ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರ ವಿರೋಧಿ ಹಣೆಪಟ್ಟಿ ಕಳಚಿಕೊಳ್ಳಲು ಸಕಾಲ

ವಾರದ ಸಂದರ್ಶನ: ಬಿ.ಪಿ.ಮಂಜೇಗೌಡ ಅಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ ನೌಕರರ ಪ್ರಾತಿನಿಧಿಕ ಸಂಘಟನೆ ‘ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ’. 1920ರಿಂದ ಅಸ್ತಿತ್ವದಲ್ಲಿರುವ ಸಂಘವು ಸದ್ಯ 5.70 ಲಕ್ಷಕ್ಕೂ ಹೆಚ್ಚು ನೌಕರರ ಸದಸ್ಯತ್ವ ಹೊಂದಿದೆ.

ನೌಕರರ ಶ್ರೇಯೋಭಿವೃದ್ಧಿ, ಹಕ್ಕುಗಳ ರಕ್ಷಣೆಯ ಜೊತೆಗೆ ಸರ್ಕಾರ ರೂಪಿಸುವ ಕಾರ್ಯಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸಂಘ ಕಾರ್ಯಪ್ರವೃತ್ತವಾಗಿದೆ. ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳು ರಾಜ್ಯ ಸರ್ಕಾರದ ನೌಕರರಿಗೂ ಸಿಗಬೇಕು ಎಂಬ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ  ಅಣಿಯಾಗಿದೆ.

ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಬಿ.ಪಿ.ಮಂಜೇ­ಗೌಡ (ವಾಹನ ನಿರೀಕ್ಷಕರು) ಸಂಘದ ಈಗಿನ ಅಧ್ಯಕ್ಷರು. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಡುವಿನ ವೇತನ ಭತ್ಯೆಗಳಲ್ಲಿನ ತಾರತಮ್ಯ ನಿವಾರಿಸಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಅನುಷ್ಠಾನಗೊಳಿಸಬೇಕೆಂಬ ಹೋರಾಟದ ಚುಕ್ಕಾಣಿಯನ್ನು ಅವರು ಹಿಡಿದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಏಳನೇ ವೇತನ ಆಯೋಗ ಶಿಫಾರಸು ಮಾಡಿದೆ. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಿ ನೌಕರರ ವೇತನವನ್ನೂ ಹೆಚ್ಚಿಸಬೇಕೆಂಬ ಸಂಘದ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಖಚಿತ ಭರವಸೆ ನೀಡಿಲ್ಲ. ಹೀಗಾಗಿ ಜೂನ್‌ 2ರಂದು ಸಂಘ ಸಾಂಕೇತಿಕ ಮುಷ್ಕರ ನಡೆಸಲು ನಿರ್ಧರಿಸಿದೆ. ಈ ಹೋರಾಟದ ಕುರಿತು ಬಿ.ಪಿ.ಮಂಜೇಗೌಡ ಇಲ್ಲಿ ಮಾತನಾಡಿದ್ದಾರೆ:

*ಸರ್ಕಾರಿ ನೌಕರರ ಅಸಮಾಧಾನಕ್ಕೆ ಕಾರಣ ಏನು?
  ಪ್ರತಿ 5 ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚಿಸುವುದು ವಾಡಿಕೆ.  ಈ ಪ್ರಕಾರ ರಾಜ್ಯ ಸರ್ಕಾರ ಈವರೆಗೆ 10ಕ್ಕಿಂತಲೂ ಹೆಚ್ಚು ವೇತನ ಆಯೋಗಗಳನ್ನು ರಚಿಸಬೇಕಿತ್ತು. ಆದರೆ 1966ರಿಂದ 2011ರವರೆಗೆ 5 ವೇತನ ಆಯೋಗಗಳು, ಮೂವರು ಅಧಿಕಾರಿಗಳ ವೇತನ ಸಮಿತಿ ಹಾಗೂ ಒಂದು ಸಚಿವ ಸಂಪುಟ ಉಪ ಸಮಿತಿ ರಚಿಸಿ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಿದೆ.

ಈ ಸಮಿತಿಗಳು ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದ್ದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ, ಭತ್ಯೆಗಳನ್ನು ರಾಜ್ಯ ಸರ್ಕಾರದ ನೌಕರರು ಪಡೆಯಲು ಸಾಧ್ಯವಾಗಿಲ್ಲ.

*ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಇಷ್ಟೊಂದು ತಾರತಮ್ಯಕ್ಕೆ ಕಾರಣವೇನು?
ಐದನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದ ದಿನದಿಂದ ಈ ತಾರತಮ್ಯ ಆರಂಭವಾಯಿತು. ರಾಜ್ಯ ವೇತನ ಆಯೋಗಗಳ ಶಿಫಾರಸುಗಳು ಅವೈಜ್ಞಾನಿಕವಾಗಿದ್ದವು.  ಅದರಲ್ಲೂ ವಿಶೇಷವಾಗಿ ಭತ್ಯೆಯ ಬಗ್ಗೆ ಆಯೋಗಗಳು ಗಮನವನ್ನೇ ನೀಡಲಿಲ್ಲ.

2011ರಲ್ಲಿ ರಾಜ್ಯದಲ್ಲಿ ರಚಿತವಾದ ಅಧಿಕಾರಿಗಳ ವೇತನ ಸಮಿತಿ ನೀಡಿದ ಶಿಫಾರಸುಗಳ ಅನುಷ್ಠಾನದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗಿದೆ. ಸಮಾನ ವೇತನಕ್ಕೆ ಆಗ್ರಹಿಸಿ 30 ವರ್ಷಗಳಿ೦ದ ಸಂಘ ಮನವಿ ಸಲ್ಲಿಸುತ್ತಲೇ ಇದೆ. ಅದಕ್ಕೆ ಇನ್ನೂ ಬೆಲೆ ಸಿಕ್ಕಿಲ್ಲ.

ಸ೦ಬ೦ಧಿಸಿದ ಕಡತಗಳು ಆರ್ಥಿಕ ಇಲಾಖೆಯಲ್ಲಿ ಕೊಳೆಯುತ್ತಿವೆ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿಯುವುದು ಅನಿವಾರ್ಯ. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಏಳು ದಿನ ಮುಷ್ಕರ ಮಾಡಿದ್ದೆವು. ಅವರ ಅವಧಿಯಲ್ಲಿ ಮೊದಲನೇ ವೇತನ ಆಯೋಗ ಕಾರ್ಯಗತವಾಯಿತು. ದೇವರಾಜ ಅರಸು ಸರ್ಕಾರ ಎರಡನೇ ವೇತನ ಆಯೋಗವನ್ನು ಕಾರ್ಯಗತ ಮಾಡಿತ್ತು.

ಆರ್‌.ಗುಂಡೂರಾವ್‌ ಆಡಳಿತಾವಧಿಯಲ್ಲಿ, ಬಾಕಿ ಇದ್ದ 10 ಕಂತು ತುಟ್ಟಿಭತ್ಯೆ ಬಿಡುಗಡೆ ಮಾಡಲಾಯಿತು. ರಾಮಕೃಷ್ಣ ಹೆಗಡೆಯವರು ಮೂರನೇ ವೇತನ ಆಯೋಗದ ವರದಿಯನ್ನು ಕಾರ್ಯಗತ ಮಾಡಿದರು. ಎಂ.ವೀರಪ್ಪ ಮೊಯಿಲಿವರು 4ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದರು.

ಎನ್‌.ಧರ್ಮಸಿಂಗ್‌ ಅವರ ಅವಧಿಯಲ್ಲಿ 5ನೇ ವೇತನ ಆಯೋಗ ರಚನೆ ಆಯಿತು. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ತುಟ್ಟಿಭತ್ಯೆಯನ್ನು ಸಂಪೂರ್ಣ ನಗದಾಗಿ ನೀಡಿದರು. ಬಿ.ಎಸ್‌.ಯಡಿಯೂರಪ್ಪ ಅವರ ಅವಧಿಯಲ್ಲಿ 5ನೇ ವೇತನ ಆಯೋಗದ ಶಿಫಾರಸುಗಳು ಸಂಪೂರ್ಣ ಜಾರಿಯಾದವು.

ಯಡಿಯೂರಪ್ಪ ಅವಧಿಯಲ್ಲಿ ನೌಕರರ ವೇತನದಲ್ಲಿ ಶೇಕಡ 18ರಷ್ಟು ಹೆಚ್ಚಳ ಆಗಿದೆ. ಉಳಿದಂತೆ ಇತರ ಯಾವುದೇ ಸರ್ಕಾರ ನೌಕರರ ವೇತನ ಹೆಚ್ಚಿಸುವ ಆಸಕ್ತಿ ತೋರಿಸಿಲ್ಲ. ತಾರತಮ್ಯ ಉಂಟಾಗಲು ಹಿರಿಯ ಅಧಿಕಾರಿಗಳ ಅಸಹಕಾರ ಹಾಗೂ ಆಡಳಿತಗಾರರ ನಿರ್ಲಕ್ಷ್ಯವೂ ಕಾರಣ.

*ವೇತನ ಆಯೋಗದ ಶಿಫಾರಸುಗಳ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಲು ಕಾರಣವೇನು?
ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸಂಬಂಧಿಸಿ ರಾಜ್ಯದಲ್ಲಿ ರಚಿಸಲಾದ ಅಧಿಕಾರಿಗಳ ವೇತನ ಸಮಿತಿ 2012ರಲ್ಲಿ ನೀಡಿದ ಶಿಫಾರಸುಗಳನ್ನು ಆಧರಿಸಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಪರಿಷ್ಕರಣೆಗೆ ಸೂತ್ರವೊಂದನ್ನು ಅಳವಡಿಸಿಕೊಳ್ಳಲಾಗಿದೆ.

ಬೆಲೆ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರ  ಶೇಕಡ 1ರಷ್ಟು ತುಟ್ಟಿ ಭತ್ಯೆ ನೀಡಿದಾಗ, ರಾಜ್ಯ ಸರ್ಕಾರವು ಶೇ 0.604 ರಷ್ಟು ತುಟ್ಟಿ ಭತ್ಯೆಯನ್ನು ಮಾತ್ರ ಮಂಜೂರು ಮಾಡುತ್ತದೆ. ಇದರಿಂದಾಗಿ ತುಟ್ಟಿ ಭತ್ಯೆಯಲ್ಲಿ ಶೇ 13ರಷ್ಟು ವ್ಯತ್ಯಾಸ ಆಗುತ್ತಿದೆ.

ಈ ಸೂತ್ರವು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಆರ್ಥಿಕವಾಗಿ ಹಿಂದುಳಿದ ಕೇರಳದಂತಹ ರಾಜ್ಯಗಳು ಕೇಂದ್ರಕ್ಕೆ ಸಮಾನವಾಗಿ ವೇತನ ನೀಡುತ್ತಿವೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ಬಳಿಕ ವೇತನ ಮತ್ತು ತುಟ್ಟಿ ಭತ್ಯೆಯಲ್ಲಿ ವ್ಯತ್ಯಾಸ ಮತ್ತಷ್ಟು ಹೆಚ್ಚಳ ಆಗಲಿದೆ. ರಾಜ್ಯ ಸರ್ಕಾರ ಒಂದು ದಿಟ್ಟ ನಿಲುವು ತೆಗೆದುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆಯಾಗುತ್ತದೆ.

*ಸಂಘದ ಮುಖ್ಯ ಬೇಡಿಕೆ ಏನು?
ಕೇಂದ್ರ ಸರ್ಕಾರದ 7ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಶೇ 23.55ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಅವರಿಗೆ ನೀಡುವಷ್ಟೇ ವೇತನ ಹಾಗೂ ಭತ್ಯೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡುವ ಮೂಲಕ  ತಾರತಮ್ಯ ನಿವಾರಿಸಬೇಕು.

2016–17ನೇ ಸಾಲಿನ ಬಜೆಟ್ ಮಂಡನೆಗೆ ಮುನ್ನವೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು (ಹಣಕಾಸು ಸಚಿವರೂ ಅವರೇ) ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಅವರು ಸ್ಪಂದಿಸಿಲ್ಲ. ದೇಶದ 24 ರಾಜ್ಯಗಳು ರಾಜ್ಯ ಸರ್ಕಾರದ ನೌಕರರಿಗೆ,

ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಮತ್ತು ಭತ್ಯೆಗಳನ್ನು ನೀಡಲು ಸಮ್ಮತಿಸಿವೆ. ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಜಾರಿಯಾದ ಬಳಿಕ ವೇತನ ತಾರತಮ್ಯ ಪ್ರಮಾಣ ಕನಿಷ್ಠ ಶೇ 44.06ರಿ೦ದ ಗರಿಷ್ಠ ಶೇ 111.33ರಷ್ಟು ಆಗಲಿದೆ. 

*ವೇತನ ಹೆಚ್ಚಿಸಿದರೆ ತಗಲುವ ವಾರ್ಷಿಕ ಹೆಚ್ಚುವರಿ ಹೊರೆ ಸರಿದೂಗಿಸುವುದು ಕಷ್ಟ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರಲ್ಲ?
ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ವಾರ್ಷಿಕ ₹ 5 ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ, ರಾಜ್ಯದಲ್ಲಿ ಬರಗಾಲ ಇರುವುದರಿಂದ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ.

ಆದರೆ, ರಾಜ್ಯದಲ್ಲಿ 2.70 ಲಕ್ಷ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆಯ ಕಾರ್ಯಭಾರದ ಒತ್ತಡದ ಮಧ್ಯೆಯೂ ನೌಕರರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳಬೇಕು. ಖಾಲಿ ಹುದ್ದೆಗಳಿಂದ ಉಳಿತಾಯವಾದ ಹಣವನ್ನು ನೀಡಿದರೆ ಹೆಚ್ಚುವರಿ ಹೊರೆ ಸರಿದೂಗಿಸಲು ಸಾಧ್ಯವಿದೆ.

*ಜೂನ್‌ 2ರ ಸಾಂಕೇತಿಕ ಮುಷ್ಕರದ ಸ್ವರೂಪ ಹೇಗಿರುತ್ತದೆ?
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಸಂಘದ ಪದಾಧಿಕಾರಿಗಳು ಮಾಡಿರುವ ಮನವಿಗೂ ಮುಖ್ಯಮಂತ್ರಿ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಜೂನ್‌ 2ರ೦ದು ರಾಜ್ಯದಾದ್ಯ೦ತ ನಡೆಯುವ ಪ್ರತಿಭಟನೆಯಲ್ಲಿ ಶಿಕ್ಷಣ, ಕ೦ದಾಯ, ಆರೋಗ್ಯ, ಅಬಕಾರಿ ಸೇರಿ 84 ಇಲಾಖೆಗಳ 5.70 ಲಕ್ಷ ಸರ್ಕಾರಿ ನೌಕರರು ಭಾಗವಹಿಸಲಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇವೆ.

*ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ಹೆಜ್ಜೆ ಏನು?
ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ ಸಮರ್ಥ ವಾದವನ್ನು ಮಂಡಿಸಿದ್ದೇವೆ. ಬೇಡಿಕೆ ಈಡೇರಿಸುವ ತಾತ್ವಿಕ ಭರವಸೆಯನ್ನು ಮುಖ್ಯಮಂತ್ರಿ ಈ ಹಿಂದೊಮ್ಮೆ ನೀಡಿದ್ದರು. ಬಳಿಕ ಅವರು ಹಿಂದೇಟು ಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ನಮ್ಮ ಅಹವಾಲು ಸಲ್ಲಿಸಿದ್ದೇವೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು, ಮುಖ್ಯಮಂತ್ರಿ ಜೊತೆ ಈ ಕುರಿತು ಮಾತನಾಡುವ ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಿಸಬೇಕು. ಅಧಿಕಾರದಲ್ಲಿರುವವರು ಗಟ್ಟಿ ನಿರ್ಧಾರ ಮಾಡಬೇಕು.

ಸಿದ್ದರಾಮಯ್ಯ ಅವರು ನೌಕರ ವಿರೋಧಿ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಇದು ಸೂಕ್ತ ಅವಕಾಶ. ನಮ್ಮ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ. ಸಾಂಕೇತಿಕ ಮುಷ್ಕರಕ್ಕೆ ಸರ್ಕಾರ ಸ್ಪಂದಿಸದೇ ಇದ್ದರೆ ಸಂಘದ ರಾಜ್ಯ ಘಟಕದ ಸಭೆ ಕರೆದು ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸಲಾಗುವುದು.  ನೌಕರರ ಬೇಡಿಕೆ ಈಡೇರಿಸಿದರೆ ಸಿದ್ದರಾಮಯ್ಯ ಅವರ ಆಡಳಿತಕ್ಕೂ ಒಳ್ಳೆಯ ಹೆಸರು ಬರುತ್ತದೆ. ನಾವುಗಳು ಅವರ ಕೈ ಬಲಪಡಿಸುತ್ತೇವೆ.

*ನೀವು ಅಧ್ಯಕ್ಷರಾದ ಬಳಿಕ ನೌಕರರ ಶ್ರೇಯೋಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ?
ನೌಕರರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಂಘದ ವತಿಯಿಂದ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು 81 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದೆವು. 

ಈ ಪ್ರಸ್ತಾವ ಕಂದಾಯ ಇಲಾಖೆಯ ಪರಿಶೀಲನೆಯಲ್ಲಿದೆ. ಬೆಂಗಳೂರು ನಗರದಲ್ಲಿ ಸಮುದಾಯ ಭವನ ನಿರ್ಮಿಸಲು  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 1.10 ಎಕರೆ ಜಮೀನು ಮಂಜೂರಾತಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಸ್ತಾವಕ್ಕೂ ಸದ್ಯದಲ್ಲೆ ಮಂಜೂರಾತಿ ಸಿಗುವ ನಿರೀಕ್ಷೆ ಇದೆ.

ನೌಕರರು ಮತ್ತು ಅವರ ಅವಲಂಬಿತರಿಗೆ ಸರ್ಕಾರ ನಗದುರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆ ‘ಜ್ಯೋತಿ ಸಂಜೀವಿನಿ’ ಆರಂಭಿಸಲು ಸಂಘ ಕಾರಣ. ಆರೋಗ್ಯ ಭಾಗ್ಯ ಯೋಜನೆ ಅನುಷ್ಠಾನ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇನೆ. ನನ್ನ ಅವಧಿಯಲ್ಲಿ ಸದಸ್ಯತ್ವ ಶುಲ್ಕ ಸಂಗ್ರಹಣೆಯಲ್ಲಿ ಸಂಘ ಹೆಚ್ಚಿನ ಪ್ರಗತಿ ಸಾಧಿಸಿದೆ.

ಸಂಘವನ್ನು ಆರ್ಥಿಕವಾಗಿ ಸದೃಡಗೊಳಿಸಲು, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿರುವ ಎಲ್ಲಾ ಶಾಖೆಗಳ ಪುನಶ್ಚೇತನಕ್ಕೆ ಕಾರ್ಯಕ್ರಮ ರೂಪಿಸಿದ್ದೇನೆ. ಸಂಘಟನೆ ಹಾಗೂ ನೌಕರರ ಶ್ರೇಯೋಭಿವೃದ್ಧಿಗಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಲು ಬದ್ಧನಾಗಿದ್ದೇನೆ.

*ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಒಡಕು ಇದೆಯೇ?
ಸಣ್ಣಪುಟ್ಟ ವಿಷಯಗಳಲ್ಲಿ ಮನಸ್ತಾಪ ಇಲ್ಲವೆಂದಲ್ಲ. ನನಗೆ ವೈಯಕ್ತಿಕ ಅಭಿಲಾಷೆ ಏನೂ ಇಲ್ಲ. ಸಂಘದಲ್ಲೂ ಸಾಮೂಹಿಕ ಸಮಸ್ಯೆ ಇಲ್ಲ. ಅಧಿಕಾರಕ್ಕಾಗಿ ಒಬ್ಬರನ್ನು ಇನ್ನೊಬ್ಬರು ಎತ್ತಿಕಟ್ಟುವುದು, ರಾಜಕೀಯ ಮಾಡುವುದು ಇದ್ದೇ ಇದೆ.

ಅದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗುವುದು ನನ್ನ ಉದ್ದೇಶ. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಎಲ್ಲರೂ ಒಗ್ಗಟ್ಟಾಗಬೇಕು, ಒಕ್ಕೊರಲಿನಿಂದ ಧ್ವನಿ ಎತ್ತಬೇಕು ಅಷ್ಟೆ.

ಆಗ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಕಷ್ಟ ಆಗಲಾರದು ಎನ್ನುವುದು ನನ್ನ ನಂಬಿಕೆ. ಜನಸಾಮಾನ್ಯರು ಕಚೇರಿಗೆ ಬಂದಾಗ ಸರ್ಕಾರಿ ನೌಕರರು ಉತ್ತಮ ಸೇವೆ ನೀಡಬೇಕು.

ಸರ್ಕಾರಿ ನೌಕರರು ಸಾಮಾನ್ಯ ಜನರಿಗೂ ಸ್ಪಂದಿಸಿ ಅವರ ಬೇಡಿಕೆಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು. ಕುಂದುಕೊರತೆ ಏನೇ ಇದ್ದರೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT