ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶುದ್ಧ ಬದುಕು ಸಿಸ್ಟರ್‌ ನಿರ್ಮಲಾ

ವ್ಯಕ್ತಿ ಸ್ಮರಣೆ
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

‘ಸಮಸ್ಯೆಗಳನ್ನು ದೇವರು ನೀಡಿದ ಕಾಣಿಕೆ ಎಂದೇ ಭಾವಿಸಬೇಕು. ಅವುಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ ಅವು ಸಮಸ್ಯೆಗಳಾಗಿಯೇ ಉಳಿದುಬಿಡುತ್ತವೆ. ಅದರ ಬದಲು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಹೀಗಾಗಿ ನಾವು ಸವಾಲುಗಳನ್ನು ಸದಾ ಸ್ವಾಗತಿಸುತ್ತೇವೆ. ನಮಗೆ ಸಮಸ್ಯೆಗಳೇ ಇಲ್ಲ. ಕೇವಲ ಸವಾಲುಗಳಷ್ಟೇ  ಎದುರಾಗುತ್ತಿರುತ್ತವೆ’.

ಬಡವರು, ರೋಗಿಗಳು, ಅಸಹಾಯಕರ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಸರಳ ಜೀವನ ನಡೆಸಿದ ಸಿಸ್ಟರ್‌ ನಿರ್ಮಲಾ ಜೋಶಿ ಅವರ ಮಾತುಗಳಿವು. ಹಿಂದೊಮ್ಮೆ ಕೋಲ್ಕತ್ತಾದ ‘ಮಿಷನರೀಸ್‌ ಆಫ್‌ ಚಾರಿಟಿ’ ಸಂಸ್ಥೆ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದರು.

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮದರ್‌ ತೆರೇಸಾ ಅವರು 1950ರಲ್ಲಿ ಸ್ಥಾಪಿಸಿದ್ದ ‘ಮಿಷನರೀಸ್‌ ಆಫ್‌ ಚಾರಿಟಿ’  ನೇತೃತ್ವವನ್ನು ಸಿಸ್ಟರ್‌ ನಿರ್ಮಲಾ ವಹಿಸಿಕೊಂಡಿದ್ದರು. ಮದರ್‌ ತೆರೇಸಾರ ಉತ್ತರಾಧಿಕಾರಿಯಾಗಿ ಅವರ ಸೇವಾ ಮಾರ್ಗದಲ್ಲಿಯೇ ಸಾಗಿದ್ದರು. ತೆರೇಸಾ ಅವರ ಆಶಯಗಳನ್ನು ಈಡೇರಿಸಲು ಕೊನೆವರೆಗೂ ನಿರಂತರವಾಗಿ ಶ್ರಮಿಸಿದರು. ತೆರೇಸಾ ಅವರು ನಿಧನರಾಗುವ 6 ತಿಂಗಳ ಮೊದಲು 1997ರ ಮಾರ್ಚ್‌ 13ರಂದು ಸಿಸ್ಟರ್‌ ನಿರ್ಮಲಾ ಅವರನ್ನು ‘ಮಿಷನರೀಸ್‌ ಆಫ್‌ ಚಾರಿಟಿ’ಯ ಪ್ರಧಾನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.

ಹಲವು ದೇಶಗಳಿಗೆ ಭೇಟಿ ನೀಡಿ ಸಂಸ್ಥೆಯ ಶಾಖೆಗಳನ್ನು ತೆರೆದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವರು ಜನರನ್ನು ಹುರಿದುಂಬಿಸಿದರು. ಹೀಗಾಗಿ ಇಂದು ಆಫ್ಘಾನಿಸ್ತಾನ, ಇಸ್ರೇಲ್‌ ಸೇರಿದಂತೆ 145 ದೇಶಗಳಲ್ಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 5 ಸಾವಿರ ಜನ ಸೇವೆ ಸಲ್ಲಿಸುತ್ತಿದ್ದಾರೆ.

ಬಡವರು, ನಿರ್ಗತಿಕರು, ಅಸಹಾಯಕರು, ಅನಾಥ ಮಕ್ಕಳು, ಕುಷ್ಠರೋಗಿಗಳಿಗೆ ಸೇವೆ ಸಲ್ಲಿಸುವ ಮೂಲಕ ಸಂಸ್ಥೆ ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಇಲ್ಲಿ ಸೇವೆ ಸಲ್ಲಿಸುವವರು ಶ್ರಮಜೀವಿಗಳಾಗಿದ್ದು, ಅತ್ಯಂತ ಸರಳ ಜೀವನ ನಡೆಸುತ್ತಾರೆ. ಐದು ವರ್ಷಗಳಿಗೊಮ್ಮೆ ಮಾತ್ರ ತಮ್ಮ ಕುಟುಂಬದ ಸದಸ್ಯರನ್ನು ಭೇಟಿ  ಮಾಡಲು ಅವಕಾಶ ಇರುತ್ತದೆ. ಯಾವುದೇ ರೀತಿ ವಾರ್ಷಿಕ ರಜೆ ಇಲ್ಲ. ಇಂತಹ ಸೇವೆಯಲ್ಲೇ ನಿರ್ಮಲಾ ತಮ್ಮ ಬದುಕು ಕಂಡುಕೊಂಡಿದ್ದರು.

ನೇಪಾಳ ಮೂಲದ ಬ್ರಾಹ್ಮಣ ಕುಟುಂಬದ ನಿರ್ಮಲಾ, 1934ರಲ್ಲಿ ರಾಂಚಿಯಲ್ಲಿ ಜನಿಸಿದರು. ಅವರ ತಂದೆ ಬ್ರಿಟಿಷ್‌ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವವರೆಗೂ ಅವರು ಬ್ರಿಟಿಷ್‌ ಸೇನೆಯಲ್ಲಿದ್ದರು. ಇವರ ಹತ್ತು ಮಕ್ಕಳಲ್ಲಿ ನಿರ್ಮಲಾ ಹಿರಿಯವರು.

ಕ್ಯಾಥೊಲಿಕ್‌ ಮಿಷನರಿ ಶಾಲೆಯಲ್ಲಿ ಶಿಕ್ಷಣ ಪಡೆದ ನಿರ್ಮಲಾ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು ಉತ್ತಮ ವಕೀಲರಾಗಿದ್ದರು. ಆದರೆ ಆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ನಿರ್ಮಲಾ ಅವರಿಗೆ ಆಸಕ್ತಿ ಇರಲಿಲ್ಲ. ಅವರ ಮನಸ್ಸು ಬಡವರು, ಶೋಷಿತರು, ಅಸಹಾಯಕರ ಸೇವೆಗಾಗಿ ತುಡಿಯುತ್ತಿತ್ತು. ಮದರ್‌ ತೆರೇಸಾರ ಮಾನವೀಯ ಕಾರ್ಯಗಳ  ಪ್ರಭಾವಕ್ಕೆ ಅವರು ಒಳಗಾಗಿದ್ದರು. ತೆರೇಸಾ ಅವರ ಜತೆ ಸೇವೆ ಸಲ್ಲಿಸುವ ಹಂಬಲ ಅವರಿಗಿತ್ತು. ಇಂತಹ ಸೇವೆಯಲ್ಲಿಯೇ ತಮ್ಮ ಉಸಿರಿರುವುದನ್ನು ಕಂಡುಕೊಂಡ ನಿರ್ಮಲಾ, ಸೇವಾ ಕೈಂಕರ್ಯವನ್ನು ಮುಂದುವರಿಸುವ ಅಚಲ ನಿರ್ಧಾರಕ್ಕೆ ಬಂದರು.

ಸಮಾಜದಲ್ಲಿ ಅವರು ಪ್ರತ್ಯಕ್ಷವಾಗಿ ಕಂಡ ಘಟನೆಗಳೂ ಇದಕ್ಕೆ ಕಾರಣವಾಗಿದ್ದವು. 1947ರಲ್ಲಿ ಭಾರತ–ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ನಡೆದ ಗಲಭೆಗಳು ನಿರ್ಮಲಾ ಅವರ ಮನಸ್ಸನ್ನು ಘಾಸಿಗೊಳಿಸಿದ್ದವು. ಈ ಘಟನೆಗಳು ಅವರ ಜೀವನದ ಪಥವನ್ನೇ ಬದಲಾಯಿಸಿದವು. ನಂತರ ಕೋಲ್ಕತ್ತಾಗೆ ಬಂದು ತೆರೇಸಾ ಅವರನ್ನು ಭೇಟಿಯಾದರು.‘ತೆರೇಸಾ ಅವರ ಮೊದಲ ಭೇಟಿ ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿತು’ ಎಂದು ನಿರ್ಮಲಾ ನಂತರ ಸಂದರ್ಶನದಲ್ಲಿ ತಿಳಿಸಿದ್ದರು.

24ನೇ ವರ್ಷಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ‘ಮಿಷನರೀಸ್‌ ಆಫ್‌ ಚಾರಿಟಿ’ಯ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರನ್ನು ಯುರೋಪ್‌, ಅಮೆರಿಕ ಮತ್ತು ಪನಾಮಾ ಕೇಂದ್ರಗಳ ಉಸ್ತುವಾರಿಗಾಗಿ ನಿಯೋಜಿಸಲಾಯಿತು.

1976ರಲ್ಲಿ ಭಾರತಕ್ಕೆ ಹಿಂದಿರುಗಿ ಸ್ಥಳೀಯ ಶಾಖೆಗಳಲ್ಲಿ ಸೇವೆಯನ್ನು ಮುಂದುವರಿಸಿದರು.1997ರಲ್ಲಿ ತೆರೇಸಾ ಅವರು ಅನಾರೋಗ್ಯಕ್ಕೆ ಒಳಗಾದಾಗ, ಅವರ ಸ್ಥಾನವನ್ನು ತುಂಬುವ ಅವಕಾಶ ನಿರ್ಮಲಾ ಅವರಿಗೆ ಒದಗಿಬಂತು. ಅಧ್ಯಾತ್ಮದ ಬಗೆಗಿನ ಆಳವಾದ ಜ್ಞಾನ, ಸೇವಾ ಮನೋಭಾವ, ವಿನಯಶೀಲ ಗುಣ ಮತ್ತು ಪರಿಶುದ್ಧ ವ್ಯಕ್ತಿತ್ವ ಇದರ ಹಿಂದೆ ಇತ್ತು.

‘ಎಲ್ಲರ ಗೌರವವನ್ನೂ ಸಿಸ್ಟರ್‌ ನಿರ್ಮಲಾ ಸಂಪಾದಿಸಿದ್ದರು. ಅವರ ಸಲಹೆಯನ್ನು ಪ್ರತಿಯೊಬ್ಬರೂ ತಪ್ಪದೇ ಪಾಲಿಸುತ್ತಿದ್ದರು. ದೇಶ, ವಿದೇಶಗಳಲ್ಲಿ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಪರಿಹಾರ ಕಾರ್ಯದ ಉಸ್ತುವಾರಿ ಕೈಗೊಂಡು ಸಂತ್ರಸ್ತರಿಗೆ ನೆರವಿನ ಹಸ್ತಚಾಚಿ ಧೈರ್ಯ ತುಂಬುತ್ತಿದ್ದರು. ಒಡಿಶಾದಲ್ಲಿ ಸಂಭವಿಸಿದ ಚಂಡಮಾರುತ, ಕೋಮುಗಲಭೆ, ಗುಜರಾತ್‌ ಭೂಕಂಪ, ಅಂಡಮಾನ್‌ ನಿಕೋಬಾರ್‌ನಲ್ಲಿ ಸುನಾಮಿ, ಸಿಯಾರಾ ಲಿಯೋನ್‌ನಲ್ಲಿ ನಾಗರಿಕ ಯುದ್ಧ ಸೇರಿದಂತೆ ಹಲವು ಬಗೆಯ ಸಂಕಷ್ಟಗಳು ಎದುರಾದಾಗ ಅಲ್ಲಿಗೆ ಧಾವಿಸಿ ಸಂತ್ರಸ್ತರ ಕಷ್ಟಗಳಿಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದರು’ ಎಂದು ಅವರ ಅನುಯಾಯಿಗಳು ಸ್ಮರಿಸುತ್ತಾರೆ.

ಇವರ ಅನನ್ಯ ಸೇವೆ ಗುರುತಿಸಿ 2003 ಮತ್ತು 2009ರಲ್ಲಿ ಎರಡು ಮತ್ತು ಮೂರನೇ ಅವಧಿಗೂ ನಿರ್ಮಲಾ ಅವರನ್ನೇ ‘ಮಿಷನರೀಸ್‌ ಆಫ್‌ ಚಾರಿಟಿ’ಯ ಪ್ರಧಾನ ಮುಖಸ್ಥರನ್ನಾಗಿ ಮುಂದುವರಿಸಲಾಯಿತು. ಆದರೆ, 2009ರಲ್ಲಿ ಅನಾರೋಗ್ಯದಿಂದಾಗಿ ತಮ್ಮ ಜವಾಬ್ದಾರಿಗಳಿಂದ ದೂರ ಸರಿಯಲು ನಿರ್ಮಲಾ ನಿರ್ಧರಿಸಿದರು. ಆಗ ಜರ್ಮನಿ ಮೂಲದ ಮೇರಿ ಪ್ರೇಮಾ ಅವರನ್ನು 2009ರ ಏಪ್ರಿಲ್‌ನಲ್ಲಿ ನಿರ್ಮಲಾ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಯಿತು.

ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮವಿಭೂಷಣ’ವನ್ನು 2009ರಲ್ಲಿ ಪಡೆದಿದ್ದ ನಿರ್ಮಲಾ, ತಮ್ಮ ಕೊನೆಯ ದಿನಗಳನ್ನು ‘ಮಿಷನರೀಸ್‌ ಆಫ್‌ ಚಾರಿಟಿ’ ಕೇಂದ್ರದಲ್ಲಿ ಧ್ಯಾನ ಮಾಡುತ್ತಾ ಕಳೆದರು.

ಸದಾ ಹಸನ್ಮುಖಿಯಾಗಿ ನೊಂದವರಿಗೆ ಸಹಾಯಹಸ್ತ ಚಾಚುತ್ತಿದ್ದ ಅವರು ಸರಳತೆಯ ಸಾಕಾರಮೂರ್ತಿ ಎಂದೇ ಪ್ರಸಿದ್ಧರಾಗಿದ್ದರು. ತಮ್ಮ ಹೆಸರಿನ ಜೊತೆ ‘ಮದರ್‌’ ಎಂದು ಸೇರಿಸಿಕೊಳ್ಳಬೇಕೆಂಬ ಹಲವರ ಒತ್ತಾಯವನ್ನು ನಯವಾಗಿಯೇ ತಿರಸ್ಕರಿಸಿದ್ದರು.

ಬಲಪಂಥೀಯ ಸಂಘಟನೆಗಳು ಮಿಷನರೀಸ್‌ ಆಫ್‌ ಚಾರಿಟಿ ಮತಾಂತರ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದಾಗ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದ ನಿರ್ಮಲಾ, ‘ಇಂತಹ ಆರೋಪಗಳ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಸೇವೆಯೇ ನಮ್ಮ ಪರಮ ಧ್ಯೇಯ. ನಮ್ಮ ಕಾರ್ಯಗಳು ಜನರ ಮನಸ್ಸನ್ನು ಬದಲಾಯಿಸಬೇಕು.

ಪ್ರೀತಿಯಿಂದ ಮಾತ್ರ ಜನರ ಹೃದಯ ಗೆಲ್ಲಲು ಸಾಧ್ಯ. ಎಲ್ಲ ಜಾತಿ, ಧರ್ಮಗಳ ಜನರಿಗೆ ನಾವು ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ನೆರವು ಪಡೆಯುವ ಸಲುವಾಗಿ ಅವರೆಲ್ಲರೂ ಕ್ರೈಸ್ತ ಧರ್ಮಕ್ಕೆ ಸೇರಿಲ್ಲ. ನಾನು ಸಹ ಮೊದಲು ಹಿಂದೂ ಆಗಿದ್ದೆ. ನನ್ನನ್ನು ಯಾರೂ ಬಲವಂತವಾಗಿ ಮತಾಂತರ ಮಾಡಲಿಲ್ಲ. ಹಾಗೇನಾದರೂ ಒತ್ತಾಯಿಸಿದ್ದರೆ ಖಂಡಿತವಾಗಿಯೂ ನಾನು ಮತಾಂತರಗೊಳ್ಳುತ್ತಿರಲಿಲ್ಲ. ಹೃತ್ಪೂರ್ವಕವಾಗಿಯೇ ಕ್ರೈಸ್ತ ಧರ್ಮವನ್ನು ಒಪ್ಪಿಕೊಂಡೆ’ ಎಂದು ತಣ್ಣಗೆ ಉತ್ತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT