ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆಗೆ ಮುಂದಾಗಲು ಕರೆ

Last Updated 30 ನವೆಂಬರ್ 2015, 11:05 IST
ಅಕ್ಷರ ಗಾತ್ರ

ಕುಷ್ಟಗಿ: ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ಸಸಿಗಳನ್ನು ನೆಡಬೇಕು, ನೆಟ್ಟ ಸಸಿಗಳನ್ನು ಬೆಳೆಯುವಂತೆ ಕಾಳಜಿ ವಹಿಸಿದರೆ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗುಮಗೇರಿ ಗ್ರಾಮದಲ್ಲಿ ಭಾನುವಾರ ಪಾದಯಾತ್ರೆ ನಡೆಸಿದ ಅವರು ನಂತರ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಗಿಡಮರಗಳ ಸಂಖ್ಯೆ ಹೆಚ್ಚಿದಂತೆ ಪರಿಸರದಲ್ಲಿ ಸಮತೋಲನ ಇರುತ್ತದೆ, ಉತ್ತಮ ಹವಾಗುಣದಲ್ಲಿ ಏರುಪೇರಾಗದ ಉತ್ತಮ ಗಾಳಿ, ನೀರು ದೊರೆಯುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಪ್ರಜ್ಞೆ ಜನರಿಂದ ದೂರವಾಗುತ್ತಿದೆ ಎಂಬ ಅಪವಾದ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ಅಂಥ ಪರಂಪರೆ ಮತ್ತಷ್ಟು ಜಾಗೃತಿಗೊಳ್ಳುತ್ತಿರುವುದು ಸಂತೋಷದ ಸಂಗತಿ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲ ಜನರು ಭೇದ ಮರೆತು ಒಂದಾಗಬೇಕು ಎಂದು ಕರೆ ನೀಡಿದರು.

ಅಲ್ಲದೇ ಸರ್ಕಾರದ ಬೊಕ್ಕಸದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಹಂಪಿ ಉತ್ಸವ ನಡೆಸಿದರೆ ಗುಮಗೇರಾ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಸಾಮೂಹಿಕವಾಗಿ ಭಾವನತಾತ್ಮಕವಾಗಿ ಬೆರೆತು ಇಂಥ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ ಸಂಘಟಿಸಿರುವುದು ಹಂಪಿ ಉತ್ಸವಕ್ಕಿಂತ ಮಿಗಿಲಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೇ ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ ತಲಾ ಒಂದರಂತೆ ಸಾವಿರಕ್ಕೂ ಅಧಿಕ ವಿವಿಧ ಜಾತಿಯ ಅರಣ್ಯ ಸಸಿಗಳನ್ನು ವಿತರಿಸಲಾಯಿತು.  ದಲಿತ ನಿವಾಸಿಗಳ ಕಾಲೊನಿಯಿಂದ ಆರಂಭಗೊಂಡ ಪಾದಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. 

ನೂರಾರು ಮಹಿಳೆಯರು ಕಲಶ ಹಿಡಿದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಭಜನೆ ಕಲಾಮೇಳದವರು ಪಾಲ್ಗೊಂಡಿದ್ದರು. ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಗವಿಸಿದ್ದೇಶ್ವರ ಶಾಖಾಮಠದ ಶಿವಶಾಂತವೀರ ಸ್ವಾಮೀಜಿ ಇದ್ದರು. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ  ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT