ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೆ ಹಿಂದಿನ ಯಶೋಗಾಥೆ...

ಯಶಸ್ಸಿನ ಹಾದಿಯ ಇನ್ನೊಂದು ಮುಖ
Last Updated 18 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಹದಿನೈದು ವರ್ಷಗಳ ಕಾಲ ರಣಜಿ ಟ್ರೋಫಿ ಗೆಲ್ಲಲು ಕರ್ನಾಟಕ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಎರಡು ವರ್ಷಗಳಿಂದ ಅಮೋಘ ಪ್ರದರ್ಶನ ನೀಡುತ್ತಾ ಇಡೀ ದೇಶದ ಕ್ರಿಕೆಟ್‌ ಪ್ರಿಯರ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ. ಒಂದೂ ಪಂದ್ಯದಲ್ಲಿ ಸೋಲದೆ ಸತತ ಎರಡು ಬಾರಿ ರಣಜಿ ಚಾಂಪಿಯನ್ ಆಗಿದೆ. ರಣಜಿಯಲ್ಲಿ ಮಾತ್ರವಲ್ಲ; ಇರಾನಿ ಕಪ್‌ ಹಾಗೂ ವಿಜಯ ಹಜಾರೆ ಟೂರ್ನಿಯಲ್ಲೂ ಪ್ರಭುತ್ವ ಮೆರೆದಿದೆ. ಹಾಗಾಗಿ ರಾಷ್ಟ್ರೀಯ ಆಯ್ಕೆದಾರರ ಚಿತ್ತ ರಾಜ್ಯ ತಂಡದ ಆಟಗಾರರತ್ತ ಹರಿಯುತ್ತಿದೆ.

ಈ ಸಾಧನೆಯ ಹಿಂದಿನ ಗುಟ್ಟೇನು? ಆಟಗಾರರ ಯಶಸ್ಸಿನ ಹಿಂದೆ ಯಾರಿದ್ದಾರೆ? ಬದಲಾವಣೆಯ ಗಾಳಿ ಬೀಸಿದ್ದು ಯಾವಾಗ? ಆಟಗಾರರ ಪರಿಶ್ರಮವೇನು? ಕೋಚ್‌ಗಳು, ಪೋಷಕರು, ಆಡಳಿತಗಾರರು ಮತ್ತು ಸಿಬ್ಬಂದಿಯ ಪಾತ್ರವೇನು? ಮತ್ತೊಂದು ರಣಜಿ ಟೂರ್ನಿ ಶುರುವಾಗಿರುವ ಈ ಹೊತ್ತಿನಲ್ಲಿ ರಾಜ್ಯ ತಂಡದ ತೆರೆಮರೆಯ ಯಶಸ್ಸಿನ ಕಥಾನಕವನ್ನು ಕೆ. ಓಂಕಾರ ಮೂರ್ತಿ ಬಿಚ್ಚಿಟ್ಟಿದ್ದಾರೆ.

ಕೈ ಕೊಟ್ಟ ಫಾರ್ಮ್‌, ರಾಷ್ಟ್ರೀಯ ತಂಡದಿಂದ ಕಡೆಗಣನೆ, ರಣಜಿಯಲ್ಲಿ ವೈಫಲ್ಯ, ಐಪಿಎಲ್‌ನಲ್ಲೂ ನೀರಸ ಪ್ರದರ್ಶನ, ಅತಿಯಾದ ದೇಹ ತೂಕ. ಜೊತೆಗೆ ಟೀಕಾ ಪ್ರಹಾರ. ಕ್ರಿಕೆಟಿಗ ರಾಬಿನ್‌ ಉತ್ತಪ್ಪ 2012–13ರಲ್ಲಿ ಅನುಭವಿಸಿದ ನರಕಯಾತನೆಯ ಪರಿ ಇದು. ಕಳಪೆ ಫಾರ್ಮ್‌ನಿಂದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದವರು ಕೂಡ ರಾಬಿನ್‌ ಅವರನ್ನು ಕೈಬಿಟ್ಟಿದ್ದರು.

ಇನ್ನೇನು ಕ್ರಿಕೆಟ್‌ ತೊರೆಯಬೇಕು ಎಂದಿದ್ದ ರಾಬಿನ್‌ ಅವರಿಗೆ ಸ್ನೇಹಿತರೊಬ್ಬರು ಒಂದು ಸಲಹೆ ನೀಡಿದರು. ಹೆಸರಾಂತ ಕೋಚ್‌ ಪ್ರವೀಣ್‌ ಆಮ್ರೆ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯಲು ಹೇಳಿದರು. ಹೌದು, ಅದೊಂದು ಸಲಹೆ ಅವರ ಕ್ರಿಕೆಟ್‌ ಜೀವನವನ್ನೇ ಬದಲಾಯಿಸಿತು. ಅಷ್ಟೇ ಅಲ್ಲ; ಕರ್ನಾಟಕ ತಂಡದ ಶುಕ್ರದೆಸೆಗೆ ಮುನ್ನುಡಿ ಬರೆಯಿತು.

ಮುಂಬೈಗೆ ತೆರಳಿದ ರಾಬಿನ್ ಭೇಟಿಯಾಗಿದ್ದು ಆಮ್ರೆ ಅವರನ್ನು. ಅಜಿಂಕ್ಯ ರಹಾನೆ ಹಾಗೂ ಸುರೇಶ್‌ ರೈನಾ ಅವರ ಕ್ರಿಕೆಟ್‌ ಜೀವನದ ತಿರುವಿಗೆ ಕಾರಣ ಎನಿಸಿರುವ ಕೋಚ್‌ ಆಮ್ರೆ, ರಾಬಿನ್‌ಗೆ ಮಾರ್ಗದರ್ಶನ ನೀಡಲು ಒಪ್ಪಿದರು.

ಅಷ್ಟೇ ಅಲ್ಲ; ಆಮ್ರೆ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ರಾಬಿನ್ ತಮ್ಮ ಜೇಬಿನಿಂದಲೇ ಶುಲ್ಕ ನೀಡಿದರು. ದೇಸಿ ಕ್ರಿಕೆಟ್‌ನ ಯಶಸ್ವಿ ಕೋಚ್‌ ಎನಿಸಿರುವ ಆಮ್ರೆ, ರಾಬಿನ್ ಅವರ ಬ್ಯಾಟಿಂಗ್‌ ವೈಖರಿಯನ್ನು ತಿದ್ದಲು ಶುರು ಮಾಡಿದರು. ದಿನದ ಹೆಚ್ಚಿನ ಸಮಯವನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಕಳೆದರು. ಆಮ್ರೆ ಮುಂಬೈಗೆ ಮರಳಿದಾಗ ರಾಬಿನ್‌ ಅಲ್ಲಿಗೂ ಹೋಗಿ ಪಾಠ ಹೇಳಿಸಿಕೊಂಡರು. ಮುಂಬೈನಲ್ಲಿ ಬಾಡಿಗೆ ಮನೆಯೊಂದರಲ್ಲಿ ಉಳಿದುಕೊಂಡು ಯೋಗ, ಧ್ಯಾನದ ಮೊರೆ ಹೋದರು.

ಬದಲಾದ ರಾಬಿನ್‌
ರಾಬಿನ್ ಬದಲಾಗಲು ಹೆಚ್ಚು ದಿನ ಬೇಕಾಗಲಿಲ್ಲ. 17 ಕೆ.ಜಿ ದೇಹ ತೂಕ ಇಳಿಸಿಕೊಂಡ ಅವರು ಮತ್ತೆ ಫಾರ್ಮ್ ಕಂಡುಕೊಂಡರು. ಕರ್ನಾಟಕ ತಂಡ 2013–14ರ ರಣಜಿ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಪ್ರತಿನಿಧಿಸುತ್ತಿದ್ದ ಕೋಲ್ಕತ್ತ ನೈಟ್‌ ರೈಡರ್ಸ್‌ 2014ರಲ್ಲಿ ಐಪಿಎಲ್‌ ಚಾಂಪಿಯನ್‌ ಆಯಿತು. ಆ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ರಾಬಿನ್. ಅಷ್ಟೇ ಏಕೆ? ಆ ವರ್ಷ ಭಾರತ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಲಭಿಸಿತು. ಇತ್ತ ಕರ್ನಾಟಕ ತಂಡ ಆಡಿದ ಟೂರ್ನಿಗಳಲ್ಲೆಲ್ಲಾ ಚಾಂಪಿಯನ್‌ ಪಟ್ಟಕ್ಕೇರುತ್ತಾ ಸಾಗಿತು. 2014–15ರ ರಣಜಿ ಟೂರ್ನಿಯಲ್ಲೂ ಚಾಂಪಿಯನ್‌ ಆಯಿತು. ಕೆಲವೇ ದಿನಗಳಲ್ಲಿ ರಾಬಿನ್ ಮತ್ತೆ ಭಾರಿ ಬೇಡಿಕೆಯ ಆಟಗಾರ ಎನಿಸಿಬಿಟ್ಟರು.

ಪದಾರ್ಪಣೆ ಎಂಬುದು ಪ್ರತಿ ಕ್ರಿಕೆಟಿಗನ ಪಾಲಿಗೆ ಅವಿಸ್ಮರಣೀಯ ಕ್ಷಣ. ಆದರೆ, ವೈಫಲ್ಯದ ಸುಳಿಯಿಂದ ಪಾರಾಗಿ ಮತ್ತೆ ಫಾರ್ಮ್‌ ಕಂಡುಕೊಂಡು ಕಣಕ್ಕಿಳಿಯುವುದು ಮರುಜೀವ ಲಭಿಸಿದಂತೆ. ‘ನಿನ್ನ ಕಥೆ ಮುಗಿಯಿತು’ ಎಂದು ಷರಾ ಬರೆದವರಿಗೆ ತಿರುಗೇಟು ನೀಡುವಂಥದ್ದು.

‘ನನ್ನ ಈ ಬದಲಾವಣೆಗೆ ಎರಡು, ಮೂರು ವರ್ಷ ಬೇಕಾಯಿತು. ವೈಯಕ್ತಿಕ ಕಾರಣಗಳಿಂದಾಗಿ ಆಟದತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ನನ್ನ ಯಶಸ್ಸಿನಲ್ಲಿ ಸಾಕಷ್ಟು ಮಂದಿ ವಿವಿಧ ರೀತಿಯಲ್ಲಿ ನೆರವಾಗಿದ್ದಾರೆ. ಅದರಲ್ಲಿ ಮೊದಲನೆಯವರು ಆಮ್ರೆ. ಇವರು ನನ್ನ ಕ್ರಿಕೆಟ್‌ ಬದುಕಿಗೆ ತಿರುವು ನೀಡಿದರು. ಜೊತೆಗೆ ನನ್ನ ಪರಿಶ್ರಮವೂ ಇದೆ’ ಎನ್ನುತ್ತಾರೆ ರಾಬಿನ್‌.

ಆಮ್ರೆ ಕೂಡ ಶಿಷ್ಯನನ್ನು ಗುಣಗಾನ ಮಾಡುತ್ತಾರೆ. ‘ಮತ್ತೆ ಉತ್ತಮ ಪ್ರದರ್ಶನ ತೋರಬೇಕು ಎಂಬ ಛಲ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಾಕಷ್ಟು ಶ್ರಮ ಹಾಕಿದ್ದಾರೆ. ಅದಕ್ಕಾಗಿ ಸ್ವಂತ ಹಣ ಖರ್ಚು ಮಾಡಿ ಮಾರ್ಗದರ್ಶನ ಪಡೆದಿದ್ದಾರೆ. ನಾನು ರಾಬಿನ್‌ ಆಟದ ವೈಖರಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದೆ ಅಷ್ಟೆ. ಯಾವುದೇ ಕಾರಣಕ್ಕೂ ಅವರ ನೈಜ ಆಟಕ್ಕೆ ಅಡ್ಡಿಯುಂಟು ಮಾಡಲಿಲ್ಲ’ ಎಂದು ಹೇಳುತ್ತಾರೆ. ಇಂಥದ್ದೊಂದು ತೆರೆಮರೆಯ ಕಸರತ್ತು ಕರ್ನಾಟಕ ರಣಜಿ ತಂಡದ ಯಶಸ್ಸಿನ ಪ್ರಮುಖ ಪಾಲು ಅಲ್ಲವೇ?

ನಿಮಗೆ ಗೊತ್ತಿರಬಹುದು. ಫಾರ್ಮುಲಾ ಒನ್‌ ದಂತಕಥೆ ಜರ್ಮನಿಯ ಮೈಕಲ್‌ ಶುಮಾಕರ್‌ ಸತತ ವೈಫಲ್ಯ ಅನುಭವಿಸುತ್ತಿದ್ದಾಗ ಭಾರತದ ಯೋಗ ಗುರುವನ್ನು ನೇಮಿಸಿಕೊಂಡು ಯಶಸ್ಸು ಕಂಡಿದ್ದರು. ಹಾಗೇ ರಾಬಿನ್‌ ಜೀವನಕ್ಕೆ ತಿರುವು ನೀಡಿದ್ದು ಆಮ್ರೆ.

15 ವರ್ಷಗಳ ಪ್ರಶಸ್ತಿ ಬರ...
2014ರಲ್ಲಿ ರಣಜಿ ಚಾಂಪಿಯನ್‌ ಆಗುವ ಮುನ್ನ ರಾಜ್ಯ ತಂಡ ಬರೋಬ್ಬರಿ 15 ವರ್ಷ ಪ್ರಶಸ್ತಿ ಬರ ಎದುರಿಸಿತ್ತು. 1999ರಲ್ಲಿ ಚಾಂಪಿಯನ್‌ ಆಗಿದ್ದೇ ಕೊನೆಯದ್ದು. ಇದರಿಂದ ತಂಡ ಮಾತ್ರವಲ್ಲ; ಇಡೀ ಆಡಳಿತ ಟೀಕಾ ಪ್ರಹಾರಕ್ಕೆ ಸಿಲುಕಿತ್ತು. ಯಾವುದೇ ಬದಲಾವಣೆಗಳು ಫಲ ನೀಡಿರಲಿಲ್ಲ. ಹಲವು ಕೋಚ್‌ಗಳು ಬಂದು ಹೋಗಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಲೀಗ್‌ ಟೂರ್ನಿಗಳಲ್ಲಿ ಬದಲಾವಣೆ ಮಾಡಿ ನೋಡಲಾಯಿತು. ಸೌಲಭ್ಯಕ್ಕೆ ಒತ್ತು ನೀಡುವ ಪ್ರಕ್ರಿಯೆ ಆರಂಭಿಸಲಾಯಿತು.

ತಿರುವು ನೀಡಿದ ಕುಂಬ್ಳೆ ನಿರ್ಧಾರ...
ರಾಜ್ಯ ತಂಡ ವೈಫಲ್ಯದ ಸುಳಿಗೆ ಸಿಲುಕಿದ್ದಾಗ ಕೈಹಿಡಿದವರು ದೇಶ ಕಂಡ ಮಹಾನ್‌ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ ಹಾಗೂ ಜಾವಗಲ್‌ ಶ್ರೀನಾಥ್‌. ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ 2010ರಲ್ಲಿ ಕೆಎಸ್‌ಸಿಎ ಚುಕ್ಕಾಣಿ ಹಿಡಿದರು. ಕ್ರಿಕೆಟ್‌ ಆಡಳಿತದಲ್ಲಿ ಇದೊಂದು ದೊಡ್ಡ ಕ್ರಾಂತಿ ಎಂದು ಆ ಸಂದರ್ಭದಲ್ಲಿ ಬಿಂಬಿಸಲಾಗಿತ್ತು. ‘ದೇಸಿ ಕ್ರಿಕೆಟ್‌ನಲ್ಲಿ ಮತ್ತೆ ರಾಜ್ಯ ತಂಡವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸುವುದು ನಮ್ಮ ಗುರಿ’ ಎಂದು ಆ ಸಂದರ್ಭದಲ್ಲಿ ಇವರಿಬ್ಬರು ಘೋಷಿಸಿದ್ದರು.

ಕರ್ನಾಟಕ ಕ್ರಿಕೆಟ್‌ನ ಯಶಸ್ಸಿಗೆ ಮುನ್ನುಡಿ ಲಭಿಸಿದ್ದು ಇವರ ಆಡಳಿತಾವಧಿಯಲ್ಲಿಯೇ. ಹಿಂದೆ ತಂಡಕ್ಕೆ ಒಬ್ಬರೇ ಕೋಚ್‌ ಇದ್ದರು. ಶ್ರೀನಾಥ್‌ ಹಾಗೂ ಕುಂಬ್ಳೆ ಅವರು ಬೌಲಿಂಗ್‌ ಕೋಚ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಎಂದು ಪ್ರತ್ಯೇಕವಾಗಿ ನೇಮಕ ಮಾಡಿದರು. ಬ್ಯಾಟಿಂಗ್‌ ಕೋಚ್‌ ಆದ ಜೆ. ಅರುಣ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಆದ ಮನ್ಸೂರ್‌ ಅಲಿ ಖಾನ್‌ ಸದ್ಯ ದೇಸಿ ಕ್ರಿಕೆಟ್‌ನಲ್ಲಿ ಯಶಸ್ವಿ ಕೋಚ್‌ಗಳು ಎನಿಸಿದ್ದಾರೆ. ಸತತ ಎರಡು ಬಾರಿ ರಣಜಿ ಚಾಂಪಿಯನ್‌ ಆಗಲು ಕಾರಣರಾಗಿದ್ದಾರೆ. ಕೆಎಸ್‌ಸಿಎ ಆಡಳಿತ ಬದಲಾದರೂ ಕೋಚ್‌ಗಳು ಮಾತ್ರ ಬದಲಾಗಲಿಲ್ಲ.

ಪ್ರತಿ ಜಿಲ್ಲೆಯಲ್ಲಿ ಕ್ರೀಡಾಂಗಣ, ಟರ್ಫ್‌ ವಿಕೆಟ್‌, ಬೆಂಗಳೂರು ಸಮೀಪದ ಆಲೂರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಯಿತು. ಆಲೂರಿನಲ್ಲಿ ಒಂದೇ ಪ್ರದೇಶದಲ್ಲಿ ಮೂರು ಅಂಗಳಗಳಿವೆ. ಇಲ್ಲಿ ಅಂತರರಾಷ್ಟ್ರೀಯ ‘ಎ’ ತಂಡಗಳ ಟೂರ್ನಿ ಆಯೋಜಿಸಲು ಬೇಕಾದ ಸೌಲಭ್ಯಗಳಿವೆ. ಮೈಸೂರಿನಲ್ಲಿ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದ ಬಗ್ಗೆ ವಿದೇಶಿ ಆಟಗಾರರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿನ ಹೊರೆಯನ್ನು ಗ್ಲೇಡ್ಸ್‌ ಅಂಗಳ ತಪ್ಪಿಸಿದೆ. ಹುಬ್ಬಳ್ಳಿಯಲ್ಲೂ ರಣಜಿ ಹಾಗೂ ‘ಎ’ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲಿಯೇ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಇರುವುದರಿಂದ ಹೆಚ್ಚಿನ ಉಪಯೋಗವಾಗಿದೆ.

ಅಷ್ಟೇ ಅಲ್ಲ; ಲೀಗ್‌ ಕ್ರಿಕೆಟ್‌ ಟೂರ್ನಿಗಳ ಗುಣಮಟ್ಟದಲ್ಲಿ ಭಾರಿ ಸುಧಾರಣೆಗೆ ಕಾರಣರಾದರು. ದಶಕದ ಹಿಂದಿನಿಂದಲೂ ವಯೋಮಿತಿಯ ಕ್ರಿಕೆಟ್‌ ಟೂರ್ನಿಗಳಿಗೆ ರಾಜ್ಯ ಕ್ರಿಕೆಟ್‌ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿದೆ. ಹಾಗೇ, 16 ಹಾಗೂ 19 ವರ್ಷದೊಳಗಿನ ತಂಡಗಳನ್ನು ಬಲಗೊಳಿಸ ಲಾಯಿತು. ಅತ್ಯಂತ ವ್ಯವಸ್ಥಿತವಾಗಿ ಮಂಗಳೂರು, ಹುಬ್ಬಳ್ಳಿ–ಧಾರವಾಡ, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳೂ ಒಳಗೊಳ್ಳುವಂಥ ವಲಯಗಳನ್ನು ಮಾಡಿ ಅಂತರ ವಲಯ ವಯೋಮಿತಿ ಕ್ರಿಕೆಟ್‌ ಚಟುವಟಿಕೆಗಳನ್ನು ಹೆಚ್ಚಿಸ ಲಾಯಿತು. ಇಂಥ ಅಂತರ ವಲಯ ವಯೋಮಿತಿ ಟೂರ್ನಿ ಗಳ ಒಡಲಿನಿಂದಲೇ ರಾಹುಲ್‌, ಕರುಣ್‌ ನಾಯರ್‌, ಶರತ್‌ ಅವರಂಥ ಆಟಗಾರರು ಮೂಡಿಬಂದಿದ್ದು.

ಮುಕ್ತ ಆಟಕ್ಕೆ ಅವಕಾಶ
‘ಕೆಎಸ್‌ಸಿಎ ಚುಕ್ಕಾಣಿ ಹಿಡಿಯುತ್ತಿದ್ದಂತೆ ನಾವು ಮೊದಲು ಮಾಡಿದ ಕೆಲಸ ಪ್ರಮುಖ ಜಿಲ್ಲೆಗಳಲ್ಲಿ ಕ್ರೀಡಾಂಗಣ, ಟರ್ಫ್‌ ವಿಕೆಟ್‌ ಸೇರಿದಂತೆ ಮೂಲ ಸೌಲಭ್ಯ ಹೆಚ್ಚಿಸಲು ಒತ್ತು ನೀಡಿದ್ದು. ಅಷ್ಟೇ ಅಲ್ಲ; ತಂಡದ ಆಯ್ಕೆ ಹಾಗೂ ಆಟ ಗಾರರ ವಿಚಾರದಲ್ಲಿ ನಾವು ತಲೆಹಾಕಲಿಲ್ಲ. ಮುಕ್ತ ಆಟಕ್ಕೆ ಅವಕಾಶ ಕಲ್ಪಿಸಿ ದೆವು’ ಎಂದು ನುಡಿಯುತ್ತಾರೆ ಕೆಎಸ್‌ಸಿಎ ಹಿಂದಿನ ಕಾರ್ಯದರ್ಶಿ ಜಾವಗಲ್‌ ಶ್ರೀನಾಥ್‌.

‘ಸುಮಾರು ಮೂರು ಸಾವಿರ ಮಕ್ಕಳಿಗೆ ವಿವಿಧ ಜಿಲ್ಲೆಗಳಲ್ಲಿ ಶಿಬಿರ ಆಯೋ ಜಿಸಿದೆವು. ಕ್ರಿಕೆಟ್‌ಗೆ ಬೇಕಾದ ಪೂರಕ ವಾತಾವರಣ ನಿರ್ಮಿಸಿದೆವು. ತಂತ್ರ ಜ್ಞಾನಕ್ಕೆ ಒತ್ತು ನೀಡಿದೆವು’ ಎಂದು ತಾವು ಕೈಗೊಂಡ ಕ್ರಮಗಳನ್ನು ಬಿಚ್ಚಿಡುತ್ತಾರೆ.

ವಿಡಿಯೊ ಆಧಾರಿತ ಕೋಚಿಂಗ್
ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವು ಹೊಂದಿರುವ ವೇಗಿ ಶ್ರೀನಾಥ್‌ ಕೆಎಸ್‌ಸಿಎನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೋಚಿಂಗ್‌ ನೀಡುವ ಮೂಲಕ ಕ್ರಿಕೆಟಿಗರಿಗೆ ನೆರವಾದರು. ಇದಕ್ಕಾಗಿ ಬೆಲ್ಜಿಯಂನ ಯುರೋಪಿಯನ್ ವಿಡಿಯೊ ಸರ್ವೀಸ್ (ಇವಿಎಸ್) ಕಂಪೆನಿ ರೂಪಿಸಿದ ‘ಕಾಗ್ನಿಟೀವ್ ವಿಡಿಯೊ ಬೇಸ್ಡ್ ಕೋಚಿಂಗ್’ (ಸಿವಿಬಿಸಿ) ತಂತ್ರಜ್ಞಾನದ ಮೊರೆ ಹೋದರು. ತಂತ್ರಜ್ಞಾನ ಬಳಸಿ ವಿಡಿಯೊ ಆಧಾರಿತ ಕೋಚಿಂಗ್ ನೀಡಲು ಮುಂದಾದ ದೇಶದ ಮೊದಲ ಕ್ರಿಕೆಟ್ ಸಂಸ್ಥೆ ಕೂಡ.

ಈ ತಂತ್ರಜ್ಞಾನದ ನೆರವಿನಿಂದ ಬೌಲರ್ ಹಾಗೂ ಬೌಲಿಂಗ್‌ ಎದುರಿಸುವ ಬ್ಯಾಟ್ಸ್‌ಮನ್ ಚಿತ್ರವನ್ನು ಏಕಕಾಲದಲ್ಲಿ ವೀಕ್ಷಿಸಬಹುದು. ಪ್ರತಿ ಬಾರಿ ಬೌಲಿಂಗ್ ಮಾಡಲು ಮುಂದಾಗುವಾಗ ಬ್ಯಾಟ್ಸ್‌ ಮನ್ ಯಾವ ರೀತಿ ಅದನ್ನು ಎದು ರಿಸಲು ಸಿದ್ಧನಾಗುತ್ತಾನೆ ಎಂಬುದನ್ನು ಕಂಡುಕೊಳ್ಳಬಹುದು. ಹಾಗೇ, ಬೌಲರ್‌ನ ತಂತ್ರವನ್ನು ಬ್ಯಾಟ್ಸ್‌ಮನ್ ಅರಿಯಬಹುದು. ಚಿತ್ರ ಕೂಡ ಸ್ಪಷ್ಟ ವಾಗಿರುತ್ತದೆ. ಅದನ್ನು ಐ-ಪಾಡ್‌ಗೆ ಡೌನ್‌ಲೋಡ್ ಮಾಡಿ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ಗೆ ವೀಕ್ಷಿಸಲು ಅನುವು ಮಾಡಿಕೊಡಲಾಯಿತು. ಈ ತಂತ್ರಜ್ಞಾನ ಆಟಗಾರರ ನೆರವಿಗೆ ಬಂತು.
***
ವ್ಯವಸ್ಥೆ ಮುಂದುವರಿಸಿದ ಬ್ರಿಜೇಶ್‌
2013ರಲ್ಲಿ ಮತ್ತೆ ಕೆಎಸ್‌ಸಿಎ ಚುಕ್ಕಾಣಿ ಹಿಡಿದ ಬ್ರಿಜೇಶ್‌ ಪಟೇಲ್‌ ಸಾರಥ್ಯದ ತಂಡ ತಂತ್ರಜ್ಞಾನ ಬಳಕೆಯ ವ್ಯವಸ್ಥೆಯನ್ನು ಮುಂದುವರಿಸಿತು. ಹಿಂದಿನ ಆಡಳಿತ ಮಾಡಿದ್ದು ಎಂದು ಯಾವುದೇ ಯೋಜನೆಗಳನ್ನು ನಿಲ್ಲಿಸಲಿಲ್ಲ. ಅಲ್ಲದೆ, ಹಿಂದಿನ ಆಡಳಿತಾವಧಿಯಲ್ಲಿ ಸ್ಥಗಿತಗೊಂಡಿದ್ದ ಕೆಲ ಟೂರ್ನಿಗಳನ್ನು ಪುನರಾರಂಭಿಸಿತು.

‘ಹಿಂದೆ ಆಡಳಿತ ನಡೆಸಿದವರು ಕೆಲ ಟೂರ್ನಿ ಗಳನ್ನು ಕೈಬಿಟ್ಟಿದ್ದರು. ಜೂನಿಯರ್‌ ಆಟಗಾರ ರನ್ನು ಕಡೆಗಣಿಸಲಾಗಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಲೀಗ್ ಟೂರ್ನಿಗಳಿಗೆ ಮಹತ್ವ ನೀಡಿದೆವು. ಈ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿದೆವು’ ಎನ್ನುತ್ತಾರೆ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್‌. ‘ಈಗ ರಾಜ್ಯದ ಮೂಲೆ ಮೂಲೆಗಳಲ್ಲೂ ಕ್ರಿಕೆಟ್‌ ಸದ್ದು ಮಾಡುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಕ್ರಿಕೆಟ್‌ ಚಟುವಟಿಕೆ ನಡೆಸುತ್ತಿದ್ದೇವೆ. ಮಂಗಳೂರಿನಿಂದ ಕೆ.ಎಲ್‌. ರಾಹುಲ್‌, ಮಂಡ್ಯದ ಶರತ್‌, ಹುಬ್ಬಳ್ಳಿಯ ಶಿಶಿರ್‌ ಭವಾನೆ ಮುಂತಾದವರು ಬೆಂಗಳೂರಿನಲ್ಲೇ ಅರಳಿದ ಪ್ರತಿಭೆಗಳೇನಲ್ಲ’ ಎಂದು ಅವರು ನುಡಿಯುತ್ತಾರೆ.

ವೇದಿಕೆಯಾದ ಕೆಪಿಎಲ್‌...
ಕರ್ನಾಟಕ ಕ್ರಿಕೆಟ್‌ ಅಕಾಡೆಮಿಗೆ (ಕೆಸಿಎ) ಹೊಸ ಸ್ವರೂಪ ನೀಡಿದ್ದು ಮಹತ್ವದ ತಿರುವು ಎನ್ನಬಹುದು. ಈಗಿರುವ ಹೆಚ್ಚಿನ ಆಟಗಾರರು ಈ ಅಕಾಡೆಮಿಯಿಂದ ಹೊರಹೊಮ್ಮಿದ ಪ್ರತಿಭೆಗಳು.

ಮತ್ತೊಂದು ಮಹತ್ವದ ಹೆಜ್ಜೆ ಎಂದರೆ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿ. ಒತ್ತಡ ನಿಭಾಯಿಸಿ ಆಡುವುದನ್ನು ಈ ಟೂರ್ನಿ ಕಲಿಸಿಕೊಟ್ಟಿತು. ಹೊನಲು ಬೆಳಕಿನಲ್ಲಿ ಸಾವಿರಾರು ಪ್ರೇಕ್ಷಕರ ಮುಂದೆ ಆಡಲು ಅವಕಾಶ ಕಲ್ಪಿಸಿತು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆಯಾದ ಈ ಟೂರ್ನಿಯಲ್ಲಿ ಆಡಿ ಮಿಂಚಿದವರು ಈಗಿನ ರಣಜಿ ತಂಡದಲ್ಲಿದ್ದಾರೆ. ಇದು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಯಶಸ್ವಿ ಪ್ರಯೋಗ. 

ಉತ್ತಮ ಆಡಳಿತವೇ ಕಾರಣ
‘ಉತ್ತಮ ಆಡಳಿತವು ಯಶಸ್ಸಿಗೆ ಮುನ್ನುಡಿ ಬರೆಯುತ್ತದೆ. ರಾಜ್ಯ ತಂಡದ ಯಶಸ್ಸಿನಲ್ಲೂ ಆಡಳಿತ ಮುಖ್ಯ ಪಾತ್ರ ವಹಿಸಿದೆ. ಹಿಂದಿನ ಆಡಳಿತಗಾರರು ಇರಬಹುದು, ಈಗಿನ ಆಡಳಿತಗಾರರು ಆಗಿರಬಹುದು. ನಾಲ್ಕೈದು ವರ್ಷಗಳಿಂದ ಇರುವ ತಂಡ ಗಮನಿಸಿದರೆ ನಿಮಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತಂಡದಲ್ಲಿ ಹೆಚ್ಚಿನ ಬದಲಾವಣೆಗೆ ಕೈ ಹಾಕಿಲ್ಲ. ಪ್ರಮುಖವಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ ವಿಭಾಗ ಸಮತೋಲನದಿಂದ ಕೂಡಿದೆ’ ಎಂಬುದು ಹೆಸರಾಂತ ಆಫ್‌ ಸ್ಪಿನ್ನರ್‌ ಇ.ಎ.ಎಸ್‌. ಪ್ರಸನ್ನ ಅವರ ಮೆಚ್ಚುಗೆಯ ಮಾತು.

ನಿಜ, ಮೂಲ ಸೌಲಭ್ಯ ಒದಗಿಸಿಕೊಡುವುದರಿಂದ ಹಿಡಿದು ತಂಡದ ಆಯ್ಕೆವರೆಗೆ ಆಡಳಿತಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಒಂದೆರಡು ದಿನಗಳಲ್ಲಿ ಆಗುವ ವಿಚಾರವಲ್ಲ. ಹಾಗಾಗಿ ಆಡಳಿತಗಾರರ ಸಹಾಯವಿಲ್ಲದಿದ್ದರೆ ರಾಜ್ಯ ತಂಡದವರು ಇಷ್ಟು ಸಾಧನೆ ಮಾಡಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ.

‘ಆಯ್ಕೆ ಸಮಿತಿಯು ಇಡೀ ತಂಡದ ಮೇಲೆ ಭರವಸೆ ಇಟ್ಟಿದೆ. 2–3 ವರ್ಷಗಳಲ್ಲಿ ಆಟಗಾರರನ್ನು ಬದಲಾವಣೆ ಮಾಡಿದ್ದು ಕಡಿಮೆ. ಇದೇ ಕಾರಣದಿಂದ ಈಗ ಸ್ಟುವರ್ಟ್‌ ಬಿನ್ನಿ, ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌ ಅವರಂಥ ಆಟಗಾರರು ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಪದೇಪದೇ ಬದಲಾವಣೆ ಮಾಡುತ್ತಿದ್ದರೆ ಆಟಗಾರರು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ’ ಎಂದು ರಾಜ್ಯ ತಂಡದ ಆಯ್ಕೆ ಸಮಿತಿ ಸದಸ್ಯ ದೊಡ್ಡ ಗಣೇಶ್‌ ವ್ಯಾಖ್ಯಾನಿಸುತ್ತಾರೆ.

ಸುರತ್ಕಲ್‌ನಿಂದ ಬೆಂಗಳೂರಿಗೆ...
ಇಂದು ದೇಶದ ಕ್ರಿಕೆಟ್‌ನಲ್ಲಿ ಮಿನುಗುತ್ತಿರುವ ಪ್ರತಿಭೆ ಕೆ.ಎಲ್‌. ರಾಹುಲ್‌. ಆಸ್ಟ್ರೇಲಿಯಾ ನೆಲದಲ್ಲಿ ತಾವಾಡಿದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಗಳಿಸಿ ದೇಶದ ಕೀರ್ತಿ ಮಾತ್ರವಲ್ಲ; ರಾಜ್ಯದ ಕೀರ್ತಿಯನ್ನೂ ಬೆಳಗಿಸಿದ್ದಾರೆ. ಶ್ರೀಲಂಕಾದಲ್ಲಿ 22 ವರ್ಷಗಳ ಬಳಿಕ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡದ ಸದಸ್ಯ ಕೂಡ.

ರಾಹುಲ್‌ ಕ್ರಿಕೆಟ್‌ ಜೀವನ ಆರಂಭವಾಗಿದ್ದು ಮಂಗಳೂರಿನಲ್ಲಿ. ಇವರ ತಂದೆ ಲೋಕೇಶ್‌ ಸುರತ್ಕಲ್‌ನಲ್ಲಿ ಪ್ರಾಧ್ಯಾಪಕ. ತಾಯಿ ರಾಜೇಶ್ವರಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕಿ. ಸುನಿಲ್‌ ಗಾವಸ್ಕರ್‌ ಅಭಿಮಾನಿಯಾಗಿರುವ ಲೋಕೇಶ್‌ ಅವರಿಗೆ ತಮ್ಮ ಪುತ್ರ ಕೂಡ ಅತ್ಯುತ್ತಮ ಕ್ರಿಕೆಟಿಗನಾಗಬೇಕೆಂಬ ಕನಸು.

ಅರ್ಪಣಾ ಮನೋಭಾವದ ಹಿಂದೆ...
ಎಲ್ಲಾ ಹುಡುಗರು ಸಿನಿಮಾ, ಪಿಕ್ನಿಕ್‌, ಬಂಧುಗಳ ಮನೆಗೆ ಹೋಗುವ ಮೂಲಕ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರೆ ರಾಹುಲ್‌ ಹಗಲಿರುಳು ಕ್ರಿಕೆಟ್‌ ಬಗ್ಗೆ ಯೋಚಿಸುತ್ತಿದ್ದರು. ಕ್ರಿಕೆಟ್‌ ಕಿಟ್‌ ಹೊತ್ತುಕೊಂಡು ಬೆಳಿಗ್ಗೆ ಕ್ರೀಡಾಂಗಣಕ್ಕೆ ಹೋದರೆ ಮನೆ ಸೇರುವುದು ಸೂರ್ಯ ಮುಳುಗಿದ ಮೇಲೆ.

‘11 ವರ್ಷ ವಯಸ್ಸಿನವರೆಗೆ ನಾನು ಆತನನ್ನು ಸುರತ್ಕಲ್‌ನಿಂದ 20 ಕಿ.ಮೀ. ದೂರದಲ್ಲಿರುವ ಮಂಗಳೂರಿನ ಕ್ರೀಡಾಂಗಣಕ್ಕೆ ಕರೆದು ಕೊಂಡು ಹೋಗುತ್ತಿದ್ದೆ. ಮತ್ತೆ ವಾಪಸ್‌ ಕರೆದುಕೊಂಡು ಬರುತ್ತಿದ್ದೆ. ಕೆಲಸದ ಒತ್ತಡ ವಿದ್ದರೂ ಅದನ್ನು ಬಿಟ್ಟು ಪುತ್ರನ ಕ್ರಿಕೆಟ್‌ ಆಸಕ್ತಿಗೆ ಆಸರೆಯಾಗಿ ನಿಂತೆ. ಪತ್ನಿ ಕೂಡ ನೌಕರಿ ನಡುವೆಯೂ ಪುತ್ರ ರಾಹುಲ್‌ ಕ್ರಿಕೆಟ್‌ ಜೀವನ ಅರಳಲು ಶ್ರಮಿಸಿದಳು’ ಎನ್ನುತ್ತಾರೆ ರಾಹುಲ್‌ ತಂದೆ ಲೋಕೇಶ್‌.

‘ದಿನನಿತ್ಯ ಓಡಾಟ ರಾಹುಲ್‌ಗೆ ತುಂಬಾ ಕಷ್ಟವಾಗುತಿತ್ತು. ಅಭ್ಯಾಸ ನಡೆಸಲು ಬೆಳಿಗ್ಗೆ ಮತ್ತು ಸಂಜೆ ಹೋಗಿ ಬರಬೇಕಿತ್ತು. ಕೆಲವು ದಿನ ಕೋಚ್‌ಗಳ ಮನೆಯಲ್ಲಿಯೇ ಉಳಿದು ಕೊಳ್ಳುತ್ತಿದ್ದ. ಬಳಿಕ ಬೆಂಗಳೂರಿನಲ್ಲಿ ಬಂಧುಗಳ ನಿವಾಸದಲ್ಲಿ ಉಳಿದುಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ. ಆಗ ಬೈಕ್‌ಗಾಗಿ ಹಟ ಹಿಡಿದ. ಆದರೆ, ಬೆಂಗಳೂರಿನಲ್ಲಿ ಬೈಕ್‌ ಚಲಾಯಿಸುವುದು ಕಷ್ಟ ಎಂಬ ಕಾರಣಕ್ಕೆ ಬೇಡವೆಂದೆ. ಆಟೊದಲ್ಲಿಯೇ ಹೋಗಿ ಬರುತ್ತಿದ್ದ’ ಎಂದು ಹಿಂದಿನ ದಿನಗಳನ್ನು ಅವರು ಮೆಲುಕು ಹಾಕುತ್ತಾರೆ.

ಬದ್ಧತೆಗೆ ಇನ್ನೇನು ಸಾಕ್ಷಿ ಬೇಕು...?
ಯಾವುದೇ ಮಟ್ಟದ ಪಂದ್ಯವಾದರೂ ಶ್ರದ್ಧೆಯಿಂದ ಮತ್ತು ಗಂಭೀರವಾಗಿ ಆಡುವ ಸ್ವಭಾವ ರಾಹುಲ್‌ ಅವರದ್ದು. 2014ರ ಕೆಪಿಎಲ್‌ ಟೂರ್ನಿ ಮುಗಿದ ಬಳಿಕ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಬೇಕು.

ಕೆಎಸ್‌ಸಿಎ ಡಿವಿಷನ್‌ ಪಂದ್ಯಕ್ಕೆ ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ನ ಆಟಗಾರರು ಸಜ್ಜಾಗುತ್ತಿದ್ದರು. ಆದರೆ, ಕೆಲವರು ಗಾಯಗೊಂಡಿದ್ದ ಕಾರಣ 11 ಆಟಗಾರರನ್ನು ಹೊಂದಿಸುವುದೇ ಕ್ಲಬ್‌ನ ಕೋಚ್‌ ಸಂತೋಷ್‌ ಮೆನನ್‌ ಅವರಿಗೆ ಕಷ್ಟವಾಗಿತ್ತು. ಹಾಗಾಗಿ ಪಂದ್ಯದ ಹಿಂದಿನ ರಾತ್ರಿ 10 ಗಂಟೆ ಸುಮಾರಿಗೆ ರಾಹುಲ್‌ಗೆ ಫೋನ್‌ ಮಾಡಿದ ಮೆನನ್‌, ‘ನಾಳೆ ಪಂದ್ಯ ಆಡಲು ಬರಬೇಕು’ ಎಂದು ಕೋರಿಕೊಂಡಿದ್ದರು. ರಾಹುಲ್‌ ಅಂದು ಬೆಳಿಗ್ಗೆ 9 ಗಂಟೆಗೆ ಕ್ರೀಡಾಂಗಣದಲ್ಲಿದ್ದರು. ‘ಐಪಿಎಲ್‌, ರಣಜಿ ಹಾಗೂ ಕ್ಲಬ್ ಮಟ್ಟ ಹೀಗೆ ಯಾವುದೇ ಮಾದರಿಯಾಗಲಿ ಪ್ರತಿ ಪಂದ್ಯದ ಬಗ್ಗೆಯೂ ರಾಹುಲ್ ಬದ್ಧತೆ ಹೊಂದಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು’ ಎಂದು ಮೆನನ್‌ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಕಬಡ್ಡಿ ಆಟಗಾರ ಕ್ರಿಕೆಟಿಗನಾದಾಗ...
ಚಾಂಪಿಯನ್‌ ತಂಡದ ಆಟಗಾರ ಎಚ್‌.ಎಸ್‌. ಶರತ್‌ ಅವರ ಜೀವನಗಾಥೆ ಒಂದು ಸಿನಿಮಾಕ್ಕೆ ಸರಕು ಆಗುವಂಥದ್ದು. ಮಂಡ್ಯ ಜಿಲ್ಲೆ ಹೊಸಗಾವಿಯ ಇವರ ಕ್ರೀಡಾ ಜೀವನ ಶುರುವಾಗಿದ್ದು ಕಬಡ್ಡಿ ಆಟದ ಮೂಲಕ. ಶಾಲೆಯಲ್ಲಿ ಉತ್ತಮ ಕಬಡ್ಡಿ ಆಟ ಗಾರನಾಗಿದ್ದರು. ಇವರ ತಂದೆ ಶಿವಲಿಂಗಯ್ಯ ರೈತರು. ಬೆಂಗಳೂರಿನಲ್ಲಿ ಆಟೊ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, ತಮ್ಮ ಪುತ್ರನ ಕನಸನ್ನು ಸಾಕಾರಗೊಳಿಸಲು ಅವರು ಪಟ್ಟ ಶ್ರಮ ಅಪಾರ. ಶರತ್‌ ಕೂಡ ಹೊಲದಲ್ಲಿ ತಂದೆಗೆ ನೆರವಾಗಿದ್ದುಂಟು.

ಎತ್ತರದ ನಿಲುವು ಹೊಂದಿರುವ ಶರತ್‌ಗೆ ಕ್ರಿಕೆಟ್‌ ಆಟಗಾರನಾಗುವಂತೆ ಕೋಚ್‌ ಮಹದೇವ್‌ ಸಲಹೆ ನೀಡಿದ್ದರು. ಮೊದಮೊದಲು ಟೆನಿಸ್‌ ಬಾಲ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದ ಶರತ್‌ ರಾಜ್ಯ ಜೂನಿಯರ್‌ ತಂಡದಲ್ಲಿ ಸ್ಥಾನ ಪಡೆಯುವವರೆಗೆ ಬೆಳೆದು ನಿಂತರು. 2012ರಲ್ಲಿ ಉತ್ತರ ಪ್ರದೇಶ ಎದುರು ಮೀರಟ್‌ನಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿಯೇ ಐದು ವಿಕೆಟ್‌ ಪಡೆದು ಮಿಂಚು ಹರಿಸಿದ್ದರು.

ಇದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮವಿದೆ. ಪೋಷಕರ ತ್ಯಾಗವಿದೆ, ಕೋಚ್‌ಗಳ ದುಡಿಮೆ ಇದೆ. ‘ಒಂದೇ ವರ್ಷದಲ್ಲಿ ಈ ಸಾಧನೆ ಆಗಿಲ್ಲ. ಕಾಲೇಜು ದಿನ ಗಳಲ್ಲಿ ಬೇರೆ ಊರುಗಳಿಗೆ ಹೋಗಿ ಕ್ರಿಕೆಟ್‌ ಟೂರ್ನಿಗಳನ್ನು ಆಡಿ ಬರುತ್ತಿದ್ದೆ. ಜೊತೆಗೆ, ಕ್ಲಬ್‌ನಲ್ಲಿ ಸಿಕ್ಕ ತರಬೇತಿ ನನ್ನ ಬೌಲಿಂಗ್‌ ಶೈಲಿಯನ್ನು ಬದಲಿಸಿತು. ಈಗ ಎರಡು ರಣಜಿ ಟ್ರೋಫಿ ಗೆದ್ದ ತಂಡದ ಆಟಗಾರ ಎನ್ನಲು ಹೆಮ್ಮೆ ಎನಿಸುತ್ತದೆ’ ಎನ್ನುತ್ತಾರೆ ಶರತ್.

ಹೊರಗಿನಿಂದ ಬಂದವರು...
ಕರ್ನಾಟಕ ರಣಜಿ ತಂಡದಲ್ಲಿ ರಾಜ್ಯಕ್ಕೆ ವಲಸೆ ಬಂದವರೂ ಇದ್ದಾರೆ. ಜೊತೆಗೆ ಹಲವು ಭಾಷಿಕರೂ ಇದ್ದಾರೆ. ರಾಜ್ಯ ತಂಡ ರಣಜಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ರಾಜಸ್ತಾನದ ಕರುಣ್‌ ನಾಯರ್‌ ಹಾಗೂ ಉತ್ತರಾಂಚಲದ ಮನೀಷ್‌ ಪಾಂಡೆ ಅವರ ಪಾತ್ರವೂ ಪ್ರಮುಖವಾಗಿದೆ.

ಕರುಣ್‌ ತಂದೆ ಎಂ.ಡಿ. ಕಲಾಧರ್‌ ನಾಯರ್‌ ಜೋಧಪುರದಲ್ಲಿ ಟ್ರ್ಯಾಕ್ಟರ್‌ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಬಳಿಕ ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಪತ್ನಿ ಪ್ರೇಮಾ ನಾಯರ್‌ ಜೊತೆ ಕಲಾಧರ್‌ ಬೆಂಗಳೂರಿಗೆ ಬಂದು ನೆಲೆಸಿದರು. 19 ವರ್ಷದೊಳಗಿನವರ ಭಾರತ ತಂಡದಲ್ಲಿ ಆಡಿದ್ದರು. ಕೆಎಸ್‌ಸಿಎ ಲೀಗ್‌ ಪಂದ್ಯಗಳಲ್ಲಿ ವಲ್ಚರ್ಸ್‌ ಕ್ಲಬ್‌ ಪ್ರತಿನಿಧಿಸುವ ಈ ಆಟಗಾರ ಜೈನ್‌ ಕಾಲೇಜಿನ ವಿದ್ಯಾರ್ಥಿ.

‘ಹುಟ್ಟಿದ್ದು ಮಾತ್ರ ಜೋಧಪುರದಲ್ಲಿ. ಕ್ರಿಕೆಟ್‌ ಆಡಲು ಆರಂಭಿಸಿದ್ದು ಬೆಂಗಳೂರಿ ನಲ್ಲಿ. ಬೇರೆ ರಾಜ್ಯಗಳಿಗಿಂತ ಇಲ್ಲಿ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ’ ಎನ್ನುತ್ತಾರೆ ಕರುಣ್‌.

ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಹೆಸರು ಮಾಡಿರುವ ಮನೀಷ್‌ ಹುಟ್ಟಿದ್ದು ಉತ್ತರಾಂಚಲದ ನೈನಿತಾಲ್‌ನಲ್ಲಿ. ಇವರ ತಂದೆ ಕೃಷ್ಣಾನಂದ ಪಾಂಡೆ ಸೇನೆಯಲ್ಲಿ ಕರ್ನಲ್‌ ಆಗಿದ್ದವರು. ಬಳಿಕ ಇವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು.

ಐಪಿಎಲ್‌ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿ ಹೊಂದಿರುವ ಮನೀಷ್‌, ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ (ಕೆಐಒಸಿ) ಕ್ಲಬ್‌ನಲ್ಲಿ ಮೊದಲು ತರಬೇತಿ ಪಡೆದರು. ಕೆಎಸ್‌ಸಿಎ ಲೀಗ್‌ನಲ್ಲಿ ಜವಾನ್ಸ್‌ ತಂಡವನ್ನು ಪ್ರತಿನಿಧಿಸುವ ಈ ಆಟಗಾರ ತಮ್ಮ 16ನೇ ವಯಸ್ಸಿನಲ್ಲಿಯೇ ರಾಜ್ಯ ರಣಜಿ ತಂಡದಲ್ಲಿ ಸ್ಥಾನ ಗಳಿಸಿದ್ದರು. ಇದು ಮನೀಷ್‌ ಸಾಮರ್ಥ್ಯಕ್ಕೆ ಸಾಕ್ಷಿ.

‘ತಂದೆ ಸೇನೆಯಲ್ಲಿದ್ದ ಕಾರಣ ಬೇರೆ ಬೇರೆ ಕಡೆ ವರ್ಗವಾಗುತ್ತಿತ್ತು. ಕೊನೆಗೆ ಬೆಂಗಳೂರಿನಲ್ಲಿ ನೆಲೆಸಿದೆವು. ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಶುರು ಮಾಡಿದಾಗ ಕನ್ನಡ  ಬರುತ್ತಿರಲಿಲ್ಲ. ಆದರೆ, ಸ್ನೇಹಿತರು ಮತ್ತು ಆಟಗಾರರ ಸಹಕಾರದಿಂದ ಕಲಿತೆ’ ಎಂದು ಮನೀಷ್‌ ಹೇಳುತ್ತಾರೆ.

ಕರುಣ್‌, ಮನೀಷ್‌ ಹಾಗೂ ಮಯಂಕ್‌ ಅಗರವಾಲ್‌ ಹಿಂದಿ ಭಾಷಿಕರಾದರೆ, ಸಿ.ಎಂ. ಗೌತಮ್‌, ಶ್ರೇಯಸ್‌ ಗೋಪಾಲ್‌ ಅವರು ತಮಿಳು ಭಾಷಿಕರು. ಅಮಿತ್‌ ವರ್ಮಾ ಅವರು ಮನೆಯಲ್ಲಿ ಮಾತನಾಡುವುದು ಹಿಂದಿ. ಬೆಳಗಾವಿಯ ರೋನಿತ್‌ ಮೋರೆ ಅವರ ಮಾತೃಭಾಷೆ ಮರಾಠಿ. ಅಬ್ರಾರ್‌ ಕಾಜಿ ಅವರು ಮನೆಯಲ್ಲಿ ಉರ್ದು ಮಾತನಾಡುತ್ತಾರೆ. ಆದರೆ, ತಂಡದಲ್ಲಿ ಹೊಂದಾಣಿಕೆ ಮಾತ್ರ ಅದ್ಭುತ. ವಿಭಿನ್ನ ಸಂಸ್ಕೃತಿ ಹಾಗೂ ಹಲವು ಭಾಷೆಯ ಹಿನ್ನೆಲೆ ಹೊಂದಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು. ಅದನ್ನೆಲ್ಲಾ ಈಗ ಪ್ರಶಸ್ತಿಗಳೇ ಹೇಳುತ್ತವೆ.

ಮುಖ್ಯವಾಗಿ ಆಟಗಾರರಲ್ಲಿನ ಪರಸ್ಪರ ನಂಬಿಕೆ ಹಾಗೂ ಭರವಸೆಯೇ ಯಶಸ್ಸು ತಂದುಕೊಟ್ಟಿವೆ. ಈ ಆಟಗಾರರಲ್ಲಿ ಯಾವುದೇ ತಂಡವನ್ನು ಮಣಿಸುವ ಭರವಸೆ ಇದೆ. ನಾಯಕ ವಿನಯ್‌ ಅವರಿಗೆ ತಂಡದ ಮೇಲೆ ಅಪಾರ ವಿಶ್ವಾಸ. ಮೂರು ವರ್ಷಗಳಿಂದ ಬಹುತೇಕ ಇದೇ ಆಟಗಾರರು ಇದ್ದಾರೆ. 
‘15 ವರ್ಷಗಳ ಹಿಂದೆ ರಣಜಿ ಟ್ರೋಫಿ ಗೆದ್ದಾಗ ರಾಜ್ಯ ತಂಡ ಹೇಗಿತ್ತೋ ಈಗಲೂ ಅಷ್ಟೇ ಹುರುಪು, ವಿಶ್ವಾಸ ಹಾಗೂ ನಂಬಿಕೆಯಿಂದ ಕೂಡಿದೆ. ಒಬ್ಬರ ಮೇಲೆಯೇ ಅವಲಂಬಿತವಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಆಡುತ್ತಾರೆ. ಇದರಿಂದ ಪ್ರತಿ ಪಂದ್ಯದಲ್ಲೂ ಯಶಸ್ಸು ಲಭಿಸುತ್ತಿದೆ’ ಎಂದು ರಾಹುಲ್‌ ಹೇಳುತ್ತಾರೆ.

ಪೊರಕೆಯಿಂದ ಅಭ್ಯಾಸ...!
ಬ್ಯಾಟಿಂಗ್‌ ಕೋಚ್‌ ಅರುಣ್‌ ಕುಮಾರ್‌ 2013ರಲ್ಲಿ ಅಭ್ಯಾಸದ ವೇಳೆ ವಿಚಿತ್ರ ಪದ್ಧತಿಯೊಂದನ್ನು ಆಟಗಾರರಿಗೆ ಕಲಿಸಿಕೊಟ್ಟರು. ಅದೆಂದರೆ ಪೊರಕೆ ಮೂಲಕ ಬ್ಯಾಟಿಂಗ್‌ ಮಾಡುವುದು.

ಇದನ್ನು ಕಂಡ ಆಟಗಾರರು ಕೊಂಚ ಗೊಂದಲಕ್ಕೆ ಒಳಗಾಗಿದ್ದು ನಿಜ. ಆದರೆ, ಅರುಣ್‌ ಅವರ ಯೋಜನೆಯೇ ಬೇರೆ ಇತ್ತು. ‘ಸಾಕಷ್ಟು ಸಲ ಬ್ಯಾಟಿನ ಅಂಚಿಗೆ ಸವರುವ ಚೆಂಡು ವಿಕೆಟ್ ಕೀಪರ್ ಕೈಗೆ ಹೋದಾಗ ಆತ ಗಲಿಬಿಲಿಗೊಂಡು ಚೆಂಡನ್ನು ಕೈ ಚೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದನ್ನು ತಪ್ಪಿಸಿ ವಿಕೆಟ್ ಕೀಪರ್‌ಗೆ ಸಮರ್ಥ ತರಬೇತಿ ನೀಡಲು ಪೊರಕೆ ಮೊರೆ ಹೋಗಲಾಯಿತು’ ಎಂದು ಹೇಳುತ್ತಾರೆ ಅರುಣ್.

‘ಖಂಡಿತ ಈಗಿನ ಕೋಚ್‌ಗಳಾದ ಅರುಣ್‌ ಹಾಗೂ ಮನ್ಸೂರ್‌ ನೀಡುವ ತರಬೇತಿ ವಿಧಾನದಲ್ಲಿ ವಿಶೇಷವಿದೆ. ಅವರ ಕಾರ್ಯತಂತ್ರ ವಿಭಿನ್ನವಾಗಿದೆ. ಅವರು ಕೋಚ್‌ಗಳು ಎನ್ನುವುದಕ್ಕಿಂತ ಆಟಗಾರರಂತೆ ನಮ್ಮೊಳಗೆ ಬೆರೆತು ಹೋಗಿದ್ದಾರೆ. ಸೀನಿಯರ್‌ ಅಥವಾ ಜೂನಿಯರ್‌ ಎಂಬ ಯಾವುದೇ ಭೇದಭಾವ ಇಲ್ಲ. ಇಂಥ ಸೂಕ್ಷ್ಮ ವಿಚಾರ ಗಳೂ ಯಶಸ್ಸಿಗೆ ಕಾರಣವಾಗುತ್ತವೆ’ ಎಂಬುದು ನಾಯಕ ವಿನಯ್‌ ಅವರ ಪ್ರತಿಪಾದನೆ.

ಕುಟುಂಬದ ಸದಸ್ಯರಂತೆ...
ಆಟಗಾರರು ಹಾಗೂ ಸಿಬ್ಬಂದಿ ಕುಟುಂಬದ ಸದಸ್ಯರಂತೆ ಇದ್ದದ್ದು ಸಕಾರಾತ್ಮಕ ಪರಿಣಾಮ ಬೀರಿತು. ಡ್ರೆಸ್ಸಿಂಗ್‌ ಕೊಠಡಿಯ ವಾತಾವರಣವೂ ಸ್ನೇಹಮಯವಾಗಿದೆ. ಹಿಂದಿನ ಪಂದ್ಯದಲ್ಲಿ ಎದುರಾದ ವೈಫಲ್ಯದ ಬಗ್ಗೆ ಆಟಗಾರರು ಹೆಚ್ಚು ಚಿಂತಿಸುತ್ತಿರಲಿಲ್ಲ. ಹಿಂದಿನ ವೈಫಲ್ಯ ನೆನಪಿಸಿಕೊಂಡು ಮುಂದಿನ ಪಂದ್ಯದಲ್ಲಿಯೂ ನಿರಾಸೆ ಕಾಣುವುದು ಬೇಡ ಎನ್ನುವುದು ಅವರೆಲ್ಲರ ತೀರ್ಮಾನವಾಗಿತ್ತು.

ದೇಹ ತಿದ್ದುವ ತಜ್ಞರು...
‘24 ವರ್ಷಗಳ ನನ್ನ ಕ್ರಿಕೆಟ್‌ ಜೀವನದಲ್ಲಿ ನಿರಂತರವಾಗಿ ಆಡಲು ಸಾಧ್ಯವಾಗಿರು ವುದರ ಹಿಂದೆ ಅನೇಕ ಶಕ್ತಿಗಳು ಕೆಲಸ ಮಾಡಿವೆ. ಫಿಸಿಯೊ, ಟ್ರೈನರ್‌, ಕೋಚ್‌, ವೈದ್ಯರು ಹೀಗೆ ಅನೇಕರು ಶ್ರಮಿಸಿದ್ದಾರೆ. ಅವರು ನನ್ನ ಬೆನ್ನಿಗಿಲ್ಲದೇ ಹೋಗಿದ್ದರೆ ಇಷ್ಟು ವರ್ಷ ಆಡಲು ಸಾಧ್ಯವಾಗುತ್ತಿರಲಿಲ್ಲ. ವಿಪರೀತ ಒತ್ತಡ, ನಿರಂತರ ಪ್ರವಾಸಗಳ ನಡುವೆ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ...’

–ಸಚಿನ್‌ ತೆಂಡೂಲ್ಕರ್‌ ತಮ್ಮ ವಿದಾಯದ ಭಾಷಣದಲ್ಲಿ ಬಿಚ್ಚಿಟ್ಟ ಸತ್ಯವಿದು. ಹೌದು, ಒಂದು ತಂಡದ ಯಶಸ್ಸಿನಲ್ಲಿ ಫಿಸಿಯೊಗಳೂ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಅವರು ಆಟಗಾರರಂತೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ ಅಷ್ಟೆ.

ಹಾಗೇ, ರಾಜ್ಯ ತಂಡದ ಯಶಸ್ಸಿನಲ್ಲೂ ಫಿಸಿಯೊಗಳ ಪಾತ್ರವಿದೆ. ಫಿಸಿಯೊ ಶ್ರವಣ್ ಅವರು ಟೂರ್ನಿ ಆರಂಭವಾಗುವ ಏಳು ತಿಂಗಳು ಮುಂಚಿತವೇ ಆಟಗಾರರ ಫಿಟ್‌ನೆಸ್‌ನತ್ತ ಗಮನ ಹರಿಸಲು ಶುರು ಮಾಡಿದ್ದರು. ನಿರಂತರ ವ್ಯಾಯಾಮ ಮತ್ತು ಅಗತ್ಯ ಮಸಾಜ್‌ ಮಾಡುತ್ತ ಆಟಗಾರರು ಗಾಯಗೊಳ್ಳದಂತೆ ಎಚ್ಚರಿಕೆ ವಹಿಸಿದ್ದರು.

‘ಒಬ್ಬ ಆಟಗಾರ ಸಾಕಷ್ಟು ವರ್ಷ ಆಡಲು ಸಾಧ್ಯವಾಗಲು ಫಿಟ್‌ನೆಸ್‌ ಮುಖ್ಯ. ಫಿಟ್‌ನೆಸ್‌ ಬೇಕಾದರೆ ಫಿಸಿಯೊ ಬೇಕೇಬೇಕು. ಕೆಲ ಸಂದರ್ಭದಲ್ಲಿ ಆಟಗಾರರು ಬೇಗನೆ ಔಟ್ ಆಗಿಯೋ ಅಥವಾ ಕಳಪೆ ಬೌಲಿಂಗ್‌ ಮಾಡಿಯೋ ಬೇಸರಗೊಂಡಿರುತ್ತಾರೆ. ಅವರ ಆತ್ಮವಿಶ್ವಾಸ ಕುಂದಿರುತ್ತದೆ. ಈ ವೇಳೆ ನಾವು ಕೆಲ ವ್ಯಾಯಾಮ ಮಾಡಿಸುತ್ತೇವೆ. ಧ್ಯಾನ ಮಾಡುವಂತೆ ಸಲಹೆ ನೀಡುತ್ತೇವೆ’ ಎನ್ನುತ್ತಾರೆ ಶ್ರವಣ್.

ಥಾಯ್ಲೆಂಡ್‌ನಲ್ಲಿ ತರಬೇತಿ ಪಡೆದಿರುವ ಟ್ರೈನರ್‌ ಪ್ರಶಾಂತ್‌ ಪೂಜಾರ ಅವರ ಪಾತ್ರವೂ ಈ ಯಶಸ್ಸಿನಲ್ಲಿ ಅಡಗಿದೆ. ಭಿನ್ನ ಪ್ರಯೋಗಗಳಿಗೆ ಇವರು ಮುಂದಾಗಿದ್ದಾರೆ. ಮೆಡಿಷನ್‌ ಬಾಲ್‌ ಎತ್ತುವುದು, ಪ್ಯಾರಾಚೂಟ್‌ ರನ್ನಿಂಗ್‌... ಹೀಗೆ ಹಲವು ಹೊಸ ಫಿಟ್‌ನೆಸ್‌ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ.

ವಿಡಿಯೊ ವಿಶ್ಲೇಷಣೆ ಮಹತ್ವ...
ಅದೇ ರೀತಿ ವಿಡಿಯೊ ವಿಶ್ಲೇಷಕರ ಪಾತ್ರ ಮುಖ್ಯವಾಗಿರುತ್ತದೆ. ಕೆಲ ವರ್ಷಗಳ ಹಿಂದಿನ ಸಂಗತಿಯಿದು. ವೀರೇಂದ್ರ ಸೆಹ್ವಾಗ್‌ ಹಲವು ಪಂದ್ಯಗಳಲ್ಲಿ ವೈಫಲ್ಯ ಅನು ಭವಿಸಿದ್ದರು. ಮರುದಿನ ಟೆಸ್ಟ್‌ ಪಂದ್ಯವಿತ್ತು. ಹಿಂದಿನ ದಿನದ ರಾತ್ರಿಯೆಲ್ಲಾ ಹಳೆಯ ಪಂದ್ಯಗಳ ವಿಡಿಯೊ ವೀಕ್ಷಿಸಿ ಪಂದ್ಯಕ್ಕೆ ಸಿದ್ಧರಾಗಿದ್ದರು. ಆ ಟೆಸ್ಟ್‌ನಲ್ಲಿ ಅವರು ಶತಕ ಸಿಡಿಸಿದ್ದರು.

‘ತಂಡದ ವಿಡಿಯೊ ವಿಶ್ಲೇಷಕರ ನೆರವಿನಿಂದ ನನ್ನ ಹಳೆಯ ಪಂದ್ಯಗಳ ವಿಡಿಯೊ ವೀಕ್ಷಿಸಿದೆ. ಪ್ರತಿ ಪಂದ್ಯದಲ್ಲಿ ಉತ್ತಮ ಆಟವಾಡಬೇಕಾದರೆ ಹಿಂದಿನ ಪಂದ್ಯಗಳ ಆಟವೇ ಸ್ಫೂರ್ತಿಯಾಗುತ್ತದೆ’ ಎಂದು ಸೆಹ್ವಾಗ್‌ ಆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದರು.

ಕ್ರಿಕೆಟ್‌ ಅಂಗಳದಲ್ಲಿ ಬ್ಯಾಟ್ಸ್‌ಮನ್‌, ಬೌಲರ್‌, ಅಂಪೈರ್‌, ಪ್ರೇಕ್ಷಕ ಹೀಗೆ ಎಲ್ಲರನ್ನೂ ನೀವು ನೋಡಿರಬಹುದು. ಆದರೆ, ಯಾವುದೇ ಕ್ರೀಡೆಯಾಗಲಿ ಅಲ್ಲಿ ಆಟಗಾರ ಯಶಸ್ಸು ಕಾಣುವಲ್ಲಿ ವಿಡಿಯೊ ವಿಶ್ಲೇಷಕರ ಪಾತ್ರವೂ ಬಹುಮುಖ್ಯವಾಗಿರುತ್ತದೆ.

2014ರಲ್ಲಿ ಹೈದರಾಬಾದ್‌ನಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆದ್ದಾಗ ‘ನಿಮ್ಮ ತಂಡದ ಯಶಸ್ಸಿಗೆ ಬಹುಮುಖ್ಯ ಕಾರಣ ಏನು’ ಎಂದು ಪತ್ರಕರ್ತರೊಬ್ಬರು ಕೇಳಿದ್ದರು. ಆಗ ಆಟಗಾರರು, ‘ಹಲವು ಕಾರಣಗಳಿವೆ. ಅದರಲ್ಲಿ ಆತ್ಮೀಯ ಗೆಳೆಯನಂತಿರುವ ವಿಡಿಯೊ ವಿಶ್ಲೇಷಕ ಸಂತೋಷ್‌ ನೀಡಿದ ಸಹಕಾರವೂ ಸೇರಿದೆ’ ಎಂದು ಪ್ರತಿಕ್ರಿಯಿಸಿದ್ದರು. 2014ರ ವರೆಗೆ ಸಂತೋಷ್‌ ವಿಡಿಯೊ ವಿಶ್ಲೇಷಕರಾಗಿದ್ದರು.

‘ಚಾಂಪಿಯನ್ ಪಟ್ಟ ಅಲಂಕರಿಸುವ ಮುನ್ನ ಎರಡು ವರ್ಷ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು. ಆದ್ದರಿಂದ ರಣಜಿ ಋತು ಆರಂಭವಾಗುವ ಮುನ್ನ ಎಲ್ಲಾ ಆಟಗಾರರು ತಮ್ಮ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಡಿಯೊ ವೀಕ್ಷಿಸಿದ್ದರು. ಯಾವ ಹಂತದಲ್ಲಿ ತಪ್ಪು ಸಂಭವಿಸಿದೆ ಎನ್ನುವುದನ್ನೂ ಗುರುತಿಸಿ ಆ ತಪ್ಪನ್ನು ತಿದ್ದಿಕೊಂಡರು. ಇದರಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು’ ಎನ್ನುತ್ತಾರೆ ಸಂತೋಷ್‌.

ಮುಂದಿದೆ ಸವಾಲು...
‘ಗೆಲ್ಲುತ್ತಾ ಇರುವಾಗ ಎಲ್ಲವೂ ಚೆನ್ನಾಗಿರುತ್ತದೆ. ಆಟಗಾರರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಾ ಹೋಗುತ್ತದೆ. ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆ ಲಭಿಸುತ್ತಿರುತ್ತದೆ. ಇದು ತಂಡದ ಪ್ರದರ್ಶನ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಕಾರಣ ವಾಗುತ್ತದೆ. ಯಶಸ್ಸು ಯಶಸ್ಸನ್ನು ಹಿಂಬಾಲಿಸುತ್ತದೆ ಅಷ್ಟೆ. ಒಮ್ಮೆ ಎಡವಟ್ಟಾದರೇ ಎಲ್ಲವೂ ತದ್ವಿರುದ್ಧವಾಗುತ್ತವೆ’ ಎಂಬುದು ವಿನಯ್‌ ಅವರ ಎಚ್ಚರಿಕೆಯ ಮಾತು.

‘ತಂಡದ ಪ್ರತಿ ಆಟಗಾರನಿಗೂ ಭಾರತ ತಂಡದಲ್ಲಿ ಆಡಬೇಕು ಎಂಬ ಛಲವಿದೆ. ಐಪಿಎಲ್‌ನಲ್ಲಿ ಆಡುವ ಆಸೆ ಇದೆ. ಪ್ರತಿಯೊಬ್ಬರೂ ರಣಜಿಯಲ್ಲಿ ಪರಿಶ್ರಮ ಹಾಕಿ ಆಡು ವುದನ್ನು ಗಮನಿಸಿದ್ದೇನೆ. ಅಭ್ಯಾಸದ ಅವಧಿಯಲ್ಲೂ ಅಷ್ಟೆ. ಜೊತೆಗೆ ಹಿರಿಯ ಆಟಗಾರರಾದ ಉತ್ತಪ್ಪ, ಕೆ.ಎಲ್‌. ರಾಹುಲ್‌ ಹಾಗೂ ಮಿಥುನ್‌ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ಇರುವುದು ನಿಜ. ಈ ಗೆಲುವು ಇಲ್ಲಿಗೇ ನಿಲ್ಲಬಾರದು. ಮುಂದಿನ ಋತುಗಳಲ್ಲಿಯೂ ರಾಜ್ಯ ತಂಡವೇ ಪ್ರಾಬಲ್ಯ ಮೆರೆಯಬೇಕು’ ಎಂಬುದು ಅವರ ಆಶಯ.

ಸತತ ಎರಡು ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ ಈಗ ಹ್ಯಾಟ್ರಿಕ್‌ ಪ್ರಶಸ್ತಿಯತ್ತ ಚಿತ್ತ ನೆಟ್ಟಿದೆ. ಮತ್ತೊಂದು ರಣಜಿ ಋತು ಶುರುವಾಗಿದೆ. ಸಹಜವಾಗಿಯೇ ರಾಜ್ಯ ತಂಡದ ಮುಂದೆ ದೊಡ್ಡ ಸವಾಲಿದೆ. ಜೊತೆಗೆ ಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡವೂ ಇದೆ. ವಿವಿಧ ವಯೋಮಾನದ ತಂಡಗಳನ್ನು ಸಮರ್ಥವಾಗಿ ಕಟ್ಟಿ ಆಟಗಾರರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಿದರೆ ಇನ್ನೂ ಐದಾರು ವರ್ಷ ರಾಜ್ಯ ತಂಡ ಟ್ರೋಫಿ ಉಳಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT