ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣಾಮ ತಗ್ಗಿಸಲು ಕ್ರಮ ಅಗತ್ಯ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹವಾಮಾನ ವೈಪರೀತ್ಯ ಕುರಿತಂತೆ ವಿಶ್ವಸಂಸ್ಥೆಯ ಇತ್ತೀಚಿನ ವರದಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಜಾಗತಿಕ ತಾಪಮಾನ ಏರಿಕೆ ಬಗ್ಗೆ ವಿಶ್ವಸಂಸ್ಥೆ ಬಿಡು­ಗಡೆ ಮಾಡಿರುವ ಐದನೇ  ವರದಿ ಇದು.  ಈ ಬಾರಿಯ  ವರದಿ­­ಯಲ್ಲೂ ಜಾಗತಿಕ ತಾಪಮಾನ ಏರಿಕೆಯ ಅಪಾಯಗಳನ್ನು ಎತ್ತಿ ಹೇಳ­ಲಾಗಿದೆ. ವಿಶೇಷ ಎಂದರೆ ಈ ಬಾರಿ ಈ ಎಚ್ಚರಿಕೆಯನ್ನು  ಇನ್ನಷ್ಟು ತೀವ್ರ ಮಾತುಗಳಲ್ಲಿ ಹೇಳಲಾಗಿದೆ.  
ಏಕೆಂದರೆ ಹಿಂದಿನ ವರದಿಗಳಿಗೆಲ್ಲಾ  ಹೆಚ್ಚಿನ ಸ್ಪಂದನ ಸಿಕ್ಕಿಲ್ಲ. ಇದಕ್ಕೆ ಭಾರತವೂ ಹೊರತಲ್ಲ.  ಆದರೆ ಹವಾಮಾನ ವೈಪ­ರೀತ್ಯ ಎಂಬುದು ಭಾರತದ  ಆರ್ಥಿಕ ವ್ಯವಸ್ಥೆ ಹಾಗೂ ಆಹಾರ ಭದ್ರತೆಗೂ ಧಕ್ಕೆ ತರಬಹುದಾದ ಅಪಾಯ ಇದೆ ಎಂಬುದನ್ನು ನಾವು ನಿರ್ಲಕ್ಷಿಸ­ಲಾ­ಗದು.

ಈ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅವಘಡಗಳ ಮುನ್ಸೂಚ­ನೆಯ ಸಾಧ್ಯಾಸಾಧ್ಯತೆಗಳನ್ನು ಕುರಿತಂತೆ ನಾವು ವಿಭಿನ್ನ ವಾದಗಳನ್ನೇನೋ ಮಂಡಿಸ­­ಬಹುದು. ಆದರೆ ಹವಾಮಾನ ವೈಪರೀತ್ಯಗಳ ಪರಿಣಾಮ­ಗಳ­ಂತೂ ಎದ್ದು ಕಾಣುತ್ತಿದೆ . ನಮ್ಮ ನದಿಗಳ ಉಗಮಸ್ಥಾನವಾದ ಹಿಮಾ­­ಲಯ ಪರ್ವತ ಶ್ರೇಣಿಗಳಲ್ಲಿನ  ಹಿಮ ನದಿಗಳು ಕರಗುತ್ತಿರುವ ವಿದ್ಯಮಾನ ಘಟಿಸುತ್ತಿ­ರು­ವುದನ್ನು ಕಾಣುತ್ತಿದ್ದೇವೆ. ಭಾರತ, ಯೂರೋಪ್ ಹಾಗೂ  ಅಮೆರಿಕ­ದಲ್ಲಿ  ಈ ಬಾರಿಯ ಚಳಿಗಾಲದಲ್ಲಿ  ಕಂಡು ಬಂದ ಅತಿರೇಕದ ಹವಾ­ಮಾನಕ್ಕೂ ತಾಪಮಾನ ಬದಲಾವಣೆಗೂ ಸಂಬಂಧವಿದೆ ಎಂಬಂತಹ ವಿಶ್ಲೇಷಣೆಗಳು  ತಜ್ಞರಿಂದ ಮಂಡಿತವಾಗಿವೆ.

21ನೇ ಶತಮಾನದ ಅಂತ್ಯಕ್ಕೆ  4 ಡಿಗ್ರಿ ಸೆಂಟಿಗ್ರೇಡ್‌ಗಳಷ್ಟು ತಾಪಮಾನ ಏರಿಕೆ ಆಗಲಿದೆ ಎಂಬುದನ್ನು ವಿಶ್ವಸಂಸ್ಥೆಯ ವರದಿ ಪ್ರಸ್ತಾಪಿಸುತ್ತದೆ.  ಕರ­ಗುವ ಹಿಮನದಿಗಳಿಂದ ಸಮುದ್ರಮಟ್ಟಗಳಲ್ಲೂ ಏರಿಕೆ ಆಗಲಿದೆ.   ಇದು ಕರಾ­ವಳಿ ನಗರಗಳಿಗೆ ದೊಡ್ಡ ಬೆದರಿಕೆ ಒಡ್ಡಲಿದೆ ಎಂಬಂತಹ ಮಾತು ಈ ವರದಿ­ಯ­ಲ್ಲಿದೆ.  ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚು ಹಾನಿಗೆ ಒಳ­ಗಾ­ಗ­ಲಿರುವ ಸಾಧ್ಯತೆಗಳಿರುವ ರಾಷ್ಟ್ರಗಳಲ್ಲಿ ಭಾರತ ಅಗ್ರ  ಸ್ಥಾನದಲ್ಲಿದೆ . ಪ್ರವಾಹ, ಚಂಡ­ಮಾರುತ, ಬರಗಾಲಗಳಂತಹ ನೈಸರ್ಗಿಕ ವಿಕೋಪಗಳ ಅಪಾಯ­­­ಗಳಿರುವ  ಪ್ರದೇಶಗಳು ಭಾರತದಲ್ಲಿವೆ. ಉಷ್ಣಾಂಶ ಏರಿಕೆಯಿಂದ ನಗರ­­ಗ­ಳು ಹೆಚ್ಚು ಬಿಸಿಯಾಗಲಿವೆ. ಕಾಯಿಲೆಗಳ ಹರಡುವಿಕೆ  ರೀತಿ ಬದಲಾಗ­ಬಹುದು.  ಅಡ್ಡಾ­ದಿಡ್ಡಿ ಹವಾಮಾನ, ಕೃಷಿ ಉತ್ಪಾದನೆಗೆ ಮಾರಕ­ವಾಗುವುದಲ್ಲದೆ ಆಹಾರ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸ­ಬೇಕು.

ಇಂಧನ, ಸಾರಿಗೆ, ಕೃಷಿ, ಪ್ರವಾಸೋ­ದ್ಯಮ­ದಂತಹ ಪ್ರಮುಖ ವಲಯಗಳಲ್ಲಿ  ಉಂಟಾಗಬಹುದಾದ ನಷ್ಟದ  ಪರಿ­ಣಾ­ಮ­­ಗಳು  ಆರ್ಥಿಕತೆಗೆ ಹೊಡೆತ ನೀಡುವಂತಹದ್ದು. ಹೀಗಾಗಿ ತಾಪ­ಮಾನ ಏರಿಕೆಯ ಪರಿಣಾಮ­ಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮ­ಗ­ಳನ್ನು  ಅಳವಡಿಸಿಕೊಳ್ಳುವುದು ಆದ್ಯತೆ ಆಗಬೇಕು. ವಾತಾವರಣದ  ಮಾಲಿನ್ಯ ಕಡಿಮೆ ಮಾಡಲು   ಇಂಧನ ಬಳಕೆಯಲ್ಲಿ ನಿಯಂತ್ರಣ ಬೇಕು. ಹಾಗೆಯೇ ಇಂಧನ ಉತ್ಪಾದನೆಗಾಗಿ ಹೆಚ್ಚು ದಕ್ಷ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ­ಗಳಾಗ­ಬೇಕು. ಸಂಶೋಧನೆ­ಗಳಿಗೆ ಹೆಚ್ಚು ಹಣ ವ್ಯಯಿಸಲು ಹಾಗೂ ಕ್ರಿಯಾಯೋಜನೆ­ಗಳನ್ನು ರೂಪಿಸಲು ಸರ್ಕಾರಗಳು ಬದ್ಧವಾಗಬೇಕು. ಸೌರಶಕ್ತಿ ಬಳಕೆಯಲ್ಲಿ ವಿನೂತನ ಪ್ರಯೋಗಗಳು ದೀರ್ಘಕಾಲೀನ ಪರಿಣಾಮಗಳನ್ನು ಬೀರಬಲ್ಲುದು. ಜನರ ಬದುಕುವ ವಿಧಾನಗಳೂ ಬದಲಾಗುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT