ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನದ ನಿರಾಕರಣೆ ಅಲ್ಲ

Last Updated 20 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಥವಾ ನ್ಯಾಯಾಧೀಶರಿಗೆ ಅನಿಸಿದರೆ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯು­ವುದ­ರಲ್ಲಿ ಯಾವುದೇ ತಪ್ಪಿಲ್ಲ. ಹಾಗೆ ಅನಿಸಿ­ದಾಗ, ನ್ಯಾಯದಾನ ಮಾಡುವ ಸ್ಥಾನದಲ್ಲಿ ಇರುವವರು ವಿಚಾರಣೆಯಿಂದ ಹಿಂದೆ ಸರಿಯುವುದೇ ಒಳ್ಳೆಯದು.

ಆದರೆ ಹೀಗೆ ಮಾಡುವುದರಲ್ಲೂ ವೈವಿಧ್ಯ ಇದೆ. ‘ನನಗೆ ನ್ಯಾಯ ದೊರೆಯುವುದಿಲ್ಲ ಎಂಬ ಆತಂಕ ಇದೆ’ ಎಂದು ಕಕ್ಷಿದಾರ ಆಧಾರ ಸಹಿತವಾಗಿ ಹೇಳಿದರೆ, ಅಂಥ ಸಂದರ್ಭದಲ್ಲಿ ನ್ಯಾಯದಾನ ಮಾಡುವ ಸ್ಥಾನದಲ್ಲಿರುವವರು ಒಂದು ವಿಷಯ ಸ್ಪಷ್ಟಪಡಿಸಿಕೊಳ್ಳಬೇಕು. ‘ಈ ಪ್ರಕರಣವನ್ನು ನಾನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ ಅಥವಾ ಬೇಡವೇ’ ಎಂದು ಅವರೇ ಕಕ್ಷಿದಾರರನ್ನು ಪ್ರಶ್ನಿಸಬೇಕು. ‘ಇಲ್ಲಿ, ನ್ಯಾಯ ಸಿಗುವ ನಂಬಿಕೆ ನನಗಿಲ್ಲ’ ಎಂದು ವಾದಿ ಅಥವಾ ಪ್ರತಿವಾದಿ ಹೇಳಿದರೆ ನ್ಯಾಯಮೂರ್ತಿಗಳು ಆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು. ನ್ಯಾಯದಾನ ಮಾಡುವುದು ಮಾತ್ರವಲ್ಲ, ನ್ಯಾಯದಾನ ಪ್ರಕ್ರಿಯೆ ಸರಿಯಾಗಿ ಆಗುತ್ತಿದೆ ಎಂಬುದೂ ವಾದಿ–ಪ್ರತಿವಾದಿಗಳಿಗೆ ಮನವರಿಕೆಯಾಗ­ಬೇಕು ಎಂಬ ಉನ್ನತ ಉದ್ದೇಶದ ಕಾರಣ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿಯುವ ಪರಿಕಲ್ಪನೆ ಜನಿಸಿದೆ. ನ್ಯಾಯಮೂರ್ತಿಯು ನ್ಯಾಯದಾನ ಮಾಡುವ ಸಂದರ್ಭದಲ್ಲಿ ಪೂರ್ವಗ್ರಹಗಳಿಗೆ ಒಳಗಾಗಿರಲಿಲ್ಲ, ವಾದಿ–ಪ್ರತಿವಾದಿಯ ಬಗ್ಗೆ ಅವರಿಗೆ ಯಾವುದೇ ರಾಗ–ದ್ವೇಷಗಳು ಇರಲಿಲ್ಲ ಎಂಬುದು ಎಲ್ಲರ ಅರಿವಿಗೆ ಬರಬೇಕು. ನ್ಯಾಯದಾನದಂತೆ ಇದು ಕೂಡ ಮುಖ್ಯ ಅಂಶ.

ರಾಜ್ಯದಲ್ಲಿ ನ್ಯಾಯಮೂರ್ತಿಗಳು ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆಯಿಂದ ಸಾಲುಸಾಲಾಗಿ ಹಿಂದೆ ಸರಿದ ವಿದ್ಯಮಾನ ಗಮನಿಸಿದಾಗ ಕೆಲವರಲ್ಲಿ ಸಂಶಯ ಮೂಡಿರುವ ಸಾಧ್ಯತೆಯೂ ಇದೆ. ಆದರೆ, ಒಂದು ಪ್ರಕರಣವನ್ನು ತಾನು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದು ನ್ಯಾಯಮೂರ್ತಿಗೆ ಅನಿಸಿದರೆ, ಅದರಿಂದ ಹಿಂದೆ ಸರಿಯುವುದು ತಪ್ಪಲ್ಲ. ಹಿಂದೆ ಸರಿಯದೆ, ವಿಚಾರಣೆ ಮುಂದುವರಿಸಿದರೂ ಜನರಿಗೆ ಆಡಿಕೊಳ್ಳಲು ಕಾರಣ ಒದಗಿಸಿದಂತೆ ಆಗಬಹುದಲ್ಲ?

ಕೆಲವು ನ್ಯಾಯಮೂರ್ತಿಗಳು ಭೂಮಾಲೀಕರ ಪರ, ಇನ್ನು ಕೆಲವರು ಕಾರ್ಮಿಕರ ಪರ, ಮತ್ತೆ ಕೆಲವರಿಗೆ ಇಂತಿಂಥ ರಾಜಕೀಯ ನಿಲುವು ಇದೆ ಎಂಬ ಮಾತುಗಳನ್ನು ನಾನು ವಕೀಲನಾಗಿದ್ದ ಅವಧಿಯಲ್ಲೂ ಕೇಳಿಸಿಕೊಂಡಿದ್ದೇನೆ. ಆದರೆ ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತವರು ರಾಜಕೀಯ, ಧಾರ್ಮಿಕ ಸೇರಿದಂತೆ ಎಲ್ಲ ಬಗೆಯ ಪೂರ್ವಗ್ರಹಗಳಿಂದ ಮುಕ್ತರಾಗಿರಬೇಕು. ನ್ಯಾಯ ಕೇಳಿಕೊಂಡು ಬಂದ ಪ್ರಜೆಗೆ ನ್ಯಾಯದಾನ ಮಾಡುವ ವ್ಯಕ್ತಿಯಲ್ಲೂ ನಂಬಿಕೆ ಮೂಡಬೇಕು. ಹೀಗೆ ವಿಶ್ವಾಸ, ನಂಬಿಕೆ ಮೂಡಿಸುವ ಆಶಯದಿಂದ ವಿಚಾರಣೆಯಿಂದ ಹಿಂದೆ ಸರಿಯುವುದು ತಪ್ಪಲ್ಲ.

ಕಾರಣ ಕೊಡಬೇಕೆಂದಿಲ್ಲ: ನ್ಯಾಯಮೂರ್ತಿ ಸಾಮಾನ್ಯ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉತ್ತರದಾಯಿ ಅಲ್ಲ. ಆತ ಉತ್ತರದಾಯಿ ಆಗಬೇಕಿರುವುದು ನ್ಯಾಯ ಕೋರಿ ಬಂದವರಿಗೆ ಮಾತ್ರ. ವಿಚಾರಣೆಯಿಂದ ಹಿಂದೆ ಸರಿದಿದ್ದು ಏಕೆ ಎಂದು ವಾದಿ ಅಥವಾ ಪ್ರತಿವಾದಿ ಕೇಳದಿದ್ದರೆ, ನ್ಯಾಯಮೂರ್ತಿ ಕಾರಣ ಕೊಡಬೇಕೆಂದೇನೂ ಇಲ್ಲ. ಕಾರಣ ತಿಳಿದುಕೊಳ್ಳಬೇಕಿದ್ದರೆ, ವಾದಿ ಅಥವಾ ಪ್ರತಿವಾದಿಯೇ ನ್ಯಾಯಮೂರ್ತಿಯನ್ನು ಪ್ರಶ್ನಿಸಬೇಕು. ಹಾಗೆ ಪ್ರಶ್ನಿಸಿದರೆ, ನ್ಯಾಯಮೂರ್ತಿ ಕಾರಣ ಹೇಳಲೇಬೇಕು. ಕಾರಣ ಹೇಳಲೇಬೇಕು ಎನ್ನುವ ಯಾವುದೇ ಕಾನೂನು ದೇಶದಲ್ಲಿ ಇಲ್ಲ. ಆದರೆ ಇಂಥ ಸಂದರ್ಭದಲ್ಲಿ ಕಾರಣ ಕೊಡುವುದು ನ್ಯಾಯಮೂರ್ತಿಯ ಕರ್ತವ್ಯವಾಗುತ್ತದೆ. ಅಷ್ಟೇ ಅಲ್ಲ, ನೀವು ಈ ಪ್ರಕರಣದ  ವಿಚಾರಣೆ ನಡೆಸಬಾರದು ಎಂದು ಯಾವುದೇ ಕಕ್ಷಿದಾರ ಹೇಳಿದರೆ, ಆತನಿಂದ ಕಾರಣ ಕೇಳುವುದು ಕೂಡ ನ್ಯಾಯಮೂರ್ತಿಯ ಕೆಲಸ. ನಿರ್ದಿಷ್ಟ ನ್ಯಾಯಮೂರ್ತಿಯ ಎದುರು ಪ್ರಕರಣದ ವಿಚಾರಣೆ ಬರಲೇಬಾರದು ಎಂದು ಪ್ರಯತ್ನಿಸುವ ವಿದ್ಯಮಾನಗಳು ಕೂಡ ಸಾಕಷ್ಟು ನಡೆದಿವೆ. ಉದಾಹರಣೆಗೆ, ನ್ಯಾಯಮೂರ್ತಿ­ಯೊಬ್ಬರ ಪುತ್ರ ಒಂದು ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಭಾವಿಸಿ. ಆತ ತನ್ನ ತಂದೆಯ ಎದುರು ಯಾವುದೇ ಸಂದರ್ಭದಲ್ಲೂ ವಾದ ಮಂಡಿಸದೆ ಇರಬಹುದು. ಆದರೆ, ಆತ ಕೆಲಸ ಮಾಡುವ ಕಾನೂನು ಸಂಸ್ಥೆ ಮೂಲಕವೇ ಅರ್ಜಿ ಹಾಕಿಸುವುದು, ನಂತರ ನ್ಯಾಯಮೂರ್ತಿ, ಈ ಅರ್ಜಿಯ ವಿಚಾರಣೆಯನ್ನು ತಾನು ನಡೆಸುವುದಿಲ್ಲ ಎಂದು ಹೇಳಬೇಕಾದ ಸಂದರ್ಭ ಸೃಷ್ಟಿಸುವುದು ಕೂಡ ನಡೆದಿದೆ. ಇಂಥ ಕೃತ್ಯಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ತಮಗೆ ಸರಿ ಎನಿಸದ ನ್ಯಾಯಮೂರ್ತಿಯನ್ನು ವಿಚಾರಣೆಯಿಂದ ದೂರವಿಡಲು ಇಂಥ ಉಪಾಯ ಹುಡುಕುತ್ತಾರೆ.

ನ್ಯಾಯ ನಿರಾಕರಣೆ ಅಲ್ಲ: ಗಂಭೀರ ಕಾರಣಗಳಿದ್ದಾಗ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿಯುವುದರಿಂದ ನ್ಯಾಯದಾನವನ್ನು ನಿರಾಕರಿಸಿದಂತೆ ಖಂಡಿತಾ ಆಗುವುದಿಲ್ಲ. ನಾನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಹಿರಿಯ ರಾಜಕೀಯ ಮುಖಂಡರೊಬ್ಬರು ನನ್ನ ಮನೆಗೆ ಬಂದರು. ‘ನೀವು ಬಹಳ ಪ್ರಾಮಾಣಿಕ ನ್ಯಾಯಮೂರ್ತಿ’ ಎಂದೆಲ್ಲ ನನ್ನನ್ನು ಹೊಗಳಿದರು. ನಂತರ, ನಿರ್ದಿಷ್ಟ ಪ್ರಕರಣವೊಂದನ್ನು ನೀವು ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು ಎಂದರು. ‘ಇಷ್ಟು ಹೇಳಲು ನೀವಿಲ್ಲಿಗೆ ಬಂದಿರಾ? ಇದು ಸರಿಯಲ್ಲ’ ಎಂದು ನಾನು ಅವರಿಗೆ ಹೇಳಿದೆ. ‘ನೀವೊಬ್ಬರೇ ಪ್ರಾಮಾಣಿಕರು ಎಂದು ಭಾವಿಸಿದ್ದೀರಾ...?’ ಎಂದು ಅವರು ನನಗೆ ಬೈದು ಹೋದರು.

ಮಾರನೆಯ ದಿನ ನ್ಯಾಯಾಲಯದಲ್ಲಿ ಆ ಪ್ರಕರಣದ ವಿಚಾರಣೆ ಇತ್ತು. ಆಗ ನಾನು, ಹಿಂದಿನ ದಿನ ನನ್ನ ಮನೆಯಲ್ಲಿ ನಡೆದ ಪ್ರಸಂಗವನ್ನು ವಿವರಿಸಿದೆ. ‘ಎಲ್ಲ ಕಡೆಯೂ ಇದೇ ರೀತಿ ಆಗುತ್ತಿದೆ. ಆ ಕಡೆಯವರು ಎಲ್ಲ ಕಡೆ ಇದೇ ರೀತಿ ಒತ್ತಡ ತರುತ್ತಿದ್ದಾರೆ’ ಎಂದು ಪ್ರತಿವಾದಿಗಳು ಹೇಳಿದರು. ನಂತರ ನಾನು ನನ್ನ ಸಹೋದ್ಯೋಗಿ ನ್ಯಾಯಮೂರ್ತಿಯವರ ಬಳಿ, ‘ನಾನು ಈ ಪ್ರಕರಣದ ವಿಚಾರಣೆ ಮುಂದುವರಿಸಬಹುದಾ?’ ಎಂದು ಕೇಳಿದೆ. ‘ಇಷ್ಟೆಲ್ಲ ನಡೆದಿರುವಾಗ ವಿಚಾರಣೆ ನಡೆಸುವುದು ಬೇಡ. ಬೇರೆ ಪೀಠದಲ್ಲಿ ಇದರ ವಿಚಾರಣೆ ನಡೆಯಲಿ’ ಎಂದು ಅವರು ಅಭಿಪ್ರಾಯಪಟ್ಟರು.

ಇದರ ವಿಚಾರಣೆಯನ್ನು ನಾನು ಮುಂದುವರಿಸಬಾರದು ಎಂದು ನನಗೂ ಅನಿಸಿತು. ನಾನು ವಿಚಾರಣೆಯಿಂದ ಹಿಂದೆ ಸರಿದೆ. ಇಂಥ ಸಂದರ್ಭಗಳು ಈ ವೃತ್ತಿಯಲ್ಲಿ ಆಗಾಗ ಎದುರಾಗುತ್ತಿರುತ್ತವೆ. ನ್ಯಾಯದಾನ ಪ್ರಕ್ರಿಯೆ ಸರಿಯಾಗಿರಲಿ ಎಂಬ ಉದ್ದೇಶದಿಂದ ವಿಚಾರಣೆಯಿಂದ ಹಿಂದೆ ಸರಿಯುವುದು ಸರಿಯಾದ ನಡೆ.

ಇಷ್ಟೇ ಅಲ್ಲ, ನ್ಯಾಯಮೂರ್ತಿ ಸ್ಥಾನದಲ್ಲಿರುವವರ ಘನತೆಯನ್ನು ಅರ್ಥ ಮಾಡಿಕೊಳ್ಳದೆ, ‘ನನಗೆ ಈ ನ್ಯಾಯಾಲಯದಲ್ಲಿ ವಿಶ್ವಾಸ ಇಲ್ಲ’ ಎಂಬ ಅರ್ಥ ಬರುವ ಮಾತುಗಳನ್ನು ವಾದಿ ಅಥವಾ ಪ್ರತಿವಾದಿ ಆಡಿದ ನಿದರ್ಶನವೂ ಇದೆ. ಇದು ನಿಜಕ್ಕೂ ದುರದೃಷ್ಟಕರ. ಇಂಥ ಪರಿಸ್ಥಿತಿ ಎದುರಾದರೆ ಯಾವುದೇ ನ್ಯಾಯಮೂರ್ತಿ ವಿಚಾರಣೆಯಿಂದ ಹಿಂದೆ ಸರಿಯುತ್ತಾರೆ.

(ಲೇಖಕರು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT