ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚೌರಿ ವಿರುದ್ಧ ವಿಚಾರಣೆಗೆ ವಿಶ್ವಸಂಸ್ಥೆ ನಕಾರ

Last Updated 5 ಮಾರ್ಚ್ 2015, 11:13 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಿತಿಯ ಮಾಜಿ ಮುಖ್ಯಸ್ಥ ರಾಜೇಂದ್ರ್ ಪಚೌರಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ವಿಶ್ವಸಂಸ್ಥೆ ನಿರಾಕರಿಸಿದೆ. ಅಲ್ಲದೇ ಪಚೌರಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೀಘ್ರವೇ ಹೊಸ ಮುಖ್ಯಸ್ಥರನ್ನು ನೇಮಿಸುವುದಾಗಿ ಹೇಳಿದೆ.

‘ಅವರ ಮೇಲಿನ ಆರೋಪಗಳ ಬಗ್ಗೆ ತಿಳಿದಿದೆ. ನಡೆದಿರುವ ಘಟನೆ ಪಚೌರಿ ಅವರ ಸಂಸ್ಥೆಗೆ ಸಂಬಂಧಿಸಿದ್ದು. ಅದಕ್ಕೂ ವಿಶ್ವಸಂಸ್ಥೆಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್–ಕಿ–ಮೂನ್ ಅವರ ವಕ್ತಾರರಾದ ಸ್ಟೀಫನ್ ದುಜಾರಿಕ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅವರ ವಿರುದ್ಧ ವಿಚಾರಣೆ ನಡೆಸುವಿರಾ ಎಂಬ ಪ್ರಶ್ನೆಗೆ, ದುಜಾರಿಕ್ ಅವರು ಪಚೌರಿ ವಿರುದ್ಧದ ವಿಚಾರಣೆಯ ಸಾಧ್ಯತೆ ತಳ್ಳಿಹಾಕಿದರು.

ಅಲ್ಲದೆ, ‘ನಿಮಗೆ ತಿಳಿದಿರುವಂತೆ ಐಪಿಸಿಸಿ ಸಮಿತಿಯೇ ಹಂಗಾಮಿ ಅಧ್ಯಕ್ಷರನ್ನು ಆಯ್ಕೆಮಾಡಿದೆ. ಶೀಘ್ರವೇ ಈ ಸಮಿತಿಯೇ ಪೂರ್ಣಾವಧಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಆದರೆ ಈ ನೇಮಕಕ್ಕೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಗೂ ಸಂಬಂಧವಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

‘ಪಚೌರಿ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಭಾರತೀಯ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಲಿದ್ದಾರೆ’ ಎಂದು ದುಜಾರಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹವಾಮಾನ ಬದಲಾವಣೆ ಮೇಲಿನ ಅಂತರ ರಾಷ್ಟ್ರಗಳ ಸಮಿತಿಯ (ಐಪಿಸಿಸಿ) ಮುಖ್ಯಸ್ಥ ಸ್ಥಾನಕ್ಕೆ ಪಚೌರಿ ಅವರು ಫೆಬ್ರುವರಿ 24ರಂದು ರಾಜೀನಾಮೆ ನೀಡಿದ್ದರು.

ನವದೆಹಲಿಯಲ್ಲಿರುವ ‘ಟೆರಿ’ಯ ಮಹಿಳಾ ನೌಕರರೊಬ್ಬರು ಪಚೌರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

13 ವರ್ಷಗಳ ಐಪಿಸಿಸಿ ಮುಖ್ಯಸ್ಥರಾಗಿ ದುಡಿದ ಪಚೌರಿ,  2007ರಲ್ಲಿ ಪರಿಸರ ಸಂಬಂಧಿತ ವಿಷಯಗಳಿಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಅಲ್ ಗೋರ್ ಅವರೊಂದಿಗೆ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT