ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭ ರೆಡ್ಡಿ ಹೆಸರಿಗೆ ಆಯುಕ್ತರ ತಾಯಿ ಆಸ್ತಿ!

ಅಕ್ರಮವಾಗಿ ಖಾತೆ ನೋಂದಣಿ: ಮೂವರು ಕಂದಾಯ ಅಧಿಕಾರಿಗಳ ಅಮಾನತು
Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಳಗಿನ ಖಾತಾ ಮಾಫಿಯಾದ ಕರಾಮತ್ತು ಗುರುವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಮತ್ತೆ ಬೆಳಕಿಗೆ ಬಂತು. ಸ್ವತಃ ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರ ತಾಯಿಗೆ ಸೇರಿದ ಆಸ್ತಿಯನ್ನು ಕಾಚರಕನಹಳ್ಳಿ ವಾರ್ಡ್‌ನ ಸದಸ್ಯ ಪದ್ಮನಾಭ ರೆಡ್ಡಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ಖಾತಾ ದಾಖಲೆ ತಂದಿದ್ದರು!

‘ಬಾಣಸವಾಡಿ ವಿಭಾಗದ ಸುಬ್ಬಯ್ಯನಪಾಳ್ಯ­ದಲ್ಲಿರುವ ವೆಂಕಟಮ್ಮ ಅವರಿಗೆ ಸೇರಿದ 7,000 ಚದರ ಅಡಿ ನಿವೇಶನವನ್ನು (ಸಂಖ್ಯೆ 1085/2) ನನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದೇನೆ’ ಎಂದು ಹೇಳಿದ ಅವರು, ಖಾತಾ ದಾಖಲೆಯನ್ನೂ ಪ್ರದರ್ಶಿಸಿದಾಗ ಸಭೆಯಲ್ಲಿದ್ದ ಸದಸ್ಯರೆಲ್ಲ ಸೋಜಿಗ ವ್ಯಕ್ತಪಡಿಸಿದರು. ಆದರೆ, ಬಿಬಿಎಂಪಿ ದಾಖಲೆಗಳಲ್ಲಿ ವೆಂಕಟಮ್ಮ ಅವರ ಹೆಸರೇ ಇತ್ತು.

‘ಸುಬ್ಬಯ್ಯನಪಾಳ್ಯದ ಆಸ್ತಿಗೆ ನಾನು ಕಳೆದ ಎಂಟು ವರ್ಷಗಳಿಂದ ತೆರಿಗೆ ತುಂಬುತ್ತಿದ್ದೇನೆ. ಬಿಬಿಎಂಪಿ ಆಯುಕ್ತರು ನನ್ನ ಆಸ್ತಿಯನ್ನು ಕಸಿದುಕೊಂಡಿದ್ದು, ಸದಸ್ಯರು ನೆರವಿಗೆ ಬರಬೇಕು’ ಎಂದು ಪದ್ಮನಾಭ ರೆಡ್ಡಿ ತಮಾಷೆಯಾಗಿ ಹೇಳಿದರು. ಆಯುಕ್ತರ ಸೂಚನೆಯಂತೆ ಆ ಆಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದ ಅಧಿಕಾರಿಗಳು ಸದಸ್ಯರು  ತಂದಿರುವುದು ನಕಲಿ ಖಾತಾ ಪತ್ರ ಎಂಬುದನ್ನು ಪತ್ತೆ ಮಾಡಿದರು.

ಬಳಿಕ ಸ್ಪಷ್ಟನೆ ನೀಡಿದ ಆಯುಕ್ತರು, ‘ಪದ್ಮನಾಭ ರೆಡ್ಡಿ ಅವರು ತಂದಿರುವುದು ನಕಲಿ ಖಾತಾ ಪತ್ರ. ಬಿಬಿಎಂಪಿ ಖಾತಾ ಪತ್ರದಲ್ಲಿ ಒಂಬತ್ತು ಅಂಕಿಗಳು ಇರುತ್ತವೆ. ಆದರೆ, ಈ ನಕಲಿ ಪತ್ರದಲ್ಲಿ ಏಳು ಅಂಕಿಗಳು ಮಾತ್ರ ಇವೆ. ಬಿಬಿಎಂಪಿ ವಾಟರ್‌ ಮಾರ್ಕ್‌ ಸಹ ರೆಡ್ಡಿ ಅವರ ಖಾತಾ ಪತ್ರದಲ್ಲಿಲ್ಲ. ಈ ಆಸ್ತಿಗೆ ಸಂಬಂಧಿಸಿದ ಯಾವ ದಾಖಲೆಗಳೂ ಬದಲಾಗಿಲ್ಲ’ ಎಂದು ವಿವರಿಸಿದರು.

‘ನಾನು ಈ ಖಾತಾ ಪತ್ರ ಪಡೆಯಲು ₨ 5,000 ಲಂಚ ನೀಡಿದ್ದೇನೆ. ಲಂಚ ಕೊಟ್ಟರೆ ಯಾವ ದಾಖಲೆ ಬೇಕಾದರೂ ಬಿಬಿಎಂಪಿಯಲ್ಲಿ ಸಿಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ’ ಎಂದು ಪದ್ಮನಾಭ ರೆಡ್ಡಿ ಹೇಳಿದರು. ‘ನಕಲಿ ಖಾತೆಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು.

ಯಲಹಂಕ ವಲಯದ ಹೆಬ್ಬಾಳ ವಿಭಾಗದಲ್ಲಿ ಭೂಪರಿವರ್ತನೆ ಆಗದಿರುವ ಆಸ್ತಿಗಳಿಗೆ ಪ್ರತಿ ಚದರ ಮೀಟರ್‌ಗೆ ಕೇವಲ ₨ 100ರಂತೆ ಸುಧಾರಣಾ ವೆಚ್ಚ ಆಕರಿಸಿ ಖಾತೆ ಮಾಡಿಕೊಟ್ಟ ಹತ್ತು ಪ್ರಕರಣಗಳ ಮೇಲೂ ಅವರು ಬೆಳಕು ಚೆಲ್ಲಿದರು. ದಾಖಲೆಗಳನ್ನು ಪರಿಶೀಲಿಸಿದ ಕಂದಾಯ ವಿಭಾಗದ ಉಪ ಆಯುಕ್ತರು, ಹೆಬ್ಬಾಳ ವಿಭಾಗದ ಅಧಿಕಾರಿಗಳು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಮಾಹಿತಿಯನ್ನು ಆಯುಕ್ತರಿಗೆ ನೀಡಿದರು.

‘ಹೆಬ್ಬಾಳ ವಿಭಾಗದ ಕಂದಾಯ ಅಧಿಕಾರಿ, ಸಹಾಯಕ ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ’ ಎಂದು ಆಯುಕ್ತರು ಪ್ರಕಟಿಸಿದರು. ಮೂವರೂ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶವನ್ನೂ ನೀಡಿದರು.

‘863 ಅಧಿಕಾರಿಗಳ ವಿರುದ್ಧ ಪ್ರಕರಣ ಬಾಕಿ’
ಬಿಬಿಎಂಪಿಯಲ್ಲಿ 2010ರಿಂದ 2014ರವರೆಗಿನ ಅವಧಿಯಲ್ಲಿ ಒಟ್ಟು 863 ಅಧಿಕಾರಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ಬಾಕಿ ಇದೆ ಎಂದು ನಾಗಪುರ ವಾರ್ಡ್‌ನ ಸದಸ್ಯ ಎಸ್‌. ಹರೀಶ್‌ ಹೇಳಿದರು.

ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ ಅವರು, ‘ಬಿಬಿಎಂಪಿ ಮಟ್ಟದಲ್ಲಿ 795, ಲೋಕಾಯುಕ್ತದಲ್ಲಿ 41 ಹಾಗೂ ಸರ್ಕಾರದ ವಿವಿಧ ಹಂತಗಳಲ್ಲಿ 27 ಪ್ರಕರಣಗಳು ಬಾಕಿ ಇವೆ. ಇದಲ್ಲದೆ ಕಳೆದ ಆರು ತಿಂಗಳಲ್ಲಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ಅವರು 183 ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ’ ಎಂದು ವಿವರಿಸಿದರು.

‘ನೌಕರರು ಅಕ್ರಮದಲ್ಲಿ ಭಾಗಿಯಾದರೆ, ದುರ್ನಡತೆ ತೋರಿದರೆ ಒಂದು ತಿಂಗಳೊಳಗೆ ದೋಷಾರೋಪಣಾ ಪಟ್ಟಿ ತಯಾರಿಸಬೇಕು. ನಾಲ್ಕು ತಿಂಗಳೊಳಗೆ ವಿಚಾರಣೆ ಮುಗಿಸಿ ವರದಿ ನೀಡಬೇಕು. ಇದು ಸರ್ಕಾರವೇ ರೂಪಿಸಿದ ನಿಯಮ. ಬಿಬಿಎಂಪಿಯಲ್ಲಿ ಈ ನಿಯಮ ಪಾಲನೆ ಆಗದ್ದರಿಂದ ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗುತ್ತಿಲ್ಲ’ ಎಂದು ದೂರಿದರು.

‘ಲೋಕಾಯುಕ್ತ ಬಲೆಗೆ ಬಿದ್ದು ಅಮಾನತು ಶಿಕ್ಷೆಗೆ ಒಳಗಾದ ಅಧಿಕಾರಿಗಳನ್ನು ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗೆ ವರ್ಗಾಯಿಸಬೇಕು ಎನ್ನುವ ನಿಯಮವಿದ್ದರೂ ಅದನ್ನೂ ಪಾಲಿಸಲಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ತಪ್ಪು ಮಾಡಿರುವುದು ರುಜುವಾತು ಆದ ಬಳಿಕ ಅಮಾನತು ಶಿಕ್ಷೆಗೆ ಒಳಗಾದವರನ್ನು ವಿಚಾರಣೆ ಮುಗಿಸಿದಂತೆ ಮಾಡಿ ಆರೋಪ ಮುಕ್ತರನ್ನಾಗಿ ಮಾಡಲಾಗುತ್ತಿದೆ’ ಎಂದು ದೂರಿದರು.

‘ಗೋವಿಂದರಾಜು ಹಾಗೂ ಸೋಮೇಶ್‌ ಎನ್ನುವ ಅಧಿಕಾರಿಗಳು ತಪ್ಪು ಮಾಡಿದ್ದು ದೃಢಪಟ್ಟಾಗ ಅಂದಿನ ಆಯುಕ್ತರು ಇಂತಹ ಅಪರಾಧ ಎಸಗಿದ ಅಧಿಕಾರಿಗಳನ್ನು ಮಟ್ಟ ಹಾಕಬೇಕು ಎಂದು ಕಡತದ ಮೇಲೇ ಬರೆದಿದ್ದರು. ಆದರೆ, ವಿಚಾರಣಾಧಿಕಾರಿಗಳು ಅವರನ್ನು ಆರೋಪದಿಂದ ಮುಕ್ತಗೊಳಿಸಿದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT