ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿತೇರು ಕೊಲ್ಲೇರು

Last Updated 8 ಫೆಬ್ರುವರಿ 2014, 20:07 IST
ಅಕ್ಷರ ಗಾತ್ರ

ದಕ್ಷಿಣ ಭಾರತದ ಅಪರೂಪದ ಪಕ್ಷಿಧಾಮಗಳಲ್ಲೊಂದು ಅಂಧ್ರಪ್ರದೇಶದ ‘ಕೊಲ್ಲೇರು’. ದೇಶದಲ್ಲೇ ಅತ್ಯಂತ ದೊಡ್ಡ ಪಕ್ಷಿಧಾಮ ಎನ್ನುವುದು ಇದರ ಅಗ್ಗಳಿಕೆ. ಇದು ಅದೇ ಹೆಸರಿನ ಸರೋವರದ ಪರಿಸರದಲ್ಲಿ ಇರುವುದರಿಂದ, ಜೀವಪರಿಸರದ ಹೆಸರೇ ಪಕ್ಷಿಧಾಮಕ್ಕೂ ಬಂದಿದೆ.

ಕೊಲ್ಲೇರು ಸರೋವರದ ಪರಿಸರ ಆಂಧ್ರಪ್ರದೇಶದ ಕೃಷ್ಣಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳೆರಡರಲ್ಲೂ ಹರಡಿಕೊಂಡಿದೆ. ಈ ಪಕ್ಷಿಧಾಮ ವಿಜಯವಾಡದಿಂದ ೬೫ ಕಿ.ಮೀ. ದೂರದಲ್ಲಿದೆ. ಪೂರ್ವ ಗೋದಾವರಿ ಜಿಲ್ಲೆಯ ಯೆಲ್ಲೂರು ಪಟ್ಟಣಕ್ಕೆ ೧೫ ಕಿ.ಮೀ. ಸನಿಹದಲ್ಲಿದೆ.

ಸರೋವರವು ಅಪರೂಪದ ಮೀನುಗಳಿಗೂ ನೆಲೆಯಾಗಿದೆ. ಈ ಸರೋವರ ತೀರದಲ್ಲಿ ಸೂರ್ಯೋದಯ ಮತ್ತು ಅಸ್ತಮಾನಗಳನ್ನು ನೋಡುವುದು ಮೈಮನಗಳಿಗೆ ಮುದ ನೀಡುವ ಅನುಭವ. ದೇಶವಿದೇಶಗಳಿಂದ ಸಹಸ್ರಾರು ಪ್ರವಾಸಿಗರು ಈ ಅನನ್ಯ ದೃಶ್ಯವನ್ನು ಸವಿಯಲೆಂದೇ ಇಲ್ಲಿಗೆ ಬರುತ್ತಾರೆ. ಏಷ್ಯಾ ಮತ್ತು ಯುರೋಪು ಖಂಡಗಳಲ್ಲಿಯೂ ಕೊಲ್ಲೇರುವಿನ ಪಕ್ಷಿಧಾಮವೇ ದೊಡ್ಡದೆನಿಸಿರುವುದರಿಂದ ಪಕ್ಷಿಪ್ರಿಯರು ವಿದೇಶಗಳಿಂದಲೂ ಇಲ್ಲಿಗೆ ಬರುತ್ತಾರೆ.

ಅಕ್ಟೋಬರ್ ತಿಂಗಳಿಂದ ಮಾರ್ಚ್ ತನಕ ಸುಮಾರು ೬೭೩ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಕ್ಷಿಗಳ ಸಾಲು ಸಾಲು ಇಲ್ಲಿ ಕಾಣಸಿಗುತ್ತದೆ. ಮರಗಿಡಗಳ ಮರೆ ಹಾಗೂ ಹಸಿರಿನ ಪೊದೆಗಳಲ್ಲಿ ಎಲೆಗಳು ಕಾಣಿಸದಷ್ಟು ಹಕ್ಕಿಗಳ ಹಿಂಡು ಇರುತ್ತದೆ. ಮುಖ್ಯವಾಗಿ ಸೈಬೀರಿಯಾದ ಕೊಕ್ಕರೆಗಳು ಲಕ್ಷಗಳ ಸಂಖ್ಯೆಯಲ್ಲಿ ಇಲ್ಲಿ ಸೇರುತ್ತವೆ. ಆಸ್ಟ್ರೇಲಿಯಾ, ಈಜಿಪ್ಟ್ ಸೇರಿದಂತೆ ವಿಶ್ವದ ಎಲ್ಲೆಡೆಯಿಂದ ಸಹಸ್ರಾರು ಜಾತಿಯ ಇಪ್ಪತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯ ಪಕ್ಷಿಗಳು ಇಲ್ಲಿಗೆ ಬಂದು ಗೂಡು ಕಟ್ಟುತ್ತವೆ, ಸಂಸಾರ ಮಾಡಿ ತತ್ತಿಗಳನ್ನಿರಿಸುತ್ತವೆ. ಮರಿಗಳಾದ ಮೇಲೆ ಏಪ್ರಿಲ್ ತಿಂಗಳಾರಂಭದ ಸೆಕೆಯ ಸಮಯದಲ್ಲಿ ತಮ್ಮ ತವರಿನತ್ತ ಮುಖ ಮಾಡುತ್ತವೆ.

ಈ ಪಕ್ಷಿಧಾಮದ ಬಳಿ ಪಕ್ಷಿಗಳ ಸಂಗೀತ ಕಛೇರಿ ಮಂದ್ರ ಸ್ಥಾಯಿಯಲ್ಲೂ ತಾರಕದಲ್ಲೂ ಸದಾ ಕಾಲ ನಡೆಯುತ್ತದೆ. ಹಾರುತ್ತಲಿರುವ ಪಕ್ಷಿಗಳ ಸಮೂಹದಿಂದ ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದಂತೆ ಕಾಣಿಸುತ್ತದೆ. ಸರೋವರದ ದಡದಲ್ಲಿ ಮೀನುಗಳಿಗಾಗಿ ತಪೋಭಂಗಿಯಲ್ಲಿ ಕುಳಿತ ಅಗಲ ಕೊಕ್ಕಿನ ಪೆಲಿಕನ್ ಪಕ್ಷಿಗಳು, ಮರದ ಮೇಲಿನ ದೈತ್ಯ ಗಿಡುಗಗಳು, ಕೆಂಪು– ಕಪ್ಪು– ಬಿಳಿ ಬಣ್ಣದ ಗಿಳಿಗಳು ಹಾಗೂ ಹಲವು ಬಗೆಯ ಪಾರಿವಾಳಗಳನ್ನು ಇಲ್ಲಿ ಕಾಣಬಹುದು. ಮೈನಾ ಹಕ್ಕಿಗಳು, ಪಿಕಳಾರಗಳು, ಕಡಲ ಕಾಗೆಗಳು, ಟಿಟ್ಟಿಭಗಳು– ಹೀಗೆ ಗುರ್ತಿಸಿದಷ್ಟೂ ಪಕ್ಷಿಗಳು ಉಳಿಯುತ್ತವೆ. ಪಕ್ಷಿ ಶಾಸ್ತ್ರಜ್ಞರಿಗೂ ತಕ್ಷಣ ಗುರುತಿಸಲಾಗದ ವೈವಿಧ್ಯಮಯ ಪ್ರಭೇದಗಳು ಈ ಪರಿಸರದಲ್ಲಿವೆ.

ಕೊಲ್ಲೇರುವಿಗೆ ಬರುವ ಹಕ್ಕಿಗಳಿಗೆ ಪ್ರವಾಸಿಗಳ ಭಯವಿಲ್ಲ. ಅವು ಜನರ ಇರುವನ್ನು ಲೆಕ್ಕಿಸದೆ ಕ್ರಿಯಾಶೀಲವಾಗಿರುತ್ತವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT