ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮಂಡಳಿ ತೀರ್ಪು ಖಂಡಿಸಿ ಪ್ರತಿಭಟನೆ

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಹೋರಾಟ
Last Updated 28 ಜುಲೈ 2016, 19:39 IST
ಅಕ್ಷರ ಗಾತ್ರ

ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೇರಿದ್ದ  ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು, ನ್ಯಾಯಮಂಡಳಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ‘ಹಲವು ದಶಕಗಳ ಹೋರಾಟಕ್ಕೆ ಯಾವುದೇ ಬೆಲೆ ಸಿಗುತ್ತಿಲ್ಲ. ಕುಡಿಯುವ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ನ್ಯಾಯಮಂಡಳಿ ಸಹ ಅದನ್ನು ಸರಿಪಡಿಸಲಿಲ್ಲ. ಹೀಗಾಗಿ ನ್ಯಾಯಮಂಡಳಿ ತೀರ್ಪು ವಿರುದ್ಧ ರಾಜ್ಯದಾದ್ಯಂತ ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದರು.

ಕನ್ನಡ ಹೋರಾಟ ಸಮಿತಿ: ಸಾಹಿತಿ ಚಂದ್ರಶೇಖರ ಪಾಟೀಲ ನೇತೃತ್ವದಲ್ಲಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಹೋರಾಟ ಸಮಿತಿ ಸದಸ್ಯರು, ನ್ಯಾಯಮಂಡಳಿ ತೀರ್ಪನ್ನು ಖಂಡಿಸಿದರು.

‘ತೀರ್ಪು ಪ್ರಶ್ನಿಸಿ ಕೂಡಲೇ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಜತೆಗೆ ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ: ಖಾಲಿ ಕೊಡ ಹೊತ್ತುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.

‘ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಲೇ  ನ್ಯಾಯಮಂಡಳಿಯಿಂದ ಈ ತೀರ್ಪು ಬಂದಿದೆ. ಇಂಥ ತೀರ್ಪಿನ ವಿರುದ್ಧ ರಾಜ್ಯದ ಎಲ್ಲ ಕನ್ನಡಿಗರು ಹೋರಾಟ ನಡೆಸಬೇಕು. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ನ್ಯಾಯಮಂಡಳಿಗೆ ಕಠಿಣ ಸಂದೇಶ ರವಾನಿಸಬೇಕು’ ಎಂದು ಪ್ರತಿಭಟನಾಕಾರರು ಹೇಳಿದರು.

‘ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಬೇಕು. ಜತೆಗೆ ಮಹಾದಾಯಿ ಯೋಜನೆಗಾಗಿ ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕನ್ನಡ ಸಂಘಗಳ ಒಕ್ಕೂಟ:ಕನ್ನಡ ಚಳವಳಿ ವಾಟಾಳ್‌ ಪಕ್ಷದ  ಅಧ್ಯಕ್ಷ ವಾಟಾಳ್‍ ನಾಗರಾಜ್‍ ನೇತೃತ್ವದಲ್ಲಿ ಕನ್ನಡ ಸಂಘಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೆಂಪೇಗೌಡ ನಿಲ್ದಾಣ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಲಾಯಿತು.

ವಾಟಾಳ್‌ ನಾಗರಾಜ್‌ ಮಾತನಾಡಿ, ‘ನ್ಯಾಯಮಂಡಳಿ ತೀರ್ಪು ಖಂಡನೀಯ. ಕುಡಿಯುವ ನೀರಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಜುಲೈ 30ರಂದು ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ’ ಎಂದು ಹೇಳಿದರು.

‘ರಾಜ್ಯದ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಎದುರು ಸಮರ್ಥವಾಗಿ ವಿವರಿಸುವಲ್ಲಿ   ಸಂಸದರು ವಿಫಲರಾಗಿದ್ದಾರೆ. 

ಕೆಲವೇ ದಿನಗಳಲ್ಲಿ ಸಂಸದರನ್ನು ಬೀದಿಯಲ್ಲಿ ಸಾಮೂಹಿವಾಗಿ ಹರಾಜು ಹಾಕಲಾಗುವುದು’ ಎಂದು ಖಾರವಾಗಿ ಹೇಳಿದರು.  ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕನ್ನಡ ಸೇನೆ ಪ್ರತಿಭಟನೆಗೆ ಸಾಥ್‌ ನೀಡಿತ್ತು.

ಮಾಲ್‌ಗಳು ಬಂದ್‌: ವಿವಿಧ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ನಗರದ ಒರಾಯನ್‌ ಸೇರಿದಂತೆ ವಿವಿಧ ಮಾಲ್‌ಗಳನ್ನು ಬಂದ್‌ ಮಾಡಲಾಗಿತ್ತು.

ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯ
ಮಹದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ನರೇಂದ್ರಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಕನ್ನಡ ಗೆಳೆಯರ ಬಳಗ ಒತ್ತಾಯಿಸಿದೆ.

ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಕನ್ನಡಿಗರಿಗೆ ಆಘಾತ ನೀಡಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಪಕ್ಷಾತೀತವಾಗಿ ಕರ್ನಾಟಕದ  ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಮನವಿ ಮಾಡಿದ್ದಾರೆ.

ಮಹಾದಾಯಿ ವಿವಾದ: ಪ್ರತಿಭಟನೆ
ಮಹಾದಾಯಿ ನ್ಯಾಯಮಂಡಳಿ ರಾಜ್ಯದ ಅರ್ಜಿಯನ್ನು ವಜಾ ಗೊಳಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು ಉತ್ತರ ತಾಲ್ಲೂಕು ಘಟಕ ಹಾಗೂ ರಾಷ್ಟ್ರೀಯ ಕಿಸಾನ್‌ ಸಂಘಟನೆ ಕಾರ್ಯಕರ್ತರು ರಾಜಾನುಕುಂಟೆಯಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

ರಸ್ತೆತಡೆ ನಡೆಸಿದ ಪರಿಣಾಮ, ಯಲಹಂಕ– ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ, ವಾಹನ ಸವಾರರು ತೊಂದರೆ ಅನುಭವಿಸಿದರು. ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾ ರದ ವಿರುದ್ಧ ಭೂತದಹನ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಬೆಂಗಳೂರು ಉತ್ತರ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ, ‘ ಕಾವೇರಿ, ನೇತ್ರಾವತಿ, ಮಹಾದಾಯಿ ಸೇರಿದಂತೆ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದವರಿಗೆ ನಮ್ಮ ರಾಜಕಾರಣಿಗಳು ಸೋಲುತ್ತಲೇ ಬಂದಿದ್ದಾರೆ. ಇದರಿಂದ  ನಿರಂತರವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT