ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗೆಷ್ಟು ಹಂತ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಅಭಿಪ್ರಾಯವೊಂದು ಚರ್ಚೆಗೆ ಗ್ರಾಸವಾಗಿದೆ. ಸೆಪ್ಟೆಂಬರ್ 10ರಂದು ವಿಕಾಸಸೌಧದಲ್ಲಿ ನಡೆದ ರಾಜ್ಯ ಪಂಚಾಯತ್ ಪರಿಷತ್ ಸಭೆಯಲ್ಲಿ ಮುಖ್ಯಮಂತ್ರಿಗಳು ತಾಲ್ಲೂಕು ಪಂಚಾಯಿತಿ ಅನಗತ್ಯ ಎಂದಿದ್ದರು. ಪಂಚಾಯಿತಿ ರಾಜ್ ವ್ಯವಸ್ಥೆಯಲ್ಲಿ ಮೂರು ಹಂತಗಳ ಆಡಳಿತ ಬೇಕಾಗಿಲ್ಲ. ತಳಸ್ತರದಲ್ಲಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು. ಈ ಎರಡು ಹಂತಗಳಿಗೆ ಮಾತ್ರ ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಚುನಾಯಿತ ಆಡಳಿತ ಮಂಡಳಿಯ ಅವಶ್ಯಕತೆ ಇಲ್ಲ. ಈ ಹಂತದಲ್ಲಿ ಸಲಹಾ ಸಮಿತಿಯನ್ನು ನಾಮಕರಣ ಪದ್ಧತಿಯ ಮೂಲಕ ಸೃಷ್ಟಿಸುವುದು ಒಳ್ಳೆಯದು ಎಂದು ಪರಿಷತ್ ಸಭೆಯಲ್ಲಿ ಅಭಿಪ್ರಾಯಿಸಿದ ಮುಖ್ಯಮಂತ್ರಿಗಳು, ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದರು.

ಮುಖ್ಯಮಂತ್ರಿಯವರಿಂದ ಇಂತಹ ಅಭಿಪ್ರಾಯ ಬಂದ ಕೂಡಲೇ ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ರದ್ದಾಗಿಯೇ ಬಿಡುತ್ತದೆ ಎನ್ನುವ ತಳಮಳವನ್ನು ಕೆಲವರು ವ್ಯಕ್ತಪಡಿಸಲಾರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ಬೆಂಬಲಿಸುವ, ಮತ್ತು ವಿರೋಧಿಸುವ ಪ್ರಕ್ರಿಯೆ ಕೂಡಾ ಈಗಾಗಲೇ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತಕ್ಕೆ ಎರಡು ಹಂತ ಸಾಕೇ ಎಂಬ ವಿಚಾರದ ಕುರಿತು ವಾಸ್ತವಾಂಶಗಳನ್ನು  ದಾಖಲಿಸುವ ಪ್ರಯತ್ನವನ್ನು ಮಾಡಿದ್ದೇನೆ.ಸಿದ್ದರಾಮಯ್ಯನವರು ಪ್ರತಿಪಾದಿಸಿರುವ ಎರಡು ಹಂತಗಳ ವ್ಯವಸ್ಥೆ ಮತ್ತು ಈಗ ಜಾರಿಯಲ್ಲಿರುವ ಮೂರು ಹಂತಗಳ ವ್ಯವಸ್ಥೆಯಲ್ಲಿ ಯಾವುದು ಹೆಚ್ಚು ಸೂಕ್ತ ಎಂದು ಚರ್ಚಿಸುವ ಮೊದಲು ಕೆಲವು ವಿಷಯಗಳನ್ನು ಸ್ಪಷ್ಟಪಡಿಸುತ್ತೇನೆ.

ರಾಜ್ಯ ಪಂಚಾಯತ್ ಪರಿಷತ್ ಸಭೆಯಲ್ಲಿ  ಮುಖ್ಯಮಂತ್ರಿಯವರಾಗಲೀ, ಇನ್ಯಾರೇ ಆಗಲಿ ಹೇಳಿದ ಕೂಡಲೇ ತಾಲ್ಲೂಕು ಪಂಚಾಯಿತಿ ವ್ಯವಸ್ಥೆ ರದ್ದಾಗುವುದಿಲ್ಲ. ಈಗ ಚಾಲ್ತಿಯಲ್ಲಿರುವ ಮೂರು ಹಂತದ ಪಂಚಾಯಿತಿ ರಾಜ್ಯ ಮುಂದುವರೆಯುತ್ತದೆ. ಯಾಕೆಂದರೆ 1992ರಲ್ಲಿ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಮೂರು ಹಂತಗಳ ವ್ಯವ­ಸ್ಥೆಯನ್ನು ಜಾರಿ ಮಾಡಲಾಗಿದೆ. ತಾಲ್ಲೂಕು ಪಂಚಾ­ಯಿತಿ (ಮಧ್ಯಂತರ ಪಂಚಾಯಿತಿ) ರದ್ದಾ­ಗಬೇಕಾದರೆ ಮತ್ತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಈ ಕಾರ್ಯ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯಬೇಕು.

ಎರಡು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಕೂಡಾ ಹೊಸ ಕಲ್ಪನೆ ಅಲ್ಲ. 1987 ರಿಂದ 92ರ ಅವಧಿಯಲ್ಲಿ ಕರ್ನಾಟಕದಲ್ಲಿ ಅನುಷ್ಠಾನದಲ್ಲಿದ್ದ ಪಂಚಾಯತ್  ರಾಜ್ ವ್ಯವಸ್ಥೆ ಎರಡು ಹಂತಗಳದ್ದಾಗಿತ್ತು. ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರಿಗೆ ಸಂವಿಧಾನ ತಿದ್ದುಪಡಿಗೆ ಪ್ರೇರಣೆ ಕೊಟ್ಟಿದ್ದು ಇದೇ ವ್ಯವಸ್ಥೆ ಎಂಬುದನ್ನು ಮರೆಯುವಂತಿಲ್ಲ.

ಸಂವಿಧಾನದ 73ನೇ ತಿದ್ದುಪಡಿಯ ನಂತರ ದೇಶದಾದ್ಯಂತ ಏಕರೂಪದ ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದಿದೆ. (ಜನಸಂಖ್ಯೆ ವಿರಳವಾಗಿರುವ ಕೆಲವು ಸಣ್ಣ ರಾಜ್ಯಗಳನ್ನು ಹೊರತುಪಡಿಸಿ, ಆ ರಾಜ್ಯಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಮಾತ್ರ ಇದೆ). ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು ಈಗಾಗಲೇ 20 ವರ್ಷಗಳವಾಗಿವೆ.  ಈ ಎರಡೂ ದಶಕಗಳ ಅನುಭವದಲ್ಲಿ ಮೂರು ಹಂತಗಳ ಬದಲಿಗೆ ಎರಡೇ ಹಂತಗಳು ಸಾಕು ಎನ್ನುವ ಅಭಿಪ್ರಾಯ ಕೇಳಿಬರುತ್ತಿದ್ದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಧ್ವನಿ ಗಟ್ಟಿಯಾಗಿ ಕೇಳಿ ಬರುತ್ತಿದೆ.

ಹಿಂದಿನ ಯುಪಿಎ ಸರ್ಕಾರ ಆಗ ಪಂಚಾಯತ್ ರಾಜ್ ಖಾತೆಯ ಸಚಿವರಾಗಿದ್ದ ಮಣಿಶಂಕರ್ ಅಯ್ಯರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಿ ಇಪ್ಪತ್ತು ವರ್ಷಗಳ ಅನುಭವದ ಆಧಾರದಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತರಬೇಕಾದ ತಿದ್ದುಪಡಿಗಳ ಕುರಿತು ಚರ್ಚೆಯನ್ನು ಆರಂಭಿಸಿತ್ತು. ಈ ಸಮಿತಿ ಕೂಡಾ ಮಧ್ಯಂತರ ಪಂಚಾಯಿತಿಯನ್ನು ರದ್ದುಪಡಿಸುವ ಬಗ್ಗೆ ಗಂಭೀರವಾದ ಚರ್ಚೆ ನಡೆಸಿತ್ತು.  ಕರ್ನಾಟಕದಲ್ಲಿ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಗೆ ಹೆಚ್ಚಿನ ಅಧಿಕಾರಗಳಾಗಲೀ ಜವಾಬ್ದಾರಿಗಳಾಗಲೀ ಅನುದಾನವಾಗಲೀ ಇಲ್ಲ. ಈ ವ್ಯವಸ್ಥೆ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ವಿತರಿಸುವ ಏಜೆನ್ಸಿಯಾಗಿಬಿಟ್ಟಿದೆ. ಒಂದೋ ತಾಲ್ಲೂಕು ಪಂಚಾಯಿತಿಗೆ ಸಾಕಷ್ಟು ಅಧಿಕಾರ ಮತ್ತು ಅನುದಾನ ಕೊಡಬೇಕು. ಇಲ್ಲದಿದ್ದರೆ ಇದನ್ನು ರದ್ದುಮಾಡಬೇಕು ಎನ್ನುವ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರ ಸಿ. ರಮೇಶ್ ಕುಮಾರ್ ನೇತೃತ್ವದಲ್ಲಿ ನೇಮಿಸಿದ ಕೆಪಿಆರ್ ಅಧಿನಿಯಮ 1992ರ ತಿದ್ದುಪಡಿ ಕುರಿತ ಸಲಹಾ ಸಮಿತಿಯ ಮುಂದೆಯೂ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನು ಸಬಲೀಕರಿಸುವ ಅಥವಾ ರದ್ದುಮಾಡುವ ಪ್ರಸ್ತಾಪಗಳು ಚರ್ಚೆಗೆ ಬಂದಿವೆ.

ಮೇಲಿನ ಅಂಶಗಳ ಆಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಪ್ರಾಯವನ್ನು ವಿಶ್ಲೇಷಣೆ ನಡೆಸುವುದು ಸೂಕ್ತ. ಜೊತೆಗೆ 1987ರಿಂದ 1992ರ ಅವಧಿಯಲ್ಲಿ ದಿವಂಗತ ನಜೀರ್ ಸಾಬ್‌ರವರ ಕಾಳಜಿ ಮತ್ತು ಬದ್ಧತೆಯ ಫಲವಾಗಿ ಕರ್ನಾಟಕದಲ್ಲಿ ಜಾರಿಗೆ ಬಂದ ಎರಡು ಸ್ತರಗಳ ಪಂಚಾಯಿತಿ ರಾಜ್ ವ್ಯವಸ್ಥೆ ಹೇಗಿತ್ತು ಎಂದು ಅವಲೋಕನ ಮಾಡುವುದರಿಂದ ತಾಲ್ಲೂಕು ಪಂಚಾಯಿತಿ ಬೇಕೇ ಬೇಡವೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಸಾಧ್ಯವಿದೆ.

ದ್ವಿಸ್ತರ ಪಂಚಾಯಿತಿ ವ್ಯವಸ್ಥೆ
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯ ಶಿಲ್ಪಿ ಎಂದು ಪರಿಗಣಿಸಲ್ಪಟ್ಟಿರುವ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರು ಸಿದ್ಧಪಡಿಸಿದ ‘ಕರ್ನಾಟಕ ಜಿಲ್ಲಾ ಪರಿಷತ್, ತಾಲ್ಲೂಕು ಪಂಚಾಯಿತಿ ಸಮಿತಿ, ಮಂಡಲ ಪಂಚಾ­ಯತಿ ಮತ್ತು ನ್ಯಾಯ ಪಂಚಾಯಿತಿ ಕಾಯ್ದೆ–1993’ 1994ರ ರ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದ ಉಭಯ ಸದನಗಳಲ್ಲಿ ಅಂಗೀಕಾರ­ಗೊಂಡಿತ್ತು. ಎರಡು ವರ್ಷಗಳ ನಂತರ ಅಂದರೆ 1985ರ ಜುಲೈ 10 ರಂದು ರಾಷ್ಟ್ರಪತಿಗಳ ಅಂಕಿತ­ದೊಂ­ದಿಗೆ ಕಾಯ್ದೆಯಾಗಿ ರೂಪಗೊಂಡಿತು. ಈ ಕಾಯ್ದೆ­­ಗೆ ಅನುಗುಣವಾಗಿ ಚುನಾವಣೆ ನಡೆದು ಕರ್ನಾಟಕ­ದಲ್ಲಿ ದ್ವಿ-ಸ್ತರಗಳ ಅತ್ಯಂತ ಪ್ರಬಲವಾದ ಪಂಚಾಯಿತಿ ರಾಜ್ ವ್ಯವಸ್ಥೆ 1987ರಿಂದ ಜಾರಿಗೆ ಬಂದಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂದಿನ ವ್ಯವಸ್ಥೆಯನ್ನು ಮೂಲವಾಗಿಟ್ಟುಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಸಾಧ್ಯತೆಗಳಿವೆ.

ಅಂದಿನ ವ್ಯವಸ್ಥೆ: ನಜೀರ್ ಸಾಬ್ ಅವರು ತಂದ ದ್ವಿ-ಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಳಹಂತದ ಮಂಡಲ ಪಂಚಾಯಿತಿಗಳು ಮತ್ತು ಮೇಲಿನ ಹಂತದ ಜಿಲ್ಲಾ ಪರಿಷತ್‌ಗೆ ಪಕ್ಷಾಧಾರಿತ ಚುನಾವಣೆಯ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆದಿತ್ತು. ಈ ಎರಡು ಚುನಾಯಿತ ಸಂಸ್ಥೆಗಳ ನಡುವೆ ತಾಲ್ಲೂಕು ಪಂಚಾಯಿತಿ ಸಮಿತಿ ಹೆಸರಿನ ಅದ್ಭುತವಾದ ಸಮೀಕರಣ ಹೊಂದಿದ ಮಧ್ಯಂತರ ವ್ಯವಸ್ಥೆಯಿತ್ತು. ಇದರ ಸದಸ್ಯರು ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಆದರೆ ಅವರಲ್ಲಿ ಶೇ.90 ರಷ್ಟು ಮಂದಿ ಬೇರೆ ಬೇರೆ ವ್ಯವಸ್ಥೆಗಳಿಗೆ ಚುನಾವಣೆಯ ಮೂಲಕ ಆಯ್ಕೆಗೊಂಡವರೇ ಆಗಿದ್ದರು.

ತಾಲ್ಲೂಕಿನ ಎಲ್ಲಾ ಮಂಡಲ ಪಂಚಾಯಿತಿಗಳ ಪ್ರಧಾನರು, ತಾಲ್ಲೂಕು ವ್ಯಾಪ್ತಿಯ ಜಿಲ್ಲಾ ಪರಿಷತ್ ಸದಸ್ಯರು, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರು, ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷರು, ಹಿಂದುಳಿದ ವರ್ಗಗಳಿಗೆ ಸೇರಿದ ನಾಮಕರಣ ಸದಸ್ಯರು ಮತ್ತು ತಾಲ್ಲೂಕನ್ನು ಪ್ರತಿನಿಧಿಸುವ ಶಾಸಕರನ್ನು ಒಳಗೊಂಡ ತಾಲ್ಲೂಕು ಪಂಚಾಯಿತಿ ಸಮಿತಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದುದನ್ನು ನಾವು ಗಮನಿಸಿದ್ದೇವೆ. ಆ ವ್ಯವಸ್ಥೆಯಲ್ಲಿ ತಾಲ್ಲೂಕಿನ ಹೆಚ್ಚು ಭಾಗವನ್ನು ಪ್ರತಿನಿಧಿಸುವ ಶಾಸಕರು ತಾಲ್ಲೂಕು ಪಂಚಾಯಿತಿ ಸಮಿತಿಯ ಅಧ್ಯಕ್ಷರಾಗಿದ್ದರು. ಮಂಡಲ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸಮಸ್ಯೆಗಳು ಜಿಲ್ಲಾ ಪರಿಷತ್ ಸಭೆ ಮಾತ್ರವಲ್ಲದೆ ವಿಧಾನಮಂಡಲದಲ್ಲೂ ಪ್ರತಿಧ್ವನಿಸಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ತಾಲ್ಲೂಕು ಪಂಚಾಯಿತಿ ಸಮಿತಿ ಅತ್ಯಂತ ಉಪಯುಕ್ತ ವೇದಿಕೆಯಾಗಿತ್ತು.

ಅಧಿಕಾರ ವಿಕೇಂದ್ರೀಕರಣದ ಕ್ರಾಂತಿಕಾರಿ ಚಿಂತನೆಗಳ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಶಾಸಕರನ್ನು ಸಮಾಧಾನಪಡಿಸಲು ನಜೀರ್ ಸಾಬ್ ಅವರು ತಾಲ್ಲೂಕು ಪಂಚಾಯಿತಿ ಸಮಿತಿಯ ವ್ಯವಸ್ಥೆಯನ್ನು ರೂಪಿಸಿದ್ದರು ಎನ್ನುವ ಅಭಿಪ್ರಾಯಗಳಲ್ಲಿ ಸ್ವಲ್ಪ ಸತ್ಯಾಂಶ ಇದೆಯಾದರೂ ಇದರಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಘನತೆಗೆ ಕುಂದು ಬರಲಿಲ್ಲ. ಬದಲಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಚುನಾಯಿತ ಪ್ರತಿನಿಧಿಗಳು ಮತ್ತು ಶಾಸನ ಸಭೆಯ ಪ್ರತಿನಿಧಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಈಗ ಮತ್ತೆ ಅದೇ ರೀತಿಯ ಚಿಂತನೆ ಮುಖ್ಯಮಂತ್ರಿಗಳ ಮಾತುಗಳಲ್ಲಿ ವ್ಯಕ್ತವಾಗಿದೆ. ಅದರಲ್ಲಿ ತಪ್ಪೇನೂ ಇಲ್ಲ. ಹಾಗೇನಾದರೂ ಆದರೆ ಪಂಚಾಯತ್ ರಾಜ್ ವ್ಯವಸ್ಥೆ ದುರ್ಬಲಗೊಳ್ಳುವ ಸಾಧ್ಯತೆಗಳಿಲ್ಲ.

ಆದರೆ ಮೊದಲೇ ಹೇಳಿದಂತೆ ಅದು ತಕ್ಷಣದಲ್ಲಿ ಆಗುವಂತಹ ಕಾರ್ಯವಲ್ಲ. ರಾಜ್ಯಮಟ್ಟದಲ್ಲಿ ಆಗುವಂಥದ್ದೂ ಅಲ್ಲ. ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಲ್ಲಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ ನೀಡಬಹು­ದೇನೋ? ಕೇಂದ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿರುವ ನಿತಿನ್ ಗಡ್ಕರಿಯವರಿಗೆ ಪಂಚಾಯತ್ ರಾಜ್ ಮತ್ತು ಅಧಿಕಾರ ವಿಕೇಂದ್ರೀಕರಣ ಎನ್ನುವುದು ಆದ್ಯತೆ ಮತ್ತು ಕಾಳಜಿಯ ವಿಷಯವಾದಾಗ ಮಾತ್ರ ಇಂತಹ ಬದಲಾವಣೆಗಳನ್ನು ಕಾಣಲು ಸಾಧ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಪೂರಕವಾದ ಚರ್ಚೆಗೆ ನಾಂದಿ ಹಾಡಿದ್ದಾರೆ. ಮುಂದೇನಾಗುವುದೋ ಕಾದು ನೋಡೋಣ.

(ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿರುವ ಲೇಖಕರು
ಜನವಿಕಾಸ-–ಕರ್ನಾಟಕ ಸಂಸ್ಥೆಯ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT