ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಭಾಷೆ ವ್ಯಾಮೋಹದಡಿ ನಲುಗಿದ ಕನ್ನಡ

Last Updated 6 ಮೇ 2016, 5:25 IST
ಅಕ್ಷರ ಗಾತ್ರ

ಬಂಗಾರಪೇಟೆ: ಕನ್ನಡಿಗರ ಪರಭಾಷೆ ವ್ಯಾಮೋಹದಡಿ ಕನ್ನಡ ನಲುಗುತ್ತಿದೆ. ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಕೆ.ನಿರ್ಮಲ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ಗುರುವಾರ ಕಸಾಪ ತಾಲ್ಲೂಕು ಘಟಕ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 101ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕರುನಾಡಿನಲ್ಲೇ ಕನ್ನಡ ಸಾಹಿತ್ಯದ ಅಭಿರುಚಿ ಕ್ಷೀಣಿಸುತ್ತಿದ್ದು, ಭಾಷೆ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಕನ್ನಡ ಭಾಷೆ, ಸಾಹಿತ್ಯವನ್ನು ಪ್ರತಿಯೊಬ್ಬರ ಮನ, ಮನೆಗೆ ತಲುಪಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದರು. ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ತೇ.ಸಿ.ಬದರೀನಾಥ್ ಮಾತನಾಡಿ, ಪರಿಷತ್ತು ಜಾತ್ಯತೀತ ಸಂಸ್ಥೆಯಾಗಿ ಬೆಳೆಯುತ್ತಿದೆ. ಕೆಳ ಹಾಗೂ ಮೇಲು ಸಮುದಾಯದ ಪ್ರತಿನಿಧಿಗಳಿಗೆ ಸಂಸ್ಥೆಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. ಎಲ್ಲರೂ ಒಟ್ಟಾಗಿ ಸೇರಿ ಕನ್ನಡ ತೇರನ್ನು ಎಳೆಯಬೇಕಿದೆ. ಸಂಸ್ಥೆಯ ಉದ್ದೇಶ ಈಡೇರಿಕೆಗೆ ಶ್ರಮಿಸಲಾಗುವುದು ಎಂದರು.

‘ಹಿಂದೆ ಕಸಾಪ ಎಂದರೆ, ಬ್ರಾಹ್ಮಣರಿಗೆ ಮೀಸಲು ಎನ್ನುವ ಅಭಿಪ್ರಾಯವಿತ್ತು. ಈಗ ಎಲ್ಲ ವರ್ಗದವರಿಗೂ ಜವಾಬ್ದಾರಿ ಹಂಚಿರುವುದು ಉತ್ತಮ ಬೆಳವಣಿಗೆ ಎಂದು ದಲಿತ ಸಂಘರ್ಷ ಸಮಿತಿಜಿಲ್ಲಾ ಘಟಕ ಸಂಘಟನಾ ಸಂಚಾಲಕ ಹೂವರಸನಹಳ್ಳಿ ರಾಜಪ್ಪ ಹೇಳಿದರು.

ಪೋಷಕರು ಆಂಗ್ಲ ಭಾಷೆ ವ್ಯಾಮೋಹಕ್ಕೆ ಬಲಿಯಾಗದೆ ಮಾತೃಭಾಷೆ ಅಭಿವೃದ್ಧಿಗೆ ಆಧ್ಯತೆ ನೀಡಬೇಕು. ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಗೌರವಾಧ್ಯಕ್ಷ ಡಿ.ಚಿಕ್ಕಣ್ಣ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಶಗೌಡ, ಕೆಜಿಎಫ್ ವಿಶೇಷ ಘಟಕದ ಅಧ್ಯಕ್ಷ ವಿ.ಬಿ.ದೇಶಪಾಂಡೆ, ಸಂತೋಷ್ ಶಾಲೆಯ ಕಾರ್ಯದರ್ಶಿ ಆದಿಲ್ ಪಾಷ ಅವರು ಮಾತನಾಡಿದರು.

ಕನ್ನಡವನ್ನು ಉಳಿಸಿ ಬೆಳೆಸುವ ಜತೆಗೆ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕಿದೆ ಎಂದು ಅವರು ಹೇಳಿದರು. ಮಾರುತಿ ಪ್ರಸಾದ್ ತಂಡದವರಿಂದ ನಡೆದ ಕನ್ನಡ ಗೀತಗಾಯನ ಸ್ಪರ್ಧೆ ಮನ ಸೆಳೆಯಿತು. 

ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಚಿನ್ನಿವೆಂಕಟೇಶ್, ಬ.ನ.ಶಿವಕುಮಾರ್, ವಿ.ಲಕ್ಷ್ಮಯ್ಯ, ಮುನಿನಾರಾಯಣ, ಆರ್.ಸಂಜೀವಪ್ಪ, ವಿಜಯಕುಮಾರ್, ಎಚ್.ಎಲ್.ನಾಗರಾಜ್, ನಾ.ಮಂಜುನಾಥ್, ರಮೇಶ್, ಇ.ವೆಂಕಟಸ್ವಾಮಿ, ಕಾರ್ಯಕಾರಿ ಸಮಿತಿ  ಸದಸ್ಯರಾದ ರಾಣಿ ಜಲಜ, ಎ.ಗಿರಿಯಪ್ಪ, ಶಿಕ್ಷಕ ಚಂದ್ರಪ್ಪ ಹಾಜರಿದ್ದರು

ವಿವಿಧ ಸಂಸ್ಥೆಗಳ ಪ್ರಮುಖರಾದ ಭಾರತಿ ನಂಜುಂಡಪ್ಪ, ಶೋಭಾ ಓಸ್ವಾಲ್‌, ವೆಂಕೋಬರಾವ್‌ ಪಡತಾರೆ, ಕಾ.ಹು.ಚಾನ್‌ಪಾಷ, ಎಲ್‌.ರಾಮಕೃಷ್ಣಪ್ಪ, ವೈ.ಸತೀಶ್‌ ಕುಮಾರ್‌, ರಾಮಪ್ಪ, ಬೇಕರಿ ಶ್ರೀನಿವಾಸ್‌ ಇದ್ದರು.

** ** **
ಕನ್ನಡ ನಾಡು, ನುಡಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.
-ಎನ್‌.ಭಾಗ್ಯಮ್ಮ,
ಪುರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT