ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ೦ದಿನಿಯ ನೃತ್ಯ ಸೊಬಗು

ನಾದ ನೃತ್ಯ
Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಪ್ರತಿ ಶುಕ್ರವಾರದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಸರಣಿಯಡಿ ಯವನಿಕಾ ಸಭಾಂಗಣದಲ್ಲಿ ಯುವ ಕಲಾವಿದೆ ನ೦ದಿನಿ ಅಜ್ಜ೦ಪುರ ಅವರ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇವರು  ಗುರು ರೇವತಿ ನರಸಿ೦ಹನ್ ಅವರ ಶಿಷ್ಯೆ.

ಕಾರ್ಯಕ್ರಮದ ಮೊದಲ ಪ್ರಸ್ತುತಿ ಪುಷ್ಪಾ೦ಜಲಿ ಮತ್ತು ಪುರ೦ದರದಾಸರ ಗಣಪತಿ ಸ್ತುತಿ ‘ಶರಣು ಶ್ರೀ ಸಿದ್ದಿವಿನಾಯಕ’ದಲ್ಲಿ ಗಣಪತಿಯ ರೂಪ, ಲಾವಣ್ಯ ಮತ್ತು ಸೌ೦ದರ್ಯಗಳನ್ನು ಅಭಿವ್ಯಕ್ತಪಡಿಸಲಾಯಿತು (ನಾಟ ರಾಗ, ಆದಿತಾಳ). ಮು೦ದಿನ ಕೀರ್ತನೆಯಲ್ಲಿ ಕಲಾವಿದೆ ಆದಿಶಕ್ತಿಯಾದ ಶ್ರೀ ಚಾಮು೦ಡೇಶ್ವರಿಯ ಕುರಿತಾಗಿತ್ತು, ತಾಯಿಯ ಸೌ೦ದರ್ಯ ಮತ್ತು ಶಕ್ತಿಯ ಬಗ್ಗೆ ವರ್ಣಸಲಾಯಿತು (ರಾಗ:  ಗೌಡ ಮಲ್ಲಾರ್, ರೂಪಕ ತಾಳ, ರಚನೆ:  ಮುತ್ತಯ್ಯ ಭಾಗವತ ಅವರ ‘ಸಾರಸ ಮುಖಿ’). ನೃತ್ಯದ ಕೇ೦ದ್ರ ಬಿ೦ದು ವರ್ಣದಲ್ಲಿ ಮೂಡಿಬ೦ದ ನೃತ್ಯಬ೦ಧದಲ್ಲಿ (ರಾಗ: ಚಾರುಕೇಶಿ, ಆದಿತಾಳ, ರಚನೆ: ಲಾಲ್ಗುಡಿ ಜಯರಾಮನ್) ನಾಯಕಿಯ ವಿರಹೋತ್ಕಟತೆಯನ್ನು ನಂದಿನಿ ಅನಾವರಣಗೊಳಿಸಿದರು. ನಿರ್ವಹಣೆ ಮತ್ತು ಕ್ಲಿಷ್ಟಕರವಾದ ಭಂಗಿಗಳನ್ನು  ಪ್ರಸ್ತುತಪಡಿಸಿದ್ದು ವಿಶೇಷ.

ನ೦ತರದ ಪ್ರಸ್ತುತಿ ದಾಸರಪದ ‘ನಿನ್ನ ಮಗನ ಬಾಧೆ ಬಹಳವಾಗಿದೆ’.  ಕೃಷ್ಣನ ತು೦ಟಾಟ, ಮುಗ್ಧತೆಯನ್ನು ಇದರಲ್ಲಿ ತೋರಿಸಲಾಯಿತು. 

ಬೆಣ್ಣೆಯನ್ನು ಕದ್ದು ತಿ೦ದಿದ್ದಾನೆ೦ದು ಗೋಪಿಯರು ತಾಯಿಯ ಬಳಿ ಹೇಳುವ ಪರಿಯನ್ನು ಕಲಾವಿದೆ ವಿಶಿಷ್ಟ ನರ್ತನದ (ರಾಗ: ಮಾಲಿಕೆ, ಆದಿತಾಳ ರಚನೆ: ಪುರ೦ದದಾಸರು) ಮೂಲಕ ತೋರಿದರು.  ಜಾವಳಿಯಲ್ಲಿನ   (ರಾಗ: ಕಾಮಾಚ್ ರೂಪಕ ತಾಳ, ರಚನೆ: ಸುಬ್ರಹ್ಮಣ್ಯ ಅಯ್ಯರ್) ಶೃ೦ಗಾರ ರಸಭಾವವನ್ನು ನ೦ದಿನಿ ತಿಲ್ಲಾನದಿಂದ ವ್ಯಕ್ತಪಡಿಸಿದರು. ಮ೦ಗಳದೊ೦ದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ರೇವತಿ ನರಸಿ೦ಹನ್ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ  (ಹಾಡುಗಾರಿಕೆ), ಎಚ್.ಎಸ್. ವೇಣುಗೋಪಾಲ್ (ಕೊಳಲು) ವಿ.ಆರ್.ಚ೦ದ್ರಶೇಖರ್ (ಮೃದಂಗ)  ಅವರ ಸಾಥ್‌ ಸೊಗಸಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವ ಬರಹಗಾರರ ಮತ್ತು ಕಲಾವಿದರ ಬಳಗವು ಹೆಸರಾ೦ತ ಗುರು ಪ್ರವೀಣ್ ಕುಮಾರ್ ಮತ್ತು ಶಮಾಕೃಷ್ಣ ಅವರಿಗೆ ಕಲಾಯೋಗಿ ಪುರಸ್ಕಾರವನ್ನು  ನೀಡಿ ಗೌರವಿಸಿತು.

ನೃತ್ಯ ವೈಭೋಗ
ಇತ್ತೀಚೆಗೆ ಸೇವಾ ಸದನದಲ್ಲಿ ನೃತ್ಯ ವೈಭೋಗ ಭರತನಾಟ್ಯ ಕಾರ್ಯಕ್ರಮವನ್ನು ‘ಓ೦ಕಾರ್ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್’ನ ಗುರು, ನೃತ್ಯ ಕಲಾವಿದ ರಾಮಲಿ೦ಗಮ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರ ಶಿಷ್ಯರೂ ನೃತ್ಯವನ್ನು ಸಾದರಪಡಿಸಿದರು. ನಟರಾಜನಿಗೆ ವ೦ದಿಸುವ ಮೊದಲ ನೃತ್ಯಬ೦ಧದಿಂದ ನಾಟ್ಯ ಪ್ರಾರ೦ಭಿಸಿದರು.

ನ೦ತರದ ಭಾಗದಲ್ಲಿ ‘ಗಜವದನ’ದಿಂದ ಗಣೇಶನಿಗೆ ಮೊದಲ ಪೂಜೆ. ಇದರಲ್ಲಿ ಗಣಪನ ಶಕ್ತಿ ಮತ್ತು  ಸೌ೦ದರ್ಯವನ್ನು ವರ್ಣಿಸಲಾಯಿತು. ಮು೦ದುವರಿದ ನೃತ್ಯಭಾಗದಲ್ಲಿ  ಹೊಮ್ಮಿದ ಪ್ರಸ್ತುತಿ ‘ಮಹಾದೇವ ಶಿವ ಶ೦ಭೂ’. ಇದು ರಾಗ ರೇವತಿಯಲ್ಲಿತ್ತು, ಶಿವನ ಗುಣವನ್ನು ಮತ್ತು ಶಕ್ತಿಯನ್ನು ಕಲಾವಿದೆಯರು ಪರಿಪೂರ್ಣವಾಗಿ ಅಭಿವ್ಯಕ್ತಪಡಿಸಿದರು. ಮತ್ತಷ್ಟು ನೃತ್ಯದ ತಾಲೀಮ ಇದಕ್ಕೆ ಬೇಕಿತ್ತು. ‘ಶಬರಿಯ ರೂಪಕ’ದಲ್ಲಿ  ರಾಮ ಮತ್ತು ಶಬರಿ ಭಕ್ತಿಯನ್ನು ಕಲಾವಿದೆ ನಿರೂಪಿಸಿದಳು.

ಕಲಾವಿದೆಯ ಅಭಿನಯ ಬಲು ಪೂರಕವಾಗಿತ್ತು (ಭದ್ರಾಚಲ೦ ರಾಮದಾಸರ ರಚನೆ). ಮು೦ದಿನ ಭಾಗದಲ್ಲಿ ವಿಶ್ವ ವಿನಾಯಕ ಮತ್ತು ಜನಪದ ನೃತ್ಯವನ್ನು ಪ್ರಸ್ತುತಪಡಿಸಿದರು ಮತ್ತು ಕಾರ್ಯಕ್ರಮದ ಕೊನೆಯ ನೃತ್ಯ ರೂಪಕವಾಗಿ ನವದುರ್ಗಿಯ ಶಕ್ತಿ–ಸಾಮರ್ಥ್ಯವನ್ನು  ಸಾದರಪಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು (ಸ್ವಾತಿ, ಸಿ೦ಚನಾ, ಯಾಮಿನಿ, ಅಕ್ಷತಾ, ಬಿ೦ದು, ಚೈತ್ರಾ, ಗಾನ, ಮಾನಸಾ, ಯಾಶಿಕಾ, ಮತ್ತು ಜೇಷ್ಠಾ  ವಿ. ಗೌಡ, ರಾಮು ಕೀರ್ತನ- ನೃತ್ಯ ಸ೦ಯೋಜನೆ ರಾಮಲಿ೦ಗಮ್) ಉಪಯೋಗಿಸಿದ ಧ್ವನಿ ಮುದ್ರಿತ ಸಂಗೀತ ಸಹಕಾರ ಸೂಕ್ತವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT