ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಗಳ ಗಮ್ಮತ್ತಿನ ‘ಜೈ ಹೋ ರತ್ನ’

ರಂಗಭೂಮಿ
Last Updated 13 ಸೆಪ್ಟೆಂಬರ್ 2015, 19:34 IST
ಅಕ್ಷರ ಗಾತ್ರ

ಸುಲಲಿತ ಪದಗಳ ಸುಂದರ ಬಂಧದಿಂದೊಡಗೂಡಿದ ಜಿ.ಪಿ.ರಾಜರತ್ನಂ ಅವರ ‘ರತ್ನನ ಪದಗಳು’ ಅಮರ ಕೃತಿಯನ್ನಾಧರಿಸಿ ಹೆಣೆದ ಸಂಗೀತರೂಪಕ ‘ಜೈ ಹೋ ರತ್ನ’ವನ್ನು ಇತ್ತೀಚೆಗೆ ‘ರಂಗಶಂಕರ’ದಲ್ಲಿ ‘ವೇದಿಕೆ ಫೌಂಡೇಷನ್’ ಪ್ರದರ್ಶಿಸಿತು. ನಾಟಕದ ರಚನೆ ಮತ್ತು ನಿರ್ದೇಶನ ಸಿ.ಆರ್.ಸಿಂಹ.

ಈಗಾಗಲೇ ಹಲವು ತಂಡಗಳು ರಾಜರತ್ನಂ ಅವರ ಜೀವನ ಮತ್ತು ಕೃತಿಯನ್ನಿಟ್ಟುಕೊಂಡು ರಂಗಪ್ರಯೋಗಗಳನ್ನು ಕೈಗೊಂಡಿದ್ದಾರೆ. ಬಹುಶಃ ರಾಜರತ್ನಂ ಅವರಿಗೆ, ಮದಿರೆ- ಮಾನಿನಿ ಮತ್ತು ಕಾವ್ಯಪ್ರಿಯನಾಗಿದ್ದ ಕವಿ ಉಮರ್‌ಖಯಾಮನ ಒಸಗೆಗಳು ಕಾವ್ಯಸ್ಫೂರ್ತಿಯಾಗಿರಬೇಕು. ರತ್ನನ ಪದಗಳಲ್ಲಿ ಚಿತ್ರಿತವಾಗಿರುವ ನಾಯಕ ರತ್ನ ಮತ್ತು ನಾಯಕಿ ನಂಜಿಯ ಸುಂದರ ಪ್ರೇಮಕಥಾನಕವೇ ನಾಟಕದ ವಸ್ತು. ಅವರ ದಾಂಪತ್ಯಗೀತದ ಪಯಣ ಮನೋಹರ.

ಜಮೀನಿನಲ್ಲಿ ಕೆಲಸ ಮಾಡುವ ಶ್ರಮಜೀವಿ, ಜೀತದಾಳು ರತ್ನ ತನ್ನ ಜೀವದ ಜೀವವಾದ ನಂಜಿಯ ಸಹಬಾಳ್ವೆಯಲ್ಲಿ ಸ್ವರ್ಗ ಕಂಡವನು. ಅವಳ ಅಂದ ಚೆಂದ, ಪ್ರೀತಿ-ಪ್ರಣಯಗಳ ಗುಂಗಿನಲ್ಲಿ ವಿಹರಿಸುತ್ತ ಅನುಕ್ಷಣವೂ ಪ್ರೇಮಲೋಕದಲ್ಲಿ ವಿಹರಿಸುವವನು. ಅವಳೊಡನೆ ಕಳೆವ ಪ್ರತಿ ಮಧುರ ಕ್ಷಣವನ್ನು ಪದಗಳಲ್ಲಿ ಹಾಡಿ ಕುಣಿಯುತ್ತ ನಲಿಯುವವನು. ಅವನ ಕಾವ್ಯಸ್ಫೂರ್ತಿಯೇ ಅವಳು. ತನ್ನ ಸಾಮಾನ್ಯ ಬದುಕಿನಲ್ಲಿ ಅಪೂರ್ವ    ಆನಂದ-ಪ್ರೀತಿಯನ್ನು ಕಂಡುಕೊಂಡು ಸಂತೃಪ್ತ ಜೀವನ ಆಸ್ವಾದಿಸುವವನು.

ರತ್ನ, ಜೀವನದಲ್ಲಿ ಹೆಂಡತಿ ನಂಜಿಯನ್ನು ಬಿಟ್ಟರೆ ಬಹುವಾಗಿ ಹಚ್ಚಿಕೊಂಡ ಇತರ ಹವ್ಯಾಸಗಳೆಂದರೆ ದಣಿದ ಜೀವದ ಆಯಾಸ ಪರಿಹರಿಸುವ ಮಧುಪಾನ ಮತ್ತು ಅಂತರಂಗದಲ್ಲಿ ತುಂಬಿ ಹರಿವ ಭಾವಗಂಗೆಯ ಬಿಡುಗಡೆಗಾಗಿ ‘ಕನ್ನಡ ಪದ’ಗಳನ್ನು ಕಟ್ಟಿ ಮನಸಾರೆ ಹಾಡುವ ಗೀಳು. ಹೀಗಾಗಿ ರತ್ನನ ಜೀವನದ ಮೂರು ಮುಖ್ಯ ಆಯಾಮಗಳೆಂದರೆ- ಹೆಂಡ, ಹೆಂಡತಿ ಮತ್ತು ಕನ್ನಡ ಪದಗಳು. ಈ ಮೂರೂ ಅಂಶಗಳನ್ನು ಎತ್ತಿಹಿಡಿವ ಕಥಾಚಿತ್ರಣ ನಾಟಕದ ಸಾರ.

ಹೊಲದಲ್ಲಿ ಮೈಬಗ್ಗಿಸಿ ದುಡಿದು, ಸಂಜೆಗೆ ಮುನಿಯನ ಹೆಂಡದ ಗಡಂಗಿಗೆ ಹೋಗಿ ಸ್ನೇಹಿತರೊಡನೆ ಕುಡಿದು ತಣಿದು ಮನೆಗೆ ಬಂದರೆ, ಮುನಿಸಿಕೊಂಡ ಹೆಂಡತಿ. ಮಿಕ್ಕ ಹಣವನ್ನು ಅವಳ ಕೈಗೆ ಹಾಕಿ, ಅನುನಯದಿಂದ ಅವಳನ್ನೊಲಿಸಿಕೊಂಡು ನೆಮ್ಮದಿಯಾಗಿ ಬದುಕು ದೂಡುವುದು ರತ್ನನ ದಿನಚರಿ. ಆದರೆ ವಿಧಿ! ಒಮ್ಮೆ ಜಡ್ಡಾದ ನೆವದಲ್ಲಿ ನಂಜಿ ತೀರಿಕೊಂಡಾಗ ಅವನು ಮಿತಿಮೀರಿದ ದುಃಖದಿಂದ ಮತ್ತಷ್ಟು ಹೆಂಡಕ್ಕೆ ದಾಸನಾಗುತ್ತಾನೆ.

ತನ್ನ ಕನ್ನಡ ಪದಗಳ ಬಲದಿಂದ, ಕನ್ನಡಿಗನ ಸ್ವಾಭಿಮಾನದ ಆತ್ಮಸ್ಥೈರ್ಯದಿಂದ, ಪ್ರತಿಭಟಿಸುವ ಸೊಲ್ಲುಪಡೆದು, ಶೋಷಿಸುವ ಭೂಮಾಲೀಕನೆದುರು ಸಿಡಿದೇಳುತ್ತಾನೆ, ಮನಸೋ ಇಚ್ಛೆ ಪದಗಳ ಪ್ರವಾಹ ಹರಿಸುತ್ತ ಮೋಡಿ ಮಾಡಿ ಗೆಳೆಯರ ಹೃದಯವನ್ನು ತುಂಬಿಕೊಳ್ಳುತ್ತಾನೆ. ನೋಡುಗರನ್ನೂ ಭಾವಾವೇಶದೊಳಗೆ ಬಂಧಿಸಿ ತನ್ನೊಂದಿಗೆ ಕುಣಿಯುವಂತೆ ಮಾಡುವುದು ರತ್ನನ ವೈಶಿಷ್ಟ್ಯ.

ನಾಟಕ ಸಂಪೂರ್ಣ ಸಂಗೀತಮಯ. ರತ್ನ ಹರಿಸಿದ ಪದಗಳ ಮೋಡಿ ಓತಪ್ರೋತ. ಪ್ರತಿ ಪದ್ಯಗಳಲ್ಲಿನ ಅರ್ಥಸಾರ-ಆಶಯವನ್ನು ಬಿಂಬಿಸುವಂತೆ ಆಸಕ್ತಿಕರ ಸನ್ನಿವೇಶವನ್ನು ನಿರ್ಮಾಣ ಮಾಡಿ ನಾಟಕವನ್ನು ಹೆಣೆದಿರುವ ಜಾಣ್ಮೆ ಇಲ್ಲಿ ಹರಳುಗಟ್ಟಿದೆ. ಆನಂದದ ಲಹರಿಯಲ್ಲಿ ಆರಂಭಗೊಳ್ಳುವ ಅಂಕಗಳ ನಡೆ ನಿಧಾನವಾಗಿ ವಿಷಾದಾಂತ್ಯದತ್ತ ಸಾಗುತ್ತ ಪರಾಕಾಷ್ಠೆಗೇರಿ ನೋಡುಗನ ಅಂತರಂಗವನ್ನು ತಟ್ಟುತ್ತದೆ. ಪದ್ಯಗಳಲ್ಲೇ ರತ್ನನ ಇಡೀ ಬದುಕನ್ನು ಕಟ್ಟಿಕೊಡುವ ಬಗೆ, ಗಾನದಗುಂಗು ಅನುರಣಿಸುತ್ತದೆ.

ಅನ್ಯೋನ್ಯ ಸಂಸಾರದ  ಬದುಕಿನಲ್ಲಿ ಬಡತನವಿದ್ದರೂ ಮಾನಸಿಕ ಬಡತನವಿಲ್ಲವೆಂಬುದರ ಸಾಕಾರ ಚಿತ್ರವಾಗಿ ‘ಹೇಳ್ಕೊಳಕ್ಕೊಂದೂರು, ತಲೆಮ್ಯಾಗೊಂದ್ಸೂರು, ಮಲಗಾಕೆ ಭೂಮ್ತಾಯಿ ಮಂಚ’ ಎಂಬ ತೃಪ್ತ ಜೀವನದ ಸೊಗಡನ್ನು ಸೂಸುವ ಹಾಡಿನಿಂದ ಮೊದಲಾಗುವ ಸಂಗೀತಯಾನ (ರಾಜು ಅನಂತಸ್ವಾಮಿ-ಪರಿಷ್ಕರಣೆ ಸುನಿತಾ ಅನಂತಸ್ವಾಮಿ) ‘ಎಂಡ ಮುಟ್ದಾಗ್ಲೆಲ್ಲ ಯಾಕೋ ಕುಸಿಯಾಯ್ತದೆ’ ಎನ್ನುವ ರತ್ನನ ತಾದಾತ್ಮ್ಯ ಗಾಢವಾಗುತ್ತ ‘ಎಂಡ-ಎಡ್ತಿ, ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣಾ...’ಎನ್ನುವ ಕನ್ನಡಾಭಿಮಾನ ತೀವ್ರತೆ ಪಡೆಯುತ್ತ ನೋಡುಗರನ್ನೂ ತನ್ನೊಳಗೆಳೆದುಕೊಂಡು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದು ನಾಟಕದ ಹೆಗ್ಗಳಿಕೆ.

ಹೆಂಡದ ಪಡಖಾನೆಯಲ್ಲಿ ಅಂಗಡಿ ಮಾಲೀಕ ಮುನಿಯನನ್ನು ಕಾಡಿ ಬೇಡಿ ಸಾಲ ಪಡೆದು ಗೆಳೆಯರೊಂದಿಗೆ ಕುಡಿದು ಮೋಜಿಸುವ ಪರಿ, ‘ಬ್ರಮ್ಮ ನಿಂಗೆ ಜೋಡುಸ್ತೀನಿ ಎಂಡ ಮುಟ್ಟಿದ್ ಕೈನ’ ಎಂಬ ಹಾಡು ಉಂಟುಮಾಡಿದ ಮಿಂಚಿನ ಸಂಚಾರ, ಕಡೆಯಲ್ಲಿ ನಂಜಿ ಸತ್ತಾಗ ‘ನೀ ನನ್ ಅಟ್ಟೀಗ್ ಬೆಳಕಂಗಿದ್ದೆ ನಂಜಿ’ ಎಂಬ ವಿರಹತಾಪದ ಗೀತೆಗೆ ಎಲ್ಲ ದನಿಗೂಡಿಸಿ ರತ್ನನಿಗೆ ಸಾಂತ್ವನ ಹೇಳುವ ದೃಶ್ಯ ಹೃದಯಸ್ಪರ್ಶಿಯಾಗಿತ್ತು.

ರತ್ನ ಕುಡಿದು ಮೈಮರೆತ ಸನ್ನಿವೇಶದಲ್ಲಿ ಹೆಂಡದ ಸೋರೆಬುರುಡೆಗಳೇ ಕುಣಿದು ತೂರಾಡುವ ಪರಿಕಲ್ಪನೆ ಮತ್ತು ಕಾಮನಬಿಲ್ಲಿನ ಆಚೀಚೆ ನಿಂತು ವಿಲಪಿಸುತ್ತಿದ್ದ ದಂಪತಿಯ ಅಗಲಿಕೆಯ ದೃಶ್ಯ ಸೊಗಸಾಗಿ ರೂಪಿತವಾಗಿತ್ತು. ನಾಟಕದ ಸಂಭಾಷಣೆಯಾಗಿ ರತ್ನನ ಪದಗಳಲ್ಲಿನ ಸಾಲುಗಳನ್ನೇ ಅರ್ಥವತ್ತಾಗಿ ಬಳಸಿದ್ದು ಔಚಿತ್ಯಪೂರ್ಣವಾಗಿದ್ದು, ಅಲ್ಲಲ್ಲಿ ತುಂಟತನ, ಹಾಸ್ಯದ ಲೇಪನವಿತ್ತು. ಹೆಂಡ, ‘ಕಾವ್ಯದ ನಶೆ’ಗೆ ಸುಂದರ ರೂಪಕವಾಗಿ ಎಲ್ಲ ಹಾಡುಗಳಲ್ಲೂ ಕಾಣಿಸಿತ್ತು. ‘ಬ್ರಮ್ಮ ನಿಂಗೆ ಜೋಡುಸ್ತೀನಿ..’ ಕುಣಿತದ ಅಭಿನಯದಲ್ಲಿ ಎಲ್ಲ ಕಲಾವಿದರ ತನ್ಮಯತೆ ಮೆಚ್ಚುವಂತಿತ್ತು.

ರತ್ನನಾಗಿ ಋತ್ವಿಕ್ ಸಿಂಹ ಸ್ಪಷ್ಟೋಕ್ತಿ, ಆಂಗಿಕ ಅಭಿನಯಗಳಿಂದ ಭಾವಪೂರ್ಣವಾಗಿ ಅಭಿನಯಿಸಿದ್ದರೂ ಕೊಂಚ ಎಳೆದೆಳೆದು ಮಾತನಾಡುವುದು ಭಾವಕ್ಕೆ ಭಂಗ ತಂದಂತೆ ಅನಿಸುತ್ತಿತ್ತು. ಆದರೂ ಪ್ರತಿ ಭಾವ-ಭಂಗಿಯಲ್ಲೂ ತಂದೆ ಸಿಂಹ ಅವರ ಛಾಪನ್ನೇ ಮೈಗೂಡಿಸಿಕೊಂಡಿದ್ದು ಹಳೆಯ ನೆನಪನ್ನು ಮೀಟಿತ್ತು. ಕಾಳಯ್ಯನಾಗಿ ರೋಹಿತ್ ಶ್ರೀನಾಥ್ ಮತ್ತು ರಾಚನಾಗಿ ರಾಂಮಂಜುನಾಥ್ ಚೂಟಿಯಾದ ದೇಹಭಾಷೆ, ಉತ್ತಮ ಭಾವಾಭಿವ್ಯಕ್ತಿಯಿಂದ ಗಮನಸೆಳೆದರು.

ಭೂಮಾಲೀಕನಾಗಿ ಪ್ರಭಾಕರ ರಾವ್ ಉತ್ತಮ ಅಭಿನಯದಿಂದ ಇಷ್ಟವಾದರೆ, ನಂಜಿಯಾಗಿ ಶ್ರುತಿ ಪ್ರದೀಪ್, ಮುನಿಯ-ನಂದಕಿಶೋರ್ ಹದವಾಗಿ ಅಭಿನಯಿಸಿದರು. ಜೊತೆಗೂಡಿ ನರ್ತಿಸಿದವರು, ರತ್ನನ ಸ್ನೇಹಿತರು ನಾಟಕದ ಯಶಸ್ಸಿಗೆ ಕಾರಣರಾದರು. ಮಾಲತೇಶ್ ಬಡಿಗೇರರ ವಿನ್ಯಾಸ, ಸ್ನೇಹಾ ಕಪ್ಪಣ್ಣ ಅವರ ನೃತ್ಯ ಸಂಯೋಜನೆ ನಾಟಕಕ್ಕೆ ಜೀವಂತಿಕೆ ನೀಡಿತ್ತು. ಇದು ಸಿ.ಆರ್.ಸಿಂಹ ಅವರು ಬರೆದು, ನಿರ್ದೇಶಿಸಿದ ಕಡೆಯ ನಾಟಕವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT