ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಣ್ಣ ... ಇದೋ ಹೊಸ ಹೊಸ ಬಣ್ಣ!

Last Updated 28 ಜನವರಿ 2016, 19:45 IST
ಅಕ್ಷರ ಗಾತ್ರ

ಒಂದು ಕಟ್ಟಡದ ಸೌಂದರ್ಯ ಮಾಪನ ಮಾಡುವಾಗ ಅದಕ್ಕೆ ಬಳಸಿರುವ ಬಣ್ಣವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಚೆಂದದ ವಿನ್ಯಾಸವಿರುವ ಮನೆ ಅಥವಾ ಕಟ್ಟಡದ ಚೆಲುವನ್ನು ಹೆಚ್ಚಿಸುವಲ್ಲಿ ಬಣ್ಣಗಳ ಪಾತ್ರವೂ ಇದೆ. 2015ನೇ ವರ್ಷದಲ್ಲಿ ಆಧುನಿಕ ಮತ್ತು ಸಮಕಾಲೀನ ಶೈಲಿಯಲ್ಲಿ ಕಟ್ಟಿದ ಮನೆಗಳಿಗೆ ಹೆಚ್ಚಾಗಿ ಬಳಕೆಯಾಗಿದ್ದು ತಟಸ್ಥ ಬಣ್ಣಗಳು. ನೋಡುಗರ ಕಣ್ಣಿಗೆ ರಾಚದ ಆದರೆ, ಮನಸ್ಸಿಗೆ ಮುದ ನೀಡುವ ಬಣ್ಣಗಳ ಕಾಂಬಿನೇಷನ್‌ ಕಳೆದ ವರ್ಷ ಹೆಚ್ಚು ಜನಪ್ರಿಯಗೊಂಡಿತ್ತು.

2016ನೇ ವರ್ಷದಲ್ಲಿ ‘ಬಣ್ಣ’ದ ಜಗತ್ತಿನಲ್ಲಿ ಹಲವು ಹೊಸಬಣ್ಣಗಳು ಶೋಧನೆಗೊಂಡಿವೆ. ಹಾಗೆಯೇ, ಬಣ್ಣಗಳ ಸಮ್ಮಿಶ್ರಣದಲ್ಲೂ ಹೊಸ ಸೂತ್ರಗಳು ಹುಟ್ಟಿಕೊಂಡಿವೆ. ಕಲರ್‌ ಸೈನ್ಸ್‌ನಲ್ಲಿ ಪಳಗಿದವರು ‘ಮೊನಾರ್ಕ್‌ ಗೋಲ್ಡ್‌’ಗೆ 2016ನೇ ವರ್ಷದ ಬಣ್ಣ ಎಂಬ ಪಟ್ಟ ನೀಡಿದ್ದಾರೆ. ಇದೇ ವೇಳೆ ಕಲರ್‌ ಟ್ರೆಂಡ್ಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಹೊಸ ಅವಿಷ್ಕಾರಗಳಾಗಿವೆ.

ಈ ವರ್ಷ ಬಣ್ಣದ ಜಗತ್ತಿನಲ್ಲಿ ಒಂದು ಅನನ್ಯ ಕವಲುದಾರಿ ಕಾಣಿಸಲಿದೆ. ಇಲ್ಲಿ ಗ್ರಾಹಕರಿಗೆ ಸಾಂಪ್ರದಾಯಿಕ ಮತ್ತು ಆಧುನಿಕ  ಸಮ್ಮಿಶ್ರಣವಿರುವ ನವೀನ ಬಣ್ಣಗಳ ಆಯ್ಕೆ ಲಭ್ಯವಿದ್ದು, ಇವು ತಮ್ಮ ಕನಸಿನ ಮನೆಯ ಅಂದವನ್ನು ಹೆಚ್ಚಿಸಲು ನೆರವಾಗಲಿವೆ. ಗೋಡೆಗಳಿಗೆ ಬಳಿಯುವ ಬಣ್ಣಗಳಿಗೆ ಇಡೀ ಮನೆಯ ನೋಟ ಬದಲಾಯಿಸುವ ಮಾಂತ್ರಿಕ ಶಕ್ತಿ ಇದೆ. ವಾಸ್ತುಶಿಲ್ಪಿಗಳು ಮಾಡಿಕೊಟ್ಟ ವಿನ್ಯಾಸಕ್ಕನುಗುಣವಾಗಿ ಚೆಂದದ ಮನೆಕಟ್ಟುವ ಅನೇಕರು ಬಣ್ಣದ ವಿಚಾರಕ್ಕೆ ಬಂದಾಗ ತಮ್ಮಿಷ್ಟದ ಬಣ್ಣವನ್ನು ಬಳಸಲು ಮುಂದಾಗಿ ಮನೆಯ ಅಂದವನ್ನು ಸಂಪೂರ್ಣ ಕೆಡಿಸಿಬಿಡುತ್ತಾರೆ. ಹಾಗಾಗಿ, ಪತ್ರಿಯೊಬ್ಬರೂ ತಮ್ಮ ಕನಸಿನ ಮನೆಗೆ ಬಣ್ಣ ಬಳಿಸುವಾಗ ‘ಕಲರ್‌ ಸೈನ್ಸ್‌’ ಬಗ್ಗೆ ತಿಳಿದುಕೊಂಡಿರುವುದು ಅವಶ್ಯಕ.

ಇತ್ತೀಚಿನ ದಿನಗಳಲ್ಲಿ ಒಳಾಂಗಣ ವಿನ್ಯಾಸದಂತೆ ಹೊರಾಂಗಣ ವಿನ್ಯಾಸದಲ್ಲೂ ಸಾಕಷ್ಟು ಟ್ರೆಂಡ್‌ಗಳು ಹುಟ್ಟಿಕೊಂಡಿವೆ. ಅದರಲ್ಲಿ ಪೇಂಟಿಂಗ್‌ ಟ್ರೆಂಡ್‌ ಕೂಡ ಒಂದು. ಒಂದು ಕೋಣೆಯ ಹಳೆಯ ಬಣ್ಣವನ್ನು ಬದಲಾಯಿಸುವುದರಿಂದ ಆ ರೂಮ್‌ನ ನೋಟವನ್ನೇ ಸಂಪೂರ್ಣ ಬದಲಿಸಿಬಿಡಬಹುದು. ಅದೇ ರೀತಿ ಮನೆಯ ಹೊರಗೋಡೆಗಳಿಗೂ ಚೆಂದದ ಬಣ್ಣಗಳನ್ನು ಬಳಿಯುವುದರಿಂದ ಇಡೀ ಮನೆಯ ಅಂದವನ್ನು ಹೆಚ್ಚಿಸಬಹುದು. ಇದರಿಂದಾಗಿ ಹತ್ತು ಮನೆಗಳ ನಡುವೆ ಎದ್ದು ಕಾಣಿಸುವಂತಹ ಸೌಂದರ್ಯ ನಿಮ್ಮ ಮನೆಗೆ ದಕ್ಕಬಹುದು. ಇದೆಲ್ಲವೂ ಬ್ಯೂಟಿಫಿಕೇಷನ್‌ಗೆ ಸಂಬಂಧಿಸಿದ ಸಂಗತಿಗಳು.

ಬಣ್ಣಗಳ ಆಯ್ಕೆ ಸವಾಲಿನದ್ದು. ನಾವು ಆಯ್ಕೆಮಾಡಿಕೊಳ್ಳುವ ಬಣ್ಣ ಮನೆಯಲ್ಲಿನ ಕರ್ಟನ್‌, ಹಾಸಿಗೆ ಅಥವಾ ಮತ್ತಿನ್ಯಾವುದೋ ವಸ್ತುಗಳಿಗೆ ಎಷ್ಟರಮಟ್ಟಿಗೆ ಹೊಂದಿಕೆಯಾಗುತ್ತದೆ ಎನ್ನುವುದಷ್ಟೇ ಇಲ್ಲಿ ಮುಖ್ಯವಲ್ಲ. ಬದಲಾಗಿ, ಅದು ನಮ್ಮ ಮನಸ್ಸಿಗೂ ಮುದನೀಡುವಂತಿರಬೇಕು. ಭಾವನೆಗಳಿಗೆ ಜೀವ ತುಂಬುವಂತಿರಬೇಕು. ಇಡೀ ಮನೆಗೆ ಒಂದೇ ಬಗೆಯ ಬಣ್ಣ ಬಳಿಯುವುದು ತರವಲ್ಲ. ಮನೆಯ ಒಂದೊಂದು ಸ್ಥಳಕ್ಕೂ ಒಂದೊಂದು ಬಣ್ಣ ಹೊಂದಿಕೆಯಾಗುತ್ತದೆ.

ಮನೆಯ ಯಾವ ಜಾಗಕ್ಕೆ ಯಾವ ಬಣ್ಣ ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.ಮನೆಯ ಅಂದ ಹೆಚ್ಚಿಸುವಲ್ಲಿ ನೈಸರ್ಗಿಕ ಬಣ್ಣಗಳ ಪಾತ್ರ ಮುಖ್ಯವಾದುದು. ಬಿಳಿ, ಹಸಿರು, ಬೂದು, ಕಪ್ಪು ಅಥವಾ ಕಂದು ಬಣ್ಣಗಳನ್ನು ಗೋಡೆಗೆ ಬಳಿಯುವುದರಿಂದ ಮನೆಯ ಸೊಬಗನ್ನು ಹೆಚ್ಚಿಸಬಹುದು. ಮಲಗುವ ಕೋಣೆಯ ಅಂದವನ್ನು ಮತ್ತಷ್ಟು ಸುಂದರವಾಗಿಸಲು ಗಾಢ ಬಣ್ಣಗಳ ಆಯ್ಕೆ ಅತ್ಯುತ್ತಮ. ಕೆಂಪು ಹೈ–ಎನರ್ಜಿ ಸೂಚಿಸುವ ಬಣ್ಣ.

ಈ ಬಣ್ಣಕ್ಕೆ ಮನಸ್ಸಿನ ಭಾವನೆಗಳಿಗೆ ಕಿಡಿ ತಾಕಿಸುವ, ಪ್ರಣಯಕ್ಕೆ ಮುನ್ನುಡಿ ಬರೆಯುವ ಶಕ್ತಿಯಿದೆ. ಹಾಗಾಗಿ, ಮಲಗುವ ಕೋಣೆಗೆ ಗಾಢ ಬಣ್ಣಗಳು ಹೆಚ್ಚು ಸೂಕ್ತ. ಮಲಗುವ ಕೋಣೆಗೆ ಗಾಢ ಬಣ್ಣ ಬಳಿಸಲು ಇಷ್ಟಪಡದವರು ಬೋಲ್ಡ್‌ ಮತ್ತು ಸಾಫ್ಟ್‌ ಕಲರ್‌ನ ಮಿಶ್ರಣವನ್ನು ಟ್ರೈ ಮಾಡಬಹುದು. ಏನೇ ಆದರೂ, ಇಲ್ಲಿ ಬಣ್ಣದ ಆಯ್ಕೆಯೇ ಮುಖ್ಯವಾದುದು. ನೀವು ಬೂದು (ಗ್ರೇ) ಬಣ್ಣವನ್ನು ಇಷ್ಟಪಡುವುದೇ ಆದರೆ, ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು. ಬೂದು ಬಣ್ಣ ಮನೆಗೆ ಮಾಡರ್ನ್‌ ಲುಕ್‌ ನೀಡುತ್ತದೆ. ಕಪ್ಪು ಮತ್ತು ಕಂದು ಬಣ್ಣಗಳ ಸಮ್ಮಿಶ್ರಣ ಮನೆಗೆ ಕ್ಲಾಸಿಕ್‌ ಇಂಪ್ರೆಷನ್‌ ನೀಡುತ್ತದೆ.

ಮನೆಯೊಳಗಿನ ಹಾಲ್‌ಗೆ ಗಾಢ ಬಣ್ಣಗಳ ಆಯ್ಕೆ ಹೆಚ್ಚು ಸೂಕ್ತ. ಹಾಲ್‌ಗೆ ಲೈಟ್‌ ಬ್ಲೂ ಬಣ್ಣ ಹೇಳಿಮಾಡಿಸಿದಂತಹದ್ದು. ತಿಳಿ ನೀಲಿ ಬಣ್ಣಕ್ಕೆ ಆನಂದಭಾವ ಮೂಡಿಸುವ ಶಕ್ತಿ ಇದೆ. ತಿಳಿನೀಲಿ ಬಣ್ಣಕ್ಕೆ ನಿಶ್ಶಬ್ದ ಭಾವ ಮೂಡಿಸುವ ಶಕ್ತಿ ಇದೆ. ಲಿವಿಂಗ್‌ ರೂಮ್‌, ಫ್ಯಾಮಿಲಿ ರೂಮ್‌ಗಳಿಗೆ ಈ ಬಣ್ಣ ತುಂಬ ಚೆನ್ನಾಗಿ ಒಪ್ಪುತ್ತದೆ. ಸ್ನೇಹಿತರು, ನೆಂಟರಿಷ್ಟರು ಒಟ್ಟಾಗಿ ಸೇರಿದಾಗ ತಿಳಿನೀಲಿ ಬಣ್ಣ ನಮ್ಮ ಮನಸ್ಸಿನಲ್ಲಿ ಕಂಫರ್ಟ್‌ ಭಾವ ಮೂಡಿಸುತ್ತದೆ. ಗಾಢ ನೀಲಿ ಮತ್ತು ಪ್ರಕಾಶಮಾನವಾದ ಬಿಳಿ ಬಣ್ಣವನ್ನು  ಗೋಡೆಗಳಿಗೆ ಬಳಿದಾಗ ಇಡೀ ಕೋಣೆಗೆ ಒಂದು ಫ್ಯಾನ್ಸಿ ಲುಕ್‌ ಬರುತ್ತದೆ.

ಗೋಡೆಗಳಿಗೆ ನೀಲಿ ಬಣ್ಣವೂ ಚೆನ್ನಾಗಿ ಹೊಂದುತ್ತದೆ. ಒಂದು ವೇಳೆ ನೀಲಿ ಬಣ್ಣ ಆಯ್ಕೆ ಮಾಡಿಕೊಂಡಲ್ಲಿ ಆ ಬಣ್ಣಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ಬಿಳಿ ಬಣ್ಣವನ್ನು ಸೀಲಿಂಗ್‌ ಮತ್ತು ಫ್ಲೋರ್‌ಗೆ ಬಳಸಬಹುದು. ನೀಲಿ ಮತ್ತು ಬಿಳಿಬಣ್ಣಗಳ ಜುಗಲ್‌ಬಂದಿಯೂ ಮನೆಗೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ. ಕೋಣೆಗಳಿಗೆ ನೀಲಿ ಬಣ್ಣ ಬಳಿಯಲು ಇಷ್ಟಪಡದವರು ಆರೆಂಜ್‌, ರೆಡ್‌, ಗ್ರೀನ್‌ ಮೊದಲಾದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ತಮ್ಮಿಷ್ಟದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ಕೋಣೆಗೆ ಐಷಾರಾಮಿ ಹಾಗೂ ಸ್ವಚ್ಛ ಸುಂದರ ಲುಕ್‌ ನೀಡಬಹುದು.

2016ನೇ ವರ್ಷ ಗಾಢ ಮತ್ತು ತಿಳಿ ಬಣ್ಣಗಳಿಗೆಲ್ಲ ಚಿನ್ನದ ಸಮಯ. ಬಣ್ಣದ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿರುವ ಮೊನಾರ್ಕ್‌ ಗೋಲ್ಡ್‌ಗೆ ವರ್ಷದ ಬಣ್ಣ ಎಂಬ ಹಿರಿಮೆಯೂ ದಕ್ಕಿದೆ. ಈ ಬಣ್ಣ ಮನೆ, ಕಚೇರಿ ಎಲ್ಲೆಡೆಯೂ ಬಳಸಲು ಸೂಕ್ತ.  ಈ ಬಣ್ಣವನ್ನು ಬಳಕೆ ಮಾಡಿ ನಿಮ್ಮ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿ ಎನ್ನುತ್ತಿದ್ದಾರೆ ತಜ್ಞರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT