ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾನ್ಸಿ ಪೊವೆಲ್‌ ರಾಜೀನಾಮೆ

ಭಾರತದಲ್ಲಿನ ಅಮೆರಿಕ ರಾಯಭಾರಿ
Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ವಾಷಿಂಗ್ಟನ್‌(ಪಿಟಿಐ/ ಐಎಎನ್‌ಎಸ್‌):  ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್‌ ಅವರು ತಮ್ಮ ಹುದ್ದೆಗೆ ಹಠಾತ್‌ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ  ಹತ್ತಿರವಾಗುತ್ತಿರುವ ಹೊತ್ತಿನಲ್ಲಿಯೇ ನಡೆದ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಅಮೆರಿಕ, ‘ಭಾರತದಲ್ಲಿನ ಅಮೆರಿಕದ ರಾಯಭಾರಿ ನ್ಯಾನ್ಸಿ ಪೊವೆಲ್‌ ರಾಜೀನಾಮೆಗೂ ಉಭಯ ದೇಶಗಳ ನಡುವಣ ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟಿಗೂ ಸಂಬಂಧವಿಲ್ಲ’ ಎಂದು  ಸ್ಪಷ್ಟಪಡಿಸಿದೆ.

ಸೋಮವಾರ  ನಡೆದ ಅಮೆರಿಕದ ರಾಜತಾಂತ್ರಿಕರ ಸಭೆ­ಯಲ್ಲಿ   ನ್ಯಾನ್ಸಿ ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. 2012ರ ಏಪ್ರಿಲ್‌ನಲ್ಲಿ ಅವರು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿ ನೇಮಕ­ಗೊಂಡಿದ್ದರು.

ಫೆಬ್ರುವರಿ 13ರಂದು ನ್ಯಾನ್ಸಿ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಗೋಧ್ರಾ ಗಲಭೆ ನಡೆದ ಒಂಬತ್ತು ವರ್ಷಗಳ ಬಳಿಕ ಅಮೆರಿಕವು ಮೋದಿ ಅವರತ್ತ ಸ್ನೇಹಹಸ್ತ ಚಾಚಿದೆ ಎಂದೇ ಈ ಭೇಟಿಯನ್ನು ಅರ್ಥೈಸಲಾಗಿತ್ತು.

ಉಗಾಂಡಾ, ಘಾನಾ, ಪಾಕಿಸ್ತಾನ, ನೇಪಾಳ, ಕೆನಡಾ, ಟೋಗೊದಲ್ಲಿ ಕೂಡ ನ್ಯಾನ್ಸಿ  ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ನ್ಯಾನ್ಸಿ, ಭಾರತದಲ್ಲಿ ಅಮೆರಿಕದ ಮೊದಲ ಮಹಿಳಾ ರಾಯಭಾರಿ­ಯಾಗಿದ್ದರು ಎನ್ನುವುದು ವಿಶೇಷ. ಅಮೆರಿಕದ ವಿದೇಶಾಂಗ ಸೇವೆಯಲ್ಲಿ ಅವರು ಅತ್ಯುನ್ನತ ಸ್ಥಾನ ಪಡೆದಿದ್ದರು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ  ಭಾರತಕ್ಕೆ ಅಮೆರಿಕವು ಹೊಸ ರಾಯಭಾರಿ ನೇಮಕ ಮಾಡುವ ಸಾಧ್ಯತೆ ಇದೆ ಎಂಬ ವದಂತಿ ಇರುವಾಗಲೇ ನ್ಯಾನ್ಸಿ ರಾಜೀನಾಮೆ ಕೊಟ್ಟಿದ್ದಾರೆ.

ದೇವಯಾನಿ ಖೋಬ್ರಾಗಡೆ ಪ್ರಕರಣದ ಬಳಿಕ ಭಾರತ–ಅಮೆರಿಕ ನಡುವಣ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು.

ಬಲವಾದ ಕಾರಣ ಇಲ್ಲ: ಅಮೆರಿಕ
‘ಉಭಯ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟಿನ ಶಮನಕ್ಕೆ ನ್ಯಾನ್ಸಿ ರಾಜೀನಾಮೆ ಪಡೆಯಲಾಗಿದೆ ಎಂಬು­ದೆಲ್ಲ ಸುಳ್ಳು’  ಎಂದು ಅಮೆರಿಕ ವಿದೇಶಾಂಗ ಖಾತೆ ವಕ್ತಾರೆ ಮೇರಿ ಹಾರ್ಫ್‌ ತಿಳಿಸಿದ್ದಾರೆ.

‘ಮೊದಲೇ ನಿರ್ಧರಿಸಿದಂತೆ ನ್ಯಾನ್ಸಿ ಅವರು ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ಮೇ ಅಂತ್ಯದ ವೇಳೆಗೆ ಅವರು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಇದು ಅವರ ಸ್ವಂತ ನಿರ್ಧಾರ. 37 ವರ್ಷಗಳ  ಸುದೀರ್ಘ ಸೇವೆಯ ನಂತರ ನಿವೃತ್ತಿ ಬಯಸಿರುವುದು ಸಹಜವೇ ಆಗಿದೆ’ ಎಂದೂ ಹೇಳಿದ್ದಾರೆ.

‘ನ್ಯಾನ್ಸಿ ರಾಜೀನಾಮೆಯ ಹಿಂದೆ ಯಾವುದೇ ಬಲವಾದ ಕಾರಣಗಳೂ ಇಲ್ಲ. ದ್ವಿಪಕ್ಷೀಯ ಸಂಬಂಧವು ಯಾವುದೇ ಒಬ್ಬ ವ್ಯಕ್ತಿಯನ್ನು ಅವಲಂಬಿಸಿಲ್ಲ.  ಬದಲಿಗೆ ಇಡೀ ವ್ಯವಸ್ಥೆ ಅದರಲ್ಲಿ ಒಳಗೊಂಡಿರುತ್ತದೆ’  ಎಂದು ಮೇರಿ ಹಾರ್ಫ್ ಹೇಳಿದ್ದಾರೆ.

‘ನ್ಯಾನ್ಸಿ ಉತ್ತರಾಧಿಕಾರಿ ನೇಮಕದ ಬಗ್ಗೆ ಇದುವರೆಗೆ  ತೀರ್ಮಾನವಾಗಿಲ್ಲ. ಯಾರೇ ನೇಮಕ ಗೊಳ್ಳಲಿ,  ದ್ವಿಪಕ್ಷೀಯ ಸಂಬಂಧ ಇದೇ ರೀತಿಯಲ್ಲಿ ಮುಂದು­ವರಿಯಲಿದೆ’ ಎಂದು  ಅಭಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT