ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನೊ ತಂತ್ರಜ್ಞಾನ ಪ್ರಗತಿ ಕಾಣಲಿ

Last Updated 1 ಆಗಸ್ಟ್ 2015, 10:33 IST
ಅಕ್ಷರ ಗಾತ್ರ

ತಿಪಟೂರು: ಸಾಮಾನ್ಯ ಜನರ ಬದುಕು ಸುಧಾರಿಸುವ ನಿಟ್ಟಿನಲ್ಲಿ ನ್ಯಾನೊ ತಂತ್ರಜ್ಞಾನದ ಅನ್ವಯ ಮತ್ತು ಆವಿಷ್ಕಾರ ಭಾರತದಲ್ಲಿ ತೀವ್ರ ಪ್ರಗತಿ ಕಾಣಬೇಕಿದೆ ಎಂದು ಪುಣೆ ಟಾಟಾ ಇನೊವೇಟಿವ್ ಸೆಂಟರ್‌ನ ವಿಜ್ಞಾನಿ ಡಾ.ಕೆ.ಎಸ್. ನಾಗಭೂಷಣ್ ತಿಳಿಸಿದರು.

ನಗರದ ಕಲ್ಪತರು ವಿಜ್ಞಾನ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ನಡೆದ ‘ಪರ್ಸ್ಪೆಕ್ಟೀವ್ಸ್ ಆಫ್ ನ್ಯಾನೊ ಟೆಕ್ನಾಲಜಿ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ನ್ಯಾನೊ ಕಾಲವಾದ ಈಗ ಎಲ್ಲ ಕ್ಷೇತ್ರಗಳಲ್ಲಿ ಇದರ ಅಳವಡಿಕೆ ಅನಿವಾರ್ಯವಾಗಿದೆ. ಜಗತ್ತಿನ ನ್ಯಾನೊ ಬಳಕೆಯ ವೇಗಕ್ಕೆ ದೇಶ ಬೆಳೆಯಬೇಕಿದೆ. ಸಾಮಾಜಿಕ ನೆಲೆಯಲ್ಲಿ ಈ ತಂತ್ರಜ್ಞಾನದ ಲಾಭ ದೊರಕಿಸಲು ವಿಸ್ತೃತ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಸಾಧ್ಯತೆಗಳು ಬಹಳ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಸೇರಿದಂತೆ ಎಲ್ಲಾ ವಿಜ್ಞಾನ ನಿಕಾಯಗಳಲ್ಲಿ ನ್ಯಾನೊ ಆನ್ವಯಿಕ ಸಾಧ್ಯತೆಗಳು ಬಹಳಷ್ಟಿವೆ. ವಿಜ್ಞಾನದ ವೇಗವರ್ಧಕಗಳ ನಂತರ ನ್ಯಾನೊ ಬಹುಮುಖ್ಯ ಜ್ಞಾನಮೂಲವಾಗಿ ಕಂಡುಬರುತ್ತಿದೆ. ಇದು ಕೇವಲ ಔದ್ಯೋಗಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ ಆರೋಗ್ಯ, ಕುಡಿಯುವ ನೀರು, ಕೃಷಿ ಮತ್ತಿತರರ ವಿಸ್ತಾರ ಪ್ರಯೋಜನಗಳನ್ನು ಒಳಗೊಂಡಿದೆ ಎಂದರು.

ನೀರು ಪೂರೈಕೆಗೆ ಅನುಕೂಲ: ಶುದ್ಧ ಕುಡಿವ ನೀರು ಸೋಸುವಿಕೆಗೆ ಇದು ಬಳಕೆಯಾಗುತ್ತಿದೆ. ನ್ಯಾನೊ ತಂತ್ರಜ್ಞಾನದಲ್ಲಿ ಬೆಳ್ಳಿ ಗೆರೆಗಳನ್ನು ಬಳಸಿ ನೀರನ್ನು ಪರಿಣಾಮಕಾರಿಯಾಗಿ ಶೋಧಿಸುವ ಕಾರ್ಯ ಚಾಲ್ತಿಯಲ್ಲಿದೆ. ಇದರಿಂದ ಗ್ರಾಮೀಣರಿಗೆ ಶುದ್ಧ ಕುಡಿವ ನೀರು ಪೂರೈಸಲು ಅನುಕೂಲವಾಗಿದೆ. ಇದೇ ರೀತಿ ಶಸ್ತ್ರಚಿಕಿತ್ಸೆಗೂ ಈ ತಂತ್ರಜ್ಞಾನದ ಬಳಕೆ ಗಮನಾರ್ಹವಾಗಿದೆ. ಅಡ್ಡಪರಿಣಾಮ ಮತ್ತು ಅನಗತ್ಯ ತೊಂದರೆ ಇಲ್ಲದೆ ಮ್ಯಾಗ್ನೆಟಿಕ್ ಫೀಲ್ಡ್ ನೆರವಿನಿಂದ ನೇರವಾಗಿ ಗುರಿ ಇಟ್ಟ ಸ್ಥಳದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ನೆರವಾಗಿದೆ ಎಂದರು.

ವಾಹನಗಳು ಉಗುಳುವ ಅಪಾಯಕಾರಿ ಹೊಗೆಯನ್ನು ಪರಿವರ್ತಿಸಿ ವಿಷರಹಿತವಾಗಿ ಹೊರ ಹಾಕುವ ತಂತ್ರಜ್ಞಾನವೂ ಇದರಲ್ಲಿದೆ. ಸಸ್ಯ ಸಂರಕ್ಷಣೆ ಔಷಧಕ್ಕೂ ಬಳಕೆ ವಿಸ್ತರಿಸಿಕೊಂಡಿದ್ದು, ಕೃಷಿಗೆ ಲಾಭವಾಗಿದೆ. ಸೌರಶಕ್ತಿ ಉಪಕರಣಗಳಲ್ಲಿ ಈ ತಂತ್ರಜ್ಞಾನ ಪರಿಣಾಮಕಾರಿ ಫಲಿತಾಂಶ ಕೊಟ್ಟಿದೆ ಎಂದರು. ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಪಿ.ರುದ್ರಮುನಿಸ್ವಾಮಿ, ನಟರಾಜ್, ಪ್ರಾಂಶುಪಾಲ ಡಾ.ವಿದ್ವಾನ್ ಸದಾಶಿವಯ್ಯ, ಪ್ರೊ.ಕೆ.ಸಿ.ಜಗದೀಶ್, ಪ್ರೊ.ವೈ.ಪಿ.ಶಿರೂರ್, ಪ್ರೊ.ಎ.ಎಂ.ಶಿವಣ್ಣ, ಶೈಲಜಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT