ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕದ ಕುರಿತು ಭವಿಷ್ಯ ನುಡಿಯುವುದಿಲ್ಲ

ಸಿನಿಮಾದಲ್ಲಿ ಅಭಿನಯಿಸುವ ಯೋಚನೆ ಸದ್ಯಕ್ಕಿಲ್ಲ: ಸಾನಿಯಾ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಸಜ್ಜಾಗಿರುವ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ‘ಒಲಿಂಪಿಕ್ಸ್‌ನಲ್ಲಿ ಯಾವ ಪದಕ ಗೆಲ್ಲುತ್ತೇನೆ ಎಂದು ಭವಿಷ್ಯ ಹೇಳುವುದಿಲ್ಲ. ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ   ನೀಡುವುದಷ್ಟೇ ನನ್ನ ಗುರಿ’ ಎಂದು ಹೇಳಿದ್ದಾರೆ.

29 ವರ್ಷದ ಸಾನಿಯಾ ಅವರು 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಹಿಂದಿನ ಒಲಿಂಪಿಕ್ಸ್‌ಗೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದರು. ಬೆಥಾನಿಯಾ ಮಾಟೆಕ್‌ ಸ್ಯಾಂಡ್ಸ್‌ ಜೊತೆಗೂಡಿ ಡಬಲ್ಸ್‌ನಲ್ಲಿ ಆಡಿ ಮೊದಲ ಸುತ್ತಿನಲ್ಲಿಯೇ ಸೋತಿದ್ದರು. ಈ ಬಾರಿ ಯುವ ಆಟಗಾರ್ತಿ ಪ್ರಾರ್ಥನಾ ತೊಂಬಾರೆ ಜೊತೆ ಸೇರಿ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

‘ಎಲ್ಲಾ ಪಂದ್ಯಗಳಲ್ಲಿ ಚುರುಕಾಗಿ ಆಡಬೇಕು. ಜೊತೆಗೆ ಉತ್ತಮ ವಿಶ್ವಾಸ ಹೊಂದಿರಬೇಕು. ಆಗಷ್ಟೇ ಪದಕದ ಬಗ್ಗೆ ಕನಸು ಕಾಣಲು ಸಾಧ್ಯ. ಕೇವಲ ಪದಕದ ಆಸೆ ಹೊತ್ತು ಚೆನ್ನಾಗಿ ಪ್ರಯತ್ನವೇ ಪಡದೆ ಹೋದರೆ ಹೇಗೆ. ಆದ್ದರಿಂದ ಪ್ರಯತ್ನದ ಮೇಲೆ ನಂಬಿಕೆಯಿರಬೇಕು’ ಎಂದು ಸಾನಿಯಾ ಹೇಳಿದರು.

‘ಒಲಿಂಪಿಕ್ಸ್‌ಗೆ ವಿಶೇಷವಾಗಿ ಅಭ್ಯಾಸವನ್ನೇನು ಮಾಡುತ್ತಿಲ್ಲ. ಹಿಂದಿನ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನ ನನ್ನ ವಿಶ್ವಾಸ ಹೆಚ್ಚಿಸಿದೆ. ಒಲಿಂಪಿಕ್ಸ್‌ಗೂ ಒಂದು ವಾರ ಮೊದಲು ಕೆನಡಾ ಟೂರ್ನಿಯಲ್ಲಿ ಆಡುತ್ತೇನೆ. ವಿಂಬಲ್ಡನ್‌ ಮತ್ತು ಅಮೆರಿಕ ಓಪನ್ ಟೂರ್ನಿಯಲ್ಲಿ ಆಡಿದ ಆಟವನ್ನೇ ಒಲಿಂಪಿಕ್ಸ್‌ನಲ್ಲಿಯೂ ಮುಂದುವರಿಸುತ್ತೇನೆ’ ಎಂದು ಹೈದರಾಬಾದ್‌ನ ಸಾನಿಯಾ ನುಡಿದರು.

ಸಿನಿಮಾ ಸದ್ಯಕ್ಕಿಲ್ಲ: ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದೀರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ  ‘ಸಿನಿಮಾದಲ್ಲಿ ನಟಿಸುವ ಆಸೆ ಸದ್ಯಕ್ಕಿಲ್ಲ. ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಉದ್ದೇಶವಿಲ್ಲ’ ಎಂದರು.

‘ಪರಿಣಿತಾ ಛೋಪ್ರಾ, ದೀಪಿಕಾ ಪಡುಕೋಣೆ ಹಾಗೂ ಅನುಷ್ಕಾ ಶರ್ಮಾ ಹೀಗೆ ಅನೇಕ  ಪ್ರತಿಭಾನ್ವಿತ ಕಲಾವಿದರು ಬಾಲಿವುಡ್‌ನಲ್ಲಿದ್ದಾರೆ. ಅವರಲ್ಲಿ ಅನೇಕರು ನನಗೆ ಸ್ನೇಹಿತರೇ. ಆದರೆ  ಸಿನಿಮಾದ ಬಗ್ಗೆ ಅವರೊಂದಿಗೆ ಗಂಭೀರವಾಗಿ ಮಾತನಾಡಿಲ್ಲ’ ಎಂದೂ ಅವರು ಹೇಳಿದರು.

ಒಲಿಂಪಿಕ್ಸ್‌ಗೆ 416 ಕ್ರೀಡಾಪಟುಗಳ ಚೀನಾ ತಂಡ
ಬೀಜಿಂಗ್ (ಪಿಟಿಐ):  ಏಷ್ಯಾದ ಬಲಿಷ್ಠ ಕ್ರೀಡಾ ಶಕ್ತಿ ದೇಶವೆನಿಸಿರುವ ಚೀನಾ ರಿಯೊ ಒಲಿಂಪಿಕ್ಸ್‌ಗೆ 416 ಕ್ರೀಡಾಪಟುಗಳ ತಂಡ ಕಳುಹಿಸಲಿದೆ.
ಹಿಂದಿನ ಒಲಿಂಪಿಕ್ಸ್‌ಗಳಲ್ಲಿ ಪದಕಗಳನ್ನು ಜಯಿಸಿರುವ 35 ಕ್ರೀಡಾಪಟುಗಳು ತಂಡದಲ್ಲಿದ್ದಾರೆ. 160 ಪುರುಷರ ಮತ್ತು 256 ಮಹಿಳೆಯರು ತಂಡದಲ್ಲಿದ್ದು, 26 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

14 ವರ್ಷದ ಈಜುಪಟು ಎಯಿ ಯನ್ಹಾನ್‌ ಕೂಡ ಚೀನಾ ತಂಡದಲ್ಲಿ ಸ್ಥಾನ ಗಳಿಸಿದ್ದು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಚೀನಾದ ಅತಿ ಕಿರಿಯ ಸ್ಪರ್ಧಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಯನ್ಹಾನ್‌ 200 ಮೀಟರ್ಸ್‌ ಫ್ರೀಸ್ಟೈಲ್‌ ಮತ್ತು 4X200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

39 ವರ್ಷದ ಶೂಟರ್‌ ಚೇನ್‌ ಯಂಗ್ ಅವರು ಬೀಜಿಂಗ್‌ ಮತ್ತು ಲಂಡನ್‌ ಒಲಿಂಪಿಕ್ಸ್‌ಗಳಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಜಯಿಸಿದ್ದರು. ಈ ಬಾರಿಯೂ ಚೇನ್‌  ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಚೀನಾ ತಂಡದಲ್ಲಿರುವ ಹಿರಿಯ ಆಟಗಾರ್ತಿ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚೀನಾ ಪದಕಗಳ  ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. 38 ಚಿನ್ನ, 27 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಜಯಿಸಿತ್ತು. ಈ ಬಾರಿಯೂ ಹೆಚ್ಚು ಚಿನ್ನದ ಪದಕ ಜಯಿಸುವ ಗುರಿ ಚೀನಾದ ಮುಂದಿದೆ. ಅಮೆರಿಕ ಮೊದಲ ಸ್ಥಾನ ಹೊಂದಿತ್ತು.

ಮುಖ್ಯಾಂಶಗಳು
* ಸಿನಿಮಾದತ್ತ ಸದ್ಯ ಒಲವಿಲ್ಲ ಎಂದ ಸಾನಿಯಾ
* ಸಮಾರಂಭದಲ್ಲಿ ಹಾಜರಿದ್ದ ಎ.ಆರ್. ರೆಹಮಾನ್, ಸಲ್ಮಾನ್ ಖಾನ್
* ತಂಡಕ್ಕೆ ಬೀಳ್ಕೊಡುಗೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT