ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಅಡಿ ವಿರುದ್ಧ ಸ್ವಜನಪಕ್ಷಪಾತದ ಆರೋಪ

ಉಪ ಲೋಕಾಯುಕ್ತರ ವಿರುದ್ಧ ಸಲ್ಲಿಸಿರುವ ಪ್ರಸ್ತಾವದಲ್ಲಿ ಉಲ್ಲೇಖ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್‌ ಬಿ.ಅಡಿ ಅವರ ಪದಚ್ಯುತಿಗೆ ಕಾಂಗ್ರೆಸ್‌ ಶಾಸಕರು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಸ್ವಜನಪಕ್ಷಪಾತ ಮತ್ತು ವ್ಯಾಪ್ತಿ ಮೀರಿ ಕರ್ತವ್ಯ ನಿರ್ವಹಿಸಿದ ಆರೋಪಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ನ 78  ಸದಸ್ಯರು ಸಹಿ ಮಾಡಿ ಸಲ್ಲಿಸಿರುವ ಪ್ರಸ್ತಾವದ ಜತೆಗೆ ಅಡಿ ವಿರುದ್ಧದ ಆರೋಪಗಳಿಗೆ ಪೂರಕವಾಗಿ ಹಲವು ದಾಖಲೆಗಳನ್ನು ಲಗತ್ತಿಸಲಾಗಿದೆ. ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅವರು ಲೋಕಾಯುಕ್ತ ರಾಗಿದ್ದಾಗ (2011ರ ಆಗಸ್ಟ್‌ 5ರಂದು) ಇಬ್ಬರು ಉಪ ಲೋಕಾಯುಕ್ತರಿಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿದ್ದರು. ಉಪ ಲೋಕಾಯುಕ್ತ–1ಕ್ಕೆ 13 ಜಿಲ್ಲೆ ಮತ್ತು ಉಪ ಲೋಕಾಯುಕ್ತ–2ಕ್ಕೆ 17 ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿತ್ತು.

ಉಪ ಲೋಕಾಯುಕ್ತ–1ರ ಹುದ್ದೆಯಲ್ಲಿ ಎಸ್‌.ಬಿ.ಮಜಗೆ (ಈಗ ನಿವೃತ್ತಿ) ಮತ್ತು ಉಪ ಲೋಕಾಯುಕ್ತ–2ರಲ್ಲಿ ಸುಭಾಷ್‌ ಬಿ.ಅಡಿ ಕೆಲಸ ನಿರ್ವಹಿಸುತ್ತಿದ್ದರು. ಇವರು ತಮಗೆ ಹಂಚಿಕೆ ಮಾಡಿರುವ ಜಿಲ್ಲೆಗಳಿಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸುವುದು ಮತ್ತು ವಿಚಾರಣೆ ಮಾಡುವ ಅಧಿಕಾರ ಹೊಂದಿದ್ದರು.

ಪ್ರಸ್ತಾವದಲ್ಲಿ ಏನೇನಿದೆ?
ಶೈಲಾ ಪಾಟೀಲ್‌ ಪ್ರಕರಣ:
ನ್ಯಾಯಮೂರ್ತಿ ಮಜಗೆ ವ್ಯಾಪ್ತಿಗೆ ಬರುವ ಹುಬ್ಬಳ್ಳಿ– ಧಾರವಾಡ ಜಿಲ್ಲೆಯ ಪ್ರಕರಣವೊಂದಕ್ಕೆ (ಪ್ರಸೂತಿ ತಜ್ಞೆ ಡಾ.ಶೈಲಾ ಪಾಟೀಲ) ಸಂಬಂಧಿಸಿದಂತೆ ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಆದೇಶ ಹೊರಡಿಸಿದ್ದರು. ಶೈಲಾ ಪಾಟೀಲ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಡಬಹುದು ಎಂದು ಹೇಳಿ ಅವರು ಸರ್ಕಾರಕ್ಕೂ ಪತ್ರ ಬರೆದಿದ್ದರು.

ಆ ಪ್ರಕಾರ ಸರ್ಕಾರ ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಟ್ಟಿತ್ತು. ಇದು ಗೊತ್ತಾದ ನಂತರ ಮಜಗೆ ಅವರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌ ಅವರಿಗೆ ಪತ್ರ ಬರೆದು ಅಡಿ ಅವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ಎತ್ತಿದ್ದರು.

ಮಜಗೆ ಪತ್ರದ ಸಾರಾಂಶ: ‘ಸುಭಾಷ್‌ ಅಡಿ ಅವರ ಆದೇಶದ ಕಡತ ನೋಡಿ ನನಗೆ ಕೇವಲ ಆಶ್ಚರ್ಯ ಮಾತ್ರ ಆಗಿಲ್ಲ, ಆಘಾತವೂ ಆಗಿದೆ. ಲೋಕಾಯುಕ್ತರೇ ಅಧಿಕಾರ ಹಂಚಿಕೆ ಮಾಡಿದ ಮೇಲೆ ನನ್ನ ವ್ಯಾಪ್ತಿಯ ಪ್ರಕರಣವನ್ನು ಮತ್ತೊಬ್ಬ ಉಪ ಲೋಕಾಯುಕ್ತರು ವಿಲೇವಾರಿ ಮಾಡಿರುವುದು ಸರಿಯಲ್ಲ. ಇದು ಕಾನೂನುಬಾಹಿರ. ಅಡಿ ಅವರು ಉಪ ಲೋಕಾಯುಕ್ತರಾಗಿ ಬಂದ ನಂತರ ಈ ರೀತಿ ವ್ಯಾಪ್ತಿ ಮೀರಿ ಕೆಲಸ ಮಾಡುವ ಪ್ರಕರಣಗಳು ಹೆಚ್ಚಾಗಿವೆ.

ಇದೊಂದೇ ಪ್ರಕರಣ ಅಲ್ಲ, ಇನ್ನೂ ಅನೇಕ ಪ್ರಕರಣಗಳಲ್ಲಿ ಅವರು ವ್ಯಾಪ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಆ ವಿಷಯವನ್ನು ನನ್ನ ಗಮನಕ್ಕೂ ತರುತ್ತಿಲ್ಲ. ಅಷ್ಟೇ ಅಲ್ಲ, ಅಡಿ ಅವರು ನನ್ನ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ಕೊಟ್ಟಾಗ ಅಲ್ಲಿನ ಅಧಿಕಾರಿಗಳ ಸಭೆಗಳನ್ನು ನಡೆಸಿದ್ದಾರೆ. ಇದು ಕೂಡ ಸರಿಯಲ್ಲ’ ಎಂಬುದನ್ನು ಮಜಗೆ ಅವರು 2014ರ ಮಾರ್ಚ್‌ 20ರಂದು ಲೋಕಾಯುಕ್ತರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮನೆಗಳ ನಿರ್ಮಾಣಕ್ಕೂ ಅಡ್ಡಿ: ರಾಜೀವ್‌ ಗಾಂಧಿ ಗೃಹ ನಿರ್ಮಾಣ ಯೋಜನೆಯಡಿ ಬಡವರಿಗೆ ಬೆಳಗಾವಿಯಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದು, ಅದಕ್ಕೂ ಅಡಿ ಅಡ್ಡಿಪಡಿಸಿದ್ದಾರೆ. ಈ ಸಂಬಂಧ ಅವರು ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಗೆ ನೋಟಿಸ್‌ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್‌ ಕೊಟ್ಟಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಬ್ಬು ಬೆಳೆಗಾರರ ಅರ್ಜಿ: ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡುತ್ತಿಲ್ಲ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆಯೂ ಅಡಿ ಅವರು ಬೆಳಗಾವಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದರು ಎನ್ನುವ ಅಂಶಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ಅವರಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ. ಬೆಳಗಾವಿ ಜಿಲ್ಲೆ ಅಡಿ ಅವರ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಅವರು ಸಭೆಗಳನ್ನು ಕರೆದಿದ್ದಾರೆ  ಎಂಬುದು ಕಾಂಗ್ರೆಸ್‌ ಸದಸ್ಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT