ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ವಿಶ್ವಾಸಾರ್ಹತೆ ಪ್ರಶ್ನಾರ್ಹ

ಯಾಕೂಬ್ ಮೆಮನ್‌ ಗಲ್ಲಿಗೆ ಆತುರ: ದಿಗ್ವಿಜಯ್ ಸಿಂಗ್ ಟೀಕೆ
Last Updated 30 ಜುಲೈ 2015, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಯಾಕೂಬ್‌ ಮೆಮನ್‌ನನ್ನು ಗಲ್ಲಿಗೇ ರಿಸಲು ತೋರಿದ ಆತುರವನ್ನು ಗಮನಿ ಸಿದರೆ ಸರ್ಕಾರ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು  ಪ್ರಶ್ನಿಸ ಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಮನ್‌ನನ್ನು ಗಲ್ಲಿಗೇರಿಸಿದ ಸುದ್ದಿ ಕೇಳಿ ದುಃಖವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಬ್ಬರು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಭಾರತದ ಜನರಿಗೆ ಮಾಡಿದ ಅವಮಾನ ಮತ್ತು ದುರದೃಷ್ಟದ ಹೇಳಿಕೆ ಎಂದು ಟೀಕಿಸಿದೆ.

ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಸುದ್ದಿ ಹೊರಬಿದ್ದ ನಂತರ ಸರಣಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ ಹೀಗೆ ಹೇಳಿದ್ದಾರೆ. ಧರ್ಮವನ್ನು ಪರಿಗಣಿಸದೆ ಎಲ್ಲಾ ಭಯೋತ್ಪಾದನಾ ಕೃತ್ಯಗಳಲ್ಲೂ ಯಾಕೂಬ್ ವಿಚಾರದಲ್ಲಿ ತೋರಿದ ಆತುರ ಮತ್ತು ಬದ್ಧತೆಯನ್ನು ಸರ್ಕಾರ ಮತ್ತು ನ್ಯಾಯಾಂಗ ಪ್ರದರ್ಶಿಸಬೇಕು ಎಂದು ಹೇಳಿದ್ದಾರೆ.

ಬಲಪಂಥೀಯ ಹಿಂದೂಗಳು ಭಾಗಿಯಾಗಿದ್ದಾರೆ ಎನ್ನಲಾದ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದನ್ನು ಸೂಚಿಸಿ ದಿಗ್ವಿಜಯ್ ಈ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಮರಣ ದಂಡನೆಯಿಂದ ಭಯೋತ್ಪಾದನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
*
‘ಜನರಿಗೆ ಮಾಡಿದ ಅವಮಾನ’
ದಿಗ್ವಿಜಯ್‌ ಸಿಂಗ್ ಮತ್ತುಶಶಿ ತರೂರ್ ಟ್ವೀಟ್‌ಗಳಿಗೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿರುವ  ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್, ಈ ಹೇಳಿಕೆಗಳು ವಿಷಾದನೀಯ ಮತ್ತು ದುರದೃಷ್ಟಕರ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಅರುಣ್ ಜೇಟ್ಲಿ, ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇವರಿಬ್ಬರ ಹೇಳಿಕೆಗಳ ಬಗ್ಗೆ ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.ಸಚಿವ ರಾಜೀವ್ ಪ್ರತಾಪ್ ರೂಡಿ, ತರೂರ್ ಅವರ ಟ್ವೀಟ್‌ ಅನ್ನು ‘ವಿಕೃತಿ’ ಎಂದು ಕರೆದಿದ್ದಾರೆ.

ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ, ‘ಕಾಂಗ್ರೆಸ್ ಯಾವಾಗಲೂ ಭಯೋತ್ಪಾದಕರ ಪರ ಮಾತನಾಡುತ್ತದೆ. ಇದು ಭಯೋತ್ಪಾದನೆಯ
ನಿರ್ಮೂ ಲನೆಯನ್ನು ಬಯಸುವ ಶಾಂತಿಪ್ರಿಯ ಜನರಿಗೆ ಮಾಡಿದ ಅವಮಾನ ಎಂಬುದು ಸ್ಪಷ್ಟ’ ಎಂದು ಟೀಕಿಸಿದ್ದಾರೆ.
*
ಎಲ್ಲಾ ಭಯೋತ್ಪಾದನಾ ಕೃತ್ಯಗಳ ಆರೋಪಿಗಳ ವಿಚಾರದಲ್ಲೂ ಇಂಥಹದ್ದೇ ಆತುರ ಮತ್ತು ಬದ್ಧತೆಯನ್ನು ಸರ್ಕಾರ ಮತ್ತು ನ್ಯಾಯಾಂಗಗಳು ಪ್ರದರ್ಶಿಸಬೇಕು
-ದಿಗ್ವಿಜಯ್ ಸಿಂಗ್
*

ಮಾನವನೊಬ್ಬನನ್ನು ಸರ್ಕಾರ ಗಲ್ಲಿಗೆ ಹಾಕಿದ ಸುದ್ದಿ ಕೇಳಿ ದುಃಖವಾಯಿತು. ಸರ್ಕಾರಿ ಪ್ರಾಯೋಜಿತ ಹತ್ಯೆ ನಮ್ಮೆಲ್ಲ ರನ್ನೂ ಕೊಲೆಗಡುಕರ ಮಟ್ಟಕ್ಕೆ ಇಳಿಸುತ್ತದೆ
-ಶಶಿ ತರೂರ್
*
ಬುಧವಾರ ನಡೆದ ಬೆಳವಣಿಗೆ
* ಬೆಳಿಗ್ಗೆ 11 ಗಂಟೆ: 
ರಾಷ್ಟ್ರಪತಿಗೆ 14 ಪುಟಗಳ ಕ್ಷಮಾದಾನ ಅರ್ಜಿ ಸಲ್ಲಿಕೆ
* ಸಂಜೆ 4 ಗಂಟೆ: ಅಗತ್ಯ ಕ್ರಮಕ್ಕಾಗಿ ಗೃಹ ಸಚಿವಾಲಯಕ್ಕೆ ಅರ್ಜಿ ರವಾನೆ ಮಾಡಿದ ರಾಷ್ಟ್ರಪತಿ
* ರಾತ್ರಿ 8.30:  ರಾಷ್ಟ್ರಪತಿ ಭವನಕ್ಕೆ ಧಾವಿಸಿದ ಗೃಹ ಸಚಿವ ರಾಜನಾಥ್‌ ಸಿಂಗ್‌. ಕ್ಷಮಾದಾನ ಅರ್ಜಿ  ತಿರಸ್ಕರಿಸುವಂತೆ ಶಿಫಾರಸು
* ರಾತ್ರಿ 9.15: ರಾಷ್ಟ್ರಪತಿ ಭವನಕ್ಕೆ   ಬಂದ ಕೇಂದ್ರ ಗೃಹ ಕಾರ್ಯದರ್ಶಿ ಎಲ್‌.ಸಿ.ಗೋಯಲ್‌್ ಹಾಗೂ ಸಾಲಿಸಿಟರ್‌ ಜನರಲ್‌ ರಂಜಿತ್‌ ಕುಮಾರ್‌
* ರಾತ್ರಿ 10.45: ಯಾಕೂಬ್‌ ಕ್ಷಮಾ ದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ. ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡುವಂತೆ ಕೋರಿ ಮತ್ತೊಂದು ಅರ್ಜಿ ಸಮೇತ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ನಿವಾ ಸಕ್ಕೆ ಬಂದ ವಕೀಲರಾದ  ಪ್ರಶಾಂತ್‌್ ಭೂಷಣ್‌ ಹಾಗೂ ಆನಂದ್‌ ಗ್ರೋವರ್‌
* ರಾತ್ರಿ 11.30: ದತ್ತು ನಿವಾಸಕ್ಕೆ ಬಂದ ಇತರ ನ್ಯಾಯಮೂರ್ತಿಗಳು
* ರಾತ್ರಿ 1.00: ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿವಾಸದಲ್ಲಿ ಸಮಾಲೋಚನೆ
* ರಾತ್ರಿ 1.30: ಮಿಶ್ರಾ ಮನೆಗೆ ಬಂದ ವಕೀಲರು
* ರಾತ್ರಿ 1.35: ಗುರುವಾರ (ಜುಲೈ  30) ನಸುಕಿನ 2.30ರ ಸಮಯದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಭೆ ಸೇರಲು ಒಪ್ಪಿದ  ನ್ಯಾ.ಮಿಶ್ರಾ, ಪ್ರಫುಲ್ಲ ಚಂದ್ರ ಪಂತ್‌ ಹಾಗೂ ಅಮಿತವ ರಾಯ್‌

ಗುರುವಾರ ಬೆಳಗಿನ ಜಾವದ ಬೆಳವಣಿಗೆ
* 2.10: ನಾಗಪುರ ಹೋಟೆಲ್‌ನಲ್ಲಿದ್ದ ಮೆಮನ್‌ ಸಹೋದರನಿಗೆ  ಪತ್ರ ಕೊಟ್ಟು ಬಂದ ಜೈಲು ಕಾನ್‌ಸ್ಟೆಬಲ್‌
* 2.30: ಸುಪ್ರೀಂಕೋರ್ಟ್‌ಗೆ ಬಂದ ಮೂವರು ನ್ಯಾಯಮೂರ್ತಿಗಳು. ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಬರುವುದು ತಡವಾಗಿದ್ದರಿಂದ ಕಲಾಪ ಮುಂದೂಡಿಕೆ
* 3.20: ಅರ್ಜಿ ವಿಚಾರಣೆ ಆರಂಭ
* 4.50: ಅರ್ಜಿ ತಿರಸ್ಕರಿಸಿದ ಕೋರ್ಟ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT