ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಾಗ ವಂಚಿತ ‘ಪಾತರಗಿತ್ತಿ’

ಚಿತ್ರ: ಪಾತರಗಿತ್ತಿ
Last Updated 29 ಮೇ 2015, 19:30 IST
ಅಕ್ಷರ ಗಾತ್ರ

* ನಿರ್ಮಾಪಕ: ಈಶ್ವರಪ್ಪ ಕೆ.
* ನಿರ್ದೇಶಕ: ಈಶ್ವರ್ ಕೆ.
*  ತಾರಾಗಣ: ಶ್ರೀಕಿ, ಪ್ರಜ್ಜು ಪೂವಯ್ಯ, ತಬಲಾ ನಾಣಿ, ಲಕ್ಕಿ ಶಂಕರ್, ಮಿತ್ರ, ಇತರರು

ಅತ್ಯಾಚಾರದ ಬಗ್ಗೆ ಹೇರಳ ಮಾಹಿತಿಯನ್ನು ಸಿನಿಮಾದ ಆರಂಭದಲ್ಲೇ ಸಾಕ್ಷ್ಯಚಿತ್ರದ ಮಾದರಿಯಲ್ಲಿ ತೋರಿಸಲಾಗುತ್ತದೆ. ಅತ್ಯಾಚಾರಕ್ಕೆ ಬಲಿಯಾದ ಯುವತಿಗೆ ಧಾರಾಳ ಉಪದೇಶವನ್ನು ಕೊನೆಗೆ ಕೊಡಲಾಗುತ್ತದೆ. ಈ ಎರಡು ಸುದೀರ್ಘ ಉಪನ್ಯಾಸಗಳ ಮಧ್ಯೆ ಎರಡೂವರೆ ತಾಸುಗಳ ಅವಧಿಯಲ್ಲಿ ‘ಪಾತರಗಿತ್ತಿ’ ಹೊರಗೆ ಹೋಗಿ ಹಾರಾಡಲು ಚಡಪಡಿಸುತ್ತದೆ. ಅದು ಪ್ರೇಕ್ಷಕನ ಸ್ಥಿತಿಯೂ ಹೌದು!

ದೇಶವನ್ನು ತಲ್ಲಣಗೊಳಿಸಿರುವ ‘ಅತ್ಯಾಚಾರ’ದ ಪಿಡುಗನ್ನು ತಡೆಯಲು ಎಷ್ಟೋ ದಾರಿಗಳಿವೆ. ಆದರೆ ಅದಕ್ಕೊಂದು ಬೇರೆಯದೇ ಬಗೆಯ ವಿಶಿಷ್ಟ ವ್ಯಾಖ್ಯಾನ ಕೊಡುವಂಥ ಕಥೆ ಬರೆದ ಈಶ್ವರ್ ಕೆ.,  ಚಿತ್ರಕಥೆ– ಸಂಭಾಷಣೆಯೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ಎಲ್ಲವೂ ಅವರದೇ ‘ಸೃಷ್ಟಿ’ ಆಗಿರುವುದರಿಂದ ಚಿತ್ರಕ್ಕೊಂದು ಸಶಕ್ತ ನಿರೂಪಣೆಯಾದರೂ ಸಿಗಬೇಕಿತ್ತು. ಒಳ್ಳೆಯ ವಿಷಯ ಕೈಯಲ್ಲಿದ್ದರೂ ಅದನ್ನೊಂದು ಚೆಂದದ ಸಿನಿಮಾ ಮಾಡುವಲ್ಲಿ ನಿರ್ದೇಶಕರು ಹಿಂದೆ ಬಿದ್ದಿದ್ದಾರೆ.

ಇದು ಆಕಾಶ– ಭೂಮಿ ನಡುವಿನ ಪ್ರೇಮಕಥೆ. ಹೂ ಮಾರುವ ಆಕಾಶ್, ಮೊಬೈಲ್ ಮಳಿಗೆಯ ಭೂಮಿಯನ್ನು ಪ್ರೀತಿಸುತ್ತಾನೆ. ಆಕೆ ಆತನನ್ನು ವಂಚಿಸುವುದು, ಆಮೇಲೆ ಆಕೆಯ ಮೇಲೆ ಅತ್ಯಾಚಾರ ನಡೆದಾಗ ಆ ಆರೋಪ ಆಕಾಶ್‌ ಮೇಲೆ ಬರುವುದು, ಅದಕ್ಕೊಂದಷ್ಟು ತಿರುವುಗಳು ಸೇರಿಕೊಂಡು ಕೊನೆಗೆ ಆತನ ತಪ್ಪೇನೂ  ಇಲ್ಲ ಎಂಬಲ್ಲಿಗೆ ‘ಶುಭಂ’.

ಶೀಲ ಎಂಬುದು ಮನಸ್ಸಿಗೆ ಸಂಬಂಧಿಸಿದ್ದೇ ಹೊರತೂ ದೇಹಕ್ಕಲ್ಲ ಎಂಬದನ್ನು ನಾಯಕ ಪ್ರತಿಪಾದಿಸಿ, ಭೂಮಿಯನ್ನು ಮದುವೆಯಾಗುತ್ತಾನೆ. ಆದರೆ ಇಂಥ ಸೂಕ್ಷ್ಮ ಅಂಶಗಳನ್ನು ಚಿತ್ರರೂಪಕ್ಕೆ ಅಳವಡಿಸುವಾಗ ಭಾವನೆ– ಸಂವೇದನೆಗೆ ಗಮನ ಕೊಡದೇ ಹೋದರೆ ಅವೆಲ್ಲ ಒಣ ತರ್ಕಕ್ಕೆ ಸೀಮಿತಗೊಳ್ಳುತ್ತವೆ. ಅತ್ಯಾಚಾರಕ್ಕೆ ಬಲಿಯಾದ ಭೂಮಿ, ಮಾನಸಿಕ ಅಸ್ವಸ್ಥಳ ಹಾಗೆ ನಟಿಸುವುದು, ಅವಳಿಗೆ ನಾಲ್ಕಾರು ಹಿರಿಯರು ಬೋಧನೆ ಮಾಡುವುದು ಸಿನಿಮಾದ ಪರಿಧಿಯನ್ನು ಮೀರುವುದಿಲ್ಲ.

ಎರಡು ಬಗೆಯ ಛಾಯೆಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಪ್ರಜ್ಜು ಪೂವಯ್ಯ, ತಮಗೆ ಸಿಕ್ಕಿದ್ದ ಒಳ್ಳೆಯ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ. ಪ್ರೀತಿಗಾಗಿ ಹಂಬಲಿಸುವ ಹುಡುಗನಾಗಿ ಶ್ರೀಕಿ ಪರವಾಗಿಲ್ಲ. ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರ್ದೇಶಕ ಈಶ್ವರ್, ಮನದನ್ನೆ ಜತೆ ಒಂದು ಮಧುರವಾದ ಡ್ಯುಯೆಟ್ ಹಾಡುತ್ತಾರೆ! ಈ ಹಾಡು ಹೊರತುಪಡಿಸಿದರೆ ಉಳಿದವು ನೆನಪಿನಲ್ಲಿ ಉಳಿಯುವಂತಿಲ್ಲ (ಸಂಗೀತ: ವೆಂಕಟಸ್ವಾಮಿ, ಸಮೀರ ಕುಲಕರ್ಣಿ). ತಬಲಾ ನಾಣಿ, ಮಿತ್ರ ಹಾಸ್ಯ ಕಚಗುಳಿ ಇಡುವಂತಿದೆ. ಉಳಿದಂತೆ ತಾಂತ್ರಿಕವಾಗಿ ‘ಪಾತರಗಿತ್ತಿ’ ಶ್ರೀಮಂತವಾಗಿಲ್ಲ.

ಅತ್ಯಾಚಾರಿಗಳಿಗೆ ತಕ್ಕ ಕಠಿಣ ಶಿಕ್ಷೆಯಾಗಬೇಕು ಎಂಬ ನಿಲುವಿನೊಂದಿಗೆ, ಆ ಕೃತ್ಯಕ್ಕೆ ಪುರುಷರಷ್ಟೇ ಅಲ್ಲ, ಮಹಿಳೆಯೂ ಕಾರಣವಾಗಬಹುದು ಎಂಬ ತರ್ಕ ಚಿತ್ರದ್ದು! ಏನೇ ಆದರೂ ಕೊನೆಗೆ ಯಾತನೆ ಪಡುವವಳು ಹೆಣ್ಣು ಎಂಬ ಅಂಶ ಮನದಟ್ಟು ಮಾಡಲು ಮಾತ್ರ ನಿರ್ದೇಶಕರು ಮರೆತಿಲ್ಲ. ಹೆಣ್ಣಿಗಷ್ಟೇ ಶಿೀಲದ ಚೌಕಟ್ಟು ಹಾಕುವ ಸಮಾಜವನ್ನು ಪರಿಗಣಿಸಲೇಬಾರದು ಎಂಬ ಸಂದೇಶ ಸಿನಿಮಾದಲ್ಲಿದೆ. ಆದರೆ ಅದನ್ನು ಬರೀ ಉದ್ದುದ್ದ ಸಂಭಾಷಣೆಗಳ ಮೂಲಕ ತಲುಪಿಸಲು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT