ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭಸ್ವಾಮಿ ಭಂಡಾರ ರಕ್ಷಣೆಯಲ್ಲಿ ಲೋಪ

Last Updated 19 ಏಪ್ರಿಲ್ 2014, 19:44 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಇಲ್ಲಿನ ‘ಶ್ರೀ ಪದ್ಮನಾ­ಭಸ್ವಾಮಿ ದೇಗುಲದ ಆಡಳಿತ ನಿರ್ವಹಣೆಯಲ್ಲಿ ಹಾಗೂ ನೆಲಮಾಳಿಗೆಯಲ್ಲಿನ ಅಮೂಲ್ಯ ಸಂಪತ್ತಿನ ರಕ್ಷಣೆಯಲ್ಲಿ ಗಂಭೀರ ಲೋಪಗಳಾಗಿವೆ’ ಎಂದು ನ್ಯಾಯಾಲಯದ ಸಹಾಯಕ  ವಕೀಲ ಗೋಪಾಲ್‌ ಸುಬ್ರಮಣಿಯಮ್‌ ಅವರು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

ಈ ಸಂಪತ್ತಿನ ವೈಜ್ಞಾನಿಕ ಮೌಲ್ಯಮಾಪನಕ್ಕೆ  ನಿರ್ದೇಶಿಸಬೇಕು ಎಂದೂ ಅವರು ಕೋರಿದ್ದಾರೆ.ದೇಗುಲದ ಟ್ರಸ್ಟಿ ತಿರುವಾಂಕೂರು ರಾಜಮನೆತನದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ­ಮನೆತ­ನವು ದೇಗುಲದ ವ್ಯವಹಾರಗಳಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕೆಂದೂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.ನಿವೃತ್ತ ಮಹಾಲೇಖಪಾಲ ವಿನೋದ್‌ ರಾಯ್‌ (ಸಿಎಜಿ) ಅವರಂಥ ಪರಿಣತರಿಂದ ದೇಗುಲದ ಸಂಪತ್ತಿನ ಲೆಕ್ಕಪರಿಶೋಧನೆ ಮಾಡಿಸಲು ಆದೇಶ ನೀಡಬೇಕೆಂದು ವರದಿಯಲ್ಲಿ ಒತ್ತಾಯಿಸಲಾಗಿದೆ.

‘ರಾಜಮನೆತನದವರು ‘ಕಲ್ಲರ ಬಿ’ ನೆಲಮಾಳಿಗೆ ತೆರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವು ವರ್ಷಗಳ ಹಿಂದೆಯೇ ಈ ನೆಲಮಾಳಿಗೆಯನ್ನು ತೆರೆಯಲಾಗಿತ್ತು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೆ’ ಎಂದೂ ಸುಬ್ರಮಣಿಯಮ್‌ ಹೇಳಿದ್ದಾರೆ.

ಈ ವರದಿ ತಯಾರಿಸುವುದಕ್ಕಾಗಿ ಸುಬ್ರಮಣಿ­ಯಮ್‌ ಹಲವು ದಿನಗಳ ಕಾಲ ಕೇರಳದಲ್ಲಿ ತಂಗಿ­ದ್ದರು. ದೇಗುಲದ ಆಡಳಿತ ನಿರ್ವಹಣೆಯಲ್ಲಿ ಗಂಭೀರ ಲೋಪವಾಗಿದೆ ಎನ್ನುವುದಕ್ಕೆ ಅವರು ತಮ್ಮ ವರದಿಯಲ್ಲಿ ಹಲವಾರು ನಿದರ್ಶನಗಳನ್ನು ಉಲ್ಲೇಖಿಸಿದ್ದಾರೆ.

ಲೈಂಗಿಕ ಕಿರುಕುಳದ ಉಲ್ಲೇಖ
ದೇಗುಲದ ಆವರಣದಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಆಗಿಂದಾಗ್ಗೆ  ಲೈಂಗಿಕ ಕಿರುಕುಳ ನಡೆದಿರುವ ನಿದರ್ಶನಗಳನ್ನು ಕೂಡ ಸುಬ್ರಮಣಿಯಮ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ದೇವರಿಗೆ ಬಳಸುವ ಬಟ್ಟೆ ಹೊಲಿಯಲು  ಮಹಿಳೆಯೊಬ್ಬರನ್ನು ನೇಮಕ ಮಾಡಲಾಗಿತ್ತು. ನಂತರ ಆಕೆಯನ್ನು ದಿನಗೂಲಿ ಮೇಲೆ ಕಂಪ್ಯೂಟರ್‌ ಆಪರೇಟರ್‌ ಆಗಿ ನೇಮಿಸಿಕೊಳ್ಳಲಾಯಿತು. ದೇಗುಲದ ಭದ್ರತಾ ವಿಭಾಗದ ಮುಖ್ಯಸ್ಥ  ಕೃಷ್ಣನ್‌ ಕುಟ್ಟಿ ಕುರುಪ್‌ ಎಂಬಾತ ಈಕೆ  ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ’ ಎಂದು ಸುಬ್ರಮಣಿಯಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT