ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಪ್ರಾತಿನಿಧ್ಯ

ಚರ್ಚೆ
Last Updated 25 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈಗ ಜಾತಿಗಣತಿಯ ಜೊತೆಗೆ ಅದರ ಪರ ವಿರೋಧ ಚರ್ಚೆಗಳೂ ನಡೆಯುತ್ತಿವೆ. ವಾಸ್ತವದಲ್ಲಿ, 100 ವರ್ಷಗಳಿಗೂ ಹಿಂದೆ (1911) ಇದೇ ಮಾದರಿಯ ಗಣತಿ ನಡೆದದ್ದು ಮತ್ತು ಅದರಿಂದ ಒಡಮೂಡಿದ  ಫಲಿತಾಂಶದಿಂದಾಗಿ ಪರಿಶಿಷ್ಟರು ಸಾಂವಿಧಾನಿಕ ಅನುಕೂಲಗಳನ್ನು ಪಡೆಯುವಂತಾದುದು ಇಲ್ಲಿ ದಾಖಲಾಗಬೇಕಾಗಿದೆ.

ಸ್ವತಃ ಅಂಬೇಡ್ಕರ್‌ ತಮ್ಮ ‘ಅಸ್ಪೃಶ್ಯರು ಅಥವಾ ಭಾರತದ ಕೊಳೆಗೇರಿಗಳ ಮಕ್ಕಳು’ ಎಂಬ ಕೃತಿಯಲ್ಲಿ, ದೇಶದಲ್ಲಿ ಜನಗಣತಿ ಆರಂಭವಾದದ್ದು  ಮತ್ತು ಅದರಲ್ಲಿ ಜಾತಿಯನ್ನು ನಮೂದಿಸತೊಡಗಿದ್ದು ಎಂದಿನಿಂದ ಎಂಬುದನ್ನು ವಿವರಿಸಿದ್ದಾರೆ. ಅವರ ಈ ವಿವರಣೆಯನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ, 1881ರಲ್ಲಿ ದೇಶದ ಇತಿಹಾಸದಲ್ಲಿ ಪ್ರಥಮ ಜನಗಣತಿ ನಡೆಯಿತು. ಆ ಗಣತಿಯಲ್ಲಿ ಬರೀ ಜಾತಿಗಳನ್ನು, ಪಂಥಗಳನ್ನು ಗುರುತಿಸಿ, ಹಿಂದೂಗಳ ಸಂಖ್ಯೆ ಇಷ್ಟು ಎಂದು ಹೇಳಲಾಯಿತೇ ಹೊರತು, ಜಾತಿಗಳ ಪ್ರತ್ಯೇಕ ಗಣತಿ ನಡೆಯಲಿಲ್ಲ.

ಆದರೆ 1891ರ 2ನೇ ಗಣತಿಯಲ್ಲಿ ಜಾತಿಗಣತಿ ನಡೆಯಿತು. ಅಂದಹಾಗೆ ಆ ದಿಸೆಯಲ್ಲಿ ಅದೊಂದು ಪ್ರಯತ್ನವಾಗಿತ್ತಷ್ಟೆ. ಆದರೆ 1901ರ ಮೂರನೇ ಗಣತಿಯಲ್ಲಿ ‘ಸಾಮಾಜಿಕ ಪ್ರಾಧಾನ್ಯತೆ ಆಧಾರದ ಮೇಲೆ ಸ್ಥಳೀಯ ಸಾರ್ವಜನಿಕ ಅಭಿಪ್ರಾಯ ಗುರುತಿಸುವಂತೆ  ವರ್ಗೀಕರಣ’ ಎಂಬ ತತ್ವವನ್ನು ಗಣತಿಗಾಗಿ ಅಳವಡಿಸಿಕೊಳ್ಳಲಾಯಿತು. ‘ಸಾಮಾಜಿಕ ಪ್ರಾಧಾನ್ಯತೆ?’ ಎಂದರೆ ಇಲ್ಲಿ ಗಣತಿಯಲ್ಲಿ ಜಾತಿ ಪ್ರಥಮ ಆದ್ಯತೆ ಪಡೆಯಿತು.

ಇದರ ವಿರುದ್ಧ ಹಿಂದೂಗಳಿಂದ ಈಗಿನಂತೆ ಆಗಲೂ ತೀವ್ರ ವಿರೋಧ ಕಂಡುಬಂತು. ಇದಕ್ಕೆ ತಲೆಕೆಡಿಸಿಕೊಳ್ಳದ ಬ್ರಿಟಿಷ್ ಜನಗಣತಿ ಆಯುಕ್ತರು ‘ಜಾತಿ ಈಗಲೂ ಭಾರತೀಯ ಸಾಮಾಜಿಕ ಸಂರಚನೆಯ ಆಧಾರಸ್ತಂಭ ಮತ್ತು ಅದನ್ನು ದಾಖಲಿಸುವುದು ಶ್ರೇಣೀಕೃತ ಭಾರತೀಯ ಸಮಾಜದ ವಿವಿಧ ಸಾಮಾಜಿಕ ವರ್ಗಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗುರುತಿಸುವುದಕ್ಕೆ ಸ್ಪಷ್ಟ ಮಾರ್ಗದರ್ಶಿಯಾಗುತ್ತದೆ’ ಎಂಬ ಅಭಿಪ್ರಾಯಕ್ಕೆ ಬಂದರು. ಇದನ್ನು ಖಂಡಿಸಿದ  ಹಿಂದೂಗಳು ‘ಇದು ಹಿಂದೂ ಸಮಾಜವನ್ನು ಒಡೆದು ದುರ್ಬಲಗೊಳಿಸುವ ಬ್ರಿಟಿಷ್ ಸರ್ಕಾರ ಮತ್ತು ಮುಸಲ್ಮಾನರ ಒಟ್ಟಾರೆ ತಂತ್ರ. ಇದರ ಹಿಂದೆ ಅಸ್ಪೃಶ್ಯರ ಸಂಖ್ಯೆ ತಿಳಿಯುವ ಸದುದ್ದೇಶವಿಲ್ಲ. ಬದಲಿಗೆ ಸ್ಪೃಶ್ಯರಿಂದ ಅಸ್ಪೃಶ್ಯರನ್ನು ಬೇರ್ಪಡಿಸಿ ಹಿಂದೂ ಸಮಾಜದ ಐಕ್ಯತೆಯನ್ನು ಒಡೆಯುವ ಉದ್ದೇಶವಿದೆ’ ಎಂದರು. (ಅಂಬೇಡ್ಕರ್ ಅವರ ಬರಹಗಳು, ಇಂಗ್ಲಿಷ್ ಸಂ.5, ಪು.232). ಹೀಗೆ ಹಿಂದೂಗಳು ಆರೋಪಿಸುವುದಕ್ಕೆ ಕಾರಣವೂ ಇತ್ತು.

ಅದೆಂದರೆ, ಮುಸ್ಲಿಮರು ಅಂದಿನ ಪ್ರಾಂತೀಯ ಶಾಸನಸಭೆಗಳಲ್ಲಿ ವಿವಿಧ ಜನಾಂಗಗಳಿಗೆ ಅವುಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕ ಮತದಾನ ಪದ್ಧತಿಯ ಮೂಲಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ‘ಹಿಂದೂಗಳ ಪಟ್ಟಿಯಲ್ಲಿ ಸ್ಪೃಶ್ಯ ಸಮುದಾಯದವರ ಜೊತೆ ಅಸ್ಪೃಶ್ಯ ಸಮುದಾಯದವರೂ ಇದ್ದಾರೆ; ಅಸ್ಪೃಶ್ಯ ಸಮುದಾಯದವರು ಹಿಂದೂಗಳಲ್ಲ. ಆದ್ದರಿಂದ ಈಗಿರುವ 1901ರ ಜನಗಣತಿಯ ಪ್ರಕಾರ ಸ್ಥಾನಗಳನ್ನು ನೀಡದೆ ಅಸ್ಪೃಶ್ಯರನ್ನು ಸ್ಪೃಶ್ಯರಿಂದ ಬೇರ್ಪಡಿಸಿ ನಂತರ ಸ್ಥಾನಗಳನ್ನು ನಿಗದಿಪಡಿಸಬೇಕು’ಎಂದು ಒತ್ತಾಯಿಸಿದ್ದರು. ಈ ಕುರಿತು 1910ರ ಜನವರಿ 27ರಂದು 'ಮಾರ್ಲೆ- ಮಿಂಟೊ ಸುಧಾರಣೆ’ ಖ್ಯಾತಿಯ ಲಾರ್ಡ್‌ ಮಿಂಟೊ ಅವರಿಗೆ ಮನವಿ ಸಲ್ಲಿಸಿದ್ದರು.

ಇಲ್ಲಿ ಬ್ರಿಟಿಷರು ಮುಸ್ಲಿಮರ ಈ ಮನವಿಗೆ ತಲೆಬಾಗಿದರೇ ಎಂಬ ಪ್ರಶ್ನೆ ಏಳುತ್ತದೆ. ‘ಈ ಬಗ್ಗೆ ನಿರ್ದಿಷ್ಟ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ’ ಎನ್ನುವ ಅಂಬೇಡ್ಕರ್‌, ಜನಗಣತಿ ಆಯುಕ್ತರು 1901ರಲ್ಲಿ ಹಿಂದಿನವರು ಅನುಸರಿಸಿದ್ದನ್ನು 1911ರಲ್ಲೂ ಮುಂದುವರಿಸಿದರು ಎನ್ನುತ್ತಾರೆ.
ಒಟ್ಟಾರೆ 1911ರಲ್ಲಿ ಜಾತಿ ಆಧಾರದ ಗಣತಿ ಜೊತೆಗೆ ಸ್ಪೃಶ್ಯರು, ಅಸ್ಪೃಶ್ಯರನ್ನು ಬೇರ್ಪಡಿಸುವ ಕ್ರಿಯೆಯೂ ನಡೆಯಿತು. ಅಂದಹಾಗೆ ಹೀಗೆ ಬೇರ್ಪಡಿಸುವುದೇನೂ ಸುಲಭದ ಕ್ರಿಯೆಯಾಗಿರಲಿಲ್ಲ! ಈ ಹಿನ್ನೆಲೆಯಲ್ಲಿ ಅಸ್ಪೃಶ್ಯರನ್ನು ಗುರುತಿಸಲು ಅಂದಿನ ಜನಗಣತಿ ಆಯುಕ್ತರು ಕೆಲವು ಮಾನದಂಡಗಳನ್ನು ಇಟ್ಟರು. ಅವುಗಳೆಂದರೆ:

*  ಬ್ರಾಹ್ಮಣರ/ ವೇದಗಳ ಶ್ರೇಷ್ಠತೆ ನಿರಾಕರಿಸುವವರು

* ಬ್ರಾಹ್ಮಣ ಅಥವಾ ಹಿಂದೂ ಗುರುಗಳಿಂದ ಮಂತ್ರ ಸ್ವೀಕರಿಸದವರು, ಪ್ರಮುಖ ಹಿಂದೂ ದೇವತೆಗಳನ್ನು ಪೂಜಿಸದವರು, ಕಟ್ಟಾ ಬ್ರಾಹ್ಮಣರಿಂದ ಸೇವೆ ಪಡೆಯದವರು, ಬ್ರಾಹ್ಮಣ ಪೂಜಾರಿಗಳನ್ನೇ ಹೊಂದದವರು

* ಸಾಮಾನ್ಯ ದೇವಾಲಯಕ್ಕೆ ಪ್ರವೇಶ ಇಲ್ಲದವರು

* ಸ್ಪರ್ಶದಿಂದಲೇ ಮಾಲಿನ್ಯ ಉಂಟುಮಾಡುವವರು

* ಸತ್ತವರನ್ನು ಹೂಳುವವರು, ಗೋವನ್ನು ಪೂಜಿಸದವರು ಮತ್ತು ಗೋಮಾಂಸ ತಿನ್ನುವವರು

ಈ ಬಗೆಯ ಮಾನದಂಡಗಳಿಂದಾಗಿ, 1911ರ ಗಣತಿಯಲ್ಲಿ ಅಸ್ಪೃಶ್ಯರ ಒಟ್ಟು ಸಂಖ್ಯೆ 4.19 ಕೋಟಿ ಎಂಬ ಅಂಶ ತಿಳಿದುಬಂತು. 1921ರ ಗಣತಿಯು 1911ರ ಗಣತಿಯ ವಿಧಾನವನ್ನೇ ಎತ್ತಿಹಿಡಿಯಿತು. ಅಂತೆಯೇ 1931ರಲ್ಲೂ ಇದು ಮುಂದುವರಿಯಿತು ಮತ್ತು ಆಗ ಅಸ್ಪೃಶ್ಯರ ಒಟ್ಟು ಸಂಖ್ಯೆ 5 ಕೋಟಿ ಎಂದು ಕಂಡುಬಂತು.

ಜಾತಿಗಣತಿಯೇನೋ ಈ ಹಾದಿಯಲ್ಲಿ ನಡೆದಿತ್ತು. ಆದರೆ ಇದರ ಹಿಂದೆಯೇ ನಡೆದು ಬರುತ್ತಿದ್ದ ಸಾಮಾಜಿಕ ಮತ್ತು ರಾಜಕೀಯ ಹೋರಾಟ? ಹೌದು, ದೇಶದ ಸಾಮಾಜಿಕ ಅಂಶಗಳನ್ನು ಅಧ್ಯಯನ ಮಾಡಲು 1929ರಲ್ಲಿ ಸೈಮನ್ ಆಯೋಗ ರಚನೆಯಾಯಿತು.  ಇದರ ಫಲವಾಗಿ 1930, 1931, 1932ರಲ್ಲಿ ಲಂಡನ್ನಿನಲ್ಲಿ ದುಂಡುಮೇಜಿನ ಸಭೆಗಳು ನಡೆದವು. ಆಶ್ಚರ್ಯವೆಂದರೆ ಆವರೆಗೆ ಕೇವಲ ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರಷ್ಟೇ ಅಂತಹ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಜಾತಿಗಣತಿಯ ಪರಿಣಾಮವಾಗಿ, ಅಸ್ಪೃಶ್ಯರ ಸಂಖ್ಯೆ ಇಂತಿಷ್ಟು ಎಂಬ ಅಂಶ ಹೊರಬಿದ್ದದ್ದೇ ತಡ, ಅವರೂ ದುಂಡುಮೇಜಿನ ಸಭೆಗಳಿಗೆ ಪ್ರತಿನಿಧಿಗಳಾಗಿ ಹೋದರು. ಅಂತಹ ಪ್ರತಿನಿಧಿಗಳಲ್ಲಿ ಅಂಬೇಡ್ಕರ್‌ ಅವರೂ ಒಬ್ಬರು ಎಂಬುದು ಈಗ ಇತಿಹಾಸ!

ಇದೆಲ್ಲದರ ಪರಿಣಾಮವಾಗಿ, ಅಸ್ಪೃಶ್ಯರು ಜಾತಿಗಣತಿಯಿಂದ ಹೊರಬಿದ್ದ ತಮ್ಮ ಸಂಖ್ಯೆಯ ಅನುಸಾರವಾಗಿ ಶಾಸನಸಭೆಗಳಲ್ಲಿ 151 ಸ್ಥಾನಗಳನ್ನು ಮೀಸಲಾಗಿ ಪಡೆದರು. ಮುಂದೆ ದೇಶದ ಸ್ವಾತಂತ್ರ್ಯ, ಅದರಲ್ಲೂ ಮುಂದುವರಿದ ಅಸ್ಪೃಶ್ಯರ ಜನಸಂಖ್ಯಾವಾರು ಸ್ಥಾನ ಮೀಸಲಾತಿ, ಔದ್ಯೋಗಿಕ ಹಾಗೂ ಶೈಕ್ಷಣಿಕ ಮೀಸಲಾತಿ, ಮಂತ್ರಿ ಪದವಿಗಳು, ಬಜೆಟ್‌ನಲ್ಲಿ ನಿರ್ದಿಷ್ಟ ಮೊತ್ತ... ಹೀಗೆ ಜಾತಿವಾರು ಜನಗಣತಿಯ ಕಾರಣದಿಂದಾಗಿ ಅಸ್ಪೃಶ್ಯರಿಗೆ ತಮ್ಮ ಸ್ಪಷ್ಟ ಸಂಖ್ಯೆ ಇಷ್ಟು ಎಂದು ತಿಳಿದು ಅವರಿಗೆ ಏನೇನು ಬೇಕೋ ಎಲ್ಲವೂ  ಸಿಕ್ಕಿತು. ಹಾಗೆ ಸ್ವಾತಂತ್ರ್ಯಾನಂತರವೂ ಗಣತಿಯಲ್ಲಿ ಹೀಗೆ ಅಸ್ಪೃಶ್ಯರನ್ನು ಎಣಿಸುವ ಸಂಪ್ರದಾಯ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT