ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ತ್ವರಿತ ಕ್ರಮ ಅಗತ್ಯ

Last Updated 8 ಜುಲೈ 2016, 19:30 IST
ಅಕ್ಷರ ಗಾತ್ರ

ನ್ಯಾಯಮೂರ್ತಿಗಳ ಕೊರತೆ, ತ್ವರಿತವಾಗಿ ನ್ಯಾಯದಾನ ನೀಡಬೇಕು ಎನ್ನುವ ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾದುದು.

ನಮ್ಮ ದೇಶದ ವಿರೋಧಾಭಾಸ ನೋಡಿ. ಒಂದು ಕಡೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹನುಮಂತನ ಬಾಲದಂತೆ ದಿನೇ ದಿನೇ ಬೆಳೆಯುತ್ತಲೇ ಇದೆ. ಇನ್ನೊಂದು ಕಡೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.

ನ್ಯಾಯಮೂರ್ತಿಗಳೇ ಇಲ್ಲದಿದ್ದರೆ ಪ್ರಕರಣಗಳ ವಿಚಾರಣೆ ನಡೆಸುವವರು ಯಾರು, ತೀರ್ಪು ಕೊಡುವವರು ಯಾರು?  ದೇಶದ 24 ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ 470 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. 

ಈ ಪೈಕಿ ಕಳೆದ 6 ತಿಂಗಳಲ್ಲಿ ಖಾಲಿಯಾದ ಹುದ್ದೆಗಳ ಸಂಖ್ಯೆಯೇ 51.  ದೇಶದಲ್ಲಿಯೇ ಅತಿ ಹೆಚ್ಚು ಅಂದರೆ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇರುವ ಉತ್ತರಪ್ರದೇಶದ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ 82 ಹುದ್ದೆಗಳು ಈಗಲೂ ಖಾಲಿ ಇವೆ.

ನಮ್ಮ ರಾಜ್ಯದ ಹೈಕೋರ್ಟ್‌ನ ಸ್ಥಿತಿಯನ್ನೇ ನೋಡುವುದಾದರೆ ನ್ಯಾಯಮೂರ್ತಿಗಳ 35 ಹುದ್ದೆಗಳು ಖಾಲಿ ಬಿದ್ದಿವೆ. ಮುಖ್ಯ ನ್ಯಾಯಮೂರ್ತಿ ಸೇರಿ ಬರೀ 27 ನ್ಯಾಯಮೂರ್ತಿಗಳಿದ್ದಾರೆ. ಅಂದರೆ ಅರ್ಧಕ್ಕೂ ಹೆಚ್ಚು ಸ್ಥಾನಗಳನ್ನು ತುಂಬಿಯೇ ಇಲ್ಲ. ಜಿಲ್ಲಾ ಮತ್ತು ಅದಕ್ಕೂ ಕೆಳ ಹಂತದ ನ್ಯಾಯಾಲಯಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗೇನಿಲ್ಲ. ಅವೂ ನ್ಯಾಯಾಧೀಶರ ಕೊರತೆಯ ಜತೆಗೆ ಮೂಲಸೌಕರ್ಯದ ಕೊರತೆಯನ್ನೂ ಎದುರಿಸುತ್ತಿವೆ.

ಸಕಾಲಕ್ಕೆ ನ್ಯಾಯ ಸಿಗದೇ ಇದ್ದರೆ ಇಷ್ಟೆಲ್ಲ ದೊಡ್ಡ ದೊಡ್ಡ ವ್ಯವಸ್ಥೆ, ಸಾವಿರಗಟ್ಟಲೆ ಕಾನೂನುಗಳಿದ್ದು ಪ್ರಯೋಜನವೇನು? ಹಾಗೆ ನೋಡಿದರೆ ಇದು ಪ್ರಜೆಗಳ  ಹಕ್ಕಿನ ಮೇಲೆ ಪ್ರಹಾರ. ಜನರಿಗೆ ತ್ವರಿತವಾಗಿ ನ್ಯಾಯದಾನ ನೀಡಬೇಕು ಎನ್ನುವ ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧ.

ಅಖಿಲ ಭಾರತ ನ್ಯಾಯಾಧೀಶರ ಸಂಘಟನೆಯ ಲೆಕ್ಕಾಚಾರಗಳ ಪ್ರಕಾರ ನಮ್ಮ ದೇಶದಲ್ಲಿ 10 ಲಕ್ಷ ಜನಕ್ಕೆ 17.72 ನ್ಯಾಯಾಧೀಶರಿದ್ದಾರೆ. ತ್ವರಿತ ನ್ಯಾಯದಾನದ ಕನಸು ಈಡೇರಬೇಕಾದರೆ 10 ಲಕ್ಷ ಜನಕ್ಕೆ ಕನಿಷ್ಠ 50 ನ್ಯಾಯಾಧೀಶರಾದರೂ ಬೇಕು ಎಂದು ಕಾನೂನು ಆಯೋಗವೇ ಈ ಹಿಂದೆ ಹೇಳಿತ್ತು.

ಹೈಕೋರ್ಟ್‌ಗಳಲ್ಲಿ 42 ಲಕ್ಷಕ್ಕೂ ಹೆಚ್ಚು ಸಿವಿಲ್‌ ಪ್ರಕರಣಗಳು, 10 ಲಕ್ಷಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳಲ್ಲಿ ಸುಮಾರು 7.78 ಲಕ್ಷ ಪ್ರಕರಣಗಳು 10 ವರ್ಷಗಳಿಗಿಂತ ಹಳೆಯವು. ಇವುಗಳ ಇತ್ಯರ್ಥಕ್ಕೆ ಏನಾದರೂ ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಕಕ್ಷಿದಾರರು, ಜನಸಾಮಾನ್ಯರು ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ.

ಅದರ ಲಕ್ಷಣಗಳನ್ನು ಈಗಾಗಲೆ ನಾವು ಸಮಾಜದಲ್ಲಿ ಕಾಣುತ್ತಿದ್ದೇವೆ. ಬಲಿಷ್ಠರು, ಹಣಬಲ, ತೋಳ್ಬಲ, ಅಧಿಕಾರದ ಬಲ ಇರುವವರು ಕೋರ್ಟ್ ತೀರ್ಪು ಬರುವವರೆಗೂ ಕಾಯದೇ ತಾವೇ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇವೆ. ಪರಿಸ್ಥಿತಿ ಇಷ್ಟೆಲ್ಲ ಗಂಭೀರವಾಗಿರಬೇಕಾದರೆ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾದ ಹುದ್ದೆಗಳನ್ನೇ ತುಂಬದೇ ಇರುವುದು ಸಮರ್ಥನೀಯವಲ್ಲ.

ಕಳೆದ ಏಪ್ರಿಲ್‌ 24ರಂದು ನಡೆದ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಪ್ರಧಾನಿ ಸಮ್ಮುಖದಲ್ಲಿಯೇ ಕಣ್ಣೀರಿಟ್ಟಿದ್ದರು.

ಈಗಿರುವ 21 ಸಾವಿರ ನ್ಯಾಯಾಧೀಶರ ಹುದ್ದೆಗಳನ್ನು 40 ಸಾವಿರಕ್ಕೆ ಏರಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ನೋವು ಅವರ ಕಣ್ಣೀರಿನ ರೂಪದಲ್ಲಿ ಹೊರ ಬಂದಿತ್ತು.

ವ್ಯಾಜ್ಯಗಳ ವಿಲೇವಾರಿಯಲ್ಲಿನ ಅಸಹನೀಯ ವಿಳಂಬದ ಹೊಣೆಯನ್ನು ನ್ಯಾಯಾಂಗದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹೇಳಿದ್ದರು. ಹಾಗೆಂದು ನ್ಯಾಯಾಂಗ ತನ್ನ ಮೇಲಿನ ಜವಾಬ್ದಾರಿಯಿಂದ ಪೂರ್ಣವಾಗಿ ನುಣುಚಿಕೊಳ್ಳುವುದು ಸಾಧ್ಯವಿಲ್ಲ.

ನ್ಯಾಯದಾನದ ಮೂಲಭೂತ ಕರ್ತವ್ಯಕ್ಕಿಂತ ಹೆಚ್ಚಾಗಿ ಅದು ಕಾರ್ಯಾಂಗ ಮತ್ತು ಶಾಸಕಾಂಗಗಳ ವ್ಯಾಪ್ತಿಯಲ್ಲಿ ಹೆಚ್ಚೆಚ್ಚು ಮಧ್ಯಪ್ರವೇಶಿಸುತ್ತಿದೆ ಎಂಬ ಅಸಮಾಧಾನ  ಇದೆ. ಸಾಲದ್ದಕ್ಕೆ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಮಾರ್ಗಸೂಚಿ ಬಗ್ಗೆ ಕೇಂದ್ರ ಸರ್ಕಾರ ಮತ್ತು ಕೋರ್ಟ್ ನಡುವೆ ಭಿನ್ನಾಭಿಪ್ರಾಯ ಇನ್ನಷ್ಟು ವಿಸ್ತಾರವಾಗಿದೆ.

ಸಂಸತ್ತು ಅಂಗೀಕರಿಸಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾನೂನನ್ನು ಸುಪ್ರೀಂ ಕೋರ್ಟ್ ಪೀಠ ರದ್ದುಪಡಿಸಿದೆ. ಎರಡು ದಶಕಗಳಷ್ಟು ಹಿಂದೆ ತಾನೇ ನ್ಯಾಯಾಂಗೀಯ ತೀರ್ಪೊಂದರ ಮೂಲಕ  ಜಾರಿಗೆ ತಂದಿದ್ದ ಕೊಲಿಜಿಯಂ ವ್ಯವಸ್ಥೆಯೇ ಇರಬೇಕು ಎಂಬ ನಿಲುವು ತಳೆದಿದೆ.

ಇದು ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ತಿಕ್ಕಾಟಕ್ಕೆ ಮುಖ್ಯ ಕಾರಣ. ಈ  ವಿಚಾರದಲ್ಲಿ ಭಿನ್ನಾಭಿಪ್ರಾಯ ನಿವಾರಣೆ ಆಗದೇ ನೇಮಕಾತಿ ನಡೆಯುವ ಲಕ್ಷಣಗಳಿಲ್ಲ. ಆದ್ದರಿಂದ ಇಲ್ಲಿ ಕೋರ್ಟ್ ಮತ್ತು ಸರ್ಕಾರ ಎರಡರ ಹೊಣೆಯೂ ಇದೆ.

ಅಲ್ಲದೆ ಈಗಿನ ಸಂದರ್ಭದಲ್ಲಿ ಇನ್ನಷ್ಟು ನ್ಯಾಯಮೂರ್ತಿಗಳ ನೇಮಕ ತಾತ್ಕಾಲಿಕ ಪರಿಹಾರ ಮಾತ್ರ. ನ್ಯಾಯದಾನ ವ್ಯವಸ್ಥೆಯ ಸಮಗ್ರ ಸುಧಾರಣೆ, ಮೂಲ ಸೌಕರ್ಯ ಹೆಚ್ಚಿಸುವುದು, ಲೋಕ್‌ ಅದಾಲತ್‌ಗಳು ಮತ್ತು ರಾಜಿ ಪಂಚಾಯ್ತಿಗಳ ಸಹಾಯದಿಂದ ವ್ಯಾಜ್ಯಗಳ ಸಂಖ್ಯೆ ಕಡಿಮೆ ಮಾಡುವತ್ತಲೂ ಗಮನ ಹರಿಸಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT