ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪರವಾನಗಿ ಅವಧಿ ಏರಿಕೆಗೆ ಆಕ್ಷೇಪ

ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಣಯಕ್ಕೆ ಸದಸ್ಯರಿಂದಲೇ ವಿರೋಧ
Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕೆಂಪು ವರ್ಗದಲ್ಲಿರುವ ಬೃಹತ್‌ ಉದ್ದಿಮೆಗಳ ಪರಿಸರ ಪರವಾನಗಿ ಅವಧಿಯನ್ನು ಒಂದು ವರ್ಷದಿಂದ ಐದು ವರ್ಷಕ್ಕೆ ಹೆಚ್ಚಿಸುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಣಯಕ್ಕೆ ಮಂಡಳಿಯ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.

‘ಈಗಾಗಲೇ ಉದ್ದಿಮೆಗಳಿಂದ ನಿಯಮ ಉಲ್ಲಂಘನೆ ಆಗುತ್ತಿದೆ. ಮಂಡಳಿಯ ನಿರ್ಣಯದಿಂದ ಅದು ಮತ್ತಷ್ಟು ಹೆಚ್ಚಲಿದೆ. ಅದರಿಂದ ಪರಿಸರಕ್ಕೆ ಧಕ್ಕೆ ಆಗಲಿದೆ’ ಎಂದು ಮಂಡಳಿಯ ಸದಸ್ಯರಾದ ಮೋಹನ್‌ ಕುಮಾರ್‌ ಕೊಂಡಜ್ಜಿ, ಡಾ.ಜಯಪ್ರಕಾಶ್‌ ಆಳ್ವ ಮತ್ತು ಕಾವೇರಿಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷರಿಗೆ ಈ ಮೂರೂ ಸದಸ್ಯರು ಪತ್ರ ಬರೆದು, ‘ಇಂತಹ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸರ್ಕಾರದ ಪೂರ್ವಾನುಮತಿ ಪಡೆಯಬೇಕಿತ್ತು.  ಸಾಮಾಜಿಕ ಕಾರ್ಯಕರ್ತ ವಿಂಗ್‌ ಕಮಾಂಡರ್‌ ಜಿ.ಬಿ.ಅತ್ರಿ ಸೇರಿದಂತೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. 

ಹೀಗಾಗಿ ಈ ನಿರ್ಣಯ ತಡೆಹಿಡಿಯಬೇಕು. ಮಂಡಳಿಯ ಸಭೆಯಲ್ಲಿ ಎಲ್ಲ ಸದಸ್ಯರು ಮತ್ತು ಸರ್ಕಾರದೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಅಧ್ಯಕ್ಷರ ವಿವರಣೆ:  ‘ಮೊದಲು ಪರವಾನಗಿಯನ್ನು ಪ್ರತಿ ವರ್ಷ ನವೀಕರಿಸುವ ಪದ್ಧತಿ ಇತ್ತು. ನವೀಕರಣ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಮತ್ತೊಂದು ವರ್ಷ ಬಂದು ಬಿಡುತ್ತಿತ್ತು. ಬಹಳಷ್ಟು ಕಾರ್ಖಾನೆಗಳು ಪರವಾನಗಿ ಪ್ರಮಾಣ ಪತ್ರ ಇಲ್ಲದೆಯೇ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತಿತ್ತು’ ಎಂದು ‌ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ  ಹೇಳಿದರು.

ಅಧ್ಯಕ್ಷರ ಈ ವಾದವನ್ನು ಒಪ್ಪದ  ಸದಸ್ಯರು, ‘ನಿರ್ಣಯದ ಬಗ್ಗೆ ಆ ಎರಡೂ ಸಭೆಗಳಲ್ಲಿ ವಿರೋಧಿಸಿದ್ದೆವು. ನಿಯಮಾನುಸಾರ ಸದಸ್ಯರಿಂದ ಅಂತಿಮ ಒಪ್ಪಿಗೆ ಪಡೆಯದೇ ಅಧ್ಯಕ್ಷರು ನಿರ್ಣಯವನ್ನು ಪ್ರಕಟಿಸಿದ್ದಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಆಗ ಒಪ್ಪಿ ಈಗೇಕೆ ತಕರಾರು?
‘ಜನವರಿ ಮತ್ತು ಮಾರ್ಚ್‌ನಲ್ಲಿ ನಡೆದ ಮಂಡಳಿಯ ಎರಡು ಸಭೆಗಳಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಈಗ ವಿರೋಧ ವ್ಯಕ್ತಪಡಿಸುತ್ತಿರುವ ಸದಸ್ಯರು ಕೂಡ ಆ ಸಭೆಗಳಲ್ಲಿ ಭಾಗವಹಿಸಿದ್ದರು’ ಎಂದು ವಾಮನ ಆಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಡಳಿಯು ಸ್ವಾಯತ್ತ ಸಂಸ್ಥೆಯಾಗಿದ್ದು, ನಿರ್ಣಯಗಳಿಗೆ ಸರ್ಕಾರದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. 17 ಸದಸ್ಯ ಬಲದ ಮಂಡಳಿಯಲ್ಲಿ 12 ಐಎಎಸ್‌ ಅಧಿಕಾರಿಗಳಿದ್ದಾರೆ. ಅವರು ಸಭೆಗೆ ಬರಬಹುದು, ಬರದೇ ಇರಬಹುದು. ಅವರೆಲ್ಲರಿಗೂ ನಿರ್ಣಯದ ಪ್ರತಿಗಳನ್ನು ತಲುಪಿಸಲಾಗಿರುತ್ತದೆ. ಅಂದರೆ ಈ ಸದಸ್ಯ ಅಧಿಕಾರಿಗಳ ಮೂಲಕ ಮಂಡಳಿಯ ನಿರ್ಣಯಗಳು ಸರ್ಕಾರದ ಗಮನಕ್ಕೆ ಬಂದಿರುತ್ತವೆ’ ಎಂದು ಅವರು ಸಮಜಾಯಿಷಿ ನೀಡಿದರು.

‘ಕೇಂದ್ರದ ನಿರ್ದೇಶನದಂತೆ ಪರವಾನಗಿ ಅವಧಿ ಹೆಚ್ಚಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಉಳಿದೆಲ್ಲ  ರಾಜ್ಯಗಳಲ್ಲೂ ಇದು ಜಾರಿಗೆ ಬಂದಿದೆ. ನಾವು ಈಗ ಜಾರಿಗೆ ತರುತ್ತಿದ್ದೇವೆ’ ಎಂದು ವಿವರಿಸಿದರು.

ಕೆಂಪು ವರ್ಗ ಎಂದರೆ...
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಮಾಲಿನ್ಯದ ಪ್ರಮಾಣವನ್ನು ಆಧರಿಸಿ ಕಾರ್ಖಾನೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ಎಂದು ಮೂರು ವರ್ಗಗಳಾಗಿ ವರ್ಗೀಕರಿಸಿದೆ. ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುವ ಮದ್ಯ, ಸಕ್ಕರೆ, ರಸಗೊಬ್ಬರ, ಔಷಧ, ಬಣ್ಣ, ಸಿಮೆಂಟ್‌ ಸೇರಿದಂತೆ 65 ಬಗೆಯ ಕಾರ್ಖಾನೆಗಳನ್ನು ಕೆಂಪು ವರ್ಗಕ್ಕೆ ಸೇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT