ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: ಬದಲಾಗದ ಬಲಾಬಲ

Last Updated 30 ಡಿಸೆಂಬರ್ 2015, 21:50 IST
ಅಕ್ಷರ ಗಾತ್ರ

ಬೆಂಗಳೂರು: ಮೇಲ್ಮನೆಯ 25 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 13, ಬಿಜೆಪಿ 6, ಜೆಡಿಎಸ್‌ 4 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಈ ಫಲಿತಾಂಶದ ನಂತರವೂ ಪಕ್ಷಗಳ ಬಲಾಬಲದಲ್ಲಿ ಬದಲಾವಣೆ ಆಗಿಲ್ಲ. ಕಳೆದ ಬಾರಿ 12 ಸ್ಥಾನಗಳನ್ನು ಗೆದ್ದಿದ್ದ  ಕಾಂಗ್ರೆಸ್‌ ಈ ಬಾರಿ 13 ಸ್ಥಾನಗಳಲ್ಲಿ ಗೆದ್ದಿದೆ.  ಆದರೆ ಕಳೆದ ಬಾರಿ ಚಿತ್ರದುರ್ಗದಲ್ಲಿ ಪಕ್ಷೇತರರಾಗಿ ಗೆದ್ದಿದ್ದ ರಘು ಆಚಾರ್‌ ಅವರು ಈ ಬಾರಿ ಕಾಂಗ್ರೆಸ್‌ ಟಿಕೆಟ್‌ನಿಂದಲೇ ಸ್ಪರ್ಧಿಸಿದ್ದಾರೆ. ಅಲ್ಲಿಗೆ ಕಾಂಗ್ರೆಸ್‌ ಈ ಬಾರಿಯೂ ಕಳೆದ ಬಾರಿಯಷ್ಟೇ ಸ್ಥಾನಗಳನ್ನು ಗೆದ್ದಂತಾಗಿದೆ.

ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಕಳೆದುಕೊಂಡಿವೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ತಲಾ ಒಬ್ಬರು ಬಂಡಾಯ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಕಾಂಗ್ರೆಸ್‌ ಒಟ್ಟು 21 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಧಾರವಾಡ ಕ್ಷೇತ್ರದ ಅಭ್ಯರ್ಥಿ, ಹಾಲಿ ಸದಸ್ಯ ನಾಗರಾಜ ಛಬ್ಬಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದರು. 20 ಸ್ಥಾನಗಳ ಪೈಕಿ 13ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 20 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಬಿಜೆಪಿ 6 ಸ್ಥಾನಗಳಲ್ಲಿ, 18 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ 4 ಸ್ಥಾನಗಳಲ್ಲಿ ಜಯ ಗಳಿಸಿದೆ. ಬಿಜೆಪಿ ಹಾಗೂ ಜೆಡಿಎಸ್‌ ತಲಾ ಒಂದು ಸ್ಥಾನ ಕಳೆದುಕೊಂಡಿವೆ.

ಬಂಡಾಯ ಮಟ್ಟಹಾಕಿದ ಕಾಂಗ್ರೆಸ್‌: ಕಾಂಗ್ರೆಸ್‌ ಪಕ್ಷವು ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ– ಉಡುಪಿ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳಿಂದ  ಸ್ಪರ್ಧೆ ಎದುರಿಸಬೇಕಾಗಿ ಬಂದಿತ್ತು. ಟಿಕೆಟ್‌ ನಿರಾಕರಿಸಿದ್ದರಿಂದ ಮುನಿಸಿಕೊಂಡಿದ್ದ ಹಾಲಿ ಸದಸ್ಯ ದಯಾನಂದ ರೆಡ್ಡಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.


ದಕ್ಷಿಣ ಕನ್ನಡ– ಉಡುಪಿ ಕ್ಷೇತ್ರದಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹಾಗೂ ಹಿರಿಯ ನಾಯಕ ಹರಿಕೃಷ್ಣ ಬಂಟ್ವಾಳ ಅವರು ಅಧಿಕೃತ ಅಭ್ಯರ್ಥಿ ಕೆ. ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ ನಾಯಕರು ಒಗ್ಗಟ್ಟಾಗಿ ಬಂಡಾಯ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಆಡಳಿತಾರೂಢ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿನಿಂದಾಗುವ ಮುಜುಗರ ತಪ್ಪಿಸಿದ್ದಾರೆ.

ಬಿಜೆಪಿಗೆ ಬಂಡಾಯದ ಬಿಸಿ: ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ಟಿಕೆಟ್‌ ನಿರಾಕರಿಸಿದ್ದು ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿದೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯತ್ನಾಳ್‌ ಅವರ ಗೆಲುವಿನಿಂದ  ಹಾಲಿ ಸದಸ್ಯ, ಬಿಜೆಪಿಯ ಜಿ.ಎಸ್‌. ನ್ಯಾಮಗೌಡ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಜೆಡಿಎಸ್‌ ಕೋಟೆಗೆ ಕಾಂಗ್ರೆಸ್‌ ಲಗ್ಗೆ: ಜೆಡಿಎಸ್‌ ಭದ್ರಕೋಟೆ ಎಂದೇ ಪರಿಗಣಿಸಲಾದ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ, ಹಾಲಿ ಸದಸ್ಯ ಪಟೇಲ್‌ ಶಿವರಾಂ ಅವರು ಕಾಂಗ್ರೆಸ್‌ ಅಭ್ಯರ್ಥಿ ಎ.ಎಂ. ಗೋಪಾಲಸ್ವಾಮಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಹಾಲಿ ಸದಸ್ಯ ಇ.ಕೃಷ್ಣಪ್ಪ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರವಿ ಎದುರು ಮಂಡಿಯೂರಿದ್ದಾರೆ.

ಒಳಜಗಳಕ್ಕೆ ಬೆಲೆ ತೆತ್ತ ಕಾಂಗ್ರೆಸ್‌: ಆದರೆ ಕಾಂಗ್ರೆಸ್‌ ವಶದಲ್ಲಿದ್ದ ಕೋಲಾರ–ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಈ ಬಾರಿ ಜೆಡಿಎಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.  ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿ.ಆರ್‌.ಮನೋಹರ್‌ ಅವರು ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ ಕುಮಾರ್‌ ವಿರುದ್ಧ ಗೆದ್ದಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಸಂಸದರಾದ ಎಂ.ವೀರಪ್ಪ ಮೊಯಿಲಿ ಹಾಗೂ ಕೆ.ಎಚ್‌.ಮುನಿಯಪ್ಪ ನಡುವಿನ ಜಗಳದ ಲಾಭ ಪಡೆಯುವಲ್ಲಿ ಜೆಡಿಎಸ್‌ ಯಶಸ್ವಿಯಾಗಿದೆ.  

ಕೊಡಗು, ಕೋಲಾರ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಕಲಬುರ್ಗಿಯ ಸ್ಥಾನಗಳನ್ನು ಕಾಂಗ್ರೆಸ್‌ ಕಳೆದು ಕೊಂಡಿದೆ. ಕಳೆದ ಬಾರಿ ಸೋತಿದ್ದ ಬೀದರ್‌, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಹಾಸನ  ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಸಾಧಿಸಿದೆ.

ಬಿಜೆಪಿಯು ಬೀದರ್‌, ವಿಜಯಪುರ, ರಾಯಚೂರು, ಬಳ್ಳಾರಿ, ಶಿವಮೊಗ್ಗದಲ್ಲಿ ಪ್ರಾಬಲ್ಯ ಕಳೆದುಕೊಂಡಿದೆ. ಕಲಬುರ್ಗಿ, ಧಾರವಾಡ, ಚಿಕ್ಕಮಗಳೂರು, ಕೊಡಗು  ಸ್ಥಾನಗಳನ್ನು ಹೊಸತಾಗಿ ಬುಟ್ಟಿಗೆ ಹಾಕಿಕೊಂಡಿದೆ.

ಬೆಂಗಳೂರು ಗ್ರಾಮಾಂತರ, ಹಾಸನ ಕ್ಷೇತ್ರಗಳನ್ನು ಕಳೆದುಕೊಂಡಿರುವ ಜೆಡಿಎಸ್  ಈ ಬಾರಿ ಕೋಲಾರವನ್ನು ತೆಕ್ಕೆಗೆ ಸೇರಿಸಿಕೊಂಡಿದೆ.

ಪಕ್ಷೇತರ ಅಭ್ಯರ್ಥಿ ಗೆಲುವು:  ಬೆಳಗಾವಿ ಯಲ್ಲಿ ಪಕ್ಷೇತರ ಅಭ್ಯರ್ಥಿ ವಿವೇಕರಾವ್‌ ವಿ. ಪಾಟೀಲ ಗೆಲ್ಲುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ವೀರಕುಮಾರ ಪಾಟೀಲ ಅವರಿಗೆ ಆಘಾತ ನೀಡಿದ್ದಾರೆ.

ಸಂಬಂಧಿಗಳ ಗೆಲುವು: ಕಾಂಗ್ರೆಸ್‌ ಮಾಜಿ ಸಂಸದ ಧರಂಸಿಂಗ್‌ ಅವರ ಪುತ್ರ ವಿಜಯ ಸಿಂಗ್‌ ಕಲಬುರ್ಗಿ ಕೇತ್ರದಲ್ಲಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ಸಹೋದರ ಪ್ರದೀಪ ಶೆಟ್ಟರ್‌ ಅವರು ಧಾರವಾಡ ಕ್ಷೇತ್ರದಲ್ಲಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರ ಸಂಬಂಧಿ ಎಸ್‌.ರವಿ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 

ಮಹಿಳೆಯರಿಗೆ ಒಲಿಯದ ಜಯ: ಎಂಟು ಮಂದಿ ಮಹಿಳೆಯರು ಕಣದಲ್ಲಿದ್ದರೂ ಆದರೆ ಒಬ್ಬರೂ ಗೆದ್ದಿಲ್ಲ.
ಬೆಳಗಾವಿಯ ಪಕ್ಷೇತರ ಅಭ್ಯರ್ಥಿ ವಿವೇಕರಾವ್‌ ಪಾಟೀಲ ಅತೀ ಹೆಚ್ಚು  3,981 ಮತಗಳನ್ನು ಪಡೆದಿದ್ದಾರೆ.

ಹಾಲಿ ಸದಸ್ಯರ ಸೋಲು: ಕಣದಲ್ಲಿದ್ದ ಹಾಲಿ ಸದಸ್ಯರ ಪೈಕಿ ಕಾಂಗ್ರೆಸ್‌ನ ವೀರಕುಮಾರ ಅಪ್ಪಾಸೊ ಪಾಟೀಲ (ಬೆಳಗಾವಿ), ಅಲ್ಲಮಪ್ರಭು ಪಾಟೀಲ (ಕಲಬುರ್ಗಿ), ಎ.ವಿ.ಗಾಯತ್ರಿ ಶಾಂತೇ ಗೌಡ (ಚಿಕ್ಕಮಗಳೂರು), ಬಿಜೆಪಿಯ ಜಿ.ಎಸ್‌.ನ್ಯಾಮಗೌಡ (ವಿಜಯಪುರ), ಆರ್‌.ಕೆ.ಸಿದ್ದರಾಮಣ್ಣ (ಶಿವಮೊಗ್ಗ), ಜೆಡಿಎಸ್‌ನ ಇ.ಕೃಷ್ಣಪ್ಪ (ಬೆಂಗಳೂರು ಗ್ರಾಮಾಂತರ), ಪಟೇಲ್‌ ಶಿವರಾಮ್‌ (ಹಾಸನ) ಅವರು ಈ ಬಾರಿ ಸೋಲಿನ ರುಚಿ ಕಂಡಿದ್ದಾರೆ. ಜೆಡಿಎಸ್‌ನಲ್ಲಿದ್ದ ಎಂ.ಆರ್‌.ಹುಲಿನಾಯ್ಕರ್‌ (ತುಮಕೂರು) ಅವರು ಟಿಕೆಟ್‌ ಸಿಗದ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿ ಸೇರಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು ಎರಡನೇ ಬಾರಿ ವಿಧಾನ ಪರಿಷತ್‌ ಪ್ರವೇಶಿಸಲು ವಿಫಲರಾಗಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ದಯಾನಂದ ರೆಡ್ಡಿ (ಬೆಂಗಳೂರು ನಗರ) ಅವರು ಕೇವಲ 19 ಮತ ಪಡೆದು ಹೀನಾಯವಾಗಿ ಸೋತಿದ್ದಾರೆ.

ಗೆದ್ದ ಸದಸ್ಯರು
ಕಾಂಗ್ರೆಸ್: ಎಸ್‌.ಆರ್‌. ಪಾಟೀಲ (ವಿಜಯಪುರ), ಘೋಟ್ನೇ ಕರ್‌ ಶ್ರೀಕಾಂತ ಲಕ್ಷ್ಮಣ (ಉತ್ತರ ಕನ್ನಡ), ಶ್ರೀನಿವಾಸ ಮಾನೆ (ಧಾರವಾಡ), ಕೆ.ಪ್ರತಾಪಚಂದ್ರ ಶೆಟ್ಟಿ (ದಕ್ಷಿಣ ಕನ್ನಡ– ಉಡುಪಿ), ಧರ್ಮಸೇನ (ಮೈಸೂರು)

ಬಿಜೆಪಿ: ಮಹಾಂತೇಶ ಕವಟಗಿಮಠ (ಬೆಳಗಾವಿ),  ಕೋಟ ಶ್ರೀನಿವಾಸ ಪೂಜಾರಿ (ದಕ್ಷಿಣ ಕನ್ನಡ– ಉಡುಪಿ), 

ಜೆಡಿಎಸ್‌: ಸಂದೇಶ ನಾಗರಾಜ್‌ (ಮೈಸೂರು). ಕಳೆದ ಬಾರಿ ಪಕ್ಷೇತರರಾಗಿ ಗೆದ್ದಿದ್ದ ರಘು ಆಚಾರ್‌ ಈ ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ.

ವಾಟಾಳ್‌ಗೆ ಠೇವಣಿ ನಷ್ಟ (ಮೈಸೂರು ವರದಿ): ವಿಧಾನ ಪರಿಷತ್ತಿಗೆ ಮೈಸೂರು– ಚಾಮರಾಜನಗರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೇರಿದಂತೆ ಐವರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ವಾಟಾಳ್ ನಾಗರಾಜ್ ಅವರಿಗೆ ಪ್ರಥಮ ಪ್ರಾಶಸ್ತ್ಯದ 11, ಪಕ್ಷೇತರ ಅಭ್ಯರ್ಥಿ ಅಯೂಬ್‌ ಖಾನ್ ಅವರಿಗೆ 13 ಮತಗಳಷ್ಟೇ ಬಿದ್ದರೆ, ಉಳಿದ ಮೂವರು ಅಭ್ಯರ್ಥಿಗಳಿಗೆ ಬಿದ್ದ ಮತಗಳ ಸಂಖ್ಯೆ ಒಂದಂಕಿಯನ್ನೇ ದಾಟ ಲಿಲ್ಲ. ಗೆಲುವಿಗೆ ಬೇಕಾಗಿದ್ದ 2,386 ಮತಕ್ಕೆ ಪ್ರತಿಯಾಗಿ ಮೂರಂಕಿ ಯಷ್ಟು ಮತಗಳನ್ನು ಪಡೆಯದ ವಾಟಾಳ್ ನಾಗರಾಜ್ ತೀವ್ರ ಮುಖಭಂಗ ಅನುಭವಿಸಿದರು.

ಕಾಂಗ್ರೆಸ್‌ಗೆ ವಿವೇಕರಾವ್‌ ಬೆಂಬಲ (ಬೆಳಗಾವಿ ವರದಿ): ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ವಿವೇಕರಾವ್‌ ಪಾಟೀಲ ಕಾಂಗ್ರೆಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬುಧವಾರ ಫಲಿತಾಂಶ ಹೊರಬಿದ್ದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದೆ. ಆದರೆ ಸಿಕ್ಕಿರಲಿಲ್ಲ. ನನ್ನ ಗೆಲುವಿಗೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸೇರಿದಂತೆ ಎಲ್ಲ ಪಕ್ಷದ ನಾಯಕರು ಸಹಕರಿಸಿದ್ದಾರೆ ಎಂದು ಹೇಳಿದರು.

****
ಇದು ಸರ್ಕಾರಕ್ಕೆ ಸಿಕ್ಕ ಗೆಲುವು. ಬಂಡಾಯ ಅಭ್ಯರ್ಥಿಗಳೆಲ್ಲ ಸೋಲುತ್ತಾರೆ ಎಂದು ಮೊದಲೇ ಗೊತ್ತಿತ್ತು. ಮತದಾರರು ಬುದ್ಧಿವಂತರು. ಯೋಚಿಸಿ ಮತದಾನ ಮಾಡಿದ್ದಾರೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಸೋಲಿಗೆ ಕಾರಣ ಹೇಳುತ್ತಾ ಕುಳಿತುಕೊಳ್ಳುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಆತುರದ ನಿರ್ಧಾರ ಆಗಿಲ್ಲ. ಮುಖಂಡರೆಲ್ಲ ಸೇರಿ ಪರಾಮರ್ಶೆ ನಡೆಸುತ್ತೇವೆ
-ಬಿ.ಎಸ್‌. ಯಡಿಯೂರಪ್ಪ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT