ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರವಶಗೊಳಿಸುವ ಕಬಿನಿ

Last Updated 26 ಜುಲೈ 2014, 19:30 IST
ಅಕ್ಷರ ಗಾತ್ರ

ಕಬಿನಿ ತಟವೇ ಹಾಗೆ. ಅಲ್ಲಿರಿಸುವ ಪ್ರತಿ ಹೆಜ್ಜೆಯೂ ರೋಮಾಂಚನ. ತಣ್ಣನೆ ಬೀಸುವ ಸುಯ್ಯನೆ ಗಾಳಿ. ಹೊಸ ಜಗತ್ತಿನೊಳಗೆ ಕಾಲಿಟ್ಟಂತೆ ಆವರಿಸುವ ಶುಭ್ರ ಮಂದಾನಿಲ. ಜುಳು ಜುಳು ನೀರಿನ ಸದ್ದು. ನದಿಯೊಳಗೆ ಮೀಯುತ್ತಾ ಆಗಸಕ್ಕೆ ಕಾರಂಜಿಯಂತೆ ನೀರನ್ನು ಚಿಮ್ಮುತ್ತಾ ಘೀಳಿಡುವ ಆನೆಗಳ ಹಿಂಡು, ಬೈಗು ಬೆಳಗಿನಲ್ಲಿ ಮುಗಿಯದ ಹಕ್ಕಿಗಳ ಸಂಗೀತ ಗೋಷ್ಠಿ. ಪ್ರಯಾಣದ ಪ್ರಯಾಸವನ್ನೆಲ್ಲಾ ಮರೆಸುವಂಥ ಹಸಿರ ಕಾನನದ ಸೊಬಗು... ಒಂದೇ ಎರಡೇ. ಲೋಕದ ಅಸ್ತಿತ್ವವನ್ನೇ ಮರೆಸುವ ಶಕ್ತಿ ಕಬಿನಿಗಿದೆ. ಸಾಮಾನ್ಯ ಮನುಷ್ಯನನ್ನೂ ಕಾಡುವ ಕಬಿನಿ ಕಬ್ಬಿಗನನ್ನು ಕಾಡದಿರುವುದೇ?

ಕಬಿನಿ ತೀರದ ವನ್ಯಪ್ರಾಣಿಗಳನ್ನು ನೋಡಿ ಮುದಗೊಳ್ಳುವವರು ‘ಗಜಸ್ನಾನ’ದ ಅನುಭವ ಪಡೆಯದಿದ್ದರೆ ನಿಮ್ಮ ಪ್ರವಾಸವೇ ವ್ಯರ್ಥ. ಅದೂ ಒಂದು ರೀತಿ ಪ್ರಕೃತಿ ಚಿಕಿತ್ಸೆಯ ಸ್ನಾನ. ನಿಜ. ತಣ್ಣನೆ ಕೊರೆಯುವ ನೀರಿನ ನಡುವೆ ನಡುಗುತ್ತಾ ಸಾಗಿ ನೀರಾಟದಲ್ಲಿ ಮಗ್ನವಾಗಿರುವ ಆನೆಯ ಬೆಚ್ಚನೆಯ ಬೆನ್ನೇರಿ ಕುಳಿತರೆ ಸಾಕು. ನಿಮಗೆ ಜಳಕದ ಹೊಸ ಪುಳಕ. ತಿಳಿ ನೀರಿಗೆ ನದಿಯಾಳದ ಕೆಸರನ್ನು ಬೆರೆಸಿ ಸೊಂಡಿಲಿನಿಂದ ನಿಮ್ಮೆಡೆಗೆ ನೀರನ್ನು ವೇಗವಾಗಿ ಚಿಮ್ಮಿಸುತ್ತದೆ ಆನೆ. ನೀವು ಸಾಕು ಎನ್ನುವವರೆಗೆ ಅಲ್ಲ, ತನ್ನೊಡೆಯ ಮಾವುತನ ಆದೇಶ ಬರುವವರೆಗೂ. ಕೇರಳದ ವಯನಾಡ್‌ನಿಂದ ಹರಿದು ಬಂದ ಕಬಿನಿಯಂತೆ ಈ ಆನೆಗಳೂ ಅಲ್ಲಿಂದಲೇ ಬಂದಿರುವುದು.

ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ನಡುವೆ ಶಾಂತಚಿತ್ತಳಾಗಿ ಹರಿಯುವ ಕಪಿಲೆ (ಕಬಿನಿ) ಅವುಗಳ ವಿಹಂಗಮ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಕಡಿದಾದ ಕಣಿವೆ, ಅಲ್ಲಲ್ಲಿ ಎದುರಾಗುವ ಸ್ಫಟಿಕದಂಥ ನೀರಿನ ತೊರೆಗಳು, ದಟ್ಟನೆಯ ಬಿದಿರ ಹಿಂಡಲು, ಹಸಿರ ಮೈದಾನವನ್ನು ತನ್ನ ಸ್ವಂತದ್ದೆನ್ನುವಂತೆ ಅಪ್ಪಿಕೊಂಡು ಹರಡಿರುವ ವೈವಿಧ್ಯಮಯ ಹೂಗಿಡಗಳು, ಬಣ್ಣ ಬಣ್ಣದ ಬಾನಾಡಿಗಳ ಗುಂಪು, ತೆರೆದ ಜೀಪಿನಲ್ಲಿ ಸಫಾರಿಗೆ ಹೋದಾಗ ಎದುರಾಗುವ  ವನ್ಯಪ್ರಾಣಿಗಳು. ಅಬ್ಬಾ! ಕಬಿನಿಯೇ ಒಂದು ಜಗತ್ತು.
ಬುಟ್ಟಿದೋಣಿಯೊಳಗೆ ಕುಳಿತು ನದಿಯಲ್ಲಿ ಸಂಚಾರ ಹೊರಡುವುದಿದೆಯಲ್ಲ, ಜೀವವನ್ನೇ ಕೈಯಲ್ಲಿ ಹಿಡಿದುಕೊಂಡಂತೆ. ನದಿಯೊಳಗೆ ಅರ್ಧದಷ್ಟು ಮುಳುಗಿ, ಗಿರಕಿ ಹೊಡೆಸುತ್ತಾ ಸಾಗಿಸುವ ಬುಟ್ಟಿದೋಣಿಯೊಳಗೆ ಆ ಪ್ರಶಾಂತ ವಾತಾವರಣದಲ್ಲಿ ನಮ್ಮ ಎದೆಬಡಿತ ನಮಗೇ ಕೇಳಿಸಬಲ್ಲದು.

ನಿಸರ್ಗದ ಈ ಗಣಿ ಆಧುನಿಕತೆಗೂ ಜಾಗ ಕೊಟ್ಟಿದೆ. ರಜೆಯ ಮೋಜು ಅನುಭವಿಸಲು ಬಂದವರಿಗೆ ಬೇಕಾದ್ದದ್ದು ಒದಗಿಸುವ ರೆಸಾರ್ಟ್‌ಗಳು ಇಲ್ಲಿವೆ. ಗಪ್ಪನೆ ಕತ್ತಲು ಕವಿದ ಕಾಡಿನ ನಡುವಿನಿಂದ ಹೊಮ್ಮುವ ಕೀಟಗಳ ಸದ್ದಿಗೆ ಕಿವಿಗೊಡುತ್ತಾ ಮೇಣದ ಬೆಳಕಿನಲ್ಲಿ ರಾತ್ರಿಯೂಟ ಸವಿಯುವುದು ಪ್ರೇಮದ ಪಕ್ಷಿಗಳ ಪಾಲಿಗೆ ರಮ್ಯ ಕ್ಷಣಗಳಲ್ಲವೇ? ಬುಟ್ಟಿದೋಣಿ ಪ್ರಯಾಣ, ಆನೆ ಸ್ನಾನ, ಲ್ಯಾಂಡ್‌ಸ್ಕೇಪ್‌ ಸೈಕ್ಲಿಂಗ್‌, ಬುಡಕಟ್ಟಿನ ನೃತ್ಯ, ಎತ್ತಿನ ಗಾಡಿ ಪ್ರಯಾಣ ಹೀಗೆ ಹಳ್ಳಿಗಾಡಿನ ಸೊಗಡನ್ನು ಸವಿಯುವ ಅನುಭವದ ಜೊತೆಗೆ ಕಬಿನಿ ಪ್ರಕೃತಿ ಪಾಠವನ್ನೂ ಬೋಧಿಸಬಲ್ಲಳು.

ಕಬಿನಿಗೆ ಬೆಂಗಳೂರಿನಿಂದ ಸುಮಾರು 205 ಕಿ.ಮೀ. ಪಯಣ, ಮೈಸೂರಿನಿಂದ 80 ಕಿ.ಮೀ ದೂರ. ಕಬಿನಿ ಪರಿಸರ ನೋಡಿದ ಬಳಿಕ ಅಲ್ಲಿನ ಅಣೆಕಟ್ಟು ಮತ್ತು ಸನಿಹದಲ್ಲೇ ಇರುವ ನಾಗರಹೊಳೆಯ ಅಂದವನ್ನೂ ಸವಿಯಬಹುದು. ಅಂದಹಾಗೆ, ಮಳೆ ಸುರಿಯುವ ಕಾಲದಲ್ಲಿ ಕಬಿನಿ ತೀರದಲ್ಲಿ ಓಡಾಟ ಕಷ್ಟಕರ. ಮಳೆಗಾಲ ಮುಗಿದ ಬಳಿಕ, ಅದರಲ್ಲಿಯೂ ಬೇಸಗೆ ಬಿಸಿಲು ತನ್ನಾಟ ಶುರುಮಾಡಿದಾಗ ಕಬಿನಿಯ ತಂಪು ಮನಸಿಗೂ ಮುದ, ಆರೋಗ್ಯಕ್ಕೂ ಹಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT