ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಗಿ ತರಂಗ

Last Updated 24 ಜುಲೈ 2015, 19:54 IST
ಅಕ್ಷರ ಗಾತ್ರ

ಚಿತ್ರ ರಸಿಕರಿಗೆ ಈಗಾಗಲೇ ರಂಗಿತರಂಗ ಕನ್ನಡ ಸಿನಿಮಾದ ಹವಾ ಸೋಕಿದ್ದರೆ,ಆರೋಗ್ಯ ರಕ್ಷಿಸಿಕೊಳ್ಳಲು ಹವಣಿಸುವವರಿಗೆ ಇಗೋ ಇಲ್ಲಿದೆ 'ಪರಂಗಿ' ತರಂಗ. ಅಪರೂಪದ ಹಣ್ಣಾಗಿದ್ದ ಪರಂಗಿ ಈಗ ವರ್ಷ ಪೂರ್ತಿ ಎಲ್ಲೆಡೆ ಸಿಗುವ ಫಲವಾಗಿದೆ. ಮನೆಬಾಗಿಲಿಗೇ ತಂದು ಮಾರುವ ಹಣ್ಣಿನ ವ್ಯಾಪಾರಿಗಳೂ ಈಗ ಕಾಣಸಿಗುತ್ತಾರೆ. ಈ ಹಣ್ಣನ್ನು ತಿನ್ನದವರೂ ಸಹ ಇದರ ಉಪಯೋಗ ಹಾಗೂ ಆರೋಗ್ಯಕಾರಿ ಅಂಶಗಳನ್ನು ಅರಿತಾದ ಮೇಲೆ ತಿನ್ನದೇ ಇರಲಿಕ್ಕಿಲ್ಲ!

ಸಾಮಾನ್ಯವಾಗಿ ಉಷ್ಣವಲಯದ ಹವಾಗುಣದಲ್ಲಿ ಬೆಳೆಯುವ ಪರಂಗಿ ಅಥವಾ ಪಪ್ಪಾಯಿ ಹಣ್ಣು ಸಿಹಿಯಾದ ರುಚಿ, ರಂಗುರಂಗಿನ ಬಣ್ಣ  ಹೊಂದಿರುತ್ತದೆ. ಇದರ ನಿಯಮಿತ ಸೇವನೆಯು ಹೃದಯಾಘಾತ, ಮಧುಮೇಹ, ಕ್ಯಾನ್ಸರ್‌ ರೋಗಗಳು ಬಾರದಂತೆ ತಡೆಗಟ್ಟುತ್ತದೆ. ಜೀರ್ಣಕ್ರಿಯೆಯನ್ನು ಸರಾಗವಗಿಸುತ್ತದೆ. ಮಧಮೇಹಿಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಗಾಯಗಳ ನಿವಾರಣೆಗೆ ಪರಂಗಿ ಎಲೆ ಸಹಾಯಕಾರಿ. ಅಧ್ಯಯನಗಳ ಪ್ರಕಾರ ಪರಂಗಿ ಹಣ್ಣಿನ ಸೇವನೆಯಿಂದ ಸ್ಥೂಲಕಾಯವನ್ನು ತಪ್ಪಿಸಬಹುದು. ಕೇಶವರ್ಧನೆಗೂ, ಮುಖದ ಕಾಂತಿಗೂ ಸಹಕಾರಿ. ಅಲ್ಲದೇ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ.

ಪರಂಗಿಯ ಆರೋಗ್ಯವರ್ಧನೆಯ ಗುಣಗಳು
ಕಣ್ಣಿನ ರಕ್ಷಣೆಗೆ:
ಪರಂಗಿಯಲ್ಲಿ ಝಿಯಾಂಕ್ಸಾಂಥೀನ್ (Zeaxanthin) ಎಂಬ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಅಪಾಯಕಾರಿ ಅತಿ ನೇರಳೆ ಕಿರಣಗಳನ್ನು ಹೀರಿಕೊಂಡು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಧನಾತ್ಮಕ ಪರಿಣಾಮ ಉಂಟುಮಾಡುತ್ತದೆ. ದಿನಕ್ಕೆ 3 ಬಾರಿ ಪರಂಗಿಯ ಸೇವನೆಯಿಂದ ವೃದ್ಧರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು.

ಅಸ್ತಮಾ ತಡೆಗಟ್ಟಲು: ಪರಂಗಿ, ಅಪ್ರಿಕಾಟ್, ಬ್ರೋಕೋಲಿ, ಕುಂಬಳಕಾಯಿ ಮತ್ತು ಕ್ಯಾರೆಟ್‌ಗಳಲ್ಲಿ ‘ಬೀಟಾಕೆರೋಟಿನ್’ ಎಂಬ ಪೋಷಕಾಂಶವಿದ್ದು ಇವುಗಳ ಸೇವನೆಯಿಂದ ಅಸ್ತಮಾ ಬಾರದಂತೆ ತಡೆಯಬಹುದು.

ಕ್ಯಾನ್ಸರ್‌ಗೆ: ಪರಂಗಿಯಲ್ಲಿರುವ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‌ಗಳಾದ ಬೀಟಾ ಕೆರೋಟಿನ್‌ಗಳು ಕರುಳಿನ ಮೇಲೆ ಪ್ರಭಾವ ಬೀರಿ ಕರುಳಿನ ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ ಎಂಬುದು ಜಪಾನೀಯರ ಅನಿಸಿಕೆ. ಇದರ ಸೇವನೆಯಿಂದ ವಯಸ್ಕರಲ್ಲಿ ಕಂಡು ಬರಬಹುದಾದ ‘ಪ್ರೋಸ್ಟೇಟ್ ಕ್ಯಾನ್ಸರ್’ ತಡೆಗಟ್ಟಬಹುದು.

ಮಧುಮೇಹಕ್ಕೆ: ಕೆಲವು ಮೂಲಗಳ ಪ್ರಕಾರ ಟೈಪ್1 ಮಧುಮೇಹಿಗಳಿಗೆ ಹೆಚ್ಚು ನಾರಿನಾಂಶ ವಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಿರುತ್ತದೆ ಮತ್ತು ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ, ಲಿಪಿಡ್‌ಗಳು ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತದೆ. ಒಂದು ಮಧ್ಯಮ ಗಾತ್ರದ ಪರಂಗಿಯು 4.7 ಗ್ರಾಂನಷ್ಟು ನಾರಿನಾಂಶವನ್ನು ದೇಹಕ್ಕೆ ಒದಗಿಸುತ್ತದೆ.
ಅಮೆರಿಕಾದ ಆಹಾರ ತಜ್ಞರು ದಿನವೊಂದಕ್ಕೆ ಮಹಿಳೆಯರು 21–25 ಗ್ರಾಂ ಹಾಗೂ ಪುರುಷರು 30–38 ಗ್ರಾಂ ಪರಂಗಿ ಸೇವಿಸುವುದು ಒಳಿತೆಂದು ಅಭಿಪ್ರಾಯ ಪಡುತ್ತಾರೆ.

ಮೂಳೆಗಳ ಆರೋಗ್ಯಕ್ಕೆ: ಆಹಾರದಲ್ಲಿ ಕೆ- ಜೀವಸತ್ವ ಪ್ರಮಾಣ ಕಡಿಮೆಯಾದಾಗ ಮೂಳೆಗಳು ಜರ್ಜರಿತಗೊಳ್ಳುತ್ತವೆ. ಪರಂಗಿಯ ಸೇವನೆಯಿಂದ ಮೂಳೆಗಳಿಗೆ ಪ್ರೋಟೀನ್ ಒದಗಿಸುವುದಲ್ಲದೆ ಕ್ಯಾಲ್ಸಿಯಂ ಹೀರುವಿಕೆಯನ್ನು ವೃದ್ಧಿಸಿ ಮೂತ್ರದಲ್ಲಿ  ಕ್ಯಾಲ್ಸಿಯಂ ಹೋಗುವುದನ್ನು ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆಗೆ: ಪರಂಗಿಯಲ್ಲಿ ‘ಪಪೇನ್’ ಎಂಬ ಕಿಣ್ವವಿದ್ದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶ ಹಾಗೂ ನೀರಿನಂಶಯಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಾಂಗವ್ಯೂಹವನ್ನು ಸುಸ್ಥಿತಿಯಲ್ಲಿಡಬಲ್ಲದು.

ಹೃದ್ರೋಗಗಳಿಗೆ: ಪರಂಗಿಯಲ್ಲಿನ ನಾರಿನಾಂಶ, ಪೊಟ್ಯಾಷಿಯಂ ಮತ್ತು ಜೀವಸತ್ವಗಳು ಹೃದ್ರೋಗ ಬಾರದಂತೆ ತಡೆಯುತ್ತವೆ. ಹೃದ್ರೋಗವುಂಟಾಗುವ ಸಾಧ್ಯತೆ ತಪ್ಪಿಸಲು ಪೊಟ್ಯಾಷಿಯಂ ಹೆಚ್ಚಿರುವ ಆಹಾರ ಹಾಗೂ ಜೊತೆಯಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಿರುವ ಆಹಾರ ಸೇವಿಸುವುದು ಒಳಿತು.

ಉರಿಯೂತಕ್ಕೆ: ಪರಂಗಿಯಲ್ಲಿರುವ ‘ಕೊಲೈನ್’(Choline) ಎಂಬ ಅತಿಮುಖ್ಯ ಪೂಷಕಾಂಶವು ನಾವು ಮಲಗಿರುವಾಗ ನಮ್ಮ ದೇಹಕ್ಕೆ, ಮಾಂಸಖಂಡಗಳ ಚಲನೆಗೆ, ಕಲಿಕೆ ಮತ್ತು ಜ್ಞಾಪಕಶಕ್ತಿಗೆ ಬೆನ್ನೆಲುಬಿನಂತೆ ಕಾರ್ಯ ನಿರ್ವಹಿಸುತ್ತದೆ. ಜೀವಕೋಶಗಳ ಪದರಗಳನ್ನು ರಕ್ಷಿಸುತ್ತದೆ. ನರಗಳ ಸಂವೇದನೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಅನಗತ್ಯ ಕೊಬ್ಬನ್ನು ಕರಗಿಸಿ ಉರಿಯೂತವನ್ನು ಮೊಟಕುಗೊಳಿಸುತ್ತದೆ.

ಚರ್ಮದ ರಕ್ಷಣೆಗೆ: ಪರಂಗಿಯು ಎಲ್ಲಾ ಬಗೆಯ ಗಾಯಗಳಿಗೆ ಔಷಧಿಯಾಗಬಲ್ಲದು. ಪರಂಗಿ ಯಲ್ಲಿರುವ ‘ಪ್ರೋಟಿಯೋಲೈಟಿಕ್’ ಕಿಣ್ವಗಳಾದ ‘ಕೈಮೋ ಪಪೇನ್’ ಮತ್ತು ‘ಪಪೇನ್‌’ಗಳು ಗಾಯಗಳು ಹಾಗೂ ವ್ರಣಗಳನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿವೆ. ಪರಂಗಿಯಲ್ಲಿ ‘ಎ’ ಜೀವಸತ್ವಯಿರುವುದರಿಂದ ಕೂದಲಿನ ಪೋಷಣೆಗೆ, ದೇಹದ ಅಂಗಾಂಶಗಳ ಕಾರ್ಯ ನಿರ್ವಹಣೆಗೆ, ಚರ್ಮದ ರಕ್ಷಣೆಗೆ ಹಾಗೂ ಕಣ್ಣಿನ ರಕ್ಷಣೆಗೆ ಅನುಕೂಲವಾಗಿವೆ. ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾದ ಪೋಷಕಾಂಶಗಳನ್ನು ಪರಂಗಿಯಲ್ಲಿರುವ ‘ಸಿ’ ಜೀವಸತ್ವ ಒದಗಿಸುತ್ತದೆ.

ಒಂದು ಮಧ್ಯಮ ಗಾತ್ರದ ಪರಂಗಿಯಲ್ಲಿ ಸರಾಸರಿ 120ಕ್ಯಾಲೋರಿ, 30ಗ್ರಾಂ ಶರ್ಕರಪಿಷ್ಟು ಮತ್ತು 2ಗ್ರಾಂ ಪ್ರೋಟೀನ್ ಇರುತ್ತದೆ. ಇದರಲ್ಲಿ ‘ಸಿ’ ಜೀವಸತ್ವವು ಹೇರಳ ಪ್ರಮಾಣದಲ್ಲಿದ್ದು ದೈನಂದಿನ ಅಗತ್ಯಕ್ಕಿಂತ ಶೇ. 224ರಷ್ಟು ‘ಸಿ’ ಜೀವಸತ್ವವನ್ನು ಈ ಹಣ್ಣು ಒದಗಿಸಬಲ್ಲದು. ಪರಂಗಿಯಲ್ಲಿ ಫೋಲೇಟ್,‘ಎ’ ಜೀವಸತ್ವ, ಮೆಗ್ನೇಷಿಯಂ, ತಾಮ್ರ, ಪ್ಯಾಂಥೋಥೆನಿಕ್ ಆಮ್ಲ ಮತ್ತು ನಾರಿನಾಂಶವಿರುತ್ತದೆ. ಅಲ್ಲದೇ ‘ಬಿ’ ಜೀವಸತ್ವ, ಅಲ್ಫಾ ಮತ್ತು ಬೀಟಾ ಕೆರೋಟಿನ್‌ಗಳು, ಲ್ಯುಟಿನ್ ಮತ್ತು ಝಿಯಾಕ್ಸಾಂಥಿನ್,‘ಇ-’ ಜೀವಸತ್ವ, ಪೊಟ್ಯಾಷಿಯಂ, ‘ಕೆ’ ಜೀವಸತ್ವ ಮತ್ತು ಲೈಕೋಪೀನ್ ಹಾಗೂ ಟೊಮೆಟೊ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳೆಲ್ಲ ಪರಂಗಿಯಲ್ಲಿವೆ.

ಪರಂಗಿಯನ್ನು ಹಾಗೇ ಸೇವಿಸಬಹುದು ಅಥವಾ ಫ್ರೂಟ್ ಸಲಾಡ್‌ನಂತೆ ಇತರೆ ಹಣ್ಣುಗಳನ್ನು ಸೇರಿಸಿ ತಿನ್ನಬಹುದು ಇಲ್ಲವೇ ಜ್ಯೂಸ್ ರೂಪದಲ್ಲೂ ಸೇವಿಸಬಹುದು. ಒಟ್ಟಾರೆಯಾಗಿ ಇದರ ಸೇವನೆ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT