ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಅಳೆಯುವ ಸಾಧನ!

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ಸಹಿಸಲು ಅಸಾಧ್ಯವಾದ ನೋವು ಉಂಟಾ ದಾಗ ಮನುಷ್ಯನ ಮುಖದಲ್ಲಿ ಬದಲಾವಣೆಗಳು ಉಂಟಾಗುವುದು ಸಹಜ. ಅಯ್ಯೋ.... ಎಂದು ಕಿರುಚುವ ಜತೆಗೆ ಮುಖಭಾವದಲ್ಲಿ ಏರುಪೇರು ಕಾಣಬಹುದು.

ಹೀಗೆ ಮುಖಭಾವದಲ್ಲಿ ಉಂಟಾಗುವ ಬದಲಾವಣೆ ಮೂಲಕ ಆ ನೋವಿನ ಪ್ರಮಾಣ ಎಷ್ಟಿದೆ ಎಂಬುದನ್ನು ಅಳೆಯಲು ಸಾಧ್ಯವೇ?
‘ಹೌದು’ ಎನ್ನುತ್ತಾರೆ ಅಮೆರಿಕದ  ಸಂಶೋಧಕರು. ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ, ಸ್ಯಾನ್‌ ಡಿಯಾಗೊ ಸ್ಕೂಲ್‌ ಆಫ್‌ ಮೆಡಿಸಿನ್‌ನ ಸಂಶೋಧಕರು ಮತ್ತು ತಜ್ಞರ ತಂಡ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದೆ.

ಈ ಸಾಫ್ಟ್‌ವೇರ್‌ ಅಳವಡಿಕೆಯಾದ ಸಾಧನದ ನೆರವಿನಿಂದ, ‘ಮಕ್ಕಳು ಎಷ್ಟು ನೋವು ಅನುಭವಿಸುವರು?’ ಎಂಬುದನ್ನು ಅಳತೆ ಮಾಡಿ ನೋಟಿ ಅರಿತುಕೊಳ್ಳಲು ಸಾಧ್ಯ.

ಈ ಸಾಧನದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನೋವು ಆದಾಗ ಮುಖಭಾವದಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ವೈದ್ಯರು ನೀಡಿದ ಮಾಹಿತಿಗಳನ್ನು ಆಧರಿಸಿ ಈ ಸಾಧನ ನೋವಿನ ಪ್ರಮಾಣವನ್ನು ನಿಖರವಾಗಿ ಲೆಕ್ಕಹಾಕಿದೆ.

ಸ್ಯಾನ್‌ ಡಿಯಾಗೊದ  ರ್‍್ಯಾಡಿ ಮಕ್ಕಳ ಆಸ್ಪತ್ರೆಗೆ ಅಪೆಂಡಿಕ್ಸ್‌ ತೊಂದರೆಯಿಂದ ಚಿಕಿತ್ಸೆಗೆ ಬಂದಿದ್ದ  ಐದರಿಂದ 18 ವರ್ಷ ವಯಸ್ಸಿನೊಳ ಗಿನ 50 ಮಕ್ಕಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಇವರ ಮುಖಭಾವದ ಬದಲಾವಣೆಗಳನ್ನು ವಿಡಿಯೊದಲ್ಲಿ ದಾಖಲಿಸಿ ಕೊಂಡು ಅಧ್ಯಯನ ನಡೆಸಲಾಗಿದೆ.

ಈ ಸಾಧನವು ಮಕ್ಕಳ ಈ ಸಮೂಹದಲ್ಲಿನ ಪ್ರತಿಯೊಬ್ಬರೂ ಅನುಭವಿಸಿದ ನೋವಿನ ಪ್ರಮಾಣವನ್ನು ಒಂದು ರೇಟಿಂಗ್‌ ಮೂಲಕ (0 ಇಂದ 10ರವರೆಗೆ) ತಿಳಿಸಿದೆ.

‘ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿ ಸಲಾಗಿದ್ದು, ಅದರ ಪರೀಕ್ಷೆ  ಯಶಸ್ವಿಯಾಗಿ ನಡೆದಿದೆ. ಮಕ್ಕಳು ಅನುಭವಿಸುವ ನೋವಿನ ಪ್ರಮಾಣವನ್ನು ಸುಲಭವಾಗಿ ತಿಳಿಯಲು ಸಾಧ್ಯ ವಾಗಿದೆ’ ಎಂದು ಸಾನ್‌ ಡಿಯಾಗೊ ಸ್ಕೂಲ್‌ ಆಫ್‌ ಮೆಡಿಸಿನ್‌ನ ಪ್ರೊಫೆಸರ್‌ ಜೆನ್ನೀ ಹುವಾಂಗ್‌ ಹೇಳಿದ್ದಾರೆ.

‘ನೋವು ಅತಿಯಾಗಿದೆಯೇ ಅಥವಾ ಅಲ್ಪ ಪ್ರಮಾಣದಲ್ಲಿದೆಯೇ ಎಂಬುದನ್ನು ತಿಳಿಸುವ ಈ ತಂತ್ರಜ್ಞಾನ ಮಕ್ಕಳ ವೈದ್ಯರಿಗೆ ನೆರವಾಗಬ ಲ್ಲದು. ನೋವಿನ ಪ್ರಮಾಣವನ್ನು ಆಧರಿಸಿ  ಅದನ್ನು ಹೋಗಲಾಡಿಸಲು ಬೇಕಾದ ಕ್ರಮಗ ಳನ್ನು ಕೈಗೊಳ್ಳಲು ಅನುಕೂಲವಾಗಲಿದೆ’ ಎಂಬುದು ಅವರ ಹೇಳಿಕೆ. ಮಕ್ಕಳಿಗೆ ತಾವು ಅನುಭವಿಸುತ್ತಿರುವ ನೋವನ್ನು ಸರಿಯಾಗಿ ವಿವರಿಸಲು  ಆಗುತ್ತಿಲ್ಲ. ಆದ್ದರಿಂದ ಮಕ್ಕಳ ವೈದ್ಯರು ಕೂಡಾ ಸಮಸ್ಯೆ ಎದುರಿಸುವರು.

‘ಈಗ ಇರುವ ಪದ್ಧತಿಯಂತೆ  ನೋವಿನ ಪ್ರಮಾಣ ಎಷ್ಟಿದೆ ಎಂಬುದನ್ನು ಶೂನ್ಯದಿಂದ 10ರವರೆಗಿನ ಸಂಖ್ಯೆಗಳಲ್ಲಿ ತಿಳಿಸುವಂತೆ ಮಕ್ಕಳಿಗೆ ಸೂಚಿಸಲಾಗುತ್ತದೆ.  ಆದರೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವ ಮಕ್ಕಳು ತುಂಬಾ ವಿರಳ’ ಎಂದು ಹುವಾಂಗ್‌ ತಿಳಿಸಿದ್ದಾರೆ.

‘ಮಕ್ಕಳು ಅನುಭವಿಸುವ ನೋವನ್ನು ಸರಿ ಯಾಗಿ ತಿಳಿದುಕೊಳ್ಳಲು ದಾದಿಯರು ವಿಫಲ ರಾಗುತ್ತಿದ್ದಾರೆ ಎಂಬುದು ಈ ಹಿಂದೆ ನಡೆಸಿ ರುವ ಅಧ್ಯಯನಗಳಿಂದ ತಿಳಿದುಬಂದಿದೆ. ಎಷ್ಟೋ ಬಾರಿ ದಾದಿಯರು ನೋವಿನ ಪ್ರಮಾಣವನ್ನು ಕಡೆಗಣಿಸಿದ್ದೂ ಇದೆ’  ಎಂದಿದ್ದಾರೆ.

ಈ 50 ಮಕ್ಕಳು ಅಪೆಂಡಿಕ್ಸ್‌ ತೊಂದರೆ ಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಮೂರು ಸಲ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದ ರ್ಭಗಳ ವಿಡಿಯೊವನ್ನು ದಾಖಲಿಸಿಕೊಂಡು, ಅದನ್ನು ಈ ಸಂಶೋಧನೆಗೆ ಸಂಬಂಧಿಸಿದ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

ಮುಖಭಾವದ ಬದಲಾವಣೆಗಳನ್ನು ಆಧರಿಸಿ ಹೊಸ ಸಾಫ್ಟ್‌ವೇರ್‌ ನೀಡಿದ ರೇಟಿಂಗ್‌, ಹೆತ್ತವರು ಮತ್ತು ದಾದಿಯರು ನೀಡಿರುವ ರೇಟಿಂಗ್‌ ಮತ್ತು ರೋಗಿ ಸ್ವತಃ ನೀಡಿದ ರೇಟಿಂಗ್‌ಅನ್ನು ಸಂಗ್ರಹಿಸಿ ತಜ್ಞರು ಈ ಅಧ್ಯಯನ ನಡೆಸಿದ್ದಾರೆ.

ಮುಖಭಾವದ ಬದಲಾವಣೆಗಳಿಂದ ದೊರೆತ ಡಾಟಾವನ್ನು ‘ಪೇನ್‌ ಸ್ಕೋರ್‌’ ಆಗಿ ಪರಿವರ್ತಿಸಲಾಯಿತು. ಆ ಬಳಿಕ  ಹೆತ್ತವರು, ದಾದಿಯರು ಹಾಗೂ ನೋವು ಅನುಭವಿಸಿದ ಮಕ್ಕಳು ನೀಡಿದ ರೇಟಿಂಗ್‌ಗಳ ಜತೆ ಹೋಲಿಸಿ ನೋಡಲಾಯಿತು. ಈ ಸಾಫ್ಟ್‌ವೇರ್‌ ಮಕ್ಕಳು ಅನುಭವಿಸಿದ ನೋವಿನ ಪ್ರಮಾಣವನ್ನು ಅತ್ಯಂತ ನಿಖರವಾಗಿ ಅಳೆದಿದೆ.

‘ಒಟ್ಟಾರೆಯಾಗಿ ಈ ತಂತ್ರಜ್ಞಾನ ಹೆತ್ತವರಿಗೆ ಸರಿಸಾಟಿಯಾಗಿ ಮತ್ತು ದಾದಿಯರಿಗಿಂತ ಉತ್ತಮವಾಗಿ ಕೆಲಸ ಮಾಡಿದೆ. ಅದೇ ರೀತಿ ರೋಗಿ ಹೇಳಿರುವ ರೇಟಿಂಗ್‌ ಮತ್ತು ಈ ಸಾಧನ ನೀಡಿದ ರೇಟಿಂಗ್‌ನಲ್ಲಿ ಪರಸ್ಪರ ಸಾಮ್ಯತೆ ಕಂಡುಬಂದಿದೆ’ ಎಂಬುದು ಅಧ್ಯಯನ ನಡೆಸಿದ ತಂಡದ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT