ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ನಲ್ಲಿ ಜಯದ ಕನಸು ಕಾಣುತ್ತ...

Last Updated 27 ಸೆಪ್ಟೆಂಬರ್ 2015, 19:42 IST
ಅಕ್ಷರ ಗಾತ್ರ

ಮುಂಬರಲಿರುವ ವಿಶ್ವ ಹಾಕಿ ಲೀಗ್ ಫೈನಲ್‌ ಮತ್ತು ರಿಯೊ ಒಲಿಂಪಿಕ್ಸ್‌ಗೆ ಪೂರ್ವ ತಯಾರಿಯಾಗಿ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ಸರಣಿಯನ್ನು ಪರಿಗಣಿಸಿದೆ. ಆತಿಥೇಯ ನ್ಯೂಜಿಲೆಂಡ್‌ಗೆ ಕೂಡ ಒಸಿನಿಯಾ ಕಪ್ ಟೂರ್ನಿಯ ಪೂರ್ವಭಾವಿ ಸಿದ್ಧತೆಯಾಗಿ ಈ ಟೂರ್ನಿ ಮಹತ್ವ ಪಡೆದು ಕೊಂಡಿದೆ. ಈ ಬಗ್ಗೆ  ಗಿರೀಶ ದೊಡ್ಡಮನಿ ಬರೆದಿದ್ದಾರೆ.

ವಿಶ್ವ ಹಾಕಿ ಕ್ರೀಡೆಯಲ್ಲಿ ‘ಬ್ಲ್ಯಾಕ್‌ ಸ್ಟಿಕ್ಸ್ ..’ ಎಂದೇ ಪ್ರಸಿದ್ಧಿಯಾಗಿರುವ ತಂಡ ನ್ಯೂಜಿಲೆಂಡ್. 1976ರಲ್ಲಿ ಮಾಂಟ್ರಿಯಲ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ತಂಡ ಇದು.  ಆ ಮೂಲಕ ಒಲಿಂಪಿಕ್ಸ್‌ನಲ್ಲಿ ಇದ್ದ ಏಷ್ಯಾ ಮತ್ತು ಯುರೋಪ್ ದೇಶಗಳ ಪಾರಮ್ಯವನ್ನು ಕಿವಿಸ್ ತಂಡವು ಮುರಿದು ಹಾಕಿತ್ತು. ತನ್ನ ನೆರೆಯ ದೇಶ ಆಸ್ಟ್ರೇಲಿಯಾ ತಂಡವನ್ನು ಫೈನಲ್‌ನಲ್ಲಿ ಸೋಲಿಸಿತ್ತು.

ನ್ಯೂಜಿಲೆಂಡ್ ತಂಡವು   ತದನಂತರ ಯಾವ ಒಲಿಂಪಿಕ್ಸ್‌ನಲ್ಲಿಯೂ ಪದಕ ಗೆದ್ದಿಲ್ಲ. ಆದರೆ, ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಅಚ್ಚರಿಯ ಫಲಿತಾಂಶ ನೀಡಿದೆ. ಯುರೋಪ್, ಏಷ್ಯಾ ದೇಶಗಳಿಗಿಂಲೂ ಭಿನ್ನವಾದ ಶೈಲಿ ಮತ್ತು ಸಾಮರ್ಥ್ಯಗಳನ್ನು ರೂಢಿಸಿಕೊಂಡಿದೆ. ಇದೀಗ ಈ ತಂಡವನ್ನು ಅದರ ತವರಿನಲ್ಲಿಯೇ ಎದುರಿಸಲು ಭಾರತ ತಂಡ ತೆರಳಲಿದೆ.

ಭಾರತ ತಂಡ ಆರು ವರ್ಷಗಳ ನಂತರ ನ್ಯೂಜಿಲೆಂಡ್ ಪ್ರವಾಸ ಮಾಡಲಿದೆ.  ಸರ್ದಾರ್ ಸಿಂಗ್ ನಾಯಕತ್ವದ ತಂಡವು ಆಕ್ಲಂಡ್‌, ನೆಲ್ಸನ್‌, ಕ್ರೈಸ್ಟ್‌ಚರ್ಚ್‌ಗಳಲ್ಲಿ ಅಕ್ಟೋಬರ್‌ 2ರಿಂದ 11ರವರೆಗೆ ಒಟ್ಟು ಆರು ಪಂದ್ಯಗಳನ್ನು ಪಂದ್ಯಗಳನ್ನು ಆಡಲಿದೆ.  2009ರಲ್ಲಿ ಭಾರತವು ಕೊನೆಯ ಬಾರಿಗೆ ನ್ಯೂಜಿ ಲೆಂಡ್ ಪ್ರವಾಸ ಕೈಕೊಂಡಿತ್ತು. ಆಗ ನಾಲ್ಕು ಪಂದ್ಯ ಗಳ ಸರಣಿಯಲ್ಲಿ 2–0ಯಿಂದ ಗೆಲುವು ಸಾಧಿಸಿತ್ತು.  ಆದರೆ, 2012ರ ಒಲಿಂಪಿಕ್ಸ್‌ನಲ್ಲಿ ಕಿವೀಸ್  ಎದುರು ಭಾರತ ತಂಡವು ಸೋತಿತ್ತು. ಅದೇ ವರ್ಷ ಅಜ್ಲಾನ್ ಶಾ ಕಪ್  ಟೂರ್ನಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದರೆ, ನ್ಯೂಜಿಲೆಂಡ್ ಪ್ರಶಸ್ತಿ ಗೆದ್ದಿತ್ತು.

ಈ ವರ್ಷದ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿರುವ ಭಾರತಕ್ಕೆ ಇದು ಅಭ್ಯಾಸದ ದೃಷ್ಟಿಯಿಂದ ಮಹತ್ವದ ಟೂರ್ನಿ. ಜುಲೈ ತಿಂಗಳಲ್ಲಿ ವಿಶ್ವ ಹಾಕಿ ಸೆಮಿಫೈನಲ್ಸ್ ಟೂರ್ನಿಯಲ್ಲಿ ಎಂಟರ ಘಟ್ಟದಲ್ಲಿ ಭಾರತ ಗೆದ್ದಿತ್ತು. ಅಲ್ಲದೇ ಯುರೋಪ್ ಸರಣಿಯಲ್ಲಿ ಬಲಾಢ್ಯ ಫ್ರಾನ್ಸ್‌ ಮತ್ತು ಸ್ಪೇನ್ ತಂಡಗಳ ವಿರುದ್ಧವೂ ಮೆರೆದಿತ್ತು.

ಇದೇ ವರ್ಷದ ಕೊನೆಯಲ್ಲಿ ರಾಯಪುರದಲ್ಲಿ ನಡೆಯಲಿರುವ ವಿಶ್ವ ಹಾಕಿ ಲೀಗ್ ಫೈನಲ್‌ನಲ್ಲಿ ಸರ್ದಾರ್ ಸಿಂಗ್ ಬಳಗ ಆಡಲಿದೆ. ಈ ಟೂರ್ನಿಗೆ ಪೂರ್ವಭಾವಿ ಅಭ್ಯಾಸಕ್ಕಾಗಿ  ನ್ಯೂಜಿಲೆಂಡ್ ಪ್ರವಾಸವು ಭಾರತಕ್ಕೆ ಮಹತ್ವದ್ದಾಗಿದೆ. ಅಲ್ಲದೇ ಇಂಚೆನ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.  ಹೊರದೇಶದ ವಾತಾವರಣ ಮತ್ತು ಅಲ್ಲಿಯ ಆಟಗಾರರ ಕೌಶಲಗಳನ್ನು ಅರಿಯಲು ಕೂಡ ಈ ಸರಣಿ ಮುಖ್ಯವಾಗಿದೆ. 

ಆದರೆ, ಆತಿಥೇಯ ತಂಡಕ್ಕೆ ಈ ಸರಣಿಯು ಭಾರತಕ್ಕಿಂತಲೂ ಮಹತ್ವದ್ದು. ಈ ಸರಣಿಯ ನಂತರ ನ್ಯೂಜಿಲೆಂಡ್ ಒಸಿನಿಯಾ ಟೂರ್ನಿಯಲ್ಲಿ ಆಡಲಿದೆ. ಅಲ್ಲಿ ಗೆದ್ದರೆ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲಿದೆ. ಆದ್ದರಿಂದ ಭಾರತದ ಎದುರಿನ ಸರಣಿಯನ್ನು ಆತಿಥೇಯರು ಗಂಭೀರವಾಗಿ ಪರಿಗಣಿಸಿದ್ದಾರೆ.

ಕಳೆದ ಜೂನ್‌ನಲ್ಲಿ  ನ್ಯೂಜಿಲೆಂಡ್‌ ತಂಡ ಅರ್ಜೆಂಟೀನಾದಲ್ಲಿ ನಡೆದ ಎಫ್‌ಐಎಚ್ ಹಾಕಿ ವಿಶ್ವ ಲೀಗ್‌ ಸೆಮಿಫೈನಲ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಕೆನಡಾ ವಿರುದ್ಧ ಪರಾಭವಗೊಂಡಿತ್ತು.  5ನೇ ಸ್ಥಾನಕ್ಕಾಗಿ ನಡೆದ ಪ್ಲೇ ಆಫ್‌ ಪಂದ್ಯದಲ್ಲಿಯೂ ಸ್ಪೇನ್‌ ಎದುರು ಸೋತು, ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಕೈಚೆಲ್ಲಿತ್ತು. 

ಇದೀಗ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದರ ಜತೆಗೆ, ಒಸಿನಿಯಾ ಕಪ್ ಟೂರ್ನಿಯ ಪೂರ್ವಭಾವಿ ಅಭ್ಯಾಸಕ್ಕಾಗಿ ಈ ಟೂರ್ನಿಯನ್ನು ಡೀನ್ ಕೌಜಿನ್ಸ್‌ ಬಳಗವು ಗಂಭೀರವಾಗಿ ಪರಿಗಣಿಸಿದೆ. ನ್ಯೂಜಿಲೆಂಡ್ ಆತಿಥ್ಯ ವಹಿಸುತ್ತಿರುವ ಒಸಿನಿಯಾ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಸಮೋವಾ, ಪಪುವಾ ನ್ಯೂ ಗಿನಿ, ಫಿಜಿ  ತಂಡಗಳು ಸ್ಪರ್ಧಿಸಲಿವೆ.

ಕಿವೀಸ್ ತಂಡವು 1999 ರಿಂದ ಇಲ್ಲಿಯವರೆಗೆ ಸತತವಾಗಿ ಬೆಳ್ಳಿ ಪದಕ ಪಡೆಯುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿಯಲ್ಲಿ ಆಸ್ಟ್ರೇಲಿಯಾ  ಸತತ ಚಾಂಪಿಯನ್ ಆಗಿದೆ. ಚುರುಕು ಪಾಸಿಂಗ್ ಮತ್ತು ಟ್ರ್ಯಾಪಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡವು ಎತ್ತಿದ ಕೈ. ಟರ್ಫ್‌ ಮೇಲೆ ವೇಗವಾಗಿ ಓಡುವ ಅವರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸರ್ದಾರ್ ಬಳಗವು ಒನ್‌  ಟು ಒನ್ ತಂತ್ರವನ್ನು ಅನುಷ್ಠಾನ ಗೊಳಿಸುವುದು ಸವಾಲಿನ ಕೆಲಸವಾಗಲಿದೆ. ಮುಖ್ಯ ವಾಗಿ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ನ್ಯೂಜಿಲೆಂಡ್‌ಗೆ ಇರುವ ದೌರ್ಬಲ್ಯವನ್ನು ಸರ್ದಾರ್ ಬಳಗವು ಉಪಯೋಗಿಸಿ ಕೊಂಡರೆ ಉತ್ತಮ ಫಲಿತಾಂಶಕ್ಕೆ ದಾರಿ ಯಾಗಬಹುದು.

ಕರ್ನಾಟಕದ ನಾಲ್ವರು..
ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಇದ್ದಾರೆ. ಡ್ರ್ಯಾಗ್ ಫ್ಲಿಕ್ ಪರಿಣತ ವಿ.ಆರ್. ರಘುನಾಥ್, ಎಸ್‌.ವಿ. ಸುನಿಲ್, ನಿಕಿನ್ ತಿಮ್ಮಯ್ಯ ಮತ್ತು ಎಸ್‌.ಕೆ. ಉತ್ತಪ್ಪ ಆಡಲಿದ್ದಾರೆ.

ಒಲ್ಟ್‌ಮಸ್ ಟೆಸ್ಟ್‌!
ಕಳೆದ ಜುಲೈನಲ್ಲಿ ಹಾಕಿ ಇಂಡಿಯಾ ಮತ್ತು ಕೋಚ್ ಪಾಲ್ ವಾನ್ ಆಸ್ ನಡುವಿನ ವಿವಾದ ತಾರಕಕ್ಕೇರಿತ್ತು. ಅದು ವಾನ್ ಅವರನ್ನು ಅಮಾನತುಗೊಳಿಸುವುದರೊಂದಿಗೆ ಅಂತ್ಯ ಕಂಡಿತ್ತು. ಕಡಿಮೆ ಅವಧಿಯಲ್ಲಿಯೇ ತಂಡವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸುವಲ್ಲಿ ವಾನ್ ಪಾತ್ರ ಪ್ರಮುಖವಾಗಿತ್ತು. ಆದರೆ, ಹಾಕಿ ಇಂಡಿಯಾ ಮುಖ್ಯಸ್ಥ ನರೀಂದರ್ ಬಾತ್ರಾ  ಮತ್ತು ಪಾಲ್ ನಡುವಿನ ಭಿನ್ನಾ ಭಿಪ್ರಾಯದಿಂದ ವಿವಾದ ತಲೆದೋರಿತ್ತು. ಆಗ ತಂಡದ ಪರ್‌ಫಾರ್ಮೆನ್ಸ್‌ ಡೈರೆಕ್ಟರ್ ರೋನಾಲ್ಟ್ ಒಲ್ಟಮಸ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿತ್ತು.  ಈಗ ಉಭಯ ದೇಶಗಳ ಸರಣಿಯು ಅವರಿಗೂ ಪರೀಕ್ಷೆಯಾಗಲಿದೆ. 

ಭಾರತ ತಂಡ 36 ವರ್ಷಗಳ ನಂತರ  ಒಲಿಂಪಿಕ್ಸ್‌ನಲ್ಲಿ ಪದಕ ಗೆಲುವಿನ ಕನಸು ಕಾಣುತ್ತಿದೆ. ರಿಯೊ ಒಲಿಂಪಿಕ್ಸ್‌ಗೂ ಮುನ್ನ ಲಭಿಸುವ ಪ್ರತಿಯೊಂದು ಟೂರ್ನಿಯ ಜಯವೂ ಆ ಕನಸಿನ ಹಕ್ಕಿಯ ರೆಕ್ಕೆಗಳಿಗೆ ಹೆಚ್ಚಿನ ಬಲ ತುಂಬಲಿವೆ. ಆದ್ದರಿಂದ ‘ಬ್ಲ್ಯಾಕ್ ಸ್ಟಿಕ್ ಮೆನ್’ ಎದುರಿನ ಸರಣಿಯೂ ಮಹತ್ವ ಪಡೆದುಕೊಂಡಿದೆ. 

ಬ್ಲ್ಯಾಕ್ ಸ್ಟಿಕ್ಸ್‌...
ನ್ಯೂಜಿಲೆಂಡ್ ತಂಡದ ಪುರುಷ ಮತ್ತು ಮಹಿಳಾ ತಂಡಗಳ ಆಟಗಾರರು ಕಪ್ಪುಬಣ್ಣದ ಮಿರಿ ಮಿರಿ ಮಿಂಚುವ ಪೋಷಾಕುಗಳನ್ನು ಧರಿಸುತ್ತಾರೆ. ಅಲ್ಲದೇ ಅವರ ಹಾಕಿ ಸ್ಟಿಕ್‌ಗಳ ಶೇ 70 ರಷ್ಟು ಭಾಗವು ಕಪ್ಪು ವರ್ಣ ದ್ದಾಗಿವೆ. ಆದ್ದರಿಂದ ಈ ತಂಡಗಳನ್ನು ಅಂತರರಾಷ್ಟ್ರೀಯ ಹಾಕಿಯಲ್ಲಿ ಬ್ಲ್ಯಾಕ್‌ ಸ್ಟಿಕ್ಸ್‌ ಮೆನ್ (ಪುರುಷರು) ಅಥವಾ ಬ್ಲ್ಯಾಕ್ ಸ್ಟಿಕ್ಸ್‌ ವುಮೆನ್ (ಮಹಿಳೆಯರು) ಎಂದು ಕರೆಯಲಾಗುತ್ತದೆ.
***
‘ಮುಂಬರಲಿರುವ ಮುಖ್ಯವಾದ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ನ್ಯೂಜಿಲೆಂಡ್ ಪ್ರವಾಸವನ್ನು ಯೋಜಿಸಲಾಗಿದೆ. ಆ ಮೂಲಕ ನಮ್ಮ ಫಿಟ್‌ನೆಸ್ ಟೆಸ್ಟ್ ಕೂಡ ನಡೆಯಲಿದೆ. ಉತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡವು ಈ ಸರಣಿಯಲ್ಲಿಯೂ ಉತ್ತಮ ಫಲಿತಾಂಶ ಸಾಧಿಸಲಿದೆ.
–ಮೊಹಮ್ಮದ್ ಮುಷ್ತಾಕ್ ಅಹಮದ್,
ಮುಖ್ಯ ಕಾರ್ಯದರ್ಶಿ, ಹಾಕಿ ಇಂಡಿಯಾ

***
ಈ ಸರಣಿಗಾಗಿ ನಾವು ಅತ್ಯಂತ ಕಾತರದಿಂದ ಕಾಯುತ್ತಿದ್ದೇವೆ. ವಿಶ್ವದ ಪ್ರಮುಖ ತಂಡಗಳ ನಡುವಿನ ಹಾಕಿ ಟೂರ್ನಿಯು ರೋಚಕವಾಗಲಿದೆ. ನ್ಯೂಜಿಲೆಂಡ್ ಅಭಿಮಾನಿಗಳಿಗೆ ಒಂದು ವಾರ ಕಾಲ ರಸದೌತಣ ಸಿಗುವುದು ಖಚಿತ. ಅಲ್ಲದೇ ನಮ್ಮ ತಂಡಕ್ಕೆ ಒಸಿನಿಯಾ ಕಪ್ ಟೂರ್ನಿಗೆ ಸಿದ್ಧಗೊಳ್ಳಲು ಅತ್ಯಂತ ಮಹತ್ವದ ಸರಣಿ ಇದಾಗಲಿದೆ.
–ಮ್ಯಾಕ್ಲಮ್ ಹ್ಯಾರಿಸ್ಮು,
ಮುಖ್ಯ ಕಾರ್ಯನಿರ್ವಾಹಕ, ಹಾಕಿ ನ್ಯೂಜಿಲೆಂಡ್.

***
* ಸರ್ದಾರ್ ಸಿಂಗ್ (ಭಾರತ ತಂಡದ ನಾಯಕ) 
* ವಯಸ್ಸು - 29
* ಆಡಿದ ಅಂತರರಾಷ್ಟ್ರೀಯ ಪಂದ್ಯಗಳು- 223
* ಗಳಿಸಿದ ಗೋಲುಗಳು - 14

* ಆಡುವ ಸ್ಥಾನ: ಹಾಫ್‌ಬ್ಯಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT