ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಮಾಹಿತಿ ಕಥನ

Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ದೇವ್ರೆ, ನಮಗೆ ಪಕ್ಷಿಗಳಂತೆ ಹಾರಲು ಬಂದಿದ್ದಿದ್ದರೆ, ನೆಲವನ್ನು ನರಕ ಮಾಡಿದಂತೆ ವಾಯುಮಂಡಲವನ್ನೂ ಕುಲಗೆಡಿಸಿಬಿಡುತ್ತಿದ್ದೆವು’. ಅಮೆರಿಕದ ತತ್ವಜ್ಞಾನಿ, ಕವಿ ಹೆನ್ರಿ ಡೇವಿಡ್ ಥೊರೊ 19ನೆಯ ಶತಮಾನದಲ್ಲೇ ನೀಡಿದ್ದ ವ್ಯಂಗ್ಯ ಸವರಿದ ಈ ಎಚ್ಚರಿಕೆಯೊಂದಿಗೆ ಪುಸ್ತಕ ಪೂರ್ಣಗೊಳ್ಳುತ್ತದೆ, ಪರಿಸರ ವಿನಾಶಕ್ಕೆ ದಿನದಿನವೂ ಕಾರಣರಾಗುತ್ತಿರುವ ನಾಗರಿಕರು ಎಚ್ಚೆತ್ತುಕೊಳ್ಳುವಂಥ ಪ್ರಸ್ತಾವನೆಯೊಂದಿಗೆ ಶುರುವಾಗುತ್ತದೆ.

ಏಕಾಏಕಿ 143ನೇ ಪುಟ ತೆಗೆದರೆ, ‘ವಿಶ್ವ ನೆಡುತೋಪು ಜಾಗೃತಿ ದಿನ’ ಎನ್ನುವ ಅಧ್ಯಾಯ. ಅದರ ಒಂದು ಪ್ಯಾರಾ ಹೀಗಿದೆ: ‘‘ವಿಪರ್ಯಾಸ ಏನೆಂದರೆ, ಏಕಜಾತಿಯ ನೆಡುತೋಪುಗಳ ವಿರುದ್ಧ ಎಲ್ಲರಿಗಿಂತ ಮೊದಲು ಚಳವಳಿ ಆರಂಭಿಸಿದವರು ಕನ್ನಡಿಗರು. ನೀಲಗಿರಿ ಸಸ್ಯಗಳನ್ನು ಕಿತ್ತುಹಾಕಿ, ಜನಪರ ಸಸ್ಯಗಳನ್ನು ಹಚ್ಚುವ ‘ಕಿತ್ತಿಕೊ-ಹಚ್ಚಿಕೊ’ ಚಳವಳಿಯನ್ನು ಮೊದಲು ನಡೆಸಿದವರು ನಾವು. ಡಾ. ಶಿವರಾಮ ಕಾರಂತರ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಹೋಗಿ ನೆಡುತೋಪು ನಿಗಮದ ವಿರುದ್ಧ ದಾವೆ ಹೂಡಿ ಗೆದ್ದವರು ನಾವು. ನೆಡುತೋಪು ಬೆಳೆಸಲೆಂದೇ ಆರಂಭವಾಗಿದ್ದ ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್ ಎಂಬ ಸರಕಾರಿ ಕಂಪೆನಿಯನ್ನೇ ಮುಚ್ಚಿದವರು ನಾವು...’’. ಈ ಆರೂವರೆ ಸಾಲುಗಳಲ್ಲಿ ಅಡಕವಾಗಿರುವ ಮಾಹಿತಿ ಎಷ್ಟೆಂದು ಸೂಕ್ಷ್ಮವಾಗಿ ಗಮನಿಸಬೇಕು.

ಪರಿಸರ ರಕ್ಷಣೆ ಎಲ್ಲರ ಹೊಣೆ. ಆದರೆ ಆಧುನಿಕ ಜಗತ್ತಿನ ಐಷಾರಾಮದಲ್ಲಿ ಬಹುಪಾಲು ಮಂದಿ ಲೋಲುಪರಾಗಿಬಿಟ್ಟಿದ್ದೇವೆ. ವಿಜ್ಞಾನ ವಿಷಯಾಸಕ್ತಿ ಇರುವ ಎಷ್ಟೋ ವಿದ್ಯಾರ್ಥಿಗಳು ಕೂಡ ಪರಿಸರ ಸಂಬಂಧಿ ಸಂಗತಿಗಳನ್ನು ತಿಳಿಯಲು ಹೋಗುವುದು ವಿರಳ ಎನ್ನುವಂಥ ಸಾಮಾಜಿಕ ವ್ಯಂಗ್ಯ ಈಗಿನದ್ದು. ಜಾಗತಿಕ ತಾಪಮಾನ ಹೆಚ್ಚಾಗಿರುವುದರಿಂದ ವಿಶ್ವಸಂಸ್ಥೆ ವರ್ಷದುದ್ದಕ್ಕೂ ನಾನಾ ದಿನಾಚರಣೆಗಳನ್ನು ನಿಗದಿಗೊಳಿಸಿದೆ. ಜೂನ್ 5ರಂದು ನಿಗದಿಯಾಗಿರುವ ‘ವಿಶ್ವ ಪರಿಸರ ದಿನ’ವನ್ನು ಹೊರತುಪಡಿಸಿದರೆ ಮಿಕ್ಕ ಅಂಥ 28 ಮಹತ್ವದ ದಿನಾಚರಣೆಗಳು ಸರ್ಕಾರದ ಕೆಲವು ಇಲಾಖೆಗಳ ಮಟ್ಟದಲ್ಲಿ ನೆಪಮಾತ್ರಕ್ಕೆ ಎಂಬಂತೆ ನಡೆಯುತ್ತಿವೆ.

ಮಾಧ್ಯಮದಲ್ಲೂ ಈ ದಿನಾಚರಣೆಗಳ ನೆಪದಲ್ಲಿ ಅಲ್ಲಲ್ಲಿ ಒಂದಿಷ್ಟು ಮಾಹಿತಿ ಪೂರೈಕೆ ಆಗುತ್ತಿದೆಯಷ್ಟೆ. ಅಕಡೆಮಿಕ್ ದೃಷ್ಟಿಕೋನದಿಂದ ಅಂಥ ಮಾಹಿತಿಯ ಕೊರತೆ ನೀಗುವ ಕೃತಿ ಇದೆಂದು ನಿಸ್ಸಂಶಯವಾಗಿ ಹೇಳಬಹುದು. ವಿಶ್ವಸಂಸ್ಥೆ ನಿಗದಿಪಡಿಸಿದ ದಿನಾಚರಣೆಗಳ ಔಚಿತ್ಯ, ಮಹತ್ವವನ್ನು ಶುಷ್ಕವಾಗಿ ಹೇಳದೆ ನಿರ್ದಿಷ್ಟ ವಿಷಯದ ಸಮಾಜೋ ಪಾರಿಸರಿಕ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಪುಸ್ತಕ ಇದು. ಅದಕ್ಕೂ ಮಿಗಿಲಾಗಿ ಪರಿಸರಕ್ಕೆ ಸಂಬಂಧಿಸಿದ ಚಾರಿತ್ರಿಕ ಮಾಹಿತಿ ಒದಗಿಸುತ್ತದೆ. ಈ ಅಗಾಧ ಮಾಹಿತಿ ಪೂರಣಕ್ಕೆ ಕೃತಿಕಾರರು ಅಳವಡಿಸಿಕೊಂಡ ಬರವಣಿಗೆಯ ಶೈಲಿ ಆಸಕ್ತಿಕರ.

ಉದಾಹರಣೆಗೆ 21ನೇ ಮಾರ್ಚ್‌ನಲ್ಲಿ ನಡೆಯುವ ‘ಅರಣ್ಯ ದಿನಾಚರಣೆ’ ಕುರಿತ ಅಧ್ಯಾಯವನ್ನು ತೆಗೆದುಕೊಳ್ಳೋಣ. ಅದರ ಒಂದು ಪ್ಯಾರಾ ಹೀಗಿದೆ: ‘ಅರಣ್ಯ ಎಂದಾಕ್ಷಣ ಪಂಪನ ಬನವಾಸಿ ಕಣ್ಣಿಗೆ ಕಟ್ಟುತ್ತದೆ. ಕಾರಂತ, ಕುವೆಂಪು ಸಾಹಿತ್ಯಗಳಲ್ಲಿ ಬರುವ ಬಣ್ಣನೆಗಳು ನೆನಪಿಗೆ ಬರುತ್ತವೆ. ಈ ಶತಮಾನದ ಆರಂಭದಲ್ಲಿ, ಅವರು ಸಣ್ಣವರಿದ್ದಾಗ ಅರಣ್ಯಕ್ಕೆ ಕಾಲಿಡುವುದೆಂದರೆ ಕುತೂಹಲ, ಭಯ ಮೂಡಿಸುವ ಸಂಗತಿಯಾಗಿತ್ತು. ಈಗಿನ ಯುಗದಲ್ಲಿ ವಿದ್ಯುತ್ ಗರಗಸ, ಡೈನಮೈಟ್, ಜೆಸಿಬಿ, ಬುಲ್‌ಡೋಜರ್‌ಗಳೊಂದಿಗೆ ಮನುಷ್ಯರು ಕಾಡಿನ ಕಡೆ ಹೆಜ್ಜೆ ಹಾಕಿದರೆ, ಅರಣ್ಯವೇ ಭಯಭೀತಗೊಳ್ಳುವ ಸ್ಥಿತಿಗೆ ಬಂದಿವೆ’. 

ಪರಿಸರ–ನಿಸರ್ಗ ಸಂರಕ್ಷಣಾ ಸಂಸ್ಥೆ ಹೊರತಂದಿರುವ ಈ ಪುಸ್ತಕ ಬಹುಪಾಲು ಸರ್ಕಾರಿ ಕೃತಿಗಳ ಸಂತೆಯ ಹೊತ್ತಿಗೆ ಮೊಳ ನೇಯುವ ಜಾಯಮಾನದಿಂದ ಸಂಪೂರ್ಣ ಹೊರತಾದುದು. ದೊಡ್ಡ ಮಟ್ಟದ ಅಧ್ಯಯನ, ಹೋಂವರ್ಕ್, ಪರಿಸರವನ್ನು ಒಳಗೊಳ್ಳುವ ಹಲವು ಕ್ಷೇತ್ರಗಳ ಅಂಶಗಳನ್ನು ಸೇರಿಸಿಕೊಂಡ ಜಾಣ್ಮೆ ಎಲ್ಲಕ್ಕೂ ಈ ಪುಸ್ತಕದಲ್ಲಿ ಉದಾಹರಣೆಗಳು ದಂಡಿಯಾಗಿ ಸಿಗುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಅಕಡೆಮಿಕ್ ಪ್ರಾಜೆಕ್ಟ್‌ನ ಸಮರ್ಥ ಆಕರ ಗ್ರಂಥವಾಗಬಲ್ಲ ಸಕಲ ಗುಣಲಕ್ಷಣಗಳೂ ಇವೆ.

ಹೊಳಪಾದ ಕಾಗದ ಬಳಸಿ, ವಿಜ್ಞಾನ ಸಂಬಂಧಿ ನಿಯತಕಾಲಿಕೆಯನ್ನು ಹೋಲುವಂತೆ ಅಧ್ಯಾಯಗಳನ್ನು ವಿನ್ಯಾಸ ಮಾಡಿದ್ದಾರೆ. ಗಮನ ಸೆಳೆಯುವ ಸಾಂದರ್ಭಿಕ ಛಾಯಾಚಿತ್ರಗಳ ಬಳಕೆ ಕೃತಿಗೆ ಓದಿಸಿಕೊಳ್ಳುವುದರ ಜೊತೆಗೆ ನೋಡಿಸಿಕೊಳ್ಳುವ ಗುಣವನ್ನೂ ದಕ್ಕಿಸಿಕೊಟ್ಟಿದೆ.

ಮಹತ್ವದ ಅಂಕಿಅಂಶ, ಭೌಗೋಳಿಕ ಮಾಹಿತಿ, ಅಲ್ಲಲ್ಲಿ ಸಾಹಿತ್ಯಿಕ ಸ್ಪರ್ಶ, ಲವಲವಿಕೆಯ ಪ್ರಬಂಧದ ಶಿಲ್ಪಕ್ಕೆ ಹೋಲುವ ನಿರೂಪಣೆ ಕೃತಿಯ ಚೌಕಟ್ಟಿನ ಅರ್ಥವಂತಿಕೆ ಯನ್ನು ಹೆಚ್ಚಿಸಿದೆ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದಾದ ಅವಕಾಶ ಇರುವುದು ಓದುಗರಿಗೆ ಬೋನಸ್ಸು. ಮಹತ್ವದ ದಿನಗಳ ಜೊತೆಗೆ ‘ಅನುಬಂಧ’ ಎಂಬ ವಿಭಾಗದಲ್ಲಿ ಪೂರಕ ಮಾಹಿತಿಯ ಐದು ಅಧ್ಯಾಯಗಳಿವೆ.

ಬಿಸಿ ಪ್ರಳಯದ ಆತಂಕ, ಕಾಡ್ಗಿಚ್ಚು, ಗಣೇಶನ ಮೂರ್ತಿಗಳಿಂದ ಆಗುತ್ತಿ ರುವ ಪಾರಿಸರಿಕ ಹಾನಿ, ದೀಪಾವಳಿಯ ತೊಂದರೆಗಳು, ಇಕೋ ಕ್ಲಬ್‌ಗಳ ಅಗತ್ಯ ಮೊದಲಾದ ವಿಚಾರಗಳ ಮೇಲೆ ಈ ವಿಭಾಗ ಬೆಳಕು ಚೆಲ್ಲಿದೆ. ಉಪ ಶೀರ್ಷಿಕೆಗಳಿರುವುದು, ಅಲ್ಲಲ್ಲಿ ಮಹತ್ವದ ಮಾಹಿತಿಯನ್ನು ಬ್ಲರ್ಬ್ ರೂಪದಲ್ಲಿ ಪ್ರಕಟಿಸಿರುವುದು ಕೃತಿಗೆ ಅಸಂಖ್ಯ ಪ್ರವೇಶಗಳನ್ನು ಕಲ್ಪಿಸಿದೆ. ಲೋಲುಪ ಜಗತ್ತಿನ ಯಾವುದೇ ಆಧುನಿಕ ನಾಗರಿಕನ ಅರಿವನ್ನು ಪ್ರಜ್ಞೆಯ ಮಟ್ಟಕ್ಕೆ ಕೊಂಡೊಯ್ಯಬಲ್ಲ ಶಕ್ತ ಕೃತಿ ಇದು.

ಮನುಕುಲ ರಕ್ಷಣೆಗೆ ಮಹತ್ವದ ದಿನಗಳು (ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ನಿಗದಿಪಡಿಸಿದ ಪರಿಸರ ಸಂಬಂಧಿ ದಿನಾಚರಣೆಗಳು)
ಲೇ: ನಾಗೇಶ ಹೆಗಡೆ, ಈಶ್ವರ ಪ್ರಸಾದ್
ಪು: 254
ಪ್ರ: ಪರಿಸರ–ನಿಸರ್ಗ ಸಂರಕ್ಷಣಾ ಸಂಸ್ಥೆ,
ಸ್ಫೂರ್ತಿವನ, ಸೊ.ಜೆ.ಎಫ್, ಬೆಂಗಳೂರು ಜಲಮಂಡಲಿ, ೧೮ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು- 55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT