ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಶಿಕ್ಷಣ: ಸಾಧನೆ-ಸವಾಲು

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಕಲಿ-ನಲಿ ಕಲಿಕಾ ಪದ್ಧತಿಯನ್ನಾಗಲಿ ಅಳವಡಿಸಿ ಪ್ರಾಥಮಿಕ ಶಾಲೆಗಳಲ್ಲಿ ಪರಿಸರ ಶಿಕ್ಷಣದ ಭದ್ರ ಬುನಾದಿ ಹಾಕಬೇಕು. ಪ್ರೌಢಶಾಲಾ ಹಂತ ಮುಗಿಸುವಷ್ಟರಲ್ಲಿ  ಪರಿಸರ ಹಾಗೂ ವನ್ಯಜೀವಿ ವಿಜ್ಞಾನ ಕುರಿತ ಸ್ಪಷ್ಟ ನಿಲುವು ಬರುವಂತಹ ಪಠ್ಯ ನಿರ್ಮಾಣವಾಗಬೇಕು.

ಇಂ ಇಂದು ಪರಿಸರ, ಪರಿಸರ ಮಾಲಿನ್ಯ ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ.

ಹಿಂದೆ ಪರಿಸರ ಎಂಜಿನಿಯರ್‍ ಒಬ್ಬರು ಹೇಳುತ್ತಿದ್ದರು: ‘..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು’ ಎಂದು! ಇಂದು ಆ ಸ್ಥಿತಿ ಖಂಡಿತ ಇಲ್ಲ. 

ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಜಾಗೃತಿ ಮೂಡಿರುವುದು ಗಮನಾರ್ಹ; ಸಂತೋಷದಾಯಕ ಅಂಶ.

ಈ ಜಾಗೃತಿ ಶಿಕ್ಷಣದಿಂದ ಬಂದಿತೆ? ಎಂದರೆ ಉತ್ತರ ಬಹುತೇಕ ‘ಇಲ್ಲ’ ಎಂಬುದೇ ಆಗಿರುತ್ತದೆ. ಈ ಜಾಗೃತಿ ಮೂಡಿರುವುದು ಪರಿಸರಾಸಕ್ತ ವ್ಯಕ್ತಿ, ಸಂಸ್ಥೆ ಹಾಗೂ ವ್ಯಕ್ತಿಯೇ ಸಂಸ್ಥೆಯಾಗಿ ದುಡಿದವರಿಂದ. ಸಾಕ್ಷರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದೇನೂ ಸಂತೋಷಪಡುವಂತಹ ವಿಷಯವಲ್ಲ.

ಅಂದರೆ, ಜಗತ್ತಿನ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಪಕ್ಷಿ ಕುಟುಂಬಗಳನ್ನು ಹೊಂದಿರುವ, ಜಗತ್ತಿನ ಶೇ. 7ರಷ್ಟು ಸಸ್ಯ ಹಾಗೂ ಶೇ. 6.5ರಷ್ಟು ಪ್ರಾಣಿ ಸಂಪತ್ತನ್ನು ಹೊಂದಿರುವ, ಕೃಷಿಯೇ ಬೆನ್ನೆಲುಬಾಗಿರುವ ಈ ರಾಷ್ಟ್ರದಲ್ಲಿ ಪರಿಸರ ಶಿಕ್ಷಣಕ್ಕೆ ದೊರೆಯಬೇಕಾದ ಆದ್ಯತೆ ದೊರತೇ ಇಲ್ಲ.

ಪರಿಸರ ಶಿಕ್ಷಣವಿರಲಿ, ಪರಿಸರ ಎಂಬುದರಲ್ಲೇ ನಾವು ಗೊಂದಲವಿಟ್ಟುಕೊಂಡು ವೈಜ್ಞಾನಿಕವಾಗಿ ಬೇರೆ ಬೇರೆಯಾದವುಗಳನ್ನು ಒಂದೇ ದೃಷ್ಟಿಯಿಂದ ನೋಡುತ್ತಿದ್ದೇವೆ! ಆ ಗೊಂದಲವನ್ನು ಪರಿಹರಿಸಿಕೊಂಡು ಪರಿಸರ ಶಿಕ್ಷಣದತ್ತ ನೋಡಬೇಕಾಗಿದೆ.

ಪರಿಸರ ಸಂರಕ್ಷಣೆ ಎಂದರೆ ಎಂನ್ವಿರಾನ್ಮೆಂಟಂಲ್ ಪ್ರೊಟೆಕ್ಷನ್ ಎಂಬ ಅರ್ಥದಲ್ಲಿ ಗ್ರಹಿಸಿದಾಗ ಇದೊಂದು ಮಾನವ ಕೇಂದ್ರಿತ ವ್ಯವಸ್ಥೆ ಆಂಥ್ರೊಪೋ ಸೆಂಟ್ರಿಕ್ ಆಕ್ಟಿವಿಟಿ. ಮನುಷ್ಯ ಈ ಜಗತ್ತಿನಲ್ಲಿ ಆರೋಗ್ಯವಾಗಿ ಬಾಳಲು ಬೇಕಾದ ಶುದ್ಧ ನೀರು, ಗಾಳಿ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.

ಮಾಲಿನ್ಯ, ಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಇವುಗಳನ್ನು ಕುರಿತ ವಿಜ್ಞಾನ ಮತ್ತು ತಂತ್ರಜ್ಞಾನ ಇದರ ಪರಿಧಿಗೆ ಬರುತ್ತದೆ. ಇನ್ನು ವನ್ಯಜೀವಿ ಸಂರಕ್ಷಣೆ ಎಂದರೆ ಮಾನವನ ಹಸ್ತಕ್ಷೇಪವಿಲ್ಲದೆ ವಿಕಾಸವಾದದ ಹಂದರದಲ್ಲಿ ತಾನೇ ತಾನಗಿ ಬೆಳೆದುಬಂದು, ಮಾನವನ ಹಸ್ತಕ್ಷೇಪದಿಂದ ಅಳಿವಿನಂಚಿಗೆ ಸರಿಯುತ್ತಿರುವ ಸಸ್ಯ, ಪ್ರಾಣಿಗಳ ವಿಜ್ಞಾನಾಧಾರಿತ ಸಂರಕ್ಷಣೆ.

ಇದು ವಿಜ್ಞಾನವೂ ಹೌದು, ತಂತ್ರಜ್ಞಾನವೂ ಹೌದು. ಇನ್ನು ಪ್ರಾಣಿ ಕಲ್ಯಾಣ: ಗಾಯಗೊಂಡ ಪ್ರಾಣಿಗಳ ರಕ್ಷಣೆ, ಎತ್ತಿಗೆ ಹೆಚ್ಚಿನ ಹೊರೆಹಾಕದಂತೆ ನೋಡಿಕೊಳ್ಳುವುದು ಇತ್ಯಾದಿ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಗುರುತಿಸುವ, ತಿಳಿಹೇಳುವ ಪರಿಪಾಠವೇ ಇಲ್ಲ!

ಮುಖ್ಯವಾಗಿ ನಮ್ಮ ಶಿಕ್ಷಣದಲ್ಲಿ ಈ ಮೂಲಭೂತ ವ್ಯತ್ಯಾಸವನ್ನು ತಿಳಿಸುವ ವ್ಯವಸ್ಥೆಯಾಗಬೇಕಿದೆ. ಎರಡನೆಯದಾಗಿ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯನ್ನು – ಭೌತವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್‌ನಂತೆ – ವಿಜ್ಞಾನದ ಒಂದು ಮುಖ್ಯವಾದ ಭಾಗ ಎಂಬ ಪರಿಗಣನೆ ಬರಬೇಕಾಗಿದೆ.

ಇಲ್ಲವಾದಲ್ಲಿ ಶಾಲೆಯಲ್ಲಿ ‘…ಪಶ್ಚಿಮಘಟ್ಟಗಳು ಮಳೆಮಾರುತವನ್ನು ತಡೆದು ಮುಂಗಾರು ಮಳೆಯನ್ನು ತರುತ್ತದೆ’ ಎಂದು ಓದಿದವರೇ ಹೊರಗಡೆ ಈ ವ್ಯವಸ್ಥೆಯನ್ನೇ ಹಾಳುಗೆಡಹುವ ಅಣೆಕಟ್ಟೆಯಂತಹ ಯೋಜನೆಗಳನ್ನು ‘ನಮ್ಮ ಅಭಿವೃದ್ಧಿ’ ಎಂದೋ ‘ಕುಡಿಯುವ ನೀರಿನ ಸಮಸ್ಯೆ ಕಣ್ರೀ’  ಎಂದೋ ಬೆಂಬಲಿಸುವ ದ್ವಂದ್ವ ಉಳಿದುಬಿಡುತ್ತದೆ;

ಅಣೆಕಟ್ಟೆ, ನದಿ ತಿರುಗಣೆ–ಜೋಡಣೆಗಳಂತಹ ಕಾಮಗಾರಿಗಳಿಂದ ನದಿಯಲ್ಲಿ ನೀರು ಉಳಿಯುವ ಮೂಲ ಪ್ರಕ್ರಿಯೆಯೇ ನಿಂತುಹೋಗುತ್ತದೆ ಎಂಬ ವಿಷಯ ಬುದ್ಧಿಗತವಾಗುವುದೇ ಇಲ್ಲ!

ಪರಿಸರ ಸಂರಕ್ಷಣೆ, ವನ್ಯಸಂರಕ್ಷಣೆ ಹಾಗೂ ಪ್ರಾಣಿವಿಜ್ಞಾನಗಳ ಸಮನ್ವಯ ಮತ್ತು ಅನ್ವಯ ಕುರಿತಾಗಿ ಸಹ ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಇನ್ನು ಗಮನಹರಿಸಬೇಕಾದ ವಿಷಯ.

ಪರಿಸರ ಶಿಕ್ಷಣ ನಮ್ಮಲ್ಲಿ ಎಲ್‍ಕೆಜಿಯಿಂದಲೇ ಆರಂಭವಾಗುತ್ತದೆ. ಪ್ರಾಣಿ ಪಕ್ಷಿಗಳನ್ನು ಗುರುತಿಸುವುದರಿಂದ ಆರಂಭವಾಗುವ ಪರಿಸರ ಶಿಕ್ಷಣ ಒಂದು ಹಂತದವರೆಗೆ ಅದನ್ನು ಇವಿಎಸ್‍ ಎಂದು ಕರೆಸಿಕೊಳ್ಳುತ್ತದೆ.

ಇತ್ತೀಚೆಗೆ ವೇಗ ಪಡೆದುಕೊಳ್ಳುತ್ತಿರುವ ಮಾಂಟೊಸ್ಸರಿ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಉತ್ತಮ ಅಂಶಗಳಿವೆ. ಆದರೆ, ಆ ಶಿಕ್ಷಣ ಕೆಲವರಿಗೆ ಮಾತ್ರ ಲಭ್ಯ. ಸರ್ಕಾರದ ಕಲಿ ನಲಿ ಈ ನಿಟ್ಟಿನಲ್ಲಿ ಸಾಧಿಸಬೇಕಾಗಿರುವುದು ತುಂಬ ಇದೆ.

ಪ್ರಾಥಮಿಕ ಹಂತ ದಾಟಿದ ನಂತರ  ನಮ್ಮ ಪರಿಸರ ಶಿಕ್ಷಣ ಮೇಲ್ಕಾಣಿಸಿದ ವಿಂಗಡನೆಯನ್ನು ಅನುಸರಿಸದ ಪರಿಸರ ಮತ್ತು ಪ್ರಾಣಿವಿಜ್ಞಾನ ಎಂಬ ಕವಲಾಗಿ ಸಾಗುತ್ತದೆ.

ವೈಜ್ಞಾನಿಕ ವನ್ಯಜೀವಿ ಸಂರಕ್ಷಣೆ ಎಲ್ಲಿಯೂ ಚರ್ಚೆಗೇ ಬರುವುದಿಲ್ಲ. ಇದು ಪ್ರೌಢಶಾಲೆಯವರೆಗಿನ ಕಥೆಯಾದರೆ ಮುಂದೆ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ,

ಕಲೆ ಹಾಗೂ ಇಂದು ಲಭ್ಯವಾಗುತ್ತಿರುವ ಜ್ಞಾನದ ವಿವಿಧ ಹೊಸ ಶಾಖೆಗಳನ್ನು ಆರಿಸಿಕೊಂಡು ಮುಂದುವರೆಯುವುದರಿಂದ ಅತ್ಯಾವಶ್ಯಕ ಪರಿಸರ ಶಿಕ್ಷಣ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ.

ವಿಜ್ಞಾನೇತರ ವಿಷಯಗಳನ್ನು ಆರಿಸಿಕೊಂಡವರಿಗೆ ಪರಿಸರದ ಸಮಗ್ರತೆಯ ಚಿತ್ರಣ ದೊರಕದೆ, ಅವರ ಅಧ್ಯಯನದ ವಿಷಯದ ದೃಷ್ಟಿಕೋನವೇ ಹೆಚ್ಚು ಪ್ರಸ್ತುತವಾಗಿ ಕಾಣುವುದು ಸಹಜ ಮತ್ತು ಸ್ವಾಭಾವಿಕ! ಇದು ನಮ್ಮ ಸಾಂಪ್ರದಾಯಿಕ ಶಾಲಾ ಕಾಲೇಜುಗಳಲ್ಲಿನ ಕೋರ್ಸುಗಳ ಸ್ಥಿತಿಗತಿ.

ಇದಲ್ಲದ ಒಂದು ಅಧ್ಯಯನ ವ್ಯವಸ್ಥೆ ನಮ್ಮಲ್ಲಿದೆ. ಅದೇ, ಸರ್ಕಾರದ ಒಂದೆರೆಡು ಸಂಸ್ಥೆ ಹಾಗೂ ಖಾಸಗಿ ನೆಲೆಯಲ್ಲಿ ಹಲವು ಸಂಸ್ಥೆಗಳು ನಡೆಸುತ್ತಿರುವ ಪರಿಸರ ಮತ್ತು ವನ್ಯಜೀವಿ ಶಿಕ್ಷಣದ ಕಾರ್ಯಕ್ರಮ.

ಬಹುತೇಕ ಇವು ಸ್ನಾತಕೋತ್ತರ ಅಧ್ಯಯನಗಳು, ಪ್ರವೇಶ ಪರೀಕ್ಷೆಯ ಮೂಲಕ ಇವಕ್ಕೆ ಆಯ್ಕೆ ನಡೆಯುತ್ತದೆ. ಭಾರತದಂತಹ ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ರಾಷ್ಟ್ರದಲ್ಲಿ ನಮ್ಮ ಪರಿಸರ ಹಾಗೂ ವನ್ಯಜೀವಿಗಳನ್ನು ಕುರಿತ ವೈಜ್ಞಾನಿಕ ಹಾಗೂ ಸಮನ್ವಿತ ಶಿಕ್ಷಣ ದೊರೆಯುತ್ತಿರುವುದು ಈ ಕೋರ್ಸುಗಳನ್ನು ಮಾಡುವ ಬೆರಳೆಣಿಕೆಯ ಮಂದಿಗೆ ಮಾತ್ರ! ಇಂತಹ ಶಿಕ್ಷಣ ಪಡೆದವರಿಗೂ ಸಾಂಪ್ರದಾಯಿಕ ಶಿಕ್ಷಣ ಪಡೆದವರಿಗೂ ವಿಚಾರ, ವಿಷಯ,

ಕೌಶಲಗಳಲ್ಲಿ ಅಜಗಜಾಂತರವಿದ್ದು ಒಂದೋ ಸಂಘರ್ಷಕ್ಕೆ ಕಾರಣವಾಗುತ್ತದೆ ಇಲ್ಲವಾದಲ್ಲಿ ತಜ್ಞರು ತಮ್ಮನ್ನು ಸಂಶೋಧನೆಗೆ ಸೀಮಿತಗೊಳಿಸಿಕೊಳ್ಳುತ್ತಾರೆ. ಸಂರಕ್ಷಣೆ ಆದ್ಯತೆ ಕಳೆದುಕೊಳ್ಳುತ್ತದೆ.

ಈ ಎರಡೂ ನೆಲೆಯಿಂದ ಬಂದವರೇ ನಮ್ಮ ಅರಣ್ಯ ರಕ್ಷಕರು, ಕಾನೂನು ಮಾಡುವವರು  ಹಾಗೂ ಆರ್ಥಿಕ ತಜ್ಞರಾಗುತ್ತಾರೆ. ಸಹಜವಾಗಿಯೇ ಇದು ವನ್ಯಸಂರಕ್ಷಣೆ ಹಾಗೂ ಅಭಿವೃದ್ಧಿಗೆ ತಿಕ್ಕಾಟವನ್ನು ತಂದಿಡುತ್ತದೆ.

ಇದರ ಜೊತೆಗೆ ಮತ್ತೊಂದು ಸಮಸ್ಯೆಯಿದೆ! ಅದೆಂದರೆ ಇಂಗ್ಲಿಷ್‍ ಹಾಗೂ ಪ್ರದೇಶಿಕ ಭಾಷೆಗಳಲ್ಲಿ ಇರುವ ಪರಿಸರ ಕುರಿತ ಸಾಹಿತ್ಯದ ತಾಂತ್ರಿಕ ಮಟ್ಟದಲ್ಲಿರುವ ಅಜಗಜಾಂತರ. ಇದು ಪರಿಸರ ಚಳವಳಿಗಳಲ್ಲಿ ಎರಡು ಬೇರೆ ಬೇರೆ ನೆಲೆಗಳನ್ನೇ ನಿರ್ಮಿಸಿದೆ.

ನಮ್ಮ ಪುಸ್ತಕ ಪ್ರಾಧಿಕಾರ, ಭಾಷಾಂತರ ವಿಭಾಗ ತುರ್ತಾಗಿ ಮಾಡಬೇಕಾದ ಕೆಲಸಗಳು ಇಲ್ಲಿ ಸಾಕಷ್ಟಿದೆ. ಇದು ಆದಾಗಲೇ ನಮ್ಮ ಜನಸಾಮಾನ್ಯರಿಗೆ ಪರಿಸರ ಕುರಿತಾಗಿ ಸಮಗ್ರ ದೃಷ್ಟಿ ಬರಲು ಸಾಧ್ಯ.

ಆಗಬೇಕಾಗಿರುವುದೇನು?
ಈ ರಾಷ್ಟ್ರದ ನೈಸರ್ಗಿಕ ಸಂಪನ್ಮೂಲವನ್ನು ದೃಷ್ಟಿಯಲ್ಲಿಟ್ಟುಕೊಂಡ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು. ಇದರಲ್ಲಿ ಪರಿಸರ ವನ್ಯಸಂರಕ್ಷಣೆಯ ಸಮನ್ವಿತ ಪಠ್ಯವಿರಬೇಕು. ಕಲಿ-ನಲಿ ಕಲಿಕಾ ಪದ್ಧತಿಯನ್ನಾಗಲಿ ಅಳವಡಿಸಿ ಪ್ರಾಥಮಿಕ ಶಾಲೆಗಳಲ್ಲಿ ಪರಿಸರ ಶಿಕ್ಷಣದ ಭದ್ರ ಬುನಾದಿ ಹಾಕಬೇಕು.

ಪ್ರೌಢಶಾಲಾ ಹಂತ ಮುಗಿಸುವಷ್ಟರಲ್ಲಿ  ಪರಿಸರ ಹಾಗೂ ವನ್ಯಜೀವಿ ವಿಜ್ಞಾನ ಕುರಿತ ಸ್ಪಷ್ಟ ನಿಲುವು ಬರುವಂತಹ ಪಠ್ಯ ನಿರ್ಮಾಣವಾಗಬೇಕು. ಇದೇ ಹಂತದಲ್ಲಿ ಯಾವುದೇ ನದಿಯನ್ನು ತಿರುಗಿಸದೆ,

ಜೋಡಿಸದೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿಕೊಂಡು, ವೈಜ್ಞಾನಿಕವಾಗಿ ಕೆಲಸ ಮಾಡಿ ಸ್ಥಳದ ನೀರಿನ ಸಮಸ್ಯೆಗಳನ್ನು ಪರಿಹರಿಸಿದ ವಿಧಿವಿಧಾನಗಳ ಸ್ಪಷ್ಟ ಪರಿಚಯವಾಗಬೇಕು. (ರಾಜಸ್ಥಾನದ ರಾಜೀಂದರ್‍ ಸಿಂಗ್, ಕರ್ನಾಟಕದ ನೂರಾರು ಜಲಯೋಧರ ಕತೆಗಳು ಇತ್ಯಾದಿ).

(ಇವು ಪ್ರೌಢಶಾಲಾ ಹಂತದಲ್ಲೇ ಆಗಬೇಕು. ಶಾಲೆಯ ನಂತರ ಶಿಕ್ಷಣ ತೊರೆಯುವವರ ಸಂಖ್ಯೆ ಈ ದೇಶದಲ್ಲಿ ಬಹಳ ದೊಡ್ಡದಿದೆ.)
ಇನ್ನು ಕಾಲೇಜು ಶಿಕ್ಷಣದಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಾಣಿವಿಜ್ಞಾನದೊಂದಿಗೆ ವನ್ಯವಿಜ್ಞಾನ, ಸಂರಕ್ಷಣೆ ಹಾಗೂ ಅದರ ವಿಧಿವಿಧಾನಗಳ ಪರಿಚಯ ಮಾಡಿಕೊಡಬೇಕು.

ವಿಜ್ಞಾನೇತರ ವಿಭಾಗಗಳಲ್ಲಿ ಕೆಲ ಸೀಮಿತ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅಧ್ಯಯನಗಳ ಸ್ಥೂಲ ಪರಿಚಯ ಈ ಹಂತದಲ್ಲಿ ಆಗಬೇಕು. (ಉದಾಹರಣೆ: ವನ್ಯ ಸಂರಕ್ಷಣೆಯ ಆರ್ಥಿಕತೆ, ಲ್ಯಾಂಡ್‍ಸ್ಕೇಪ್‍ ಜೀವಪರಿಸ್ಥಿತಿ ವಿಜ್ಞಾನ ಇತ್ಯಾದಿ)

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿನ ಹಾಗೂ ನಮ್ಮ ದೇಶದ ಕೆಲವು ಸಂಸ್ಥೆಗಳಲ್ಲಿ ಮಾತ್ರ ಲಭ್ಯವಿರುವ ಕೋರ್ಸುಗಳು ನಮ್ಮೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಾಗಿ,

ಸಮಾಜದ ಕೆಳ ಹಂತದಿಂದ ಬಂದ ವಿದ್ಯಾರ್ಥಿಗೂ ಅದು ಎಟುಕುವಂತಾಗಬೇಕು. ಇವೆಲ್ಲವೂ ಕಾರ್ಯಗತವಾದಾಗ ನಮ್ಮ ಪರಿಸರ ಶಿಕ್ಷಣ ಗುಣಾತ್ಮಕವಾಗಿ ಬದಲಾವಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT