ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾ ಪೈರೇಟ್ಸ್ ಪಾಲಾದ ಎರಡನೇ ಪ್ರಶಸ್ತಿ

ಪ್ರೊ ಕಬಡ್ಡಿ: ಕನ್ನಡತಿ ತೇಜಸ್ವಿನಿ ನಾಯಕತ್ವದ ಕ್ವೀನ್ಸ್‌ ತಂಡ ಚಾಂಪಿಯನ್‌
Last Updated 31 ಜುಲೈ 2016, 20:06 IST
ಅಕ್ಷರ ಗಾತ್ರ

ಹೈದರಾಬಾದ್‌: ಆರಂಭದಲ್ಲಿ ಚುರುಕಿನ ಪೈಪೋಟಿ ಕಂಡು ಬಂದರೂ ನಂತರ ಸುಲಭವಾಗಿ ಪಾಯಿಂಟ್ಸ್‌ ಕಲೆ ಹಾಕಿದ ಪಟ್ನಾ ಪೈರೇಟ್ಸ್ ತಂಡದವರು ಪ್ರೊ ಕಬಡ್ಡಿ ಟೂರ್ನಿಯ ನಾಲ್ಕನೇ ಆವೃತ್ತಿಯಲ್ಲಿ ಚಾಂಪಿಯನ್ ಆದರು.

ಈ ಮೂಲಕ ತಂಡ ಟೂರ್ನಿಯಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಿತು. ಪಟ್ನಾ ಹೋದ ವರ್ಷ ಕೂಡ ಚಾಂಪಿಯನ್‌ ಆಗಿತ್ತು. ಮುತ್ತಿನ ನಗರಿಯ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಧರ್ಮರಾಜ್ ಚೇರಲಾತನ್‌ ನಾಯಕತ್ವದ ಪಟ್ನಾ 37-29 ಪಾಯಿಂಟ್ಸ್‌ನಿಂದ 2014ರ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಜಯಭೇರಿ ಮೊಳಗಿಸಿತು.

ಆರಂಭದಲ್ಲಿ ಎರಡೂ ತಂಡಗಳು ಉತ್ತಮವಾಗಿ ಆಡಿ ಪಾಯಿಂಟ್ಸ್ ಗಳಿಸಿದ್ದವು. ಆದರೆ 14ನೇ ನಿಮಿಷದಲ್ಲಿ ಪಿಂಕ್‌ ಪ್ಯಾಂಥರ್ಸ್‌ ಆಲೌಟ್‌ ಔಟಾಗಿದ್ದರಿಂದ ಪಟ್ನಾ ಮೊದಲರ್ಧ ಮುಗಿದಾಗ 19–16ರಲ್ಲಿ ಮುನ್ನಡೆ ಪಡೆದುಕೊಂಡಿತು. ದ್ವಿತೀಯಾರ್ಧದಲ್ಲಿನ ರಕ್ಷಣಾ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ ಪಟ್ನಾ 21–18, 25–19, 28–22, 33–24, 36–27 ಹೀಗೆ ಮುನ್ನಡೆಯನ್ನು ಕೊನೆಯವರೆಗೂ ಉಳಿಸಿಕೊಂಡು ಪಂದ್ಯ ಜಯಿಸಿತು.

ಪಿಂಕ್‌ ಪ್ಯಾಂಥರ್ಸ್ ಸೆಮಿಫೈನಲ್‌ನಲ್ಲಿ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಹೈದರಾಬಾದ್‌ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಆದ್ದರಿಂದ ಫೈನಲ್‌ನಲ್ಲಿ ಇಲ್ಲಿನ ಅಭಿಮಾನಿಗಳು ಪಟ್ನಾ ತಂಡದ ಪರ ಬೆಂಬಲ ಕೂಗಿ, ಈ ತಂಡ ಗೆದ್ದಾಗ ಹರ್ಷೋದ್ಗಾರ ಮಾಡಿದ್ದು ವಿಶೇಷವಾಗಿತ್ತು.

ಕನ್ನಡತಿ ತೇಜಸ್ವಿನಿ ಆಟಕ್ಕೆ ಒಲಿದ ಪ್ರಶಸ್ತಿ: ಕೊನೆಯ ನಿಮಿಷದಲ್ಲಿ ರೋಚಕ ಹೋರಾಟಕ್ಕೆ ಸಾಕ್ಷಿಯಾದ ಫೈನಲ್‌ನಲ್ಲಿ ಕರ್ನಾಟಕದ ತೇಜಸ್ವಿನಿಬಾಯಿ ಎರಡು ಪಾಯಿಂಟ್ಸ್‌ ಕಲೆಹಾಕಿ ಕ್ರೀಡಾಂಗಣದಲ್ಲಿ ಸೇರಿದ್ದ ಅಂದಾಜು ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರ ಮನ ಗೆದ್ದರು. ಇದರಿಂದ ತೇಜಸ್ವಿನಿ ನಾಯಕತ್ವದ ಸ್ಟೋರ್ಮ್‌ ಕ್ವೀನ್ಸ್ ತಂಡ ಮಹಿಳಾ ಕಬಡ್ಡಿ ಚಾಲೆಂಜ್‌ನಲ್ಲಿ ಚಾಂಪಿಯನ್‌ ಆಯಿತು.

ಮೊದಲ ಬಾರಿಗೆ ನಡೆದ ಮಹಿಳಾ ಚಾಲೆಂಜ್‌ನಲ್ಲಿ ಕ್ವೀನ್ಸ್ ತಂಡ 24–23 ಪಾಯಿಂಟ್ಸ್‌ನಿಂದ ಕರ್ನಾಟಕದ ಇನ್ನೊಬ್ಬ ಆಟಗಾರ್ತಿ ಮಮತಾ ಪೂಜಾರಿ ನಾಯಕತ್ವದ ಫೈರ್‌ ಬರ್ಡ್ಸ್‌ ಎದುರು ಗೆಲುವು ಸಾಧಿಸಿತು. ರೈಡಿಂಗ್ ಮೂಲಕ ಪಾಯಿಂಟ್‌ ಖಾತೆ ಆರಂಭಿಸಿದ ಫೈರ್‌ ಬರ್ಡ್ಸ್‌ ಮುನ್ನಡೆ ಗಳಿಸಿತು. ಸ್ಟೋರ್ಮ್ ತಂಡದ ಸಾಕ್ಷಿ ಕುಮಾರಿ ಎದುರಾಳಿ ಆಟಗಾರ್ತಿಯರ ಹಿಡಿತದಿಂದ ಚುರುಕಾಗಿ ತಪ್ಪಿಸಿಕೊಂಡು ನಾಲ್ಕು ರೈಡಿಂಗ್‌ ಪಾಯಿಂಟ್ಸ್ ತಂದುಕೊಟ್ಟರು. ನಂತರ ಫೈರ್‌ ಬರ್ಡ್ಸ್‌ ಕೂಡ ತಿರುಗೇಟು ನೀಡಿತು. ಆದ್ದರಿಂದ ಈ ತಂಡ 5–4, 5–5. 7–6, 9–6ರಲ್ಲಿ ಕಠಿಣ ಸವಾಲನ್ನು ಎದುರಿಸಿತು. ಫೈರ್‌ ಬರ್ಡ್ಸ್‌ ಮೊದಲರ್ಧದ ಆಟ ಮುಗಿದಾಗ 10–8ರಲ್ಲಿ ಮುನ್ನಡೆ ಹೊಂದಿತ್ತು.

ಆದ್ದರಿಂದ ಕೊನೆಯ 15 ನಿಮಿಷಗಳ ಆಟ ಕುತೂಹಲಕ್ಕೆ ಕಾರಣವಾಗಿತ್ತು. ಎರಡನೇ ಅವಧಿ ಆರಂಭವಾಗಿ ನಾಲ್ಕೇ ನಿಮಿಷದಲ್ಲಿ ಭಾವ್ನಾ ಯಾದವ್‌ ಎರಡು ರೈಡಿಂಗ್ ಪಾಯಿಂಟ್ಸ್ ಗಳಿಸಿ ಸ್ಟೋರ್ಮ್ ತಂಡದ 12–11ರಲ್ಲಿ ಮುನ್ನಡೆಗೆ ಕಾರಣರಾದರು. ನಂತರ ಬರ್ಡ್ಸ್ ತಂಡದ ರಕ್ಷಣಾ ವಿಭಾಗದ ವೈಫಲ್ಯ ಬಳಸಿಕೊಂಡ ಸ್ಟೋರ್ಮ್‌ ಸತತವಾಗಿ ಪಾಯಿಂಟ್ಸ್ ಕಲೆ ಹಾಕಿತು. 21ನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ 20–13ರಲ್ಲಿ ಮುನ್ನಡೆ ಪಡೆದುಕೊಂಡಿತು. ಆದ್ದರಿಂದ ಪಂದ್ಯ ಏಕಪಕ್ಷೀಯವಾಗಿ ಮುಗಿಯಬಹುದು ಎಂದು ನಿರೀಕ್ಷಿಸಿದ್ದವರೇ ಹೆಚ್ಚು. ಆದರೆ ಪಂದ್ಯ ಮುಗಿಯಲು ಎರಡು ನಿಮಿಷ ಬಾಕಿಯಿದ್ದಾಗ ಕ್ವೀನ್ಸ್ ತಂಡದವರೂ ತಪ್ಪುಗಳನ್ನು ಮಾಡಿ ಎದುರಾಳಿ ತಂಡಕ್ಕೆ ಪಾಯಿಂಟ್ಸ್‌ ಕೊಟ್ಟರು.

ಕೊನೆಯ ನಿಮಿಷದ ಮೋಡಿ: ಒಂದು ನಿಮಿಷದ ಆಟ ಬಾಕಿಯಿದ್ದಾಗ ಫೈರ್ ಬರ್ಡ್ಸ್ ತಂಡ 17–22ರಲ್ಲಿ ಹಿನ್ನಡೆ ಹೊಂದಿತ್ತು. ಆಗ ಕೆ. ರಂಜು ಒಂದೇ ರೈಡಿಂಗ್‌ನಲ್ಲಿ ಮೂರು ಪಾಯಿಂಟ್ಸ್ ಕಲೆ ಹಾಕಿ ಅಂತರವನ್ನು 20–22ಕ್ಕೆ ತಗ್ಗಿಸಿದರು. ಕ್ವೀನ್ಸ್ ತಂಡದ ಆಟಗಾರ್ತಿಯ ಒಂದು ಖಾಲಿ ರೈಡ್‌ನ ಬಳಿಕ ಮತ್ತೆ ರೈಡ್‌ಗೆ ಹೋದ ರಂಜು ಒಂದು ರೈಡಿಂಗ್ ಮತ್ತು ಎರಡು ಲೋನಾ ಪಾಯಿಂಟ್ಸ್ ಗಳಿಸಿ 23–22ರಲ್ಲಿ ಮುನ್ನಡೆ ತಂದುಕೊಟ್ಟಾಗ ಫೈರ್‌ ಬರ್ಡ್ಸ್‌ ತಂಡದವರು ಪಂದ್ಯ ಗೆದ್ದಷ್ಟೇ ಸಂಭ್ರಮಿಸಿದರು.

ರಂಜು ಕೊನೆಯ ನಿಮಿಷದ ತಮ್ಮ ಎರಡನೇ ರೈಡ್‌ನಲ್ಲಿ ಕೇವಲ ಎರಡು ಸೆಕೆಂಡು ‘ಟೈಂ ಪಾಸ್‌’ ಮಾಡಿ ಬಂದಿದ್ದರೆ ಫೈರ್‌ ಬರ್ಡ್ಸ್‌ ತಂಡಕ್ಕೆ ಜಯ ಖಚಿತವಾಗುತ್ತಿತ್ತು. ಆದರೆ ಈ ಆಟಗಾರ್ತಿ ಪಂದ್ಯ ಮುಗಿಯಲು ಎರಡು ಸೆಕೆಂಡುಗಳಷ್ಟೇ ಬಾಕಿ ಇರುವಾಗಿ ತಮ್ಮ ಅಂಕಣಕ್ಕೆ ಮರಳಿದರು. ಇದರಿಂದ ಸ್ಟೋರ್ಮ್ ತಂಡಕ್ಕೆ ಕೊನೆಯ ರೈಡ್ ಮಾಡಲು ಅವಕಾಶ ಲಭಿಸಿತು. ಈ ವೇಳೆ ಕ್ವೀನ್ಸ್ ತಂಡ 22 ಮತ್ತು ಫೈರ್‌ ಬರ್ಡ್ಸ್‌ 23 ಪಾಯಿಂಟ್ಸ್‌ ಹೊಂದಿತ್ತು.

ಈ ವೇಳೆ ನಾಯಕಿ ತೇಜಸ್ವಿನಿ ರೈಡ್‌ಗೆ ಬಂದು ಫೈರ್‌ ಬರ್ಡ್ಸ್‌ ಅಂಕಣದಲ್ಲಿ ಚುರುಕಿನ ವೇಗದಲ್ಲಿ ಓಡಾಡಿದರು. ಮೊದಲು ಒಂದು ಬೋನಸ್ ಪಾಯಿಂಟ್‌ ಪಡೆದು, ನಂತರ ರೈಡಿಂಗ್ ಮೂಲಕ ಪಾಯಿಂಟ್‌ ಕಲೆ ಹಾಕಿದರು. ಹೀಗೆ ಅತ್ಯಮೂಲ್ಯ ಎರಡು ಪಾಯಿಂಟ್ಸ್ ಗಳಿಸಿದ ಅವರು ಅಷ್ಟೇ ಚುರುಕಾಗಿ ಗೆರೆ ಮುಟ್ಟಿ ತಮ್ಮ ಅಂಕಣದಲ್ಲಿ ಕುಣಿದಾಡಿ ಸಂಭ್ರಮಿಸಿದರು. ಸಹ ಆಟಗಾರ್ತಿಯರು ತೇಜಸ್ವಿನಿ ಅವರನ್ನು ಎತ್ತಿ ಕುಣಿದರು. ಗೆಲುವಿಗೂ ಮೊದಲೇ ಸಂಭ್ರಮಾಚರಣೆ ಮಾಡಿದ್ದ ಫೈರ್‌ ಬರ್ಡ್ಸ್‌ ನಿರಾಸೆ ಅನುಭವಿಸಿತು.

ಪುಣೇರಿಗೆ ಮೂರನೇ ಸ್ಥಾನ: ಪುಣೇರಿ ಪಲ್ಟನ್‌ ತಂಡ 40–35 ಪಾಯಿಂಟ್ಸ್‌ನಿಂದ ತೆಲುಗು ಟೈಟನ್ಸ್ ವಿರುದ್ಧ ಜಯ ಪಡೆದು ಮೂರನೇ ಸ್ಥಾನ ಪಡೆದುಕೊಂಡಿತು.ಮೊದಲರ್ಧದ ಆಟ ಮುಗಿದಾಗ ಪುಣೇರಿ 17–14ರಲ್ಲಿ ಮುನ್ನಡೆ ಹೊಂದಿತ್ತು. ಪಂದ್ಯ ಮುಗಿಯಲು ಆರು ನಿಮಿಷ ಬಾಕಿಯಿದ್ದಾಗ ಉಭಯ ತಂಡಗಳು ತಲಾ 29 ಪಾಯಿಂಟ್ಸ್‌ ಹೊಂದಿದ್ದವು. ಆದರೆ ಟೈಟನ್ಸ್ ಆಟಗಾರರು ರಕ್ಷಣಾ ವಿಭಾಗದಲ್ಲಿ ಪದೇ ಪದೇ ತಪ್ಪು ಮಾಡಿದ್ದರಿಂದ ಪುಣೇರಿಗೆ ಜಯ ಒಲಿಯತು. ಈ ತಂಡ ಮೂರನೇ ಆವೃತ್ತಿಯಲ್ಲಿಯೂ ಮೂರನೇ ಸ್ಥಾನ ಪಡೆದಿತ್ತು. ನಾಲ್ಕೂ ಆವೃತ್ತಿ ಸೇರಿ ಟೈಟನ್ಸ್ ತಂಡದ ರಾಹುಲ್‌ ಚೌಧರಿ 500 ಪಾಯಿಂಟ್ಸ್‌ ಗಳಿಸಿದ ಸಾಧನೆ ಮಾಡಿದರು.

ನಟರಾದ ಹೃತಿಕ್ ರೋಷನ್‌, ವಿಕ್ಟರಿ ವೆಂಕಟೇಶ್‌, ದಗ್ಗುಬಾಟಿ ರಾಣಾ, ಪ್ಯಾಂಥರ್ಸ್‌ ಮಾಲೀಕ ಅಭಿಷೇಕ್‌ ಬಚ್ಚನ್‌ ಮತ್ತು ಮಾಜಿ ಕ್ರಿಕೆಟಿಗ ವಿ.ವಿ.ಎಸ್‌ ಲಕ್ಷ್ಮಣ್‌ ಸೇರಿದಂತೆ ಹಲವು ತಾರೆಯರು ಪ್ರೊ ಕಬಡ್ಡಿಯ ಪಂದ್ಯಗಳಿಗೆ ಸಾಕ್ಷಿಯಾದರು.

ಹಿಂದಿನ ಚಾಂಪಿಯನ್ನರು
ವರ್ಷ   ತಂಡ
2014  ಪಿಂಕ್‌ ಪ್ಯಾಂಥರ್ಸ್‌
2015  ಯು ಮುಂಬಾ
2016ರ  ಜನವರಿ ಪಟ್ನಾ ಪೈರೇಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT