ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣಗಳಲ್ಲಿ ಸೈಕಲ್‌ ಪಥ

ಚೀನಾ ಮಾದರಿಯಲ್ಲಿ ನಿರ್ಮಾಣ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸೈಕಲ್ ಬಳಕೆ  ಪ್ರೋತ್ಸಾಹಿ­ಸುವ ನಿಟ್ಟಿನಲ್ಲಿ  ಲೋಕೋಪಯೋಗಿ ಇಲಾಖೆಯಿಂದ ನಗರ, ಪಟ್ಟಣಗಳಲ್ಲಿ ನಿರ್ಮಿಸುವ ರಸ್ತೆಗಳಲ್ಲಿ ಚೀನಾ ಮಾದರಿಯಲ್ಲಿ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ  ಎಚ್.ಸಿ. ಮಹದೇವಪ್ಪ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವಾಗಲೂ ಪ್ರತ್ಯೇಕ ಸೈಕಲ್ ಪಥಕ್ಕಾಗಿ ಜಾಗ ಕಾಯ್ದಿರಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.    ಬೀದರ್‌– ಚಾಮರಾಜ ನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೆರಡು ದಿನದಲ್ಲಿ  ಯೋಜನಾ ವರದಿ ಸಿದ್ಧವಾಗಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ನಾಗಪಾಲ್ ಅವರ ಜೊತೆ ಚರ್ಚೆ ನಡೆಸಿದ್ದು, ಬೀದರ್‌ನಿಂದ ಜೇವರ್ಗಿ ಮಾರ್ಗವಾಗಿ ಲಕ್ಷ್ಮೀಸಾಗರದ ವರೆಗೆ ೨೬೦.೮೧ ಕಿ.ಮೀ ಮತ್ತು ಜೇವರ್ಗಿಯಿಂದ ಚಾಮರಾಜನಗರದ ೬೧೮.೬೦ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುದಾನ ನೀಡಲು  ಮನವಿ ಮಾಡಲಾಗಿದೆ ಎಂದರು.

ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿಗಾಗಿ 500 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಳೆಗಾಲದ ನಂತರ ಈ ಎರಡೂ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ ಎಂದು ವಿವರಿಸಿದರು.

ರಸ್ತೆ ಮಾಹಿತಿ ವ್ಯವಸ್ಥೆ
ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ೧೩ ಸಾವಿರ ಕಿ.ಮೀ ರಸ್ತೆ ಸುಧಾರಣೆಯ ಭರವಸೆ ನೀಡಲಾಗಿತ್ತು. ಈಗಾಗಲೇ ೧೦ ಸಾವಿರ ಕಿ.ಮೀ ರಸ್ತೆ ಸುಧಾರಣೆ ಮುಗಿದಿದೆ. ದೇಶದಲ್ಲೇ ಮೊದಲ ಬಾರಿಗೆ ರಸ್ತೆ ಮಾಹಿತಿ ವ್ಯವಸ್ಥೆಗಾಗಿ (ರೋಡ್‌ ಇನ್‌ಫಾರ್ಮೇಷನ್‌ ಸಿಸ್ಟಂ) ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ರಸ್ತೆ ಸ್ಥಿತಿ, ನಿರ್ವಹಣೆಗೆ ಮಾಡಿದ ಖರ್ಚು, ಗುತ್ತಿಗೆದಾರರ ಮಾಹಿತಿ ಎಲ್ಲವನ್ನೂ  ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ ಎಂದರು.

ಬಾಕಿ ಬಿಲ್‌ ಪಾವತಿ
ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದ ₨2,500 ಕೋಟಿ ಬಿಲ್‌ಗಳಲ್ಲಿ ₨1,500 ಕೋಟಿ ಬಿಲ್‌ ಪಾವತಿ ಮಾಡಲಾಗಿದೆ.  ಕ್ರಿಯಾಯೋಜನೆ ಇಲ್ಲದೆ ₨ 3 ಸಾವಿರ ಕೋಟಿಯ ಕಾಮಗಾರಿಗೆ  ಅನುಮೋದನೆ ನೀಡಲಾಗಿತ್ತು. ಅದನ್ನು ಸರಿಪಡಿಸಲಾಗಿದೆ ಎಂದು ಸಚಿವ ಮಹದೇವಪ್ಪ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT