಪ್ರತಿದಿನ ಸುಮಾರು ಏಳು ಟನ್‌ಗಳಷ್ಟು ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ಇದರಲ್ಲಿ ಹಸಿರು ತ್ಯಾಜ್ಯ, ಒಣ ಕಸ, ಇ–-ತ್ಯಾಜ್ಯ, ಹಸಿ ತ್ಯಾಜ್ಯವನ್ನು ಒಡಬ್ಲ್ಯುಸಿ (ಆರ್ಗಾನಿಕ್ ವೇಸ್ಟ್ ಕನ್ವರ್ಟರ್) ಯಂತ್ರದ ಮೂಲಕ ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತದೆ.

ಒಣ ಕಸವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಂಗ್ರಹ ಮಾಡಲಾಗುತ್ತದೆ. ಹೀಗೆ ಸಂಗ್ರಹಿಸಿದ್ದನ್ನು ಸಂಸ್ಥೆಯ ‘ಕಸ ರಸ’ದಲ್ಲಿಯ ಕೆಲಸಗಾರರು ತೆಳು ಪ್ಲಾಸ್ಟಿಕ್, ಕಾಗದ, ಬಾಟಲಿ, ಟೆಟ್ರಾ ಪ್ಯಾಕ್ ಇತ್ಯಾದಿಯಾಗಿ ವರ್ಗೀಕರಣ ಮಾಡುತ್ತಾರೆ. ನಂತರ ಅವನ್ನು ಪುನರ್ ಬಳಕೆಗಾಗಿ ಮಿಲ್‌ಗಳಿಗೆ ಪಾಲುದಾರರ ಮುಖಾಂತರ ಕಳುಹಿಸಿಕೊಡಲಾಗುತ್ತದೆ. ‘ಕಸ- ರಸ’ದ ಮುಖ್ಯ ಗುರಿಯೆಂದರೆ ಸ್ಥಳೀಯ ಕಸ ಯಾವುದೇ ರೀತಿಯಲ್ಲಿ ಭೂಮಿಗೆ ಮಾರಕವಾಗದಂತೆ ಮಾಡುವುದು ಹಾಗೂ ತ್ಯಾಜ್ಯದ ಸಂಪೂರ್ಣ ಉಪಯೋಗವಾಗುವಂತೆ ನೋಡಿಕೊಳ್ಳುವುದು.

‘ಪ್ರತಿ ಮನೆಯವರೂ ಕಸ ಬೇರ್ಪಡಿಸಿ ನಮಗೆ ನೀಡಿದರೆ ನಾವು ಅದನ್ನು ಪುನರ್‌ಬಳಕೆ ಮಾಡುತ್ತೇವೆ. ಇದರಿಂದ ಸುತ್ತಲಿನ ಪರಿಸರವನ್ನು ಆರೋಗ್ಯವಾಗಿರಿಸಲು ಕೊಡುಗೆ ನೀಡಿದಂತಾಗುತ್ತದೆ’ ಎನ್ನುತ್ತಾರೆ ಸಾಹಸ್‌ನ ‘ಕಸ- ರಸ-–೨’ರ ಸೂಪರ್‌ವೈಸರ್ ನಿತ್ಯ.

ಒಡಬ್ಲ್ಯುಸಿ ಯಂತ್ರದಲ್ಲಿ ಒಮ್ಮೆಗೆ ೫೦ ಕೆ.ಜಿ.ಯಷ್ಟು ಹಸಿ ಕಸವನ್ನು ಮಿಶ್ರಣ ಮಾಡಬಹುದಾಗಿದೆ. ನಂತರ ಒಂದು ತೊಟ್ಟಿಯಲ್ಲಿ ಒಣ ಎಲೆ, ಬಯೋಕೋಲಮ್ ಪುಡಿ ಸೇರಿಸಿ ಕೊಳೆಯಲು ಹಾಕಲಾಗುತ್ತದೆ. ನಂತರ ಇದನ್ನು ಕೈ ಮಗುಚಲಾಗುತ್ತದೆ. ಯಂತ್ರಗಳ ಮುಖಾಂತರ ಗಾಳಿ ಹಾಯಿಸುವುದರ ಜತೆಗೆ ಅಲ್ಪ ಪ್ರಮಾಣದ ನೀರನ್ನೂ ಹಾಕಲಾಗುತ್ತದೆ.

ಇಲ್ಲಿ ಉತ್ತಮ ಗುಣಮಟ್ಟದ ಪರಿಸರಸ್ನೇಹಿ ಗೊಬ್ಬರವನ್ನು ತಯಾರಿಸಲಾಗುತ್ತದೆ. ಆದರೆ ಇದರ ಮಾರಾಟ ಮಾತ್ರ ಕಷ್ಟ. ಪ್ರತಿನಿತ್ಯ ಇಲ್ಲಿ ಸುಮಾರು ೮೦೦ ಕೆ.ಜಿ. ಹಸಿ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಇದರಲ್ಲಿ ಬಿಬಿಎಂಪಿ ಸಂಗ್ರಹಿಸಿ ಕೊಡುವ ತ್ಯಾಜ್ಯವೂ ಸೇರಿದೆ. ಈ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿಸುವ ಪ್ರಕ್ರಿಯೆಗೆ ಪ್ರತಿದಿನವೂ ಮೂರು ಕೆಲಸಗಾರರ ಅವಶ್ಯಕತೆ ಇದೆ. ಇದನ್ನು ಗೊಬ್ಬರವನ್ನಾಗಿಸಲು ಅಂದಾಜು ಒಂದು ತಿಂಗಳ ಕಾಲಾವಧಿ ಬೇಕು. ಇದರ ಬೆಲೆ ಉಳಿದ ಗೊಬ್ಬರಗಳಿಗೆ ಹೋಲಿಸಿದರೆ ಕೊಂಚ ಜಾಸ್ತಿ. ಹಾಗಾಗಿ ಮಾರಾಟ ಕಡಿಮೆ. ಇಲ್ಲಿ ತಯಾರಾಗುವ ಗೊಬ್ಬರದ ಬೆಲೆ ಪ್ರತಿ ಕೆ.ಜಿ.ಗೆ ಎಂಟು ರೂಪಾಯಿ. ಜನರು ಕೆ.ಜಿ.ಗೆ ಎರಡರಿಂದ ಮೂರು ರೂಪಾಯಿಗೆ ನೀಡುವಂತೆ ಕೇಳುತ್ತಾರೆ.

ಟೆಟ್ರಾ ಪ್ಯಾಕ್‌ಗಳಿಂದ ಮೇಲ್ಛಾವಣಿ ನಿರ್ಮಾಣ
ಟೆಟ್ರಾ ಪ್ಯಾಕ್‌ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಇದರ ಸಂಗ್ರಹಕ್ಕಾಗಿಯೇ ಅಪಾರ್ಟ್ಮೆಂಟ್, ಕಂಪೆನಿ ಇತ್ಯಾದಿಗಳಲ್ಲಿ ಸಂಗ್ರಹಣಾ ಬುಟ್ಟಿಯನ್ನು ಇರಿಸಲಾಗಿದೆ. ಒಂದು ತಿಂಗಳಿಗೆ ಅಪಾರ್ಟ್ಮೆಂಟ್ ಒಂದರಿಂದ ಸುಮಾರು ೫೦ ಕೆಜಿಯಷ್ಟು ಟೆಟ್ರಾ ಪ್ಯಾಕ್‌ಗಳು ಸಂಗ್ರಹವಾಗುತ್ತದೆ. ಇವನ್ನು ಕಂಪ್ರೆಸರ್ ಯಂತ್ರದಲ್ಲಿ ಹಾಕಿ ಸಂಸ್ಕರಿಸಿ ನೇರವಾಗಿ ಪುಣೆಯ ಥಾಣೆಗೆ ಕಳುಹಿಸಲಾಗುವುದು. ಅಲ್ಲಿ ಟೆಟ್ರಾ ಪ್ಯಾಕ್‌ನಲ್ಲಿನ ಕಾಗದವನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂನ ಅಂಶಗಳಿಂದ ಮೇಲ್ಛಾವಣಿಯನ್ನು ತಯಾರಿಸಲಾಗುವುದು. ಇದು ಉಳಿದ ಮೇಲ್ಛಾವಣಿಗಳಿಗಿಂತ ಗಟ್ಟಿಮುಟ್ಟು.

ಶಾಲೆಗಳಲ್ಲಿ ತ್ಯಾಜ್ಯ ಜಾಗೃತಿ
ಶ್ರೀ ಕುಮಾರನ್ಸ್‌, ಸುದರ್ಶನ ವಿದ್ಯಾಮಂದಿರ, ಹೆಡ್ ಸ್ಟಾರ್ ಮತ್ತು ವ್ಯಾಲಿ ಮೊದಲಾದ ಶಾಲೆಗಳಿಂದಲೂ ತ್ಯಾಜ್ಯ ಸಂಗ್ರಹ ಮಾಡುತ್ತಿದೆ. ಶ್ರೀ ಕುಮಾರನ್ಸ್‌ ಶಾಲೆಯಲ್ಲಿ ಸುಮಾರು ೪೦೦೦ದಷ್ಟು ಮಕ್ಕಳು ಓದುತ್ತಿದ್ದಾರೆ. ಇಲ್ಲಿ ಪ್ರತಿದಿನ ಸುಮಾರು ೧೦೦ ಕೆ.ಜಿ.ಯಷ್ಟು ಆಹಾರ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದನ್ನು ಏರೋಬಿಕ್ ಗೊಬ್ಬರ ಘಟಕದಲ್ಲಿ ಕಾಂಪೋಸ್ಟ್ ಮಾಡಲಾಗುತ್ತದೆ. ಇಲ್ಲಿನ ಒಣತ್ಯಾಜ್ಯವನ್ನು ಪುನರ್ ಬಳಕೆಗೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಎಲ್ಲ ಮಕ್ಕಳಿಗೂ ತ್ಯಾಜ್ಯ ವಿಂಗಡಣೆ ಬಗ್ಗೆ ಅರಿವು ನೀಡಲಾಗಿದೆ. ಪೋಷಕರೂ ತ್ಯಾಜ್ಯ ವಿಂಗಡಣೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

   ಐಐಎಂಬಿ ಕ್ಯಾಂಪಸ್ ಸಹ ತ್ಯಾಜ್ಯ ನಿರ್ವಹಣಾ ಘಟಕವನ್ನು ಹೊಂದಿದೆ. ಇಲ್ಲಿ ೧೦೦ ಕೆ.ಜಿ. ಸಾಮರ್ಥ್ಯದ ಆಹಾರ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ಸಾಮರ್ಥ್ಯದ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಜೈವಿಕ ಅನಿಲ ಸ್ಥಾವರದ ಮೂಲಕ ೧೫೦ ಕೆ.ಜಿ. ಕಸವನ್ನು ಪುನರ್ಬಳಕೆ ಮಾಡಲಾಗುತ್ತಿದೆ. ಜತೆಗೆ ೧೦೦ ಕೆ.ಜಿ.ಯಷ್ಟು ಕಾಗದ, ಪ್ಲಾಸ್ಟಿಕ್ ಮತ್ತಿತರ ಮರುಬಳಕೆ ಮಾಡಬಹುದಾದ ತ್ಯಾಜ್ಯಗಳ ನಿರ್ವಹಣೆ ಮಾಡುವ ವಿಂಗಡಣಾ ಘಟಕವಿದ್ದು, ಉತ್ಪತ್ತಿಯಾಗುವ ಕಸದ ಶೇ ೭೫ರಷ್ಟನ್ನು ಇಲ್ಲಿಯೇ ನಿರ್ವಹಣೆ ಮಾಡಲಾಗುತ್ತಿದೆ. ಇನ್ನಿತರ ಶಾಲೆ, ವಸತಿ ಸಮುಚ್ಚಯಗಳಿಂದಲೂ ವಿಂಗಡಿಸಿದ ಕಸಗಳನ್ನು ಸಂಸ್ಥೆಯ ‘ಕಸ-–ರಸ’ ಕೇಂದ್ರದಲ್ಲಿ ಸಂಗ್ರಹಿಸಲಾಗುತ್ತದೆ. ಈ ಕೇಂದ್ರದಲ್ಲಿ ಪ್ರತಿದಿನ ಸುಮಾರು ೧.೫ ಟನ್‌ಗಳಷ್ಟು ಕಸ ನಿರ್ವಹಣೆಯ ಜತೆಗೆ ಕಂಪನಿಗಳಿಗೆ ತ್ಯಾಜ್ಯ ಆಡಿಟ್ ನಡೆಸಿ, ಸಂಸ್ಥೆಯು ಸಲಹೆ–ಸೂಚನೆಗಳನ್ನು ನೀಡುತ್ತದೆ. ಈ ರೀತಿಯ ಆಡಿಟ್‌ನಿಂದಾಗಿ ಯಾವ ಮೂಲಗಳಿಂದ, ಎಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆ ಆಗುತ್ತಿದೆ ಮತ್ತು ವೆಚ್ಚದ ಪ್ರಮಾಣ ಎಷ್ಟು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಬ್ರಿಟಾನಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೈಕ್ರೋಸಾಫ್ಟ್ ರಿಸರ್ಚ್, ಎಎನ್‌ಝೆಡ್ ಇಂಡಿಯಾ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್, ಮೈಕ್ರೋಲ್ಯಾಂಡ್, ಪ್ರೆಸ್ಟೀಜ್ ಗ್ರೂಪ್, ಬ್ರಿಗೇಡ್ ಗ್ರೂಪ್, ದಿವ್ಯಶ್ರೀ ಡೆವಲಪರ್ಸ್, ಎಂಬೆಸಿ ಗ್ರೂಪ್, ಓಕ್‌ವುಡ್ ಮೊದಲಾದವು ‘ಸಾಹಸ್‌’ನ ಗ್ರಾಹಕರು. ಹೊಸದಾಗಿ ನಿರ್ಮಿಸುವ ಕಟ್ಟಡಗಳು ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಅಗತ್ಯಗಳನ್ನು ಪೂರೈಸಲು ‘ಸಾಹಸ್’ ಸಂಸ್ಥೆಯು ಸಹಾಯ ಮಾಡುತ್ತದೆ. ಜತೆಗೆ ಟೆಟ್ರಾ ಪ್ಯಾಕ್‌ಗಳನ್ನು ಸಂಗ್ರಹಿಸಲು ಶಾಲೆ, ಕಾರ್ಪೋರೇಟ್ ಕಚೇರಿಗಳು, ವಸತಿ ಸಮುಚ್ಚಯಗಳಲ್ಲಿ ಸಂಗ್ರಹಣಾ ಪೆಟ್ಟಿಗೆಗಳನ್ನು ಪರಿಚಯಿಸಿದೆ.

ಮುಂದಿನ ಯೋಜನೆಗಳು
‘ಕಸ ವಿಂಗಡಣೆ ಬಗ್ಗೆ ಎಲ್ಲ ಸ್ತರದ ಜನರಲ್ಲೂ ಅರಿವು ಮೂಡಿಸಬೇಕು.  ಮನೆಯಲ್ಲೇ ತ್ಯಾಜ್ಯವನ್ನು ಉಪಯೋಗಿಸಿಕೊಳ್ಳುವಂತಾಗಬೇಕು. ಕಸವನ್ನು ಕಸವಾಗಿಯೇ ಉಳಿಯಲು ಬಿಟ್ಟರೆ ಅದು ಸುಮ್ಮನೆ ಭೂಮಿಯನ್ನು ಹಾಳು ಮಾಡುತ್ತದೆ. ಯಾರಿಗೂ, ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಅದರ ಬದಲು ಬೇರ್ಪಡಿಸಿ ನೀಡಿದರೆ ಹಸಿ ಕಸದಿಂದ ಗೊಬ್ಬರ ತಯಾರಿಸಬಹುದು, ಹೆಚ್ಚಿನ ಒಣ ಕಸಗಳನ್ನು ಮತ್ತೆ ಉಪಯೋಗಿಸುವಂತೆ ಮಾಡಬಹುದು. ಇದನ್ನು ಎಲ್ಲರೂ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಬೆಂಗಳೂರು ಮತ್ತೆ ಉದ್ಯಾನ ನಗರಿ ಆಗುವಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ‘ಕಸ ರಸ– ೨’ರ ಮ್ಯಾನೇಜರ್ ಪುರುಷೋತ್ತಮ್.

ಪರಿಸರ ಸ್ನೇಹಿ ಕಾರ್ಯವನ್ನು ಮಾಡುತ್ತಿರುವ ಸಾಹಸ್‌ನ ಕೆಲಸ ನಿಜಕ್ಕೂ ಅನುಕರಣೀಯ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳಿಗೂ ಸಾಹಸ್ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT