ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಿಲ್ಲಿ ಕಲೆಯಾಗಿ

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಈಗ ಮಳೆಗಾಲದಲ್ಲೂ ಬಿರುಬಿಸಿಲು. ಎಲ್ಲೆಲ್ಲೂ ನೀರಿಗೆ ಪರದಾಟ, ಇಂಥ ಬರಗಾಲದ ಭೀಕರತೆ ಕವನದಲ್ಲಿ, ಲೇಖನದಲ್ಲಿ, ಭಾವಚಿತ್ರದಲ್ಲಿ, ಕುಂಚದಲ್ಲಿ... ಹೀಗೆ ಅನೇಕ ರೀತಿಯಲ್ಲಿ ಮೈದಳೆಯುತ್ತಿವೆ. ಆದರೆ ಶಿಲ್ಪಕಲೆಯಲ್ಲೂ ಬರದ ಚಿತ್ರಣ ಮೂಡುವುದು ಬಲು ಅಪರೂಪ.

ಅಂಥ ಒಂದು ಪ್ರಯತ್ನ ಮಾಡಿದೆ ‘ಆಧಿಮ’ ಸಂಸ್ಥೆ. ಕೋಲಾರದಲ್ಲಿ ಸಾಹಿತ್ಯಿಕ ಕ್ರಾಂತಿಯನ್ನು ಹುಟ್ಟುಹಾಕಿ ನಮ್ಮ ನಾಡಿನ ನೆಲ ಸಂಸ್ಕೃತಿಯನ್ನು ಬಿಂಬಿಸಲು ಹುಟ್ಟಿಕೊಂಡ ಆಧಿಮ ಸಂಸ್ಥೆ, ಇಲ್ಲಿಯ ಶಿಲ್ಪಕಲೆಯಲ್ಲಿ ನೀರಿನ ಸಮಸ್ಯೆಯನ್ನು ಪ್ರಮುಖವಾಗಿಸಿಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಾಢವಾಗಿರುವ ಕಾರಣ, ಇದನ್ನು ಆರಿಸಿಕೊಳ್ಳಲಾಗಿದೆ.

ಕಳೆದ ಜೂನ್‌ನಲ್ಲಿ 15 ದಿನಗಳವರೆಗೆ ನಡೆದ ಶಿಬಿರದಲ್ಲಿ ನಾಲ್ವರು ಮಹಿಳಾ ಶಿಲ್ಪಿಗಳೂ ಸೇರಿದಂತೆ 14 ಮಂದಿ ಇಲ್ಲಿ ಕಲ್ಲರಳಿಸಿ ಕಲೆಯನ್ನಾಗಿಸಿದ್ದಾರೆ. ಶಿಲ್ಪ ಕಲಾಕಾರರಾದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯದ ಶಿಲ್ಪ ಕಲಾ ವಿಭಾಗದ ಉಪನ್ಯಾಸಕ ಎಸ್.ಶಿವಪ್ರಸಾದ್‌ರವರ ಮುಖ್ಯ ಸಂಚಾಲಕತ್ವದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಎಚ್.ಡಿ.ಕೋಟೆಯಿಂದ ಬಳಪದ ಕಲ್ಲು ಹಾಗೂ ಶಿವಗಂಗೆ ಬೆಟ್ಟದ ಮೇಲಿರುವ ಕಲ್ಲುಗಳನ್ನು ಇಲ್ಲಿಗೆ ತಂದು ಶಿಲ್ಪ ರಚಿಸಲಾಗಿದೆ.

ಈ ಶಿಲ್ಪಕಲೆಯಲ್ಲಿ ಪರಿಸರಕ್ಕೆ ಹೆಚ್ಚು ಒತ್ತುಕೊಡಲಾಗಿದ್ದು, ಅದರ ಜೊತೆಗೆ ರೈತರ ಸಮಸ್ಯೆಯನ್ನು ಪ್ರತಿಬಿಂಬಿಸುವ, ಒಣ ಬೇಸಾಯದ ಬಗ್ಗೆ ಮಾಹಿತಿ ನೀಡುವ ಶಿಲ್ಪಗಳೂ ಗಮನ ಸೆಳೆಯುತ್ತವೆ.  ಬುದ್ಧ, ಗಂಗೆ, ಬೋಧಿಸತ್ವ, ಯಕ್ಷಿ, ನೇಗಿಲು... ಹೀಗೆ ಅನೇಕ ಶಿಲ್ಪಗಳು ಇಲ್ಲಿ ಮೈದಳೆದಿವೆ. ಒಂದೊಂದು ಶಿಲ್ಪಗಳು ಮೂರರಿಂದ ನಾಲ್ಕು ಟನ್ ಭಾರವಿದೆ.

‘ಕಲಾವಿದರು ಶಿಲ್ಪಕಲಾಕೃತಿಯನ್ನು ರಚಿಸುವಾಗ ಆ ಸ್ಥಳದ ಮಹಿಮೆ, ಸಮಸ್ಯೆಯನ್ನು ಪ್ರತಿಬಿಂಬಿಸುವ ಕಾರ್ಯವನ್ನು ಮಾಡಿದರೆ ಮುಂದಿನ ಪೀಳಿಗೆ ಜನರಿಗೆ ಆ ಸಂಪೂರ್ಣ ಪರಿಚಯ ಮಾಡಿದಹಾಗೆ ಆಗುತ್ತದೆ. ಆದ ಕಾರಣ ಕೋಲಾರದಲ್ಲಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾದ ನೀರಿನ ಸಮಸ್ಯೆ ಮತ್ತು ಪ್ರಾಚೀನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶಿಲ್ಪಗಳು ಆಯ್ಕೆ ಮಾಡಿಕೊಂಡು ಈ ಕೆಲಸ ಮಾಡಿದ್ದೇವೆ. ಇಂತಹ ವಿಭಿನ್ನ ಪ್ರಯತ್ನ ಜನ-ಮನವನ್ನು ತಲುಪಿದರೆ ಮಾತ್ರ ನಾವು ಮಾಡಿದ ಕಾರ್ಯಕ್ಕೆ ಫಲ ಸಿಗುತ್ತದೆ’ ಎನ್ನುತ್ತಾರೆ ಶಿಬಿರದ ಮುಖ್ಯ ಸಂಚಾಲಕರಾದ ಎಸ್‌.ಶಿವಪ್ರಸಾದ್‌.

ಇದು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, ಶಿವ ಗಂಗೆಯ ಬೆಟ್ಟದ ಮೇಲಿರುವ ಆಧಿಮ ಸಾಂಸ್ಕೃತಿಕ ಕಲಾ ಕೇಂದ್ರಕ್ಕೆ ಭೇಟಿ ನೀಡಿದರೆ ಶಿಲ್ಪಕಲಾ ಕೃತಿಗಳನ್ನು ಕಣ್ತುಂಬಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT