ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಥಸಂಚಲನ ಕಣ್ತುಂಬಿಕೊಂಡ ಒಬಾಮ

ಸರಳ, ಸ್ಥಿರ ಉದ್ಯಮ ನೀತಿ
Last Updated 26 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವ್ಯಾಪಾರೋದ್ಯಮ ನಿಯಂತ್ರಣ ಮತ್ತು ತೆರಿಗೆ ನೀತಿಯಲ್ಲಿ ‘ಸ್ಥಿರತೆ’ ಹಾಗೂ ಇನ್ನಷ್ಟು ‘ಸರಳತೆ‘ ಅಳವಡಿಸಿಕೊಳ್ಳ­ಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ನೀಡಿದ ಸಲಹೆಗೆ ಓಗೊಟ್ಟ  ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಮುಕ್ತ ವಾಣಿಜ್ಯ ವಹಿವಾಟು ವಾತಾ­ವರಣ ನಿರ್ಮಿಸುವ ಭರವಸೆ ನೀಡಿದರು. 

ಭಾರತ ಮತ್ತು  ಅಮೆರಿಕದ ಕಂಪೆನಿ­ಗಳ ಮುಖ್ಯ ಕಾರ್ಯನಿರ್ವಾಹಕ ಅಧಿ­ಕಾರಿಗಳನ್ನು (ಸಿಇಒ) ಉದ್ದೇಶಿಸಿ ಸೋಮ­­ವಾರ ಸಂಜೆ ಮಾತನಾಡಿದ ಸಂದರ್ಭದಲ್ಲಿ ಇಬ್ಬರೂ ನಾಯಕರು ಉಭಯ ದೇಶಗಳ ಉದ್ಯಮ ದಿಗ್ಗಜರ  ನಿರೀಕ್ಷೆಗಳನ್ನು ಈಡೇರಿ­ಸುವ ಭರವಸೆಯ ಮಾತುಗಳನ್ನಾಡಿದರು.

ಭಾರತದಲ್ಲಿ ಮೂಲಸೌಕರ್ಯ ನಿರ್ಮಾಣ, ರಸ್ತೆ ಜಾಲದ ವಿಸ್ತರಣೆ, ಬ್ರಾಡ್‌ಬ್ಯಾಂಡ್‌ ಸಂಪರ್ಕ ಮತ್ತಿತರ ಕ್ಷೇತ್ರಗಳಲ್ಲಿ ಹಣ ತೊಡಗಿಸಲು  ವಿಪುಲ ಅವಕಾಶಗಳಿವೆ ಎಂದು ಒಬಾಮ ಅಭಿಪ್ರಾಯಪಟ್ಟರು. ‘ಜಗತ್ತಿನ ಎರಡು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ (ಭಾರತ ಮತ್ತು ಅಮೆರಿಕ) ವ್ಯಾಪಾರ– ವಹಿವಾಟನ್ನು ಗಮನಾರ್ಹವಾಗಿ  ಹೆಚ್ಚಿ­ಸುವ ದಿಸೆಯಲ್ಲಿ ಬೌದ್ಧಿಕ ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಅಗತ್ಯ ಇದೆ.

ಭಾರತದ ರೈಲ್ವೆ, ಬಂದರು, ರಸ್ತೆ, ಶುದ್ಧ ಇಂಧನ ಉತ್ಪಾದನಾ ಘಟಕಗ­ಳಂತಹ ಮೂಲಸೌಕರ್ಯ ನಿರ್ಮಾಣ ಯೋಜನೆಗಳಲ್ಲಿ ಭಾಗಿಯಾಗಲು ತಮ್ಮ ರಾಷ್ಟ್ರ ಉತ್ಸುಕವಾಗಿದೆ. ಭಾರತದಲ್ಲಿ ಹೆಚ್ಚಿನ ಆರ್ಥಿಕ ಬೆಳವ­ಣಿಗೆ, ಬಂಡವಾಳ ಹೂಡಿಕೆಗೆ ಅನುವು ಮಾಡಿ­ಕೊ­ಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಇಲ್ಲಿನ ‘ವಾತಾ­ವರಣ’ಕ್ಕೆ ಹೊಸ ಶಕ್ತಿ, ಬಿರುಸು ತುಂಬಿದ್ದಾರೆ.

ಅಮೆರಿಕದ ಆರ್ಥಿಕತೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಜ್ಞಾನಧಾರಿತ­ವಾಗುತ್ತಿದ್ದು ರಫ್ತುದಾರರು ಬೌದ್ಧಿಕ ಹಕ್ಕು ಸ್ವಾಮ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ಹೊಂದಿದ್ದಾರೆ. ಭಾರತ­ದಲ್ಲಿ ಬೌದ್ಧಿಕ ಹಕ್ಕು ರಕ್ಷಣೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಕಾನೂನು ಇಲ್ಲದಿರುವು­ದರಿಂದ ವ್ಯಾಪಾರ ವಹಿವಾಟಿನ ಮೇಲೆ ದುಷ್ಪರಿಣಾಮವಾಗುತ್ತಿದೆ. ಅಮೆರಿಕ– ಭಾರತ ನಡುವೆ ಈಗ ೬ ಲಕ್ಷ ಕೋಟಿ ಮೊತ್ತದ ದ್ವಿಪಕ್ಷೀಯ ವಹಿವಾಟು ನಡೆಯುತ್ತಿದೆ.

ಅಮೆರಿಕ–ಚೀನಾ ನಡುವೆ ೩೨.೫ ಲಕ್ಷ ಕೋಟಿ  ಮೊತ್ತದ ದ್ವಿಪಕ್ಷೀಯ ವಹಿವಾಟು ನಡೆಯುತ್ತಿದೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಉಭಯ ರಾಷ್ಟ್ರಗಳ ವಹಿವಾಟು ಮೊತ್ತ ಕೂಡ ಚೀನಾ­ದೊಂದಿಗಿನ ವಹಿ­ವಾಟು ಮೊತ್ತಕ್ಕೆ ಸರಿಸಮವಾಗಿ ಬೆಳೆಯಲು ಅವಕಾಶ­ಗಳಿವೆ.

ಅಮೆರಿಕವು ತನ್ನ ಒಟ್ಟು ರಫ್ತಿನಲ್ಲಿ ಶೇ ೧ರಷ್ಟನ್ನು ಮಾತ್ರ ಭಾರತಕ್ಕೆ ರಫ್ತು ಮಾಡುತ್ತಿದ್ದರೆ, ತನ್ನ ಒಟ್ಟು ಆಮದಿನಲ್ಲಿ ಶೇ ೨ರಷ್ಟನ್ನು ಮಾತ್ರ  ಇಲ್ಲಿಂದ ತರಿಸಿಕೊಳ್ಳುತ್ತಿದೆ. ಇದರಲ್ಲಿ ಸಮತೋ­ಲನ ಸಾಧಿಸಲು ಸಾಕಷ್ಟು ಅವಕಾಶ­ಗಳಿವೆ.
ಎರಡೂ ರಾಷ್ಟ್ರಗಳು ವ್ಯಾಪಾರ ವಹಿವಾಟನ್ನು ಸುಲಭಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ’ ಎಂದರು.

‘ಆರ್ಥಿಕ ಬೆಳವಣಿಗೆಯನ್ನು ಜಿಡಿಪಿ ಮತ್ತು ಲೆಕ್ಕಪತ್ರ ವಿವರಗಳಿಂದ ಅಳೆ­ಯಲು ಸಾಧ್ಯವಿಲ್ಲ. ಯಾವುದು ಜನರ ಬದುಕಿನಲ್ಲಿ ಸುಧಾರಣೆಗೆ ನೆರವಾ­ಗುತ್ತದೋ ಅದೇ ನಿಜವಾದ ಬೆಳವಣಿಗೆ’ ಎಂದು ವ್ಯಾಖ್ಯಾನಿಸಲು ಒಬಾಮ ಮರೆಯಲಿಲ್ಲ.
ಪ್ರಧಾನಿ ಭರವಸೆ: ಉದ್ಯಮ ಸ್ನೇಹಿ ತೆರಿಗೆ ನೀತಿ ಜಾರಿಗೊಳಿಸುವ ಹಾಗೂ ಅನಿಶ್ಚಿತತೆಗಳನ್ನು ನಿವಾರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

ತಮ್ಮ ಸರ್ಕಾರವು ಹಿಂದಿನ ಕೆಲವು ಅತಿರೇಕಗಳನ್ನು ಕೈಬಿಟ್ಟಿದೆ. ಮುಂದಿನ ದಿನಗಳಲ್ಲಿ, ಬಾಕಿ ಉಳಿದಿರುವ ಅನಿಶ್ಚಿತತೆಗಳನ್ನೂ ನೀಗಲಾಗುವುದು ಎಂದರು. ಹೀಗೆ ಹೇಳುವ ಮೂಲಕ, ಜಾಗತಿಕ ಹೂಡಿಕೆದಾರರಿಂದ ಆಕ್ಷೇಪಕ್ಕೆ ಒಳಗಾಗಿದ್ದ ಹಿಂದಿನ ಸರ್ಕಾರದ ಪೂರ್ವಾನ್ವಯ ತೆರಿಗೆ ಕಾನೂನಿನ ಬಗ್ಗೆ ಅವರು ಪ್ರಸ್ತಾಪಿಸಿದರು. ದೇಶವನ್ನು ಮೊದಲ ೫೦ ವ್ಯಾಪಾರ ಸ್ನೇಹಿ ತಾಣಗಳಲ್ಲಿ ಒಂದನ್ನಾಗಿಸಬೇಕು ಎಂಬುದು ತಮ್ಮ ಸರ್ಕಾರದ ತಕ್ಷಣದ ಗುರಿಯಾಗಿದೆ ಎಂದರು.
ನಂತರ ಇಬ್ಬರೂ ನಾಯಕರು ಅಮೆರಿಕ– ಭಾರತ ವಾಣಿಜ್ಯ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದಾಗಲೂ ಬಹುತೇಕ ಇವೇ ವಿಷಯಗಳು ಪ್ರಸ್ತಾಪವಾದವು.

ಪಥಸಂಚಲ­ನಕ್ಕೆ ಸಾಕ್ಷಿ
ದೇಶದ ಗಣರಾಜ್ಯೋತ್ಸವ ಸಮಾ­ರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿ­ರುವ ಅಮೆ­ರಿಕದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬರಾಕ್‌ ಒಬಾಮ,  2 ಗಂಟೆಗಳ ಕಾಲ ಪಥಸಂಚಲ­ನದ ಸೊಬಗು ಕಣ್ತುಂಬಿಕೊಂಡರು.

 24,000 ಕೋಟಿ ಸಾಲ
ಅಮೆರಿಕದ ಬ್ಯಾಂಕುಗಳು ಭಾರತಕ್ಕೆ 24,000 ಕೋಟಿಗಳಷ್ಟು   ಸಾಲದ ನೆರವು ನೀಡಲಿವೆ. ರೈಲ್ವೆ, ಬಂದರು, ರಸ್ತೆ ಜಾಲ, ಶುದ್ಧ ಇಂಧನ ಉತ್ಪಾದನಾ ಘಟಕ­ದಂತಹ ಮೂಲ­ಸೌಕರ್ಯ ನಿರ್ಮಾ­ಣದಲ್ಲಿ ಭಾರತಕ್ಕೆ ಅಮೆರಿಕವು ನೆರವು ನೀಡಲಿದೆ ಎಂದು ಒಬಾಮ ತಿಳಿಸಿದರು.

ಇದರಲ್ಲಿ ೬,೦೦೦ ಕೋಟಿಗಳನ್ನು ‘ಭಾರತ­ದಲ್ಲೇ ತಯಾರಿಸಿ’ ಕರೆಗೆ ಪೂರಕವಾಗಿ ಅಮೆರಿಕ­ದಿಂದ ಸಲಕರಣೆ­ಗಳ ರಫ್ತಿಗೆ ಮೀಸಲಿಡಲಾ­ಗು­ವುದು. ಇನ್ನು ೬,೦೦೦ ಕೋಟಿಗಳನ್ನು ಸಣ್ಣ, ಮಧ್ಯಮ ಕೈಗಾರಿಕೆಗಳಿಗಾಗಿ ಹಾಗೂ ಉಳಿದ ೧೨,೦೦೦ ಕೋಟಿಗಳನ್ನು ಶುದ್ಧ ಇಂಧನ ಯೋಜ­ನೆ­ಗ­ಳಿಗಾಗಿ ನಿಗದಿ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT