ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಾಕ ಬಂದಾರೇನ್ರಿ?

Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ತಂಗಿ ನಿನ್ನ ನೋಡಲಾಕ, ಯಾರೋ ಏನೋ ಬರ್ತಾರಂತ..’
ಇಂಥದ್ದೊಂದು ಹಾಡು ಒಂದಿಪ್ಪತ್ತು ವರ್ಷಗಳ ಹಿಂದ ಯಾರರೆ ಹಾಡಿದ್ರ, ಮನ್ಯಾಗಿನ ಹುಡುಗಿ ಮಾರಿಯೊಳಗ ರಾಗರತಿಯ ರಂಗು ಚಿಮ್ತಿತ್ತು. ತುಟಿಯೊಳಗ ನಗು, ಕಣ್ಣಾಗ ಹುಸಿಮುನಿಸು ಎಲ್ಲಾ ಇರ್ತಿತ್ತು. ಮದಿವಿ ಅಂತ ಆದ್ರ ಬದುಕಿನ ಒಂದು ಹಂತ ಮುಗದೇ ಹೋಯ್ತು ಅನ್ನೂ ಕಾಲ ಅದು.

ಹತ್ತು ವರ್ಷದ ಹಿಂದ ಚಿತ್ರಾನೇ ಬ್ಯಾರೆ ಆತು. ನೋಡಾಕ ಬರ್ತಾರಂತ ಅಂದ್ರ ಸಾಕು, ಹುಡುಗ್ಯಾರು ಸಿಡಿದು ಬೀಳ್ತಿದ್ರು. ‘ಯಾಕ ಕಂಡಿಲ್ಲಂತನ? ನಾ ಇನ್ನಾ ಓದಬೇಕು. ಕೆಲಸಾ ಮಾಡಬೇಕಬೆ... ಅಲ್ಲೀತನಾ ಯಾರಿಗೂ ಕರೀಬ್ಯಾಡ್ರಿ, ತೋರಸಬ್ಯಾಡ್ರಿ...’ ಅಂತಿದ್ರು.

ಒಂದು ಕಾಲಕ್ಕ ನೋಡೂ ಸಂಭ್ರಮ ಇದ್ರ, ಇನ್ನೊಂದು ಕಾಲಕ್ಕ ಅದು ಸಂಘರ್ಷ ಆಗಿ ಬದಲಾಗಿತ್ತು. ನೋಡಾಕ ಬ್ಯಾಡ ಅನ್ನೋರೆಲ್ಲ, ನೋಡ್ಕೊಳ್ಳಾಕ ಸುರು ಮಾಡಿದ್ದೂ ಭಾಳ ದಿನದ ಹಿಂದೇನಲ್ಲ. ಆದರೂ ‘ನೋಡೂ’ ಶಾಸ್ತ್ರ ಭಾಳ ಕಿರಿಕಿರೀದು ಅಂತ ಅನ್ನಿಸಿದ್ದು, ಧಾರವಾಡದ ನಮ್ಮನಿ ಪಕ್ಕ ಇದ್ದ ರಾಧಕ್ಕಾರ ಮಗಳಿಗೆ ನೋಡಾಕ ಬಂದಾಗ.

ಶೆಟ್ರ ಮನೀ ಹುಡುಗಿ. ಕಪ್ಪು ಬಣ್ಣದ ಮ್ಯಾಲೆ ಬಂಗಾರ ನಿಗಿನಿಗಿ ಹೊಳೀತಿತ್ತು. ಅಕಿ ಬಣ್ಣಾನೂ ಅದಕ್ಕ ಸೆಡ್ಡು ಹೊಡ್ದಂಗ ಕಪ್ಪಗೆ ಇತ್ತು. ಆದ್ರ ಅಗ್ದಿ ಲಕ್ಷಣ. ‘ಬಣ್ಣಾ ತೊಗೊಂಡು ಏನು ಮಾಡ್ತೀರಿ’ ಅಂತ ಬಂದಾವರೆಲ್ಲ, ಅಕಿನ ಛಂದ ನೋಡಿನ ಹೇಳ್ತಿದ್ರು.
ಅವರ ಕಡೆ ಒಂದು ಪದ್ಧತಿ. ಒಂದು ದಾರ ತೊಗೊಂಡು ಅಳತಿ ಮಾಡೋರು. ಈ ಉದ್ದಳತಿಯ ಶಾಸ್ತ್ರ ಭಾಳ ಅಸಹ್ಯ ಮಾಡೂಹಂಗ ಇರ್ತಿತ್ತು. ಇಲ್ಲಿ ವಿಸ್ತಾರ ಆಗಿ ಬರಿಯೂದು ಬ್ಯಾಡ, ಯಾಕಂದ್ರ ಓದಿದೋರು ಮತ್ತ ಸುರು ಮಾಡಬಾರ್ದಲ್ಲ. ಮಾಡೋರಷ್ಟೇ ಮಾಡ್ಲಿ. ಹಂಗೇ ಮರತು ಹೋಗಲಿ. ಆ ದಾರದ ಉದ್ದ ಮೂಗು ದಾಟಬೇಕನ್ನೂದು ಅವರ ಮರ್ಜಿ ಆಗಿತ್ತು. ಆ ಹುಡುಗಿ ಎತ್ತರಕ್ಕ ಅದು ಮೂಗಿಗೆ ಬಂದು ನಿಂದರ್ತಿತ್ತು.

ಹಂಗಾದ್ರ ಹುಡುಗನ ಆಯುಷ್ಯ ಕಡಿಮಿ ಆಗ್ತದ ಅಂತ ಒಂದಷ್ಟು ಸಂಬಂಧ ತಪ್ಪಿ ಹೋಗಿದ್ದು. ಪ್ರತಿ ಸಲಾನೂ ನಮ್ಮನಿ ಸೂಜಿ ಮಲ್ಲಿಗಿ ಉಡೆದೊಳಗ ಹಾಕ್ಕೊಂಡು ಹೋಗಾಕಿ. ಹೂ ಕಟ್ಟೂ ಮುಂದೆಲ್ಲ ಆ ದಾರದ ಜೊತಿಗೆ ಅಕಿನ್ನು ಮಾತು ನಡೀತಿದ್ವು. ‘ದಿನಾ ನಿಂಗಿಷ್ಟು ಗಂಟು ಹಾಕಿ ಹೂ ಕಟ್ತೀನಿ. ನೀ ನಂಗ ಕಟ್ಗೊಳ್ಳಂವ ಗಂಟ ಹಾಕಂಗ ಮಾಡವಾ’ ಅಂತಿದ್ಲು.

ನಮಗರೆ ಈ ದಾರದ ಸೂತ್ರಧಾರ ಯಾರು ಅನ್ನೂವಷ್ಟು ಸಿಟ್ಟು ಬರ್ತಿತ್ತು. ಇರಲಿ, ಆ ಹುಡುಗಿಗೆ ಸ್ವಲ್ಪ ತಡಾ ಆಗಿ ಮದಿವಿ ಆತು. ಈಗ ಅಕಿನ್ನ ಮಗಳು ಮದಿವಿಗೆ ಬಂದಾಳ. ಅಕಿ ಗಂಡನೂ ಗಟ್ಟಿ ಮುಟ್ಟ ಅದಾನ. ಯಾವ ಆಯುಷ್ಯನೂ ಕಡಿಮಿ ಆಗಿಲ್ಲ. ಈ ಮಾತು ಆ ಅಳತಿ ಮಾಡೂ ಕಾಕಾಗ ಹೇಳಬೇಕು ಅಂತ ಭಾಳ ಸಲೆ ಅನಸೇದ. ಆದ್ರ ವಿಪರ್ಯಾಸ ಅಂದ್ರ ಉದ್ದಳತಿ ಮಾಡಿ, ನೆತ್ತಿ ತನಾ ದಾರ ಬರೂ ಸೊಸಿನ್ನ ತಂದ್ರೂ ಮಗನ್ನ ಅಪಘಾತದೊಳಗ ಕಳಕೊಂಡ್ರು ಅವರು. ಹಿಂಗಾಗಿ ಮನಸು ಏನೂ ಮಾತಾಡದ ಹಂಗ ಮೂಕ ಆಗ್ತದ. ಆಮ್ಯಾಲೇನು ಅಳತಿ ಮಾಡಿದ್ರೋ ಬಿಟ್ರೋ ಆ ದೇವರಿಗೇ ಗೊತ್ತು. ಆದ್ರ ನಮ್ಮ ರಾಧಕ್ಕನ ಮಗಳ ಮದಿವಿನೂ ಆತು.

ಅದ ಆ ಹುಡುಗಿ ಮಗಳು ಮಾತ್ರ, ‘ಯಾರೂ ನನ್ನ ನೋಡಾಕ ಬರೂದು ಬ್ಯಾಡ. ನಾನೇ ನೋಡಾಕ ಹೋಗ್ತೀನಿ. ಆ ಮನ್ಯಾಗ ಇರಬೇಕಾದಾಕಿ ನಾನು. ಬದುಕಬೇಕಾಗಿರೂದು ನಾನು. ನಮ್ಮನೀಗೆ ಬಂದು ಅವರೇನು ಮಾಡ್ತಾರ? ನಾನ ಒಮ್ಮೆ ಹುಡುಗನ ಮನೀ ನೋಡಿ ಬರ್ತೀನಿ’ ಅಂತಿದ್ಲು. ಅವಾಗೆಲ್ಲ ಅವರ ಆಯಿ ರಾಧಕ್ಕ, ‘ನೀ ನುಡಿಯೂದಿಲ್ಲಬೇ ಈಗ, ನಿನ್ನ ಹರೇದ ಮಾತಿವು. ಓದಿದ್ದ ಸೊಕ್ಕಿನ ಮಾತಿವು. ನನ್ನ ಮಗಳು ಮಾತಿಲ್ಲದೆ ಕುಂದರ್ತಿತ್ತು. ಹಂಗ ಬೆಳಸಿದ್ದೆ. ನಿಂಗ ಲಗಾಮಿಲ್ಲ’ ಅಂತೆಲ್ಲ ಬಯ್ಯೋರು. ಜೊತಿಗೆ ತಮ್ಮ ಬಗ್ಗೆ ಪ್ರಶಂಸೆಯೂ ಇರ್ತಿತ್ತು.

ಈಗ ನೋಡೂದರ ಸಂಸ್ಕೃತಿನೇ ಬ್ಯಾರೆ ಆಗೇದ. ನೋಡೂದಂದ್ರ ಮೆಟ್ರಿಮೊನಿಯೊಳಗ ನೋಡೂದು. ಫೇಸ್‌ಬುಕ್‌ನಾಗ ಭೆಟ್ಟಿ ಆಗೂದು. ಅಲ್ಲೇ ಅವರ ವ್ಯಕ್ತಿತ್ವದ ಉದ್ದ, ಅಗಲ, ಆಳ ಎಲ್ಲಾನೂ ಅಳತಿ ಮಾಡೂದು. ಮುಂದ ಸ್ಕೈಪ್‌ನಾಗ ಮಾತಾಡೋದು. ಎಲ್ಲಾ ಹೊಂದತದ ಅನ್ನಿಸಿದ್ರ ಅಪ್ಪ ಅಮ್ಮನ ಕೂಡ ಎಲ್ಲರೆ ಭೇಟಿ ಆಗೂದು. ಇವರೂ ಅವರ ಮನೀಗೆ ಹೋಗುದಿಲ್ಲ. ಅವರೂ ಇವರ ಮನೀಗೆ ಬರೂದಿಲ್ಲ. ಯಾಕಂದ್ರ ಮದಿವಿ ಆದ ಮ್ಯಾಲೆ ಇವರೇ ಬ್ಯಾರೆ ಮನ್ಯಾಗ ಇರ್ತಾರಲ್ಲ!

ಅದೇನರೆ ಆಗಲ್ಯಾಕ, ಹುಡುಗಿಯರ ಧೋರಣೆ ಹಿಂಗ ಬದಲಾಗಾಕ ಕಾರಣ ಏನು? ಶಿಕ್ಷಣ ಅಥವಾ ಅವರೂ ದುಡದು ಸಂಪಾದಿಸುವ, ಸ್ವಾವಲಂಬಿ ಬದುಕು, ಇವೆರಡೂ ಅಲ್ಲದೇ, ಮನೀ ಮಕ್ಕಳು ಅನ್ನೂದು ಬಿಟ್ಟುನು ತನ್ನದೊಂದು ಜೀವನಾ ಅದ. ವೃತ್ತಿನೂ ಅದ ಅಂದ್ಕೊಳ್ಳುವ ಗಟ್ಟಿ ನಿಲುವಾ?

ಈ ಮೂರು ದಶಕಗಳು ಒಂದೊಂದು ಕಾಲ ಘಟ್ಟವನ್ನು ತೋರಸ್ಯಾವ. ಒಂದ್ರೊಳಗ ವೃತ್ತಿ ಪ್ರೀತಿನೇ ಹೆಚ್ಚು ಅಂತ ಸಿಡಿದೆದ್ದೋರು. ಇನ್ನೊಂದು ಕಡೆ ಎರಡೂ ನಿಭಾಯಿಸಿದ ಸೂಪರ್‌ ವುಮನ್‌ಗಳು. ಮತ್ತೊಂದು ಕಡೆ ಒಂದು ಬ್ರೇಕ್‌ ಅಂತ್ಹೇಳಿ, ತಾಯ್ತನಾನೂ ಖುಷಿಯಿಂದ ಅನುಭವಿಸಿ, ಆಮೇಲೆ ಮತ್ತ ವೃತ್ತಿಯೊಳಗ ಇಣುಕುವ ಆಯ್ಕೆಯನ್ನು ತಮ್ಮ ಕೈಯೊಳಗೇ ಉಳಿಸಿಕೊಂಡ ಜಾಣೆಯರದ್ದು.

ಹಂಗೇ ಈಗ ಪ್ರಶ್ನೆಗಳೂ ಬದಲಾಗ್ಯಾವರಿ. ಮೊದಲೆಲ್ಲ ಅಡಗಿ ಮಾಡಾಕ ಬರ್ತದೇನು? ಹಾಡಾಕ ಬರ್ತದೇನು ಅಂತ ಕೇಳ್ತಿದ್ರು. ಈಗ ಯಾವ ಶಿಫ್ಟ್‌ನಾಗ ಕೆಲಸಾ ಮಾಡ್ತಿ? ಎಷ್ಟು ವರ್ಷ ಕೆರಿಯರ್‌ ನೋಡ್ಕೋತಿ? ಯವಾಗ ಬ್ರೇಕ್‌ ತೊಗೋತಿ? ಅಂತ ಕೇಳ್ತಾರ.  ಮದಿವಿ ಈಗೀಗ ಮೂವತ್ತರ ಸಮೀಪ ಆಗ್ತಾವ. 25ರ ನಂತರ ಮೂವತ್ತರ ಮೊದಲು ಮದಿವಿ ಆದ್ರ ಭಾಳ ಲಗೂ ಆತು ಅಂತ ಮಾತಾಡೂ ದಿನಮಾನ ಇವು. ಓದಬೇಕು. ನೌಕರಿ ಹಿಡೀಬೇಕು. ಅಲ್ಲೊಂದು ನೆಲಿ ಕಾಣಬೇಕು. ಹಿಂಗ ಆದ್ಯತೆಗಳು ಬದಲಾಗಿ ಬಿಟ್ಟಾವ.

ಮೊದಲೆಲ್ಲ ‘ಹುಡುಗ ಒಪ್ಪಿದ್ನಾ’ ಅಂತ ಕೇಳ್ತಿದ್ರು. ಇದೀಗ ‘ಹುಡುಗ ಒಪ್ಪಿಗೆನಾ’ ಅಂತ ಕೇಳೂ ದಿನಾ ಬಂದಾವ. ಈ ಆಯ್ಕೆಯ ಪ್ರಶ್ನೆಗಳು ಮುಂದಿದ್ದಾಗ ಖುಷಿ ಆಗ್ತದ. ಯಾವುದೂ ಅನಿವಾರ್ಯವಾಗಿಲ್ಲ. ನಮ್ಮ ಖುಷಿಗೂ ನಮ್ಮ ದುಃಖಕ್ಕೂ ನಾವೇ ಕಾರಣರಾಗಿರ್ತೀವಿ. ಆಯ್ಕೆಗಳು ಭಾಳಿದ್ದಾಗ ತೀರ್ಮಾನ ತೊಗೊಳ್ಳೂವಷ್ಟು ಗಟ್ಟಿ ನಾವಾಗಬೇಕು. ಆ ತೀರ್ಮಾನವನ್ನು ಎದಿಮುಟ್ಟಿ ಸಮರ್ಥಿಸುವ ಛಾತಿ ಹೆಣ್ಮಕ್ಕಳಿಗೆ ಇರಾಕಬೇಕು. ಯಾಕಂದ್ರ ಎಷ್ಟೇ ಸಕಾರಾತ್ಮಕ ಬದಲಾವಣೆ ಆಗಿದ್ರೂ ಹಿಂದ ಟೀಕೆ ಮಾಡುವ ಟೀಕಾಸುರರ ಸಂಖ್ಯೆಯೊಳಗೇನೂ ಬದಲಿ ಆಗಿಲ್ಲ. ಅಂಥೋರಿಗೆಲ್ಲ ನೋಡ್ಕೋಳೂನು ಅನ್ನೂದೆ ಈ ಜಮಾನಾದ ಮಾತು. ನೋಡಾಕ ಬರೂದಲ್ಲ, ಹೋಗೂದಲ್ಲ. ಪ್ರತಿಯೊಬ್ಬರೂ ನೋಡ್ಕೊಳ್ಳುವ ಮಾತಿದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT