ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದಲ್ಲೇ ಬೆಣ್ಣೆಹಳ್ಳ, ನೀರು ಮಾತ್ರ ಇಲ್ಲ

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಪ್ಪು ಮಣ್ಣಿನ ಸೀಳುಗಳಿಂದ ಉಗಿ ಹಾಯುವ ಗಾಳಿ,  ಕೆಂಡದಂತಹ ಬಿಸಿಲಿಗೆ ಬೆದರಿ ಮೌನ ಹೊದ್ದ ಊರ ಓಣಿ–ಕೇರಿ, ಹೊಲ, ಬಯಲು, ಬತ್ತಿದ ಕೆರೆ, ಬಾವಿ... ಜಿಲ್ಲಾ ಆಡಳಿತ ಕಳುಹಿಸುವ ನೀರಿನ ಟ್ಯಾಂಕರ್‌ ನಿರೀಕ್ಷೆಯಲ್ಲಿ ಕೊಡಗಳನ್ನು ಪಾಳಿ ಹಚ್ಚಿ ನೆರಳಿಗೆ ಅಡ್ಡಾದ ಗ್ರಾಮಸ್ಥರು...

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, ನಾಗರ ಹಳ್ಳಿ, ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ, ಮುಳ್ಳೊಳ್ಳಿ, ಯರಿ ನಾರಾಯಣಪುರ, ಹಿರೇನರ್ತಿ, ಚಿಕ್ಕನರ್ತಿ, ಚಾಕಲಬ್ಬಿ, ಯರಗುಪ್ಪಿ, ರೊಟ್ಟಿಗವಾಡ, ಬರದ್ವಾಡ, ಕೊಂಕಣಕುರಹಟ್ಟಿ, ಕೊಡ್ಲಿವಾಡ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಅಡ್ಡಾಡಿದರೆ ಕಾಣಸಿಗುವ ಚಿತ್ರಣವಿದು.

‘ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ’ ಎಂಬ ಸ್ಥಿತಿ ಇಲ್ಲಿಯದು. ‘ಮಳೆಗಾಲದ ಕಣ್ಣೀರು’ ಎನಿಸಿ ರುವ ಬೆಣ್ಣೆಹಳ್ಳ ಪಕ್ಕದಲ್ಲಿಯೇ ಹರಿದು ಹೋಗಿದ್ದರೂ ಕುಡಿ ಯುವ ನೀರು ಮಾತ್ರ ಇಲ್ಲಿ ಮರೀಚಿಕೆ. ಜಿಲ್ಲಾ ಆಡಳಿತ ಕಳೆದ ಮೂರು ವರ್ಷಗಳಿಂದ ಹುಬ್ಬಳ್ಳಿ ಯಿಂದ ಟ್ಯಾಂಕರ್‌ಗಳ ಮೂಲಕ ಇಲ್ಲಿಗೆ ಕುಡಿಯುವ ನೀರು ಕೊಡುತ್ತಿದೆ.

ಹಿಂದಿನ ಮೂರು ಮಳೆಗಾಲದಲ್ಲೂ ಈ ಭಾಗದ ಕೆರೆಗಳು ತುಂಬಿಲ್ಲ. ಕೊಳವೆ ಬಾವಿಗಾಗಿ ಡ್ರಿಲ್ಲಿಂಗ್‌ ಯಂತ್ರ ಸಾವಿರಾರು ಅಡಿ ಕೆಳಗಿಳಿದರೂ ಬರುವುದು ಬಿಳಿಯ ಬೂದಿ ಮಾತ್ರ. ಇನ್ನು, ಅಷ್ಟಿಷ್ಟು ನೀರು ಸಿಕ್ಕರೂ ಸವಳಿನಿಂದಾಗಿ ಕುಡಿಯಲು ಯೋಗ್ಯವಾಗಿಲ್ಲ. ಮುಂಜಾನೆ 6, ಮಧ್ಯಾಹ್ನ 2 ಹಾಗೂ ಸಂಜೆ 4 ಕ್ಕೆ ಹೀಗೆ ದಿನಕ್ಕೆ ಮೂರು ಬಾರಿ ಬರುವ ಟ್ಯಾಂಕರ್‌ಗಳು ಪ್ರತಿ ಮನೆಗೆ ನಾಲ್ಕು ಕೊಡದಂತೆ  ನೀರು ಕೊಡುತ್ತಿವೆ. ನಿತ್ಯ ಬಳಕೆಗೆ– ಜಾನುವಾರುಗಳಿಗೆ ಕೊಳವೆ ಬಾವಿಯ ಸವಳು ನೀರನ್ನು ಬಳಸಲಾಗುತ್ತಿದೆ.

ಕುಂದಗೋಳ ಕ್ಷೇತ್ರದ ಮಾಜಿ ಶಾಸಕರಿಬ್ಬರು ಯರಗುಪ್ಪಿ ಗ್ರಾಮ­ದವರೇ ಆಗಿದ್ದಾರೆ. ರಾಜಕೀಯ­ವಾಗಿ ಬಲಾಢ್ಯವಾಗಿದ್ದರೂ ಕುಡಿ­ಯುವ ನೀರಿಗೆ ಮಾತ್ರ ಅಲ್ಲಿ ಸದಾ ತತ್ವಾರ. ಕೆರೆಯಲ್ಲಿ ಅಲ್ಪಸ್ವಲ್ಪ ಉಳಿದಿದ್ದ ಮಣ್ಣಿನ ಬಣ್ಣದ ನೀರನ್ನೇ ಕೊಡಕ್ಕೆ ತುಂಬುತ್ತಿದ್ದ ಗ್ರಾಮದ ಶರೀಫ್‌­ಸಾಬ್‌ ನದಾಫ್ ‘ಎರಡು ದಿನದಿಂದ ಟ್ಯಾಂಕರ್‌ ಬಂದಿಲ್ರಿ’ ಎಂದು ಗೊಣಗಿದರು.

ಈ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನವಲ ಗುಂದ ತಾಲ್ಲೂಕು ಹೆಬಸೂರಿನ ಮಲಪ್ರಭಾ ಕಾಲುವೆಯಿಂದ ಪೈಪ್‌ಲೈನ್‌ ಮೂಲಕ ಹುಬ್ಬಳ್ಳಿ ಹಾಗೂ ಕುಂದಗೋಳ ತಾಲ್ಲೂಕಿನ 14 ಹಳ್ಳಿಗಳಿಗೆ ನೀರು ಹರಿಸಲು ಜಿಲ್ಲಾ ಆಡಳಿತ ಮುಂದಾಗಿದೆ. ‘ಮೂರು ವರ್ಷಗಳಿಂದ  ನಡೆಯುತ್ತಿರುವ ಈ ಕಾಮಗಾರಿ ಮುಗಿಯುವಂತೆ ಕಾಣುತ್ತಿಲ್ಲ. ಟ್ಯಾಂಕರ್‌ನಲ್ಲಿ ನೀರು ಕೊಡುವುದೇ ಅಧಿಕಾರಸ್ಥರಿಗೆ ಪ್ರಿಯವಾಗಿ ಕಾಣುತ್ತಿದೆ. ಹಾಗಾಗಿ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ನೀರಿಗೂ ಪಡಿತರ ಕಾರ್ಡ್‌!
ಹಿರೇನರ್ತಿಯಲ್ಲಿ ತಲಾ ರೂ. 25  ಪಡೆದು ಪ್ರತಿ ಕುಟುಂಬಕ್ಕೂ ಪಡಿತರ ಚೀಟಿ ರೀತಿಯ ನೀರಿನ ಕಾರ್ಡ್‌ ಕೊಡಲಾಗಿದೆ. ನೀರು ತರುವ ಟ್ಯಾಂಕರ್‌ನ ಚಾಲಕರು ಅದಕ್ಕೆ ಸಹಿ ಮಾಡುತ್ತಾರೆ. ‘ಪಾಳಿ ಪ್ರಕಾರ ನೀರು ಕೊಡಲು ಹಾಗೂ ಒಬ್ಬರೇ ಹೆಚ್ಚು ನೀರು ಪಡೆಯುವುದನ್ನು ತಡೆಯಲು ಪಂಚಾಯಿತಿ ಈ ಕ್ರಮ ಕೈಗೊಂಡಿದೆ’ ಎನ್ನುವ ಗ್ರಾಮದ ಹಿರಿಯ ಯಲ್ಲಪ್ಪ ಗುಲಗಂಜಿ, ‘ಊರಿಗೆ ಬಂದವರಿಗೆ ಬೇಕಿದ್ದರೆ ಹೊಟ್ಟೆ ತುಂಬ ಊಟ ಹಾಕ್ತೀವಿ, ಆದರೆ ಕುಡಿಯಲು ನೀರು ಮಾತ್ರ ಕೇಳಬೇಡಿ ಎಂದು ಹೇಳುವ ಸ್ಥಿತಿ ನಮ್ಮದು’ ಎನ್ನುತ್ತಾರೆ.

ಟ್ಯಾಂಕರ್‌ ಬಂದಾಗ ನೀರು ಹಿಡಿಯಲೆಂದೇ ಮನೆಗೊಬ್ಬರನ್ನು ಕಾಯಂ ಆಗಿ ಇಡಬೇಕಿದೆ. ಪಾಳಿ ಹಚ್ಚಲು ಯಾರೂ ಇಲ್ಲದಿದ್ದರೆ ಆ ದಿನ ಕುಡಿಯುವ ನೀರಿಗೆ ಖೋತಾ.  ‘ಮದುವೆ–ಮುಂಜಿಯಂತಹ ಶುಭ ಕಾರ್ಯ, ಸತ್ತಾಗ– ಕೆಟ್ಟಾಗ ಸಂಬಂಧಿಕರ ಮನೆಗೂ ಹೋಗುವಂತಿಲ್ಲ. ನೀರಿಗಾಗಿ ಕಾಯುವುದೇ ನಿತ್ಯದ ಕೆಲಸ’ ಎಂದು ಮುಳ್ಳೊಳ್ಳಿಯ ನಿಂಗಮ್ಮ ಮಾಡಳ್ಳಿ ಅಲವತ್ತುಕೊಳ್ಳುತ್ತಾರೆ. ಟ್ಯಾಂಕರ್ ಬಳಿ ಜಗಳ ಆಗದಂತೆ ನೋಡಿಕೊಂಡು ನಿಗದಿಯಷ್ಟು ನೀರು ಹಂಚಲು ಮುಳ್ಳೊಳ್ಳಿ ಯಲ್ಲಿ ಪಂಚಾಯಿತಿಯಿಂದಲೇ ಸಿಬ್ಬಂದಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT