ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಕೃಷಿ ವಿಷಯ ಅಳವಡಿಕೆಗೆ ಒತ್ತಾಯ

ರಾಮನಗರದಲ್ಲಿ ಕೃಷಿ ತಜ್ಞ ಶಿವಾನಂದ ಕಳವೆಗೆ ಕೃಷ್ಣಾನಂದ ಕಾಮತ್ ವಾರ್ಷಿಕ ಪ್ರಶಸ್ತಿ ಪ್ರದಾನ
Last Updated 30 ನವೆಂಬರ್ 2015, 11:19 IST
ಅಕ್ಷರ ಗಾತ್ರ

ರಾಮನಗರ: ‘ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಕೃಷಿಯ ಪಠ್ಯವನ್ನು ಅಳವಡಿಸಬೇಕು’ ಎಂದು ಕೃಷಿತಜ್ಞ ಶಿವಾನಂದ ಕಳವೆ ಒತ್ತಾಯಿಸಿದರು. ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದಿಶ್ರೀ ದಿಬ್ಬದಲ್ಲಿ ಹೊನ್ನಾವರದ ಡಾ. ಕೃಷ್ಣಾನಂದ ಕಾಮತ್ ಪ್ರತಿಷ್ಠಾನ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಡಾ. ಕೃಷ್ಣಾನಂದ ಕಾಮತ್ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದು ಕೃಷಿ ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಒಂದನೇ ತರಗತಿ ಇಂದ ಎಸ್ಸೆಸ್ಸೆಲ್ಸಿ ವರೆಗಿನ ಪಠ್ಯಕ್ರಮದಲ್ಲಿ ಕೃಷಿ ಚಟುವಟಿಕೆಗಳ ಮಾಹಿತಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಚಿಂತಿಸಬೇಕು’ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಮಣ್ಣನ್ನು ಮುಟ್ಟದಂತೆ ಮಾಡುತ್ತಿದ್ದಾರೆ. ಮಣ್ಣಿನ ಮಹತ್ವವನ್ನು ಕಡೆಗಣಿಸುತ್ತಿದ್ದಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಮಕ್ಕಳು ಎಂಜಿನಿಯರ್‌ಗಳಾಗಲಿ, ಒಳ್ಳೆಯ ಕೆಲಸಕ್ಕೆ ಸೇರಲಿ ಎಂದು ಆಶಿಸುತ್ತಾರೆ. ಎಲ್ಲರೂ ಕಂಪ್ಯೂಟರ್ ಅನ್ನು ನೋಡುತ್ತಾ ಕುಳಿತರೆ ಮಣ್ಣನ್ನು ನೋಡುವವರು ಯಾರು ಎಂದು ಪ್ರಶ್ನಿಸಿದರು.

‘ಈ ತಲೆಮಾರು ಕೃಷಿ ಚಟುವಟಿಕೆಯನ್ನು ತಿರಸ್ಕರಿಸುತ್ತಿದೆ. ಭೂಮಿ ಮತ್ತು ಮನುಷ್ಯರಿಗಿರುವ ಸಂಬಂಧವನ್ನು ಕಡೆಗಣಿಸಲಾಗುತ್ತಿದೆ. ವೈವಿಧ್ಯಮಯವಾಗಿರುವ ಪರಿಸರವನ್ನು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಹವಾಮಾನದಲ್ಲಿ ವೈಪರಿತ್ಯ ಉಂಟಾಗಿ ಅನಾಹುತ ಸಂಭವಿಸುತ್ತಿವೆ’ ಎಂದು ತಿಳಿಸಿದರು.

‘ರೈತರು ಇಂದು ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಗಳು ತಾತ್ಕಾಲಿಕವಾಗಿರುತ್ತವೆ. ಕೃಷಿಯಲ್ಲಿ ವೈಜ್ಞಾನಿಕ, ತಾಂತ್ರಿಕ, ಆಧುನಿಕ ಪದ್ಧತಿ ಅಳವಡಿಸಿಕೊಂಡರೆ ಈ ಎಲ್ಲಾ ಸಮಸ್ಯೆಗೆ ಪರಿಹಾರವಿದೆ.

ಮಳೆ ನೀರನ್ನು ತಮ್ಮ ಹೊಲದಲ್ಲಿಯೇ ಇಂಗಿಸಿದರೆ ಅಂತರ್ಜಲದ ಪ್ರಮಾಣ ಹೆಚ್ಚುತ್ತದೆ. ತಾವು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆಯನ್ನು ಕಂಡುಕೊಳ್ಳಲು ಮೊಬೈಲ್ ಸೇರಿದಂತೆ ಹಲವು ಉಪಕರಣಗಳಿದ್ದು, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕತ್ತರಿಸಲಾಗುತ್ತಿದೆ. ಗಣಿಗಾರಿಕೆಯಿಂದ ಬೆಟ್ಟಗುಡ್ಡಗಳು ನಾಶವಾಗುತ್ತಿವೆ. ಬೆಟ್ಟಗಳಿಂದ ಕೃಷಿಗೆ ಹಲವು ರೀತಿಯಲ್ಲಿ ಅನುಕೂಲವಾಗುತ್ತದೆ. ಹಲವು ಖನಿಜಾಂಶಗಳು ಬೆಟ್ಟಗಳ ನೀರಿನಿಂದ ಸಿಗುತ್ತವೆ. ಉತ್ತಮ ಕೃಷಿಯನ್ನು ಮಾಡಲು ಬೆಟ್ಟಗುಡ್ಡಗಳು ಸಹಕರಿಸುತ್ತವೆ’ ಎಂದು ಅವರು ಹೇಳಿದರು.

‘ರೈತರು ನಗರದ ಅಕರ್ಷಣೆಗೆ ಒಳಗಾಗಿ ತಮ್ಮ ಜಮೀನುಗಳನ್ನು ಮಾರುತ್ತಿದ್ದಾರೆ. ಆ ಹಣದಿಂದ ವಿಲಾಸಿ ಜೀವನ ನಡೆಸಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತರು ತಮ್ಮ ಜಮೀನುಗಳನ್ನು ಮಾರದೆ ಭವಿಷ್ಯಕ್ಕೆ ಇಟ್ಟುಕೊಳ್ಳುವುದು ಒಳ್ಳೆಯದು’ ಎಂದರು.

2015-16ನೇ ಸಾಲಿನ ಡಾ. ಕೃಷ್ಣಾನಂದ ಕಾಮತ್ ಅವರ ಸ್ಮರಣಾರ್ಥ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಕೃಷಿ ತಜ್ಞ ಶಿವಾನಂದ ಕಳವೆ ಅವರಿಗೆ ಪ್ರಧಾನ ಮಾಡಲಾಯಿತು. ಪ್ರಶಸ್ತಿಯು ₹ 25 ಸಾವಿರ ನಗದು, ಸ್ಮರಣ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.

ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು, ಡಾ. ಕೃಷ್ಣಾನಂದ ಕಾಮತ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್, ಎಸ್ಡಿಎಂ ಕಾಲೇಜಿನ ಪ್ರೊ. ನಾಗರಾಜ ಹೆಗಡೆ ಕಪಗಲ್, ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ, ಕೆಎಂಎಫ್ ಉಪನಿರ್ದೇಶಕ ಕೆ.ಎಸ್.ರಂಗೇಗೌಡ, ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ದೇವರಾಜು, ಆಕಾಶವಾಣಿ  ಕೇಂದ್ರದ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT