ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದಾಡಿ ಗೆದ್ದ ಪಾಕಿಸ್ತಾನ ತಂಡ

ಮಿಸ್ಬಾ, ರಿಯಾಜ್‌ ಜವಾಬ್ದಾರಿಯುತ ಆಟ; ಸೋಲಿನಲ್ಲೂ ಗಮನ ಸೆಳೆದ ಜಿಂಬಾಬ್ವೆ
Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌ (ಪಿಟಿಐ/ಐಎಎನ್‌ಎಸ್‌): ಮೊದಲ ಎರಡೂ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ವಿಶ್ವಕಪ್‌ ಟೂರ್ನಿಯ ಗುಂಪು ಹಂತದಿಂದಲೇ ಹೊರಬೀಳುವ ಭೀತಿ ಎದುರಿಸಿದ್ದ ಪಾಕಿಸ್ತಾನ ತಂಡ ಕೊನೆಗೂ ಜಯದ ಸವಿ ಕಂಡಿದೆ.

ನಾಯಕ ಮಿಸ್ಬಾ ಉಲ್‌ ಹಕ್‌ (73) ಮತ್ತು ವಹಾಬ್‌ ರಿಯಾಜ್‌ (ಔಟಾಗದೆ 54) ಅವರ ಜವಾಬ್ದಾರಿಯುತ ಆಟದಿಂದಾಗಿ ಈ ತಂಡ ‘ಬಿ’ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 20 ರನ್‌ನಿಂದ ಮಣಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಬ್ರಿಸ್ಬೇನ್‌ ಕ್ರಿಕೆಟ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಮಿಸ್ಬಾ ಉಲ್‌ ಹಕ್‌ ಬಳಗ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 235 ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ದಿಟ್ಟ ಹೋರಾಟ ತೋರಿ 49.4 ಓವರ್‌ಗಳಲ್ಲಿ 215ರನ್‌ ಗಳಿಸಿ ಆಲೌಟ್‌ ಆಯಿತು.

ವೈಫಲ್ಯ: ಆರಂಭಿಕರಾದ ನಾಸಿರ್‌ ಜಮ್‌ಶೆದ್‌ (1) ಮತ್ತು ಅಹ್ಮದ್‌ ಶೆಹಜಾದ್‌ (0)  ಬೇಗನೇ ಔಟಾದರು. ಹೀಗಾಗಿ ತಂಡದಲ್ಲಿ ಆತಂಕದ ಛಾಯೆ ಮನೆಮಾಡಿತ್ತು. ಆದರೆ ಮಿಸ್ಬಾ ಉಲ್‌ ಹಕ್‌ ಮತ್ತು ಹ್ಯಾರಿಸ್‌ ಸೊಹೇಲ್‌ (27; 44ಎ, 2ಬೌಂ)  ಮೂರನೇ ವಿಕೆಟ್‌ಗೆ 54ರನ್‌ಗಳ ಜತೆಯಾಟವಾಡಿ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ್ದರು.

ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. 22ನೇ ಓವರ್‌ನಲ್ಲಿ  ಸಿಕಂದರಾ ರಾಜ  ಮೊದಲ ಎಸೆತದಲ್ಲಿಯೇ ಸೊಹೇಲ್‌ ವಿಕೆಟ್‌ ಪಡೆದು ಜಿಂಬಾಬ್ವೆಗೆ ಮೇಲುಗೈ ಒದಗಿಸಿದರು. ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳು ಬೇಗನೇ ಔಟಾಗಿದ್ದರಿಂದ ನಾಯಕ ಮಿಸ್ಬಾ ಒತ್ತಡಕ್ಕೊಳಗಾದಂತೆ ಕಂಡರು. ಹೀಗಾಗಿ ಅವರು ಎಚ್ಚರಿಕೆಯ ಆಟಕ್ಕೆ ಮುಂದಾದರು. ಸೀನ್‌ ವಿಲಿಯಮ್ಸ್‌ ಹಾಕಿದ 32ನೇ ಓವರ್‌ನ ನಾಲ್ಕನೇ ಎಸೆತವನ್ನು ಡೀಪ್‌ ಸ್ಕ್ವೇರ್‌ ಲೆಗ್‌ನತ್ತ ಬಾರಿಸಿದ ಅವರು ಒಂದು ರನ್‌ಗಳಿಸಿ ಅರ್ಧ ಶತಕ ಪೂರೈಸಿದರು.ಇದಕ್ಕಾಗಿ ತೆಗೆದುಕೊಂಡಿದ್ದು 91ಎಸೆತ.

ನಾಯಕನಿಗೆ ಸೂಕ್ತ ಬೆಂಬಲ ನೀಡಿದ ಉಮರ್‌ ಅಕ್ಮಲ್‌ (33; 42ಎ, 3ಬೌಂ) ಸೀನ್‌ ವಿಲಿಯಮ್ಸ್‌ ಅವರ 34ನೇ ಓವರ್‌ನ ಮೂರನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಅವರು ಮಿಸ್ಬಾ ಜತೆ ನಾಲ್ಕನೇ ವಿಕೆಟ್‌ಗೆ 54 ರನ್‌ ಕಲೆ ಹಾಕಿದರು. ಬಳಿಕ 120 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 73 ರನ್‌ ಗಳಿಸಿದ ಮಿಸ್ಬಾ 47 ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ  ವಹಾಬ್‌ ರಿಯಾಜ್‌  ಜಿಂಬಾಬ್ವೆ ಬೌಲರ್‌ಗಳ ಚಳಿ ಬಿಡಿಸಿದರು. 46 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿ ಅಜೇಯವಾಗಿ ಉಳಿದರು.

ಆಘಾತ: 236 ರನ್‌ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಕೂಡಾ ಆರಂಭಿಕರಾದ ಚಾಮು ಚಿಬಾಬ (9) ಮತ್ತು ಸಿಕಂದರಾ ರಾಜ (8) ಅವರನ್ನು ಬೇಗನೆ ಕಳೆದುಕೊಂತು. ಮೂರನೇ ವಿಕೆಟ್‌ಗೆ ಹ್ಯಾಮಿಲ್ಟನ್‌ ಮಸಕಜ (29; 54ಎ, 4ಬೌಂ) ಮತ್ತು ಬ್ರೆಂಡನ್‌ ಟೇಲರ್‌ (50; 72ಎ, 6ಬೌಂ) 52ರನ್‌ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು.

ಈ ಹಂತದಲ್ಲಿ ದಾಳಿಗಿಳಿದ ಮೊಹಮ್ಮದ್‌ ಇರ್ಫಾನ್‌ ಅವರು ಮಸಕಜ ವಿಕೆಟ್‌ ಕಬಳಿಸಿ ಈ ಜೋಡಿಯನ್ನು ಬೇರ್ಪಡಿಸಿದರು. ಅರ್ಧ ಶತಕ ಗಳಿಸಿದ ಬಳಿಕ ಟೇಲರ್‌ ಕೂಡಾ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಸೀನ್‌ ವಿಲಿಯಮ್ಸ್‌ (33; 32ಎ, 2ಬೌಂ) ಮತ್ತು ಎಲ್ಟನ್‌ ಚಿಗುಂಬುರಾ (35; 35ಎ, 4ಬೌಂ) ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡಕ್ಕೆ ಗೆಲುವು ತಂದುಕೊಡಲು ನಡೆಸಿದ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ.

‘ಸರ್ಫ್‌ರಾಜ್‌ ಅಹ್ಮದ್‌ಗೆ ಅವಕಾಶ ನೀಡಬೇಕು’
ಕರಾಚಿ (ಪಿಟಿಐ): ‘ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯಗಳಲ್ಲಿ ಸರ್ಫ್‌ರಾಜ್‌ ಅಹ್ಮದ್‌ಗೆ ಆಡಲು ಅವಕಾಶ ನೀಡಬೇಕು’ ಎಂದು ಪಿಸಿಬಿ ಮುಖ್ಯಸ್ಥ ಶಹರ್ಯಾರ್‌ ಖಾನ್‌ ಹೇಳಿದ್ದಾರೆ. ಫಾರ್ಮ್‌ ಕಂಡುಕೊಳ್ಳಲು ವಿಫಲರಾಗಿರುವ ನಾಸಿರ್‌ ಜಮ್‌ಶೆದ್‌ ಅವರನ್ನು ಅಂತಿಮ ಹನ್ನೊಂದರ ಬಳಗದಿಂದ ಕೈಬಿಡಬೇಕು ಎಂಬುದು ಅವರ ಅಭಿಪ್ರಾಯ.

‘ಸರ್ಫ್‌ರಾಜ್‌ ಅವರಿಗೆ ಆಡಲು ಅವಕಾಶ ನೀಡಬೇಕು. ಯುಎಇ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಅವರೇ ತಂಡದ ಇನಿಂಗ್ಸ್‌ ಆರಂಭಿಸಲಿ’ ಎಂದು ಶಹರ್ಯಾರ್‌ ನುಡಿದಿದ್ದಾರೆ. ಪಾಕ್‌ ತಂಡದ ಆಯ್ಕೆ ಸಂಬಂಧಿಸಿದಂತೆ ಶಹರ್ಯಾರ್‌ ಖಾನ್‌ ಮತ್ತು ಪಿಸಿಬಿ ಮಾಜಿ ಮುಖ್ಯಸ್ಥ ನಜಮ್‌ ಸೇಥಿ ನಡುವೆ ಕೆಲ ದಿನಗಳಿಂದ ‘ಶೀತಲ ಸಮರ’ ನಡೆಯುತ್ತಿದೆ. ‘ತಂಡದ ಆಯ್ಕೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಸೇಥಿ ಹೇಳಿದ್ದಾರೆ. ಜಿಂಬಾಬ್ವೆ ವಿರುದ್ಧ ಗೆಲುವು ಪಡೆದ ಪಾಕ್‌ ತಂಡವನ್ನು ಶಹರ್ಯಾರ್‌ ಖಾನ್‌ ಅಭಿನಂದಿಸಿದ್ದಾರೆ.

ಸ್ಕೋರ್‌ ವಿವರ :
ಪಾಕಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 235
ನಾಸಿರ್‌ ಜಮ್‌ಶೆದ್‌ ಸಿ ರಾಜಾ ಬಿ ಟೆಂಡೈ ಚಟಾರ  01
ಅಹ್ಮದ್‌ ಶೆಹಜಾದ್‌ ಸಿ ಟೇಲರ್‌ ಬಿ ಟೆಂಡೈ ಚಟಾರ  00
ಹ್ಯಾರಿಸ್‌ ಸೊಹೈಲ್‌ ಸಿ ವಿಲಿಯಮ್ಸ್‌ ಬಿ ಸಿಕಂದರ್‌ ರಾಜಾ  27
ಮಿಸ್ಬಾ ಉಲ್‌ ಹಕ್‌ ಸಿ ವಿಲಿಯಮ್ಸ್‌ ಬಿ ಟೆಂಡೈ ಚಟಾರ  73
ಉಮರ್‌ ಅಕ್ಮಲ್‌ ಬಿ ಸೀನ್‌ ವಿಲಿಯಮ್ಸ್‌  33‌
ಶಾಹಿದ್‌ ಅಫ್ರಿದಿ ಬಿ ಸೀನ್‌ ವಿಲಿಯಮ್ಸ್‌  00
ಸೊಹೈಬ್‌ ಮಕ್ಸೂದ್‌ ಸಿ ಮತ್ತು ಬಿ ತವಾಂಡ ಮುಪರಿವ  21
ವಹಾಬ್‌ ರಿಯಾಜ್‌ ಔಟಾಗದೆ  54
ಸೊಹೈಲ್‌ ಖಾನ್‌ ಔಟಾಗದೆ  06‌
ಇತರೆ (ಲೆಗ್‌ಬೈ–3, ವೈಡ್‌–17)  20
ವಿಕೆಟ್‌ ಪತನ: 1–1 (ಜಮ್‌ಶೆದ್‌; 1.6), 2–4 (ಶೆಹಜಾದ್‌; 3.5), 3–58 (ಸೊಹೈಲ್‌; 20.1), 4–127 (ಅಕ್ಮಲ್‌; 33.3), 5–127 (ಅಫ್ರಿದಿ; 33.5), 6–155 (ಮಕ್ಸೂದ್‌; 38.2), 7–202 (ಮಿಸ್ಬಾ; 46.1)

ಬೌಲಿಂಗ್‌: ತಿನೇಶ್‌ ಪನ್ಯಂಗರ 10–1–49–0, ಟೆಂಡೈ ಚಟಾರ 10–2–35–3, ತವಾಂಡ ಮುಪರಿವ 8–1–36–1, ಸೀನ್‌ ವಿಲಿಯಮ್ಸ್‌ 10–1–48–2, ಹ್ಯಾಮಿಲ್ಟನ್‌ ಮಸಕಜ 3–0–14–0, ಎಲ್ಟನ್‌ ಚಿಗುಂಬುರ 1–0–7–0, ಸಿಕಂದರ್‌ ರಾಜಾ 7–0–34–1, ಸೊಲೊಮನ್‌ ಮಿರ್‌ 1–0–9–0

ಜಿಂಬಾಬ್ವೆ: 49.4 ಓವರ್‌ಗಳಲ್ಲಿ 215
ಚಾಮು ಚಿಬಾಬ ಸಿ ಸೊಹೈಲ್‌ ಬಿ ಮೊಹಮ್ಮದ್ ಇರ್ಫಾನ್‌  09
ಸಿಕಂದರ್‌ ರಾಜಾ ಸಿ ಸೊಹೈಲ್‌ ಬಿ ಮೊಹಮ್ಮದ್‌ ಇರ್ಫಾನ್‌  08
ಹ್ಯಾಮಿಲ್ಟನ್‌ ಮಸಕಜ ಸಿ ಮಿಸ್ಬಾ ಬಿ ಮೊಹಮ್ಮದ್‌ ಇರ್ಫಾನ್‌  29
ಬ್ರೆಂಡನ್‌ ಟೇಲರ್‌ ಸಿ ಅಕ್ಮಲ್‌ ಬಿ ವಹಾಬ್‌ ರಿಯಾಜ್‌  50
ಸೀನ್‌ ವಿಲಿಯಮ್ಸ್‌ ಸಿ ಶೆಹಜಾದ್‌ ಬಿ ರಾಹತ್‌ ಅಲಿ  33
ಕ್ರೆಗ್‌ ಎರ್ವಿನ್‌ ಸಿ ಅಕ್ಮಲ್‌ ಬಿ ವಹಾಬ್‌ ರಿಯಾಜ್‌  14
ಸೊಲೊಮನ್‌ ಮಿರ್‌ ಸಿ ಅಕ್ಮಲ್‌ ಬಿ ಮೊಹಮ್ಮದ್‌ ಇರ್ಫಾನ್‌  08
ಎಲ್ಟನ್‌ ಚಿಗುಂಬುರ ಸಿ ಅಕ್ಮಲ್‌ ಬಿ ವಹಾಬ್‌ ರಿಯಾಜ್‌  35
ತವಾಂಡ ಮುಪರಿವ ಸಿ ಅಕ್ಮಲ್‌ ಬಿ ವಹಾಬ್‌ ರಿಯಾಜ್‌  00
ತಿನೇಶ್ ಪನ್ಯಂಗರ ರನೌಟ್‌  10
ಟೆಂಡೈ ಚಟಾರ ಔಟಾಗದೆ  00
ಇತರೆ: (ಬೈ–3, ಲೆಗ್‌ಬೈ–2, ವೈಡ್‌–13, ನೋಬಾಲ್‌–1)  19
ವಿಕೆಟ್‌ ಪತನ: 1–14 (ಚಿಬಾಬ; 4.4), 2–22 (ರಾಜಾ; 6.4), 3–74 (ಮಸಕಜ; 21.2), 4–128 (ಟೇಲರ್‌; 29.3), 5–150 (ವಿಲಿಯಮ್ಸ್‌; 33.2), 6–166 (ಮಿರ್‌; 36.4), 7–168 (ಎರ್ವಿನ್‌; 39.2),  8– 168 (ಮುಪರಿವ; 39.4), 9–215 (ಪನ್ಯಂಗರ; 49.3), 10–215 (ಚಿಗುಂಬುರ; 49.4)

ಬೌಲಿಂಗ್‌: ಮೊಹಮ್ಮದ್‌ ಇರ್ಫಾನ್‌ 10–2–30–4, ಸೊಹೈಲ್ ಖಾನ್‌  10–0–45–0, ರಾಹತ್‌ ಅಲಿ 10–0–37–1, ವಹಾಬ್‌ ರಿಯಾಜ್‌      9.4–1–45–4, ಶಾಹಿದ್‌ ಅಫ್ರಿದಿ 10–1–53–0
ಫಲಿತಾಂಶ: ಪಾಕಿಸ್ತಾನಕ್ಕೆ 20 ರನ್‌ ಗೆಲುವು ಹಾಗೂ ಎರಡು ಪಾಯಿಂಟ್‌
ಪಂದ್ಯಶ್ರೇಷ್ಠ: ವಹಾಬ್‌ ರಿಯಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT