ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಪ್ರಹಸನ ಸಾಕು

Last Updated 8 ಮೇ 2014, 19:30 IST
ಅಕ್ಷರ ಗಾತ್ರ

ಪಡಿತರ ಚೀಟಿಯೊಂದಿಗೆ ಮತದಾರರ ಗುರುತಿನ ಚೀಟಿ (ಎಪಿಕ್‌ ಕಾರ್ಡ್‌) ಸಂಖ್ಯೆಯನ್ನು ಹೊಂದಾಣಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಕ್ರಮ ಪಡಿತರ ಚೀಟಿಗಳ ನಿಯಂತ್ರಣಕ್ಕೆ ಹಾಗೂ ಪಡಿತರ ಆಹಾರ ಧಾನ್ಯಗಳ ದುರ್ಬಳಕೆ ತಡೆಗಟ್ಟಲು ಇದು ಪರಿಣಾಮಕಾರಿ ಮಾರ್ಗ ಎನ್ನುವ ಚಿಂತನೆ ಸರ್ಕಾರದ್ದು. ಆದರೆ, ಇದು ಜನಸಾಮಾನ್ಯರನ್ನು ಪೇಚಿಗೆ ಸಿಲು­ಕಿ­ಸುವ ಹಾಗೂ ಅವರನ್ನು ಗೋಳು ಹೊಯ್ದುಕೊಳ್ಳುವ ಮತ್ತೊಂದು ಕಸ­ರ­ತ್ತಲ್ಲದೆ ಬೇರೆ ಏನಲ್ಲ. ಕಳೆದ ಹತ್ತು ವರ್ಷಗಳಲ್ಲಿ ಪಡಿತರ ವ್ಯವಸ್ಥೆ­ಯನ್ನು ವ್ಯವಸ್ಥಿತಗೊಳಿಸುವ ಹೆಸರಿನಲ್ಲಿ ಇಂಥ ಸಾಕಷ್ಟು ಪ್ರಹಸನಗಳು ನಡೆ­ದಿವೆ.

ಪಡಿತರ ವ್ಯವಸ್ಥೆಯಲ್ಲಿ ದೋಷಗಳನ್ನು ಸರಿಪಡಿಸುವ ಪ್ರಯತ್ನಗಳು ಗಿಮಿಕ್‌ಗಳಾಗಿ ಪರಿಣಮಿಸಿರುವುದನ್ನು ಹಾಗೂ ಆಡಳಿತ ಯಂತ್ರದ ವೈಫಲ್ಯ­ವನ್ನು ಮರೆಮಾಚುವ ದಾರಿಗಳಾಗಿರುವುದನ್ನು ರಾಜ್ಯದ ಜನಸಾಮಾನ್ಯರು ನೋಡಿದ್ದಾರೆ. ಈ ಮೊದಲು ರೇಷನ್‌ ಕಾರ್ಡ್‌ ಪಡೆಯಲು ವಿದ್ಯುತ್‌ ಮೀಟ­ರ್‌ನ ಆರ್‌.ಆರ್‌. ಸಂಖ್ಯೆಯನ್ನು ನೀಡಬೇಕಿತ್ತು. ಪಡಿತರ ದುರ್ಬಳಕೆ ತಡೆಗೆ ಸ್ಮಾರ್ಟ್‌ ಕಾರ್ಡ್‌ ಬಳಸಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು.

ಬಯೋ ಮೆಟ್ರಿಕ್‌ ಪಡೆಯುವ ಪ್ರಯತ್ನಗಳೂ ಚಾಲ್ತಿಯಲ್ಲಿವೆ. ಈಗ ಹೊಸ ಪ್ರಯತ್ನವಾಗಿ ಎಪಿಕ್‌ ಕಾರ್ಡ್‌ ಕಸರತ್ತು ಶುರುವಾಗಿರುವುದನ್ನು ನೋಡಿ­ದರೆ, ಪ್ರಜೆಗಳನ್ನು ಪ್ರಯೋಗಪಶುಗಳೆಂದು ಸರ್ಕಾರ ಭಾವಿಸಿದಂತಿದೆ. ಸರ್ಕಾರದ ಹೊಸ ಚಿಂತನೆಯಲ್ಲಿ ರೇಷನ್‌ ಕಾರ್ಡುದಾರರು ಎಪಿಕ್‌ ಕಾರ್ಡ್‌ ಹಾಗೂ ಮೊಬೈಲ್‌ ಫೋನ್‌ ಹೊಂದುವುದು ಅಗತ್ಯವಾಗಿದ್ದು, ಇದು ಜನತಂತ್ರದ ಆಶಯಗಳಿಗೆ ವಿರುದ್ಧವಾಗಿದೆ ಹಾಗೂ ‘ಆಹಾರ ಭದ್ರತಾ ಕಾಯ್ದೆ’ಯ ಅಣಕದಂತಿದೆ.

ನ್ಯಾಯಬೆಲೆ ಅಂಗಡಿಗಳ ನಿರ್ವಹಣೆಯನ್ನು ಸರಿಯಾಗಿ ಮಾಡಲು ಸಾಧ್ಯ­ವಾ­ಗದ ಸರ್ಕಾರ ಇದೀಗ, ಫುಡ್‌ ವರ್ಲ್ಡ್‌ಗಳ ಮೂಲಕ ಆಹಾರ ಧಾನ್ಯ­ಗಳನ್ನು ನೀಡಲು ಹಾಗೂ ಪೆಟ್ರೋಲ್‌ ಬಂಕ್‌ಗಳ ಮಾದರಿಯಲ್ಲಿ ಬಂಕ್‌­ಗಳನ್ನು ಸ್ಥಾಪಿಸಿ ಸೀಮೆಎಣ್ಣೆ ವಿತರಿಸಲು ಉದ್ದೇಶಿಸಿದೆ. ಆಹಾರ ಧಾನ್ಯಗಳನ್ನು ವಿತರಿಸುವ ಮಾತಿರಲಿ, ಅರ್ಹರಿಗೆ ಪಡಿತರ ಚೀಟಿಗಳನ್ನು ನೀಡುವುದೇ ಈವ­ರೆಗೆ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

2011ರ ವೇಳೆಗೆ ರಾಜ್ಯದಲ್ಲಿ ಪಡಿತರ ಚೀಟಿ­ಗಳ ಸಂಖ್ಯೆ 1.73 ಕೋಟಿಯಷ್ಟಿತ್ತು. ಆ ಅವಧಿಯಲ್ಲಿ ರಾಜ್ಯದಲ್ಲಿದ್ದ ಕುಟುಂ­ಬ­ಗಳ ಸಂಖ್ಯೆ 1.32 ಕೋಟಿ. ಪ್ರಸ್ತುತ 1.30 ಕೋಟಿಗೂ ಹೆಚ್ಚು ಸಕ್ರಿಯ ರೇಷನ್‌ ಕಾರ್ಡ್‌ಗಳಿವೆ ಎನ್ನುವುದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹ­ಕರ ವ್ಯವಹಾರಗಳ ಇಲಾಖೆ ಲೆಕ್ಕಾಚಾರ. ಆದರೂ ಅನೇಕ ಮಂದಿ ಅರ್ಹರು ಪಡಿತರ ಚೀಟಿಗಳಿಂದ ವಂಚಿತರಾಗಿದ್ದಾರೆ.

ಈ ಎಲ್ಲ ಸಂಗತಿಗಳನ್ನು ಗಮ­ನಿ­ಸಿದರೆ, ರೇಷನ್‌ ಕಾರ್ಡ್‌ಗಳನ್ನು ನೀಡುವುದರ ಹಿಂದೆ ಜನಹಿತ­ಕ್ಕಿಂ­ತಲೂ ಚುನಾವಣಾ ರಾಜಕೀಯವೇ ಹೆಚ್ಚಾಗಿರುವಂತಿದೆ. ಸರ್ಕಾರದ ಮಹತ್ವಾ­ಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆ ಕೂಡ ದೂರುಗಳಿಂದ ಮುಕ್ತ­ವಾ­ಗಿಲ್ಲ.

ಪಡಿತರ ವ್ಯವಸ್ಥೆ ದೋಷಮುಕ್ತ ಆಗಿರಬೇಕು ಎನ್ನುವ ಸರ್ಕಾರದ ಆಶಯ ಸರಿಯಾದುದಾದರೂ, ಈ ನಿಟ್ಟಿನಲ್ಲಿ ಅದು ದೃಢ ಹಾಗೂ ಪ್ರಾಮಾಣಿಕ ಹೆಜ್ಜೆಗಳನ್ನು ಇಟ್ಟಿಲ್ಲ, ಜನಸ್ನೇಹಿ ನಿರ್ಧಾರಗಳನ್ನು ಕೈಗೊಂಡಿಲ್ಲ. ಆ ಕಾರಣ­ದಿಂದಲೇ ಪ್ರಸ್ತುತ ಎಪಿಕ್ ಕಾರ್ಡ್‌ ಹೊಂದಾಣಿಕೆ ಪ್ರಯತ್ನ ಒಂದು ಕಸರತ್ತಿನಂತೆ ಕಾಣಿಸುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT